ಕರಾವಳಿ ಟಾಪ್ ನ್ಯೂಸ್
ಬುರುಡೆ ಪ್ರಕರಣ ಆರೋಪಿ ಚಿನ್ನಯ್ಯ ಶಿವಮೊಗ್ಗ ಜೈಲಿಗೆ!
* ಕುಂದಾಪುರ: ಕೆಪಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಸಾವು
* ಮಂಗಳೂರು: ಹೂಡಿಕೆಯ ಹೆಸರಿನಲ್ಲಿ ವಂಚನೆ
* ಸುಳ್ಯ: ಬಸ್ ಚಾಲಕನ ಮೇಲೆ ಹಲ್ಲೆ: ಜಾಮೀನು
* ಪುತ್ತೂರು: ಡಿಎನ್ಎ ವರದಿ ಬಹಿರಂಗ: ಆರೋಪ ಸಾಬೀತು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯಾಗಿರುವ ಚಿನ್ನಯ್ಯನನ್ನು ಪ್ರಕರಣದ ಕುರಿತು ಹೇಳಿಕೆ ನೀಡಲು, ಶನಿವಾರದಂದು ಶಿವಮೊಗ್ಗ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆತಂದಿದ್ದರು. ಬೆಳ್ತಂಗಡಿ ನ್ಯಾಯಾಲಯವು ಬೆಳಿಗ್ಗೆ ಹನ್ನೊಂದುವರೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ, ಊಟದ ಬಳಿಕ ಮಧ್ಯಾಹ್ನ 2:45 ರಿಂದ ಸಂಜೆ ನಾಲ್ಕರವರೆಗೆ ಮತ್ತು ಈ ಹಿಂದೆ ಪಡೆದುಕೊಂಡ ಹೇಳಿಕೆಯ ಆಧಾರದ ಮೇಲೆ ಒಟ್ಟು ಚಿನ್ನಯ್ಯನಿಂದ ಮೂರು ಬಾರಿ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಪ್ರತಿ ಬಾರಿಯೂ ಚಿನ್ನಯ್ಯ ಅದೇ ರೀತಿಯ ಹೇಳಿಕೆ ನೀಡಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಹೇಳಿಕೆಯ ನಂತರ ಚಿನ್ನಯ್ಯನನ್ನು ಮರಳಿ ಶಿವಮೊಗ್ಗ ಜೈಲಿಗೆ ಕರೆದುಕೊಂಡು ಹೋಗಲಾಯಿತು.
* ಕುಂದಾಪುರ: ಕೆಪಿಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಸಾವು
ಕುಂದಾಪುರ: ಹೊಸನಗರ ತಾಲ್ಲೂಕು ಮೂಲದ ವ್ಯಕ್ತಿಯು ಸಿದ್ಧಾಪುರದ ಕೆಪಿಸಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಳೆದೆರಡು ದಿನಗಳ ಹಿಂದೆ ಮೃತಪಟ್ಟ ಘಟನೆ ಕೆಪಿಸಿ ಕಾಲೋನಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಪ್ರವೀಣ್ ಕುಮಾರ್ ಎಂದು ಹೇಳಲಾಗಿದ್ದು, ವಿಪರೀತ ಮದ್ಯವ್ಯಸನಿಯಾಗಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಪತ್ನಿ ಮತ್ತು ಮಕ್ಕಳು ದಸರಾ ರಜೆ ಎಂದು ಊರಿಗೆ ತೆರಳಿದ್ದು, ಒಂದು ವಾರದಿಂದ ಪ್ರವೀಣ್ ಕುಮಾರ್ ಒಬ್ಬರೇ ಮನೆಯಲ್ಲಿದ್ದರು. ಮದ್ಯ ಸೇವನೆಯೇ ಸಾವಿಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಶುಕ್ರವಾರದಂದು ಪ್ರವೀಣ್ ಕುಮಾರ್ ಮೃತಪಟ್ಟಿದ್ದು, ಶನಿವಾರದಂದು ಅವರ ತಮ್ಮ ನವೀನ್ ಕುಮಾರ್ ಅಣ್ಣನ ಮನೆಗೆ ಹೋಗಿರುವ ಸಮಯದಲ್ಲಿ ಪ್ರವೀಣ್ ಕುಮಾರ್ ಅವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ನವೀನ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಮಂಗಳೂರು: ಹೂಡಿಕೆಯ ಹೆಸರಿನಲ್ಲಿ ವಂಚನೆ
ಮಂಗಳೂರು: ಕಳೆದ ತಿಂಗಳು ಮಹಿಳೆಯೊಬ್ಬರಿಗೆ ಹೂಡಿಕೆಯ ಮಾಹಿತಿಗೆ ಸಂಬಂಧಿಸಿದಂತೆ ವಾಟ್ಸಾಪ್ ಲಿಂಕ್ ಒಂದು ಬಂದಿದ್ದು, ಅದನ್ನು ಒತ್ತಿದಾಗ, ಇಂಡಿಯನ್ ಮಾರ್ಕೆಟ್ ಫೋರಂ ಎಂಬ ವಾಟ್ಸಾಪ್ ಗ್ರೂಪ್ ವೊಂದು ತೆರೆದುಕೊಂಡಿದೆ. ಅದರಲ್ಲಿ ಸ್ಟಾಕ್ ಮಾರ್ಕೆಟ್ ಗೆ ಸಂಬಂಧಿಸಿದಂತೆ ಜಾಹೀರಾತುಗಳಿದ್ದು, ನಿಮಗೆ ಹೂಡಿಕೆಯ ಆಸಕ್ತಿ ಇದ್ದರೆ ಸೈಬರ್ ಇನ್ವಿ ಎನ್ನುವ ಆ್ಯಪ್ ನಲ್ಲಿ ಸ್ವವಿವರವನ್ನು ಕಳುಹಿಸುವಂತೆ ಮತ್ತೊಂದು ಲಿಂಕ್ ಅನ್ನು ಕಳಿಸಿದ್ದಾರೆ. ಮಹಿಳೆಯು ನಿಜವೆಂದು ನಂಬಿ, ಲಿಂಕ್ ತೆರೆದು ತನ್ನ ಹೆಸರು, ವಿಳಾಸ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ದಾಖಲಿಸಿದ್ದಾರೆ. ಬಳಿಕ ಮೊದಲ ಗ್ರೂಪ್ ನಿಂದ ತೆಗೆದು, ಮಹಿಳೆಯನ್ನು ಮತ್ತೊಂದು ಗ್ರೂಪಿಗೆ ಸೇರಿಸಿದರು. ಅದರಲ್ಲಿ ಹಂಚಿಕೆ ಮಾರುಕಟ್ಟೆ, ಹೂಡಿಕೆಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ನೀಡಿ, ಹೆಚ್ಚಿನ ಲಾಭ ಗಳಿಸಬೇಕೆಂದರೆ ಸ್ವಲ್ಪ ಮೊತ್ತದ ಹಣವನ್ನು ಹಾಕುವ ಮೂಲಕ ರಿಚಾರ್ಜ್ ಮಾಡಿಸಬೇಕು, ಇದಕ್ಕಾಗಿ ಗ್ರೂಪಿನ ಅಡ್ಮಿನ್ ಆದ ರಿಯಾ ಎನ್ನುವವರನ್ನು ಸಂಪರ್ಕಿಸಿ ಎಂದು ತಿಳಿಸಿ, ಮೊಬೈಲ್ ಸಂಖ್ಯೆಯನ್ನು ಮಹಿಳೆಗೆ ಕಳುಹಿಸಿದ್ದಾರೆ. ರಿಯಾಳನ್ನು ಸಂಪರ್ಕಿಸಿದಾಗ ವಿವಿಧ ಬ್ಯಾಂಕ್ ಖಾತೆಗಳ ಸಂಖ್ಯೆಯನ್ನು ನೀಡಿ, ಹಣ ಹಾಕುವಂತೆ ಮಹಿಳೆಗೆ ಸೂಚಿಸಿದ್ದಾಳೆ. ಅದರಂತೆ ಮಹಿಳೆಯು ಸೆಪ್ಟೆಂಬರ್ 9 ರಿಂದ 25ರ ವರೆಗೆ ಹಂತ ಹಂತವಾಗಿ 45,10,000 ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಆದರೆ ಸೆಪ್ಟೆಂಬರ್25 ರಂದು ಕರೆ ಮಾಡಿದ ರಿಯಾ ಪುನಃ 33,000 ರೂಪಾಯಿ ಪಾವತಿಸುವಂತೆ ಒತ್ತಾಯಿಸಿದ್ದನ್ನು ಕಂಡು, ಮಹಿಳೆಗೆ ಅನುಮಾನ ಬಂದಿದೆ. ವಾಟ್ಸಾಪ್ ಗ್ರೂಪ್ ನಲ್ಲಿರುವ ಮತ್ತೊಂದು ಸಂಖ್ಯೆಗೆ ಕರೆ ಮಾಡಿದಾಗ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಮಹಿಳೆಯು ಇದಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರಿಗೆ ದೂರು ನೀಡಿ, ವಂಚಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ.
* ಸುಳ್ಯ: ಬಸ್ ಚಾಲಕನ ಮೇಲೆ ಹಲ್ಲೆ: ಜಾಮೀನು
ಸುಳ್ಯ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕ
ವೇಗವಾಗಿ ಬಂದು, ಎರಡು ವಾಹನಗಳಿಗೆ ಢಿಕ್ಕಿ ಹೊಡೆದ ಹಿನ್ನೆಲೆಯಲ್ಲಿ, ಒಂದು ವಾಹನದ ಮಾಲೀಕ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಸೆಪ್ಟೆಂಬರ್ 9ರಂದು ನಡೆದಿತ್ತು. ಸುಳ್ಯದ ಹಳೆ ಗೇಟಿನ ಬಳಿ ನಿಲ್ಲಿಸಿದ್ದ ಎರಡು ವಾಹನಗಳಿಗೆ ನಿರ್ಲಕ್ಷತನದಿಂದ ಬಂದ ಬಸ್ ಚಾಲಕ ಢಿಕ್ಕಿ ಹೊಡೆದು, ಎರಡೂ ವಾಹನಗಳು ಜಖಂಗೊಂಡಿದ್ದವು. ಇದರಿಂದ ಕೋಪಗೊಂಡ ಒಂದು ವಾಹನದ ಮಾಲೀಕನಾದ ಚಂದ್ರಶೇಖರ್ ಕೋಲ್ಚಾರ್ ಎನ್ನುವ ವ್ಯಕ್ತಿಯು, ಬಸ್ ಚಾಲಕನ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಒಡ್ಡುವುದಷ್ಟೇ ಅಲ್ಲದೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಂದು ಬಸ್ ಚಾಲಕ ಚಂದ್ರಶೇಖರ್ ಕೋಲ್ಚಾರ್ ವಿರುದ್ಧ ದೂರು ನೀಡಿದ್ದ. ದೂರಿನ ಆಧಾರದ ಮೇಲೆ ಚಂದ್ರಶೇಖರ್ ಕೋಲ್ಚಾರ್ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪುತ್ತೂರಿನ ಐದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆರೋಪಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿದೆ.
* ಪುತ್ತೂರು: ಡಿಎನ್ಎ ವರದಿ ಬಹಿರಂಗ
ಪುತ್ತೂರು: ತನ್ನ ಸಹಪಾಠಿಯನ್ನು ಮನೆಗೆ ಕರೆದುಕೊಂಡು ಹೋಗಿ, ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕವನ್ನು ಹೊಂದಿ, ಆಕೆ ಗರ್ಭಿಣಿ ಎಂದು ತಿಳಿದೊಡನೆ ಮದುವೆಯಾಗಲು ನಿರಾಕರಿಸಿದ ಬಿಜೆಪಿ ಮುಖಂಡನ ಪುತ್ರನಾದ ಕೃಷ್ಣ ಜೆ ರಾವ್ ನ ಡಿಎನ್ಎ ವರದಿಯು ಇದೀಗ ಹೊರಬಿದ್ದಿದೆ. ವರದಿಯ ಪ್ರಕಾರ ಸಂತ್ರಸ್ತೆಗೆ ಜನಿಸಿದ ಮಗು ಕೃಷ್ಣನದ್ದೇ ಎನ್ನುವುದು ಈ ಮೂಲಕ ಸಾಬೀತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ತಾಯಿ ನಮಿತಾ ಆಚಾರ್ಯ ಅವರು ” ನನ್ನ ಮಗಳ ಮಾತಿನಲ್ಲಿ ಸತ್ಯವಿದೆ ಎಂದು ನನಗೆ ಮೊದಲೇ ತಿಳಿದಿತ್ತು. ಈ ಕಾರಣಕ್ಕಾಗಿಯೇ ನಾನು ಇಷ್ಟು ಹೋರಾಟವನ್ನು ನಡೆಸಬೇಕಾಯಿತು. ಈ ಸಂದರ್ಭದಲ್ಲಿ ಹಲವಾರು ಕೆಟ್ಟ ಮಾತುಗಳು ಮತ್ತು ಅವಮಾನಗಳನ್ನು ಎದುರಿಸಬೇಕಾಯಿತು. ಡಿಎನ್ಎ ಪರೀಕ್ಷೆಗೆ ಒತ್ತಾಯಿಸಿದ್ದು ಕೃಷ್ಣನ ತಂದೆಯೇ. ಇದೀಗ ಡಿಎನ್ಎ ವರದಿಯ ಪ್ರಕಾರ ಕಾನೂನೇ ಮಗುವಿನ ತಂದೆ ಕೃಷ್ಣ ಎನ್ನುವುದನ್ನು ಸ್ಪಷ್ಟಪಡಿಸಿದೆ. ಇನ್ನಾದರೂ ಕೃಷ್ಣನ ತಂದೆ ಮನಸ್ಸು ಮಾಡಿ ಇಬ್ಬರ ಮದುವೆಯನ್ನು ನೆರವೇರಿಸಿ, ಅವರಿಬ್ಬರು ಸಂತೋಷವಾಗಿ ಬದುಕುವಂತೆ ಮಾಡಲಿ” ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.







