ತೀರ್ಥಹಳ್ಳಿ ಮೂಲದ ರವಿ ಸಂತೆಹಕ್ಕಲು ಅವರಿಗೆ ರಾಜ್ಯ ಪ್ರಶಸ್ತಿ!
– ಭಜರಂಗಿ-2 ಚಿತ್ರದ ಕಲಾ ನಿರ್ದೇಶನಕ್ಕೆ 2021ನೇ ಸಾಲಿನ ರಾಜ್ಯ ಪ್ರಶಸ್ತಿ
– ನಮ್ಮೂರ್ ಎಕ್ಸ್ಪ್ರೆಸ್ ಮಲ್ನಾಡ್ ಐಕಾನ್ಸ್ ಅವಾರ್ಡ್ ವಿಜೇತ ಕಲಾವಿದ
ವಿಶೇಷ ವರದಿ: ನಕ್ಷತ್ರ ಬೆಂಗಳೂರು
ಕನ್ನಡದ ಖ್ಯಾತ ಕಲಾ ನಿರ್ದೇಶಕ ರವಿ ಸಂತೆಹಕ್ಕಲು ಅವರು ತಮ್ಮ ಭಜರಂಗಿ-2 ಚಿತ್ರದ ಕಲಾ ನಿರ್ದೇಶನಕ್ಕೆ 2021ನೇ ಸಾಲಿನ ರಾಜ್ಯ ವಾರ್ಷಿಕ ಚಲನ ಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರವಿ ಸಂತೆಹಕ್ಕಲು ಅವರ ಹೆಸರನ್ನು ಘೋಷಣೆ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಶುಭಾಶಯ ಸಲ್ಲಿಸಿದ್ದಾರೆ. ಈಗಾಗಲೇ ನೂರಾರು ಪ್ರಶಸ್ತಿ ಗೆದ್ದಿರುವ ರವಿ ಅವರಿಗೆ ನಮ್ಮೂರ್ ಎಕ್ಸ್ಪ್ರೆಸ್ ಶುಭಾಶಯ ಸಲ್ಲಿಸುತ್ತದೆ.
ಮಲೆನಾಡು ಮೂಲದ ಪ್ರತಿಭಾವಂತ ಕಲಾ ನಿರ್ದೇಶಕ ರವಿ ಸಂತೆಹಕ್ಕಲು
ರವಿ ಸಂತೆಹಕ್ಕಲು ಮಲೆನಾಡು ಮೂಲದ ಪ್ರತಿಭಾವಂತ ಕಲಾ ನಿರ್ದೇಶಕ.ಇವರು 1968ರ ಮೇ ನಾಲ್ಕರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸಂತೆ ಹಕ್ಕಲಿನಲ್ಲಿ ಜನಿಸಿದ್ದರು. ತಂದೆ ಅಪ್ಪಯ್ಯ ಗೌಡ ತಾಯಿ ನಾಗಮ್ಮ. ರವಿ ಅವರು ಐದನೇ ತರಗತಿಯವರೆಗು ಸಂತೆಹಕ್ಕಲಿನಲ್ಲಿ ಕಲಿತರು. ಐದನೇ ತರಗತಿಯನ್ನು ಸಮೀಪದ ಅಕ್ಕಲಾಪುರ ಗ್ರಾಮದಲ್ಲು, ಏಳು, ಎಂಟನೇ ತರಗತಿಯನ್ನು ತನಿಕಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ನ್ಯಾಷನಲ್ ಹೈಸ್ಕೂಲಿನಲ್ಲಿ ಪಡೆದರು.
ಮನೆಯ ಬಡತನದ ಬೇಗೆಯನ್ನು ನಿವಾರಿಸಲು1988ರಲ್ಲಿ ಬೆಂಗಳೂರಿನತ್ತ ಉದ್ಯೋಗ ಅರಸಿ ಪ್ರಯಾಣ ಬೆಳೆಸಿದರು. ಕೆಲಕಾಲ ಅಲ್ಲಿನ ಹೊಟೇಲ್ ಒಂದರಲ್ಲಿ ಕೆಲಸ ಮಾಡಿದರು. ಆದರೆ ಅಣ್ಣನ ಒತ್ತಡ ಮತ್ತು ಹೊಟೇಲ್ ನಲ್ಲಿ ಎದುರಿಸಿದ ನಿಂದನೆಯ ಪರಿಣಾಮವಾಗಿ ಕೆಲಸ ಬಿಟ್ಟು, ವಿದ್ಯಾಭ್ಯಾಸವನ್ನು ಮುಂದುವರೆಸಿದರು. ವಿಜಯನಗರದ ಶ್ರೀ ಬಸವೇಶ್ವರ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುತ್ತಲೇ ತಾತ್ಕಾಲಿಕ ಕೆಲಸಕ್ಕೆ ಸೇರಿಕೊಂಡರು.ಈ ಸಮಯದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಪರಿಚಯವಾದ ಕಾರಣ ಅವರ ಮೊದಲ ಮತ್ತು ಎರಡನೇ ಚಿತ್ರವಾದ ‘ಉಂಡೂ ಹೋದ ಕೊಂಡೂ ಹೋದ’ ಮತ್ತು ‘ಬಾ ನಲ್ಲೆ ಮಧುಚಂದ್ರಕೆ’ ಚಿತ್ರಗಳಿಗೆ ಸಹಾಯಕರಾದರು. ಬಳಿಕ ಖ್ಯಾತ ಛಾಯಾಗ್ರಾಹಕರಾದ ಚಿಟ್ಟಿಬಾಬು ಅವರ ಮಾರ್ಗದರ್ಶನದಲ್ಲಿ ಛಾಯಾಗ್ರಹಣವನ್ನು ಕಲಿತರು. ಆದರೆ ಅನಾರೋಗ್ಯದ ನಿಮಿತ್ತ ಹುಟ್ಟೂರಿಗೆ ಹಿಂತಿರುಗಬೇಕಾಯಿತು.
ಆರೋಗ್ಯದಲ್ಲಿ ಸುಧಾರಣೆಯಾದ ಬಳಿಕ ಬೆಂಗಳೂರಿಗೆ ಮರಳಿದ ರವಿ ಅವರು ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಅಮೇರಿಕಾ ಅಮೇರಿಕಾ’ ‘ಹೂಮಳೆ’ ಚಿತ್ರಗಳಿಗೆ ಸಹಾಯಕರಾದರು. ದಿನೇಶ್ ಬಾಬು ಅವರ ‘ಅಮೃತ ವರ್ಷಿಣಿ’ ಚಿತ್ರಕ್ಕೆ ಸಹಾಯಕರಾಗಿದ್ದ ಸಮಯದಲ್ಲಿ ತಮ್ಮ ವೃತ್ತಿಯಲ್ಲಿ ಹೊಸ ತಿರುವು ದೊರೆಯಿತು. ಖ್ಯಾತ ಕಲಾ ನಿರ್ದೇಶಕರಾದ ಶಶಿಧರ ಅಡಪ ಅವರ ಗುಂಪಿನೊಳಗೆ ರವಿ ಸಂತೆಹಕ್ಕಲು ಅವರಿಗೆ ಪ್ರವೇಶ ದೊರೆಯಿತು.
ಸಹಾಯಕ ಕಲಾ ನಿರ್ದೇಶಕರಾಗಿ ರೂಪುಗೊಂಡ ಬಳಿಕ ಗಿರೀಶ್ ಕಾರ್ನಾಡ್, ಐ.ಎಂ.ವಿಠಲಮೂರ್ತಿ ಅವರ ನಿರ್ಮಾಣದ ‘ಕಾನೂರು ಹೆಗ್ಗಡತಿ’, ಟಿ.ಎನ್.ಸೀತಾರಾಮ್ ಅವರ ‘ಮತದಾನ’, ಗಿರೀಶ್ ಕಾಸರವಳ್ಳಿ ಅವರ ‘ದ್ವೀಪಾ’, ‘ಹಸೀನಾ’, ‘ಕೂರ್ಮಾವತಾರ’ ಪಿ.ಶೇಷಾದ್ರಿ ಅವರ ‘ತುತ್ತೂರಿ’, ಯೋಗರಾಜ ಭಟ್ಟರ ‘ಮಣಿ’, ‘ಗಾಳಿಪಟ’, ‘ಮನಸಾರೆ’, ‘ಪಂಚರಂಗಿ’, ‘ಪರಮಾತ್ಮ’, ‘ಡ್ರಾಮಾ’, ಸೂರಿಯವರ ‘ಜಂಗ್ಲಿ’, ‘ಕಡ್ಡಿಪುಡಿ’, ‘ಅಣ್ಣಾಬಾಂಡ್’ ಚಿತ್ರಗಳಲ್ಲಿ ಕಾರ್ಯನಿರ್ವಹಿಸಿದರು. ಈ ನಡುವೆ ‘ಚಿದಂಬರ ರಹಸ್ಯ’, ‘ಸಾಕ್ಷಿ’, ‘ಕುಸುಮಬಾಲೆ’ ಕಿರುಚಿತ್ರಗಳಿಗೆ ಕೆಲಸ ಮಾಡಿದರು. ‘ಜಯಣ್ಣ ಕಂಬೈನ್ಸ್’ ನಿರ್ಮಾಣದ ‘ಗೂಗ್ಲಿ’ ಚಿತ್ರದ ಮೂಲಕ ಕಲಾ ನಿರ್ದೇಶಕರಾದರು. ರವಿ ಅವರು ಕೇವಲ ಚಲನಚಿತ್ರಗಳಿಗೆ ಮಾತ್ರವಲ್ಲದೆ ವಿಶ್ವ ಕನ್ನಡ ಸಮ್ಮೇಳನ, ಜಾನಪದ ಜಾತ್ರೆ, ಹಂಪಿ ಉತ್ಸವದಂತ ನಾಡು ನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಕಲಾ ನಿರ್ದೇಶಕರಾದ ಬಳಿಕ ಭಜರಂಗಿ – 2016, ಬಹದ್ದೂರ್, ಜೈಲಲಿತಾ, ಚಾರ್ಲಿ, ದೃಶ್ಯಂ, ಶಿವಲಿಂಗ, ಯೂಟರ್ನ್- 2016, ಮುಗುಳುನಗೆ- 2017, ಹೆಬ್ಬುಲಿ – 2018, ಸೀತಾರಾಮ ಕಲ್ಯಾಣ- 2019, ಭಜರಂಗಿ – 2(2021), ದೃಶ್ಯ – 2(2021), ಜೇಮ್ಸ್ (2021), ಗೀತಾ ಶಿವರಾಜಕುಮಾರ್ ಅವರ ಗೀತಾ ಪಿಚ್ಚರ್ಸ್ ಅಡಿಯಲ್ಲಿ ನಿರ್ಮಾಣವಾದ ಚೊಚ್ಚಲ ಚಿತ್ರ ವೇದ(2022), ಹೊಂಬಾಳೆ ಫಿಲ್ಮ್ಸ್ ಅವರ ‘ಭಘೀರ’ (2023) ಚಿತ್ರಗಳಿಗೆ ಕಲಾ ನಿರ್ದೇಶಕರಾದರು.
ಭಜರಂಗಿ ಚಿತ್ರಕ್ಕೆ 2016-17ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಹೆಬ್ಬುಲಿ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಭಜರಂಗಿ -2 ಚಿತ್ರಕ್ಕೆ ಚಂದನವನದ ಅತ್ಯುತ್ತಮ ವಿಮರ್ಶಕರ ಪ್ರಶಸ್ತಿ ಲಭಿಸಿದೆ. ಚಲನಚಿತ್ರ ಕ್ಷೇತ್ರದ ಇವರ ಸಾಧನೆಯನ್ನು ಗುರುತಿಸಿ, ನಮ್ಮೂರ್ ಎಕ್ಸ್ ಪ್ರೆಸ್ ದಶಮಾನೋತ್ಸವ ಸಂಭ್ರಮದಲ್ಲಿ ಆಯೋಜಿಸಿದ್ದ ಮಲೆನಾಡೋತ್ಸವ -2025ರಲ್ಲಿ ಮಲ್ನಾಡ್ ಐಕಾನ್ ಪ್ರಶಸ್ತಿ- 2024 ನೀಡಿ ಗೌರವಿಸಲಾಗಿದೆ.








