- ಮೊದಲ ಸ್ಥಾನದಲ್ಲಿ ಚೀನಾ, ಇನ್ನೊಂದು ವರ್ಷದಲ್ಲಿ ಭಾರತ ಮುಂದೆ
- ಆಗಲಿದೆ ಭಾರೀ ಅಸಮತೋಲನ: ಮುಂದೆ ಕಷ್ಟ ಕಷ್ಟ
NAMMUR EXPRESS NEWS
ನವ ದೆಹಲಿ: ಜಗತ್ತಿನ ಜನಸಂಖ್ಯೆ ಮಂಗಳವಾರ (ನ.15) ಕ್ಕೆ 800 ಕೋಟಿ ಗಡಿ ದಾಟಿದೆ.
ಅಚ್ಚರಿ ಎಂದರೆ ಮುಂದಿನ ಒಂದು ವರ್ಷದಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ, ವಿಶ್ವದ ಅತಿ ಹೆಚ್ಚು ಜನರಿರುವ ದೇಶವಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಭಾರತದ ಜನಸಂಖ್ಯೆ 141 ಕೋಟಿ ಇದ್ದು, ಚೀನಾದಲ್ಲಿ 145 ಕೋಟಿಯಷ್ಟಿದೆ. 2050ರ ವೇಳೆಗೆ ಭಾರತ, ಚೀನಾ, ಪಾಕಿಸ್ತಾನ, ಈಜಿಪ್ಟ್, ಇಥಿಯೋಪಿಯಾ, ನೈಜೀರಿಯಾ ಹಾಗೂ ತಾಂಜೇನಿಯಾದಲ್ಲಿ ವಿಶ್ವದ ಶೇ.50ರಷ್ಟು ಜನಸಂಖ್ಯೆ ಇರಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
1950ರ ಬಳಿಕ ವಿಶ್ವದ
ಜನಸಂಖ್ಯೆ ಬೆಳವಣಿಗೆ ವೇಗ ತಗ್ಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಎಂದು ವರದಿ ಹೇಳಿದೆ. ಈ 2020ರ ನಂತರ ಜನಸಂಖ್ಯಾ ಏರಿಕೆ ಪ್ರಮಾಣ ಶೇ.1ಕ್ಕೆ ಇಳಿದಿದೆ. 2010ರಲ್ಲಿ 700 ಕೋಟಿಯಿದ್ದ ಜನಸಂಖ್ಯೆ 800 ಕೋಟಿ ಗಡಿ ತಲುಪಲು 12 ವರ್ಷ ತೆಗೆದುಕೊಂಡಿದೆ. 2037ರ ವೇಳೆಗೆ 900 ಕೋಟಿ ದಾಟಬಹುದು. 2050ಕ್ಕೆ 3 ವಿಶ್ವದ ಜನಸಂಖ್ಯೆ 970 ಕೋಟಿಗೆ, 2100ರ ಹೊತ್ತಿಗೆ ಒಂದು ಸಾವಿರ ಕೋಟಿ (1040 ಕೋಟಿ) ಗಡಿ ದಾಟಲಿದೆ ಎಂದು ಅಂದಾಜು ಮಾಡಲಾಗಿದೆ.
ಜಾಗತಿಕ ಅಸಮಾನತೆ: ಜನಸಂಖ್ಯೆ ಜತೆಗೆ ಅಸಮಾನತೆಯೂ ಬೆಳೆದಿದೆ. ಅರ್ಧದಷ್ಟು ಜನ ಬಡತನ ರೇಖೆಗಿಂತ ಕೆಳಗೆ ಇದ್ದಾರೆ. ತಲಾ ಆದಾಯ ಕೇವಲ 2,900 (ಕೊಳ್ಳುವ ಸಾಮರ್ಥ್ಯ ಆಧರಿಸಿ) ರೂ.ಗಳಾಗಿದೆ. ಶೇ.10ರಷ್ಟು ಮಂದಿ ವಿಶ್ವ ಆದಾಯದ ಶೇ.76ರಷ್ಟು ಸಂಪತ್ತು ಹೊಂದಿದ್ದು, ಶೇ.56ರಷ್ಟು ಆದಾಯ 10ರಷ್ಟು ಜನರ ಬಳಿ ಇದೆ. ಬಡವರ ಆದಾಯ ಕೇವಲ ಶೇ.8.5ರಷ್ಟಿದೆ. ಶೇ.48ರಷ್ಟು ಪರಿಸರ ಮಾಲಿನ್ಯಕ್ಕೆ ಶ್ರೀಮಂತ ವ್ಯಕ್ತಿಗಳೇ ಕಾರಣ ಎಂದು ಉಲ್ಲೇಖ ಮಾಡಲಾಗಿದೆ.
ವಿಶ್ವಸಂಸ್ಥೆ ಅಂದಾಜಿನ ಪ್ರಕಾರ ಜಾಗತಿಕವಾಗಿ ವಾರ್ಷಿಕ ಶೇ.31ರಷ್ಟು ಆಹಾರ ವ್ಯರ್ಥವಾಗುತ್ತಿದೆ. ಶೇ.14ರಷ್ಟು ಆಹಾರ ಕೊಯ್ಲ ಮಾಡುವಾಗ ಹಾಗೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುವಾಗ ವ್ಯರ್ಥವಾಗುತ್ತಿದೆ. ಶೇ.17ರಷ್ಟು ಆಹಾರ ಮನೆ, ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ವ್ಯರ್ಥವಾಗುತ್ತಿದೆ.