ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮಾನವ ಕಾಡುಪ್ರಾಣಿಗಳ ಸಂಘರ್ಷ
* ಖಾಂಡ್ಯದಲ್ಲಿ ತೋಟಕ್ಕೆ ಕಾಡಾನೆ ದಾಳಿ,ಬೆಳೆ ನಾಶ
* ಬಾಳೂರಿನಲ್ಲಿ ರೈತನ ಮೇಲೆ ಕಾಡುಕೋಣ ದಾಳಿ,ಗಂಭೀರ ಗಾಯ
NAMMMUR EXPRESS NEWS
ಚಿಕ್ಕಮಗಳೂರು: ಮಲೆನಾಡಿನ ಭಾಗದಲ್ಲಿ ದಿನದಿಂದ ದಿನಕ್ಕೆ ಮಾನವ ಕಾಡುಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ. ಕಾಡುಕೋಣ, ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಬೆಳೆದಿರುವಂತಹ ಬೆಳೆಗಳನ್ನು ನಾಶ ಹಾಗೂ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ದಾಳಿ ಮಾಡಿರುವ ಘಟನೆ ಮಲೆನಾಡಿನಾದ್ಯಂತ ಹೆಚ್ಚಾಗುತ್ತಿದೆ.
ನಿನ್ನೆಯಷ್ಟೇ ಎನ್ ಆರ್ ಪುರ ತಾಲೂಕಿನ ಗಡ್ಡೇಹಳ್ಳ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಸ್ಥಳೀಯರ ಮನವಿ ಮೇರೆಗೆ ಅರಣ್ಯ ಸಚಿವರ ಆದೇಶದಂತೆ ಸೆರೆಹಿಡಿಯಲಾಗಿದೆ. ಇದರ ಬೆನ್ನಲ್ಲೇ ಚಿಕ್ಕಮಗಳೂರು ತಾಲೂಕು ಖಾಂಡ್ಯ ಹೋಬಳಿ ಹುಯಿಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡಾನೆಗಳು ರೈತರ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ ಘಟನೆ ನಡೆದಿದೆ.
ತೋಟದ ಮಾಲೀಕರಾದ ಕರಗಣೆ ಗ್ರಾಮದ ನವೀನ್ ಹಾಗೂ ಶಂಕ್ರೆಗೌಡ ಎಂಬುವರ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳು ಅಡಕೆ, ಕಾಫಿಗಿಡಗಳನ್ನು ಸಂಪೂರ್ಣ ನಾಶ ಮಾಡಿವೆ. ಅಡಕೆ ಮರಗಳನ್ನು ಬುಡ ಸಮೇತ ಉರುಳಿಸಿ ಸಿಗಿದು ಹಾಕಿವೆ. ಫಸಲಿಗೆ ಬಂದ ಮರಗಳನ್ನು ಈ ರೀತಿ ಸಂಪೂರ್ಣ ಮುರಿದು ಹಾಕಿರುವುದರಿಂದ ಬೆಳೆಗಾರಿಗೆ ದಿಕ್ಕೇ ತೋಚದಂತಾಗಿದ್ದು, ಅರಣ್ಯ ಇಲಾಖೆಯೂ ಆನೆಗಳನ್ನು ಓಡಿಸದೆ ಕೈ ಕಟ್ಟಿ ಕುಳಿತಿದೆ ಎಂದು ರೈತರು ಆರೋಪಿಸಿದ್ದಾರೆ.
ಈ ಕುರಿತು ಸರ್ಕಾರ ಬೆಳೆ ಹಾನಿಗೆ ನೀಡುವ ಪರಿಹಾರ ಕೇವಲ ಆನೆ ಹೊಟ್ಟೆಯನ್ನು ತುಂಬಿಸಲು ಕೂಡ ಆಗುವುದಿಲ್ಲ, ಎಂದು ಟೀಕಿಸುವ ಮೂಲಕ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಆನೆಗಳನ್ನು ತಕ್ಷಣ ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ರೈತರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.
* ಬಾಳೂರಿನಲ್ಲಿ ರೈತನ ಮೇಲೆ ಕಾಡುಕೋಣ ದಾಳಿ,ಗಂಭೀರ ಗಾಯ
ಒಂದೆಡೆ ಕಾಡಾನೆ ಇನ್ನೊಂದೆಡೆ ಕಾಡುಕೋಣಗಳ ದಾಳಿಯಿಂದ ರೈತರು ಹೈರಾಣಾಗಿದ್ದಾರೆ. ಕಾಡುಕೋಣ ದಾಳಿಯಿಂದ ವ್ಯಕ್ತಿ ಗಂಭೀರ ಗಾಯವಾಗಿರುವ ಘಟನೆ ತಾಲೂಕಿನ ಬಾಳೂರು ಹೋಬಳಿಯ ಜಾವಳಿ ಗ್ರಾಮದ ಪಾಂಡಿಮನೆ ಪ್ರದೇಶದಲ್ಲಿ ಭಾನುವಾರ ನಡೆದಿದೆ.
ಕಾಡುಕೋಣ ದಾಳಿಯಿಂದ ರಾಜು (60) ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ತಮ್ಮ ಮನೆಯ ಹತ್ತಿರ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಕಾಡುಕೋಣ ದಾಳಿ ನಡೆಸಿದ್ದು, ಬಲಭಾಗದ ತೊಡೆಗೆ ತಿವಿದ ಪರಿಣಾಮ ಮಾಂಸ ಭಾಗ ಹೊರ ಬಂದಿದೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಬಣಕಲ್ ಕೃಷ್ಣ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಲೆನಾಡಿನ ಭಾಗದಲ್ಲಿ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿರಂತರ ಕಾಡುಕೋಣ ದಾಳಿಯಿಂದಾಗಿ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಲೆನಾಡು ಭಾಗದಲ್ಲಿ ಹೆಚ್ಚಾಗಿರುವ ಕಾಡು ಪ್ರಾಣಿ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಕಾರ್ಯನಿರ್ವಹಿಸಬೇಕಿದೆ.








