ಕರಾವಳಿ ಟಾಪ್ 9 ನ್ಯೂಸ್
* ಕಾರ್ಕಳ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ
* ಕಾಪು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ
* ಉಡುಪಿ: ಬ್ಯೂಟಿ ಪಾರ್ಲರ್ ನಲ್ಲಿ ಬೆಂಕಿ ಅವಘಡ
* ಮೂಲ್ಕಿ: ಬಸ್ ಮತ್ತು ಸ್ಕೂಟಿ ನಡುವೆ ಢಿಕ್ಕಿ
* ಮಂಗಳೂರು: ನಕಲಿ ಚಿನ್ನ ಅಡವಿಟ್ಟು ಸಾಲ
* ಬೆಳ್ತಂಗಡಿ: ಬಸ್ ನಿರ್ವಾಹಕಿ ಮತ್ತು ಪ್ರಯಾಣಿಕನ ನಡುವೆ ಕಲಹ
* ಪುತ್ತೂರು: ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹಲ್ಲೆ
* ಯಲ್ಲಾಪುರ: ಮರದಿಂದ ಬಿದ್ದು ರೈತ ಸಾವು
* ಶಿರಸಿ: ನಗರ ಸಭೆ ಹೆಸರಿನಲ್ಲಿ ಹಣ ವಸೂಲಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾರ್ಕಳ: ನಿಟ್ಟೆ ಗ್ರಾಮದ ಪರಪ್ಪಾಡಿಯ ನಿವಾಸಿ ಅಭಿಷೇಕ್ ಆಚಾರ್ಯ ಎಂಬ ಯುವಕನು, ಕಳೆದೆರಡು ದಿನಗಳ ಹಿಂದೆ ಬೆಳ್ಮಣ್ ನ ಲಾಡ್ಜ್ ವೊಂದರಲ್ಲಿ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ. ಡೆತ್ ನೋಟ್ ನಲ್ಲಿ ತನ್ನ ಗೆಳೆಯರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಬರೆದಿದ್ದು, ನಾಲ್ವರು ಸ್ನೇಹಿತರ ಹೆಸರನ್ನು ದಾಖಲಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಭಿಷೇಕ್ ನ ನಾಲ್ವರು ಸ್ನೇಹಿತರನ್ನು ಪತ್ತೆ ಹಚ್ಚಿ, ಅವರ ಮೊಬೈಲ್ ಗಳನ್ನು ಪರಿಶೀಲಿಸಿದ್ದಾರೆ. ಜೊತೆಗೆ ಪ್ರಾಥಮಿಕ ತನಿಖೆಯ ಪ್ರಕಾರ ಅಭಿಷೇಕ್ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನುವುದು ತಿಳಿದುಬಂದಿದೆ. ಅನುಮಾನ ಬಂದ ಕಾರಣ ಯುವತಿಯ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಯುವತಿಯೂ ವಿಡಿಯೋ ಮಾಡಿ ಬೆದರಿಸುವುದಾಗಲಿ ಅಥವಾ ಅಭಿಷೇಕ್ ನ ಸ್ನೇಹಿತರೊಂದಿಗೆ ಸೇರಿಕೊಂಡು ಆತನನ್ನು ಬ್ಲಾಕ್ ಮೇಲ್ ಮಾಡುವಲ್ಲಿ ಭಾಗಿಯಾಗಿದ್ದಾಳೆ ಎನ್ನುವುದು ದೃಢಪಟ್ಟಿಲ್ಲ. ಅಲ್ಲದೆ ಅಭಿಷೇಕ್ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನುವ ಸಂಗತಿಯನ್ನು ಆತನ ಪೋಷಕರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಂದಲ ಉಂಟಾಗಿರುವುದರಿಂದ ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಅವರು ತಿಳಿಸಿದ್ದಾರೆ.
* ಕಾಪು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ
ಕಾಪು: ಆಶ್ರಯ ನೀಡಿದ ಮಹಿಳೆಯ ಮಗಳನ್ನೇ ಅತ್ಯಾಚಾರ ಮಾಡಿದ ಘಟನೆ ಕಾಪುವಿನಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಕಾರ್ಮಿಕನಾದ ಶಾರುಖ್ ತನ್ನ ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಬಾಡಿಗೆ ಮನೆ ನೀಡಿದ ಮಹಿಳೆಯ ಅಪ್ರಾಪ್ತ ವಯಸ್ಸಿನ ಮಗಳನ್ನು ಶಾರುಖ್ ಪುಸಲಾಯಿಸಿ, ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವಿಚಾರವನ್ನು ಮಗಳು ತಾಯಿಯಿಂದ ಮುಚ್ಚಿಟ್ಟಿದ್ದು, ಕೆಲವು ದಿನಗಳ ನಂತರ ಮಗಳಲ್ಲಾದ ದೈಹಿಕ ಬದಲಾವಣೆಯನ್ನು ಗಮನಿಸಿದ ತಾಯಿಯು, ಆಕೆಯನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋದಾಗ, ಗರ್ಭಿಣಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ತಕ್ಷಣ ಆರೋಪಿಯಾದ ಶಾರುಖ್ ನನ್ನು ಹುಡುಕಾಡಿದಾಗ, ಆತ ತನ್ನ ಊರಿಗೆ ಹಿಂತಿರುಗಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಬಾಲಕಿಯ ಪೋಷಕರು ಶಾರುಖ್ ನ ವಿರುದ್ಧ ದೂರನ್ನು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
* ಉಡುಪಿ: ಬ್ಯೂಟಿ ಪಾರ್ಲರ್ ನಲ್ಲಿ ಬೆಂಕಿ ಅವಘಡ
ಉಡುಪಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬ್ಯೂಟಿ ಪಾರ್ಲರ್ ನಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ, ನ್ಯಾಯಾಲಯ ಸಂಕೀರ್ಣದ ಮುಂದಿರುವ ಕಟ್ಟಡವೊಂದರಲ್ಲಿ ಶುಕ್ರವಾರದಂದು ನಡೆದಿದೆ. ಬೆಂಕಿಯ ಹರಡುವಿಕೆಯಿಂದಾಗಿ ಕಟ್ಟಡದ ಸುತ್ತಮುತ್ತಲೂ ದಟ್ಟ ಹೊಗೆ ಆವರಿಸಿಕೊಂಡಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ಆರಿಸಿ, ಅದನ್ನು ಹತೋಟಿಗೆ ತಂದಿದ್ದಾರೆ. ಆದರೂ, ಬೆಂಕಿಯ ತೀವ್ರತೆಗೆ ಬ್ಯೂಟಿ ಪಾರ್ಲರ್ ನಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಇದರ ಪರಿಣಾಮವಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಪ್ರಾಣಾಪಾಯ ಸಂಭವಿಸದಿರುವುದು ಸಮಾಧಾನಕರ ಸಂಗತಿಯಾಗಿದೆ.
* ಮೂಲ್ಕಿ: ಬಸ್ ಮತ್ತು ಸ್ಕೂಟಿ ನಡುವೆ ಢಿಕ್ಕಿ
ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿಯ ಜಂಕ್ಷನ್ ಬಳಿ, ಕಳೆದೆರಡು ದಿನಗಳ ಹಿಂದೆ ಬಸ್ ವೊಂದು ಸ್ಕೂಟಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ, ಸ್ಕೂಟಿಯ ಸವಾರ ಮತ್ತು ಅವರ ಜೊತೆಗಿದ್ದ ಸಹಸವಾರ ಬಸ್ ನ ಅಡಿಗೆ ಬಿದ್ದು, ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದುದರಿಂದ ಇಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
* ಮಂಗಳೂರು: ನಕಲಿ ಚಿನ್ನ ಅಡವಿಟ್ಟು ಸಾಲ
ಮಂಗಳೂರು: ಕಾವೂರು ನಿವಾಸಿ ಹಾರೀಫ್ ಅಬೂಬಕ್ಕರ್, ಅಲ್ಲಿನ ಸಹಕಾರ ಸಂಘದಲ್ಲಿ ನಕಲಿ ಚಿನ್ನವನ್ನು ಇರಿಸಿ, ಸಾಲ ಪಡೆದು ವಂಚಿಸಿದ ಘಟನೆ ನಡೆದಿದೆ. ಅಕ್ಟೋಬರ್ ಆರರಂದು ಸಂಘಕ್ಕೆ ಆಗಮಿಸಿದ ಹಾರೀಫ್, ಕಾವೂರಿನ ವಿಳಾಸ ನೀಡಿ, ಸುಮಾರು 79,400 ಗ್ರಾಂ ತೂಕದ ಒಂದು ಸರ ಮತ್ತು ನಾಲ್ಕು ಬ್ರಾಸ್ ಲೆಟ್ ಅನ್ನು ಅಡವಿಟ್ಟು, ಚಿನ್ನದ ಮೇಲಿನ ಸಾಲವನ್ನು ಪಡೆದುಕೊಂಡಿದ್ದಾನೆ. ಇದಕ್ಕೂ ಮೊದಲು ಮಂಗಳೂರಿನ ಬಜಪೆ ಶಾಖೆಯಲ್ಲಿ ಇದೇ ರೀತಿ ವಂಚನೆ ಮಾಡಿದ್ದು, ಅದನ್ನು ಪರಿಶೀಲಿಸಿದ ಸರಾಫರು ಚಿನ್ನದ ಪ್ರಮಾಣ ಕಡಿಮೆ ಇದೆ ಎಂದು ತಿಳಿಸಿದ್ದರಿಂದ, ಬಜಪೆ ಶಾಖಾಧಿಕಾರಿಗಳು ಹಾರೀಫ್ ನನ್ನು ಹಿಂದಕ್ಕೆ ಕಳುಹಿಸಿದ್ದರು. ಈ ಸಂಗತಿ ತಿಳಿದ ಹಿನ್ನೆಲೆಯಲ್ಲಿ ಕಾವೂರಿನ ಸಹಕಾರಿ ಸಂಘದವರು ಅನುಮಾನಗೊಂಡು, ಹಾರೀಫ್ ಅಡವಿಟ್ಟ ಚಿನ್ನವನ್ನು ಮಂಗಳೂರಿನ ತಪಾಸಣಾ ಕೇಂದ್ರಕ್ಕೆ ಕಳುಹಿಸಿದಾಗ, ಅದು ನಕಲಿ ಚಿನ್ನವೆನ್ನುವುದು ಬೆಳಕಿಗೆ ಬಂದಿದೆ. ಸಹಕಾರಿ ಸಂಘದವರು ಹಾರೀಫನಿಗೆ ನೀಡಿದ ಹಣವನ್ನು ಹಿಂದಕ್ಕೆ ಪಡೆಯಲು ಬ್ಯಾಂಕ್ ನಲ್ಲಿ ವಿಚಾರಿಸಿದಾಗ, ಆತ ತನಗೆ ಬಂದ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಯಾಗಿದೆ ಎನ್ನುವುದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸಹಕಾರ ಸಂಘದ ಸಿಇಓ ಕಾವೂರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
* ಬೆಳ್ತಂಗಡಿ: ಬಸ್ ನಿರ್ವಾಹಕಿ ಮತ್ತು ಪ್ರಯಾಣಿಕನ ನಡುವೆ ಕಲಹ
ಬೆಳ್ತಂಗಡಿ: ಮೂಡಿಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ, 81 ರೂಪಾಯಿ ಟಿಕೇಟಿಗೆ 100 ರೂಪಾಯಿ ನೀಡಿದ್ದು, ಚಿಲ್ಲರೆ ಕೇಳಿದಾಗ ಬಸ್ ನಿರ್ವಾಹಕಿ, ಪ್ರಯಾಣಿಕ ನೂರು ರೂಪಾಯಿ ನೀಡಿಲ್ಲವೆಂದು ವಾದಿಸಿದ್ದಾರೆ. ಇದು ಮುಂದೆ ಜಗಳಕ್ಕೆ ತಿರುಗಿದೆ. ಇತರ ಪ್ರಯಾಣಿಕರು ಆತ ನೂರು ರೂಪಾಯಿ ನೀಡಿದ್ದಾನೆ ಎಂದು ತಿಳಿಸಿದರೂ, ನಂಬುವ ಸ್ಥಿತಿಯಲ್ಲಿ ಬಸ್ ನಿರ್ವಾಹಕಿ ಇರಲಿಲ್ಲ. ಜಗಳ ವಿಕೋಪಕ್ಕೇರಿ ಬಸ್ ನಿರ್ವಾಹಕಿ ಆ ಪ್ರಯಾಣಿಕನ ಮೇಲೆ ಹಲ್ಲೆಯನ್ನು ಸಹ ನಡೆಸಿದ್ದಾಳೆ. ಸ್ಥಳೀಯರು ನಿರ್ವಾಹಕಿಯ ಹಲ್ಲೆಯನ್ನು ಖಂಡಿಸಿದಾಗ, ತಾನು ಹಲ್ಲೆ ನಡೆಸಿಲ್ಲ ಎಂದು ಮತ್ತೊಮ್ಮೆ ವಾದ ಪ್ರಾರಂಭಿಸಿದ್ದಾಳೆ. ಈ ಸಂಗತಿ ಮೊಬೈಲ್ ನಲ್ಲಿ ಕೂಡ ದಾಖಲಾಗಿದೆ. ಜಗಳ ವಿಪರೀತವಾಗಿ ಜನ ಜಮಾಯಿಸಿದರ ಪರಿಣಾಮವಾಗಿ, ಬೆಳ್ತಂಗಡಿ ಪೊಲೀಸರು ಮಧ್ಯೆ ಪ್ರವೇಶಿಸಿ, ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ, ಬುದ್ಧಿವಾದ ಹೇಳಿ, ರಾಜಿ ಮಾಡಿಸಲಾಯಿತು ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.
* ಪುತ್ತೂರು: ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹಲ್ಲೆ
ಪುತ್ತೂರು: ಶಬೀರ್ ಎನ್ನುವವರ ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ, ಹಲ್ಲೆ ನಡೆದ ಘಟನೆಗೆ ಸಂಬಂಧಿಸಿದಂತೆ, ಅಹಮದ್ ರಯೀಸ್ ಎನ್ನುವ ವ್ಯಕ್ತಿ, ಇತರರೊಂದಿಗೆ ತನ್ನ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನುವ ಕುರಿತು ದೂರು ನೀಡಿದ್ದಾರೆ. ಇದರೊಂದಿಗೆ ಅಬುಸಾಲಿ ಆದಂ ಕುಂಞಿ ಕೂಡ ದೂರು ನೀಡಿದ್ದಾರೆ. ದೂರು ಮತ್ತು ಪ್ರತಿದೂರಿನ ಆಧಾರದ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ 142/2025ರ ಕಾಲಂ 118 (1), 115 (2), 351 (2), r/w 19೦ ಬಿಎನ್ಎಸ್ 2023 ಹಾಗೂ 144/2025ರ ಕಾಲಂ 352, 118(1), 115 (2), 351(2),r/w 3(5) ಬಿಎನ್ಎಸ್ 2023ರ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
* ಯಲ್ಲಾಪುರ: ಮರದಿಂದ ಬಿದ್ದು ರೈತ ಸಾವು
ಯಲ್ಲಾಪುರ: ಗಣಪತಿ ನಾರಾಯಣ ಭಟ್ ಎನ್ನುವ ವ್ಯಕ್ತಿಯು ಅಡಿಕೆ ತೋಟಕ್ಕೆ ಹಾಸಲು, ಸೊಪ್ಪು ತೆಗೆದುಕೊಳ್ಳಲೆಂದು ಮರವನ್ನು ಏರಿದ ಸಂದರ್ಭದಲ್ಲಿ, ಆಯಾ ತಪ್ಪಿ ಬಿದ್ದು ಮೃತಪಟ್ಟ ಘಟನೆ ಶುಕ್ರವಾರದಂದು ಮಾಗೋಡು ಸಮೀಪದ ತಾರೀಮನೆಯಲ್ಲಿ ನಡೆದಿದೆ. ಬಿದ್ದ ತಕ್ಷಣ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು, ತಾಲ್ಲೂಕಿನ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಶಿರಸಿ: ನಗರ ಸಭೆ ಹೆಸರಿನಲ್ಲಿ ಹಣ ವಸೂಲಿ
ಶಿರಸಿ: ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಶಿರಸಿಯ ನಗರಸಭೆಗೆ, ಇದೀಗ ಮತ್ತೊಂದು ತಲೆನೋವು ಎದುರಾಗಿದೆ. ನಗರಸಭೆಯ ಹೆಸರನ್ನು ಹೇಳಿಕೊಂಡು, ಕೆಲವು ಅಪರಿಚಿತ ವ್ಯಕ್ತಿಗಳು ನಗರದಾದ್ಯಂತ ಸಂಚರಿಸಿ, ಹಣ ವಸೂಲಿ ಮಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ನಗರಸಭೆಯ ಹೆಸರನ್ನು ಹಾಳುಗೆಡುತ್ತಿರುವ ಇಂತಹ ವಿಚಾರ ಕಂಡುಬಂದಲ್ಲಿ, ಪೊಲೀಸರಿಗೆ ದೂರು ನೀಡುವಂತೆ ಪೌರಾಯುಕ್ತರೇ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.







