- ಬೆಂಗಳೂರಲ್ಲಿ ಹೊಸ ವರ್ಷದ ಸಂಭ್ರಮ ಇಲ್ಲ
- ಪ್ರವಾಸಿ ತಾಣಗಳಲ್ಲಿ ಹದ್ದಿನಗಣ್ಣು
ಬೆಂಗಳೂರು: ಹೊಸ ರೂಪಾಂತರದ ಕರೋನಾ ಇದೀಗ ಹೊಸ ವರ್ಷದ ಸಂಭ್ರಮವನ್ನು ಮಂಕು ಮಾಡಿದೆ.
ಬೆಂಗಳೂರಲ್ಲಿ ಡಿಸೆಂಬರ್ 31ರಂದು ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆವರೆಗೆ ಸೆಕ್ಷನ್ 144 ಜಾರಿಯಲ್ಲಿರಲಿದೆ. ರಾಜಧಾನಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ. ಬೆಂಗಳೂರಿನಲ್ಲಿ ನಾಕಾಬಂದಿ ಇರಲಿದ್ದು, ಭದ್ರತೆಗಾಗಿ 10 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ನಿಷೇಧ ಇರಲಿದ್ದು, ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಆದರೆ, ಖಾಸಗಿ ಸ್ಥಳಗಳಲ್ಲಿ ಆಚರಣೆಗೆ ಅವಕಾಶ ನೀಡಲಾಗಿದೆ. ಪಬ್ಗಳಲ್ಲಿ ಈವೆಂಟ್, ಶೋ ನಡೆಸುವಂತಿಲ್ಲ ಹಾಗೂ ವಿಶೇಷ ಡಿಜೆ ವ್ಯವಸ್ಥೆ ಮಾಡುವಂತಿಲ್ಲ. ಹೊಟೇಲ್ಗಳಲ್ಲಿ ಮಾರ್ಗಸೂಚಿ ಪಾಲಿಸಬೇಕು ಎಂದು ಪೊಲೀಸ್ ಇಲಾಖೆ ಹೇಳಿದೆ.
ನಗರದ ಕೆಲವೆಡೆ ವಿಶೇಷ ನಿಗಾ ಇಡಲಾಗಿದ್ದು, ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಚರ್ಚ್ಸ್ಟ್ರೀಟ್, ಕೋರಮಂಗಲ, ಇಂದಿರಾನಗರಗಳಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ.
ರಸ್ತೆ, ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಟಿ ಮಾಡಿದರೆ ಕೇಸ್ ದಾಖಲಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.