ಏಕಕಾಲ ಚುನಾವಣೆ ಈಗಿಲ್ಲ.. 2034ಕ್ಕೆ..!
– 2029ಕ್ಕೆ ಮೊದಲು ಹೊಸ ಚುನಾವಣಾ ಪದ್ಧತಿ ಜಾರಿಗೆ l
– 2 ವಿಧೇಯಕ ಜೆಪಿಸಿಗೆ ಒಪ್ಪಿಸಲು ಲೋಕಸಭೆಯಲ್ಲಿ ನಿರ್ಣಯ
NAMMUR EXPRESS NEWS
ಹೊಸದಿಲ್ಲಿ: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ಉದ್ದೇಶದ ‘ಒಂದು ದೇಶ-ಒಂದು ಚುನಾವಣೆ’ಯನ್ನು 2034ರಲ್ಲಿ ಅನುಷ್ಠಾನಗೊಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 2029 ಮತ್ತು 2034ರ ನಡುವಿನ ವಿಧಾನಸಭೆಗಳ ಅಧಿಕಾರಾವಧಿಯನ್ನು ಮೊಟಕು ಅಥವಾ ಲಂಬಿಸುವ ಮೂಲಕ ಒಟ್ಟಿಗೆ 2034ಕ್ಕೆ ಚುನಾವಣೆ ನಡೆಸಲು ಸರಕಾರ ಯೋಜಿಸಿದೆ. ಆದರೆ, 2029ಕ್ಕೆ ಮೊದಲು ಹೊಸ ಚುನಾವಣಾ ಪದ್ಧತಿ ಜಾರಿಗೆ ಅಗತ್ಯವಾಗಿರುವ ಸಂವಿಧಾನ ತಿದ್ದುಪಡಿ ವಿಧೇಯಗಳು ಸಂಸತ್ತಿನಲ್ಲಿ ಅನುಮೋದನೆಗೊಂಡರೆ ಮಾತ್ರ ಇದು ಸಾಧ್ಯವಾಗಲಿದೆ. ಅಲ್ಲದೆ, ಸವಾಲಿನ ಕ್ಷೇತ್ರ ಮರುವಿಂಗಡಣೆಯ ಪ್ರಕ್ರಿಯೆಯ ಕಾರಣದಿಂದಲೂ 2034ರವರೆಗೆ ಹೊಸ ಚುನಾವಣಾ ಪದ್ದತಿ ಜಾರಿಯನ್ನು ಮುಂದೂಡಲು ಸರಕಾರ ನಿರ್ಧರಿಸಿದೆ.
ನಿರ್ಣಯ ಅಂಗೀಕಾರ: ಈ ಮಧ್ಯೆ, ಏಕಕಾಲದಲ್ಲಿ ಚುನಾವಣೆ
ನಡೆಸಲು ಪೂರ್ವಭಾವಿ ಅಗತ್ಯವಾಗಿ ಡಿ 17.ರಂದು ಲೋಕಸಭೆಯಲ್ಲಿ ಮಂಡಿಸಲಾದ ಎರಡು ವಿಧೇಯಕಗಳನ್ನು ಜಂಟಿ ಸಂಸದೀಯ ಸಮಿತಿಗೆ ವಹಿಸುವ ನಿರ್ಣಯವನ್ನು ಶುಕ್ರವಾರ ಲೋಕಸಭೆಯಲ್ಲಿ ಕೈಗೊಳ್ಳಲಾಗಿದೆ. ಸಂಸತ್ ಚಳಿಗಾಲದ ಅಧಿವೇಶನದ ಕೊನೆಯ ದಿನದಂದು ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ಪೈಕಿ ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದ ಒಂದು ವಿಧೇಯಕವೂ ಸೇರಿದೆ. ಡಿ.17ರಂದು ಸಂಸತ್ತಿನಲ್ಲಿ ಮಂಡಿಸಲಾದ ಈ ಉಭಯ ವಿಧೇಯಕಗಳಿಗೆ 269 ಪರ ಮತ್ತು 198 ವಿರೋಧ ಮತಗಳು ಬಿದ್ದವು. ಇವುಗಳನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ವಹಿಸಲು ಅಂದೇ ಪ್ರಸ್ತಾಪಿಸಲಾಗಿತ್ತು. ಈಗ ಈ ಸಂಬಂಧ ನಿರ್ಣಯವನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. 39 ಸದಸ್ಯರ ಜಂಟಿ ಸಂಸದೀಯ ಸಮಿತಿಯು ವಿಧೇಯಕಗಳನ್ನು ಪರಿಶೀಲನೆಗೆ ಒಳಪಡಿಸಿ, ಶಿಫಾರಸುಗಳನ್ನು ಲೋಕಸಭೆ ಸ್ಪೀಕರ್ ಗೆ ಸಲ್ಲಿಸಿದೆ.







