ಕರಾವಳಿ ಪ್ರೈಮ್ ನ್ಯೂಸ್
ವಾಹನ ವಿಮೆ ಹೆಸರಲ್ಲಿ 1.5 ಕೋಟಿ ಗೋಲ್ಮಾಲ್!
– ಬ್ರಹ್ಮಾವರದಲ್ಲಿ ಕೇಸ್… ಇಬ್ಬರು ಖದೀಮರು ಅರೆಸ್ಟ್!
– ಮೂಡಬಿದಿರೆ: ದನದ ಮಾಂಸ ಮಾರಾಟ; ಆರೋಪಿಗಳು ಪರಾರಿ
– ಮಂಗಳೂರು: ಮಾಯವಾಗುತ್ತಿವೆ ನಿಲ್ಲಿಸಿದ ಬೈಕ್
– ಕಾರ್ಕಳ: ಹೆಚ್ಚಿದೆ ಬೀದಿ ನಾಯಿಗಳ ಕಾಟ..!
NAMMUR EXPRESS NEWS
ಬ್ರಹ್ಮಾವರ: ವೈದ ವಿಮಾ ಸಂಸ್ಥೆ ಎಂಬ ಹೆಸರಿನಲ್ಲಿ, ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಬಸ್ ಪಾಲಿಸಿಗಳನ್ನು ನೀಡುವಂತೆ ನಂಬಿಸಿ, ಐದು ಶಾಲೆಗಳಿಗೆ 1.5 ಕೋಟಿ ಮೌಲ್ಯದ ನಕಲಿ ವಿಮೆಯ ಮೂಲಕ, ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ವಿಮಾ ಕಂಪನಿಯ ಇಬ್ಬರು ಮಾಜಿ ಉದ್ಯೋಗಿಗಳಾದ ಬ್ರಹ್ಮಾವರದ ರಾಕೇಶ್ ಮತ್ತು ಶಿರಸಿಯ ಚರಣ್ ಬಾಬು ಮೆಸ್ತಾ ಎನ್ನುವ ವ್ಯಕ್ತಿಗಳನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ರಾಕೇಶ್ ಇಪ್ಪತ್ತು ನಕಲಿ ಪಾಲಿಸಿಗಳನ್ನು, ಚರಣ್ ಹದಿನೇಳು ನಕಲಿ ಪಾಲಿಸಿಗಳನ್ನು ಮಾಡಿದ್ದು, ಇದೇ ರೀತಿ ಒಟ್ಟು 46 ನಕಲಿ ಪಾಲಿಸಿಗಳು ಮಾಡಿರುವುದು ಕಂಡುಬಂದಿದ್ದು, ಚರಣ್ ಬಾಬು ತನ್ನ ಮನೆಯಿಂದಲೇ ಈ ವಂಚನೆಯನ್ನು ನಡೆಸುತ್ತಿದ್ದಾನೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಇದರ ಜಾಲವನ್ನು ಸಂಪೂರ್ಣವಾಗಿ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
ಮೂಡಬಿದಿರೆ: ದನದ ಮಾಂಸ ಮಾರಾಟ; ಆರೋಪಿಗಳು ಪರಾರಿ
ಮೂಡಬಿದರೆ: ಮನೆಯ ಹಿಂಭಾಗದಲ್ಲಿ ದನದ ಮಾಂಸ ಕಡಿದು, ಮಾರಾಟ ಮಾಡುತ್ತಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಮೂಡಬಿದರೆ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ, ಕೃಷ್ಣಪ್ಪ, ಅಖಿಲ್ ಅಹಮದ್, ನಾಗರಾಜ್ ಅವರು ದಾಳಿ ನಡೆಸಿದ ಘಟನೆ ಗಂಟಾಲ್ ಕಟ್ಟೆಯಲ್ಲಿ ನಡೆದಿದೆ. ಆರೋಪಿಗಳು ದಿಕ್ಕಾಪಾಲಾಗಿ ಓಡಿದ್ದು, ಆರೋಪಿಗಳನ್ನು ಜಲೀಲ್, ಸಾಹಿಲ್, ಸೊಹೇಲ್, ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದ್ದು, ಸಧ್ಯದಲ್ಲೇ ಬಂಧನಕ್ಕೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಜಲೀಲ್ ಎನ್ನುವವರ ಮನೆಯಲ್ಲಿ ಈ ಸಂದರ್ಭದಲ್ಲಿ ಸ್ಥಳದಲ್ಲಿ ಇದ್ದ ಮಾಂಸವನ್ನು ಮತ್ತು ಆರೋಪಿಗಳು ಬಳಸಿದ ಎರಡು ಕಾರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
* ಕಾರ್ಕಳ: ಹೆಚ್ಚಿದೆ ಬೀದಿ ನಾಯಿಗಳ ಕಾಟ
ಕಾರ್ಕಳ: ಕಾರ್ಕಳ ಪಟ್ಟಣದಲ್ಲಿ ಸಾರ್ವಜನಿಕರು ರಸ್ತೆಯ ಬದಿಗಳಲ್ಲಿ ಓಡಾಡಲು ಅಡಚಣೆಯುಂಟಾಗಿದೆ, ಇನ್ನು ಹುಚ್ಚು ನಾಯಿಗಳ ಆತಂಕವು ಜನರಲ್ಲಿ ಮನೆ ಮಾಡಿದೆ. ರಾತ್ರಿ ವೇಳೆ ಬೊಗಳುವುದು, ಗುಂಪುಗೂಡಿ ಕಿತ್ತಾಡುವುದು, ಬೈಕ್ ನಲ್ಲಿ ಹೋಗುವವರಿಗೆ ಅಟ್ಟಿಸಿಕೊಂಡು ಹೋಗುವುದು, ಯಾರಾದರೂ ಅಂಗಡಿ ಮತ್ತು ಹೊಟೇಲ್ ಗಳಿಂದ ಆಹಾರದ ಪೊಟ್ಟಣವನ್ನು ತೆಗೆದುಕೊಂಡು ಹೋಗುತ್ತಿದ್ದರೆ ಅವರ ಮೇಲೆ ಎರಗಿ, ದಾಳಿ ನಡೆಸುವುದು ಸಾಮಾನ್ಯ ಸಂಗತಿಯಂತಾಗಿದೆ. ಇದರಿಂದಾಗಿ ಹಲವಾರು ಜನರು ಪೆಟ್ಟು ಮಾಡಿಕೊಂಡ ಸನ್ನಿವೇಶಗಳು ಕೂಡ ಎದುರಾಗಿದೆ. ಮತ್ತೊಂದೆಡೆ ಬೀದಿ ನಾಯಿಗಳ ಲಸಿಕೆ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸಲಾಗಿದ್ದು, ಯಾವುದೇ ಗುತ್ತಿಗೆ ಆಧಾರಿತ ಸಂಸ್ಥೆಗಳು ಈ ವಿಚಾರವಾಗಿ ಆಸಕ್ತಿ ತೋರಿಸಿಲ್ಲ. ಮತ್ತೊಮ್ಮೆ ಟೆಂಡರ್ ಆಹ್ವಾನಿಸಲಾಗಿದ್ದು, ಸಾರ್ವಜನಿಕರು ಕೂಡ ಈ ಸಮಸ್ಯೆಯನ್ನು ಬಗೆಹರಿಸಲು ಕೈ ಜೋಡಿಸಬೇಕೆಂದು ತಿಳಿಸಿದೆ.
* ಮಂಗಳೂರು: ಮಾಯವಾಗುತ್ತಿವೆ ನಿಲ್ಲಿಸಿದ ಬೈಕ್
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಬೈಕ್ ಗಳ ಕಳುವು ಹೆಚ್ಚಳಗೊಂಡಿದೆ. ಕಳೆದ ಕೆಲವು ದಿನಗಳ ಹಿಂದೆ, ಮಾಲ್ ವೊಂದರ ಬಳಿ ಮೊಹಮ್ಮದ್ ಸಾಧಿಕ್ ತಾಸ್ರೀಫ್ ಎನ್ನುವವರು ತಮ್ಮ ಸ್ಪ್ಲೆಂಡರ್ ಪ್ಲಸ್ ಬೈಕ್ ಅನ್ನು ನಿಲ್ಲಿಸಿ ಹೋಗಿದ್ದರು. ಸಂಜೆ ಆರು ಗಂಟೆಯ ಸುಮಾರಿಗೆ ನಿಲ್ಲಿಸಿ ಹೋಗಿದ್ದ ಬೈಕ್, ಹತ್ತು ಗಂಟೆಯ ಹೊತ್ತಿಗೆ ಬಂದು ನೋಡಿದಾಗ ನಿಲ್ಲಿಸಿದ ಜಾಗದಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







