ಕರ್ನಾಟಕದಾದ್ಯಂತ ಜಾತಿ ಗಣತಿ ದಿನಾಂಕ ವಿಸ್ತರಣೆ..!!
– ರಾಜ್ಯಾದ್ಯಂತ 5 ದಿನ ಶಾಲಾ ಸಮಯ ಬದಲಾವಣೆ
– ಶಿಕ್ಷಣ ಇಲಾಖೆ ಮಹತ್ವದ ಆದೇಶ
NAMMUR EXPRESS NEWS
ಬೆಂಗಳೂರು: ಜಾತಿ ಗಣತಿ ದಿನಾಂಕ ವಿಸ್ತರಣೆಯಾಗಿರುವುದರಿಂದ ಕರ್ನಾಟಕದಾದ್ಯಂತ ಶಾಲೆಗಳ ಸಮಯವನ್ನು ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಜಾತಿ ಗಣತಿಯು ಸೆಪ್ಟೆಂಬರ್ 22 ರಿಂದ ಆರಂಭವಾಗಿದ್ದು, ಶಾಲಾ ಶಿಕ್ಷಕರು, ಉಪನ್ಯಾಸಕರು ಸಮೀಕ್ಷೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಣತಿಯು ಅಕ್ಟೋಬರ್ 7 ರ ಒಳಗೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಗಣತಿ ಕಾರ್ಯ ಬಾಕಿ ಉಳಿದ ಹಿನ್ನೆಲೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ಹೀಗಾಗಿ, ಅಕ್ಟೋಬರ್ 8 ರಿಂದ ಶಾಲಾ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ. ಅರ್ಧ ದಿನ ಮಾತ್ರ ಮಕ್ಕಳಿಗೆ ಶಾಲೆ ನಡೆಯಲಿದ್ದು, ಆ ಬಳಿಕ ಶಿಕ್ಷಕರು ಗಣತಿ ಕಾರ್ಯಕ್ಕೆ ತೆರಳಲಿದ್ದಾರೆ. ಇನ್ನು ಶಾಲಾ ಸಮಯ ಬದಲಾವಣೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಾತ್ರ ಅನ್ವಯವಾಗಲಿದೆ.
– ರಾಜ್ಯಾದ್ಯಂತ 5 ದಿನ ಶಾಲಾ ಸಮಯ ಬದಲಾವಣೆ
ರಾಜ್ಯದಲ್ಲಿ (ಗ್ರೇಟರ್ ಬೆಂಗಳೂರು ವ್ಯಾಪ್ತಿ ಹೊರತುಪಡಿಸಿ ಉಳಿದ ಭಾಗಗಳು) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ಟೋಬರ್ 8 ರಿಂದ 12 ರವರೆಗೆ ತರಗತಿಗಳನ್ನು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ. ನಂತರದ ಅವಧಿಯಲ್ಲಿ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರು ಸಮೀಕ್ಷಾ ಕಾರ್ಯವನ್ನು ನಿರ್ವಹಿಸಲು ಸೂಚನೆ ನೀಡಲಾಗಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ಟೋಬರ್ 8 ರಿಂದ 24 ರವರೆಗೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ತರಗತಿ ನಡೆಯಲಿವೆ. ಆ ನಂತರದ ಅವಧಿಯಲ್ಲಿ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರು ಸಮೀಕ್ಷಾ ಕಾರ್ಯವನ್ನು ನಿರ್ವಹಿಸಬೇಕಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಸಮೀಕ್ಷೆಯನ್ನು ಅಕ್ಟೋಬರ್ 12 ರ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಗ್ರೇಟರ್ ಬೆಂಗಳೂರಿನಲ್ಲಿ ಅಕ್ಟೋಬರ್ 24 ರೊಳಗೆ ಪೂರ್ಣಗೊಳಿಸಬೇಕು ಎಂದು ಶಿಕ್ಷಕರಿಗೆ ಶಾಲಾ ಶಿಕ್ಷಣ ಇಲಾಖೆ ಗಡುವು ನೀಡಿದೆ. ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮಧ್ಯ ವಾರ್ಷಿಕ ರಜಾ ದಿನಗಳ ನಂತರ ಶಾಲಾ ತರಗತಿಗಳು ಸಮೀಕ್ಷೆಯ ಕಾರಣದಿಂದ ಕುಂಠಿತವಾಗಬಾರದು ಎನ್ನುವ ದೃಷ್ಟಿಯಿಂದ ಸಮಯ ಬದಲಾವಣೆ ಮಾಡಲಾಗಿದೆ.







