ಪ್ರೊ.ಬಿ.ಟಿ ಚಂದ್ರಪ್ಪಗೌಡರಿಗೆ ಬಿ.ಜಿ.ಎಸ್ ಶಿಕ್ಷಕ ಶ್ರೀ ಸೇವಾ ರತ್ನ ಪ್ರಶಸ್ತಿ
– ಮಂಡ್ಯದ ಎಚ್.ಕೆ ವೀರಣ್ಣಗೌಡ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸಾವಿರಾರು ಜನರಿಗೆ ವಿಧ್ಯಾ ದಾನ
– ಅಂಕಿನಕಟ್ಟೆ ಚಂದ್ರಪ್ಪ ಗೌಡ ಹಾಗೂ ಮಸರೂರು ಪ್ರದೀಪ್ ಅವರಿಗೆ ಸನ್ಮಾನ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ತೀರ್ಥಹಳ್ಳಿಯ ಬೈಸೆಯಲ್ಲಿ ಜನಿಸಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ, ಅರ್ಜುನಪುರಿಯ (ಮದ್ದೂರು) ಎಚ್.ಕೆ ವೀರಣ್ಣಗೌಡ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಅಹರ್ನಿಶಿ ಸೇವೆ ಸಲ್ಲಿಸಿದ ಪ್ರೊ.ಬಿ.ಟಿ ಚಂದ್ರಪ್ಪಗೌಡ ಅವರು ಪ್ರತಿಷ್ಠಿತ
ಬಿ.ಜಿ.ಎಸ್ ಶಿಕ್ಷಕ ಶ್ರೀ ಸೇವಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸದಾ ಪುಟಿಯುವ ಚೈತನ್ಯ, ಜೀವನ ಪ್ರೀತಿ, ಜೀವನೋತ್ಸಾಹಗಳನ್ನು ಮೈಗೂಡಿಸಿಕೊಂಡು, ಸಾರ್ಥಕ ಬದುಕನ್ನು ನಡೆಸುತ್ತಿರುವ ಚಂದ್ರಪ್ಪಗೌಡ ಅವರು ವಿದ್ಯಾರ್ಥಿಗಳ ನೆಚ್ಚಿನ ಮೇಷ್ಟ್ರು, ಉತ್ತಮ ಆಡಳಿತಗಾರ ಹಾಗೂ ಅದಮ್ಯ ಪ್ರೇರಕ ಶಕ್ತಿಯಾಗಿ ಸದಾ ನೆನಪಿನಲ್ಲಿ ಉಳಿಯುವ ವ್ಯಕ್ತಿತ್ವ ಉಳ್ಳವರು. ಕಲಿತ ಪಾಠವು ಮರೆತಿರಬಹುದೇನೋ ಆದರೆ ಶ್ರೀ ಚಂದ್ರಪ್ಪಗೌಡರ ಪ್ರತಿಬಿಂಬ ಸದಾ ಕಣ್ಣಂಚಲ್ಲಿ ಕುಳಿತಿರುತ್ತದೆ ಎಂಬುದು ಶಿಷ್ಯ ವೃಂದದ ಆಂಬೋಣ.
ತನ್ನನ್ನೇ ನಂಬಿ ಬಂದ ವಿದ್ಯಾರ್ಥಿಗಳ ಏಳಿಗೆಗೆ, ಅವರ ಉದ್ಧಾರಕ್ಕೆ ಸದಾ ಮಿಡಿಯುವ ಮಮತೆಯ ಹೃದಯವುಳ್ಳವರು. ಮಾನ್ಯರ ಶಿಸ್ತಿನ ಜೀವನ, ಕ್ರಮಬದ್ಧ ಬದುಕು ಹಾಗೂ ನಿಷ್ಠೆ-ಪ್ರಾಮಾಣಿಕತೆಯಿಂದ ಕೂಡಿದ ಅಧ್ಯಾಪನ ವೃತ್ತಿ ಎಂದೆಂದಿಗೂ ಆದರ್ಶವಾಗಿ ಉಳಿಯಬಲ್ಲದು. ಬನ್ನಿ ಇಂತಹ ಮಹಾನುಭಾವರನ್ನು ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನದ (ಶಿಕ್ಷಕರ ದಿನಾಚರಣೆಯ) ಅಂಗವಾಗಿ ಚುಂಚಶ್ರೀ ಗೆಳೆಯರ ಬಳಗ ಬಿಜಿಎಸ್ ಶಿಕ್ಷಕಶ್ರೀ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವೀರಣ್ಣ ಗೌಡ ಕಾಲೇಜಿನಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮ ನಿವೃತ್ತಿ ಜೀವನವನ್ನು ಅಂದಗೆರೆ ಗ್ರಾಮದ ಅಂಕಿನಕಟ್ಟೆಯ ತಮ್ಮ ನಿವಾಸದಲ್ಲಿ ಸುಮಾರು 22 ವರ್ಷ ಕೃಷಿ ಹಾಗೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಅನೇಕ ಗಣ್ಯರು, ಸ್ನೇಹಿತರು, ಶಿಷ್ಯಂದಿರು, ಗ್ರಾಮಸ್ತರು ಶುಭಾಶಯ ಸಲ್ಲಿಸಿದ್ದಾರೆ.
ಅಂಕಿನಕಟ್ಟೆ ಚಂದ್ರಪ್ಪ ಗೌಡ ಹಾಗೂ ಮಸರೂರು ಪ್ರದೀಪ್ ಅವರಿಗೆ ಸನ್ಮಾನ
ಅಂದಗೆರೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ವಿಜಯದಶಮಿಯಂದು ದೇವಸ್ಥಾನದ ಅಧ್ಯಕ್ಷರಾದ ಅಂಕಿನಕಟ್ಟೆ ಚಂದ್ರಪ್ಪಗೌಡರಿಗೆ ‘ಬಿಜಿಎಸ್ ಶಿಕ್ಷಕ ಶ್ರೀ ಸೇವಾ ರತ್ನ’ ಪ್ರಶಸ್ತಿ ದೊರಕಿದ ಪ್ರಯುಕ್ತ ಸನ್ಮಾನ ಕಾರ್ಯಕ್ರಮ ನಡೆಯಿತು. ಶ್ರೀಮತಿ ಪ್ರಭಾವತಿ ಚಂದ್ರಪ್ಪಗೌಡ ದಂಪತಿಗಳಿಗೆ ಅಂದಗೆರೆಯ ನಿವೃತ್ತ ಶಿಕ್ಷಕರಾದ ಶ್ರೀನಿವಾಸ್ ಮತ್ತು ಶ್ರೀಮತಿ ಸುಶೀಲ ದಂಪತಿಗಳು ಸನ್ಮಾನವನ್ನು ಮಾಡಿದರು. ಮಸರೂರು ಜಯಪುರ ವಾಸಿ ಉದ್ಯಮಿಗಳು ಹಾಗೂ ದಾನಿಗಳಾದ ಪ್ರದೀಪ್ ಮತ್ತು ಶ್ರೀಮತಿ ತೀರ್ಥ ದಂಪತಿಗಳಿಗೆ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಚಂದ್ರಪ್ಪ ಗೌಡ ಮತ್ತು ಶ್ರೀಮತಿ ಪ್ರಭಾವತಿ ದಂಪತಿಗಳು ಸನ್ಮಾನವನ್ನು ನೆರವೇರಿಸಿಕೊಟ್ಟರು. ಈ ಸಂಧರ್ಭದಲ್ಲಿ ಕಾರ್ಯದರ್ಶಿಯಾದ ಪುರುಷೋತ್ತಮ್, ನಾರ್ವೆ ಅಶೋಕ್, ರಚನ್, ಆಶ್ರಿತ್, ಹಿತೈಷಿ, ಸತೀಶ್, ಹರೀಶ್, ಆದರ್ಶ, ದಿನೇಶ್, ನಾಗರಾಜ್.ಎ.ಎಸ್, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಸನ್ನ ಮಳೂರು, ಸುಮ ರಾಮಚಂದ್ರ ಹಾಗೂ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಸದಸ್ಯರು ಮತ್ತು ಊರಿನ ಗ್ರಾಮಸ್ಥರು ಇದ್ದರು.








