ಆರ್ಎಸ್ಎಸ್ಗೆ ನೂರು ವರ್ಷದ ಸಂಭ್ರಮ
* ಶತಮಾನೋತ್ಸವದ ಪ್ರಯುಕ್ತ 100 ರೂ. ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ
* ಜಗತ್ತಿನ ಅತಿದೊಡ್ಡ ಸಂಘಟನೆಯ ಕಾರ್ಯ ವ್ಯಾಪಿ ಎಷ್ಟು?
NAMMMUR EXPRESS NEWS
ನವದೆಹಲಿ: ನಾಡಿನ ಉದ್ದಗಲಕ್ಕೂ ಇಂದು ವಿಜಯ ದಶಮಿಯ ಸಂಭ್ರಮ. ಈ ದಿನ ಇನ್ನೊಂದು ವಿಶೇಷವೂ ಇದೆ. ದೇಶ ಮೊದಲು, ಒಂದು ದೇಶ ಎಂಬ ರಾಷ್ಟ್ರಭಾವವನ್ನು ಜಾಗೃತಗೊಳಿಸುತ್ತ ಸಮಾಜದೊಳಗೆ ಸೇರಿಕೊಳ್ಳುತ್ತ ಸಾಗುತ್ತಿರುವ ಸಂಘಟನೆ ಇಂದು 100ನೇ ವರ್ಷಕ್ಕೆ ಕಾಲಿಟ್ಟಿದೆ. ಹೌದು, ಭಾರತದ ಅತಿದೊಡ್ಡ ಸಾಮಾಜಿಕ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) 100 ವರ್ಷ ಹಿಂದೆ ಇದೇ ದಿನ ಸ್ಥಾಪನೆಯಾಗಿತ್ತು. ಸರಳವಾಗಿ ಹೇಳಬೇಕು ಎಂದರೆ ಆರ್ಎಸ್ಎಸ್ ಇಂದು 100ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸ್ವದೇಶಿ ಜೀವನ ದೃಷ್ಟಿ ಅಥವಾ ಪದ್ಧತಿಯನ್ನು ಕಟ್ಟಿ ಬೆಳೆಸುವ ಈ ಕಾರ್ಯ ಸುಲಭದ ಅಥವಾ ಸಣ್ಣ ಸಾಧನೆಯೂ ಅಲ್ಲ, ಆರ್ಎಸ್ಎಸ್ ಮಟ್ಟಿಗೆ ಹೂವಿನ ಹಾಸಿಗೆಯೂ ಆಗಿರಲಿಲ್ಲ. ನೂರಾರು ಸಾವಿರಾರು ಸ್ವಯಂ ಸೇವಕರ ತ್ಯಾಗ ಬಲಿದಾನಗಳಿವೆ. ನಮ್ಮ ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಜನರಲ್ಲಿ ರಾಷ್ಟ್ರ ಪ್ರಜ್ಞೆ ಮತ್ತು ರಾಷ್ಟ್ರ ಭಾವ ಜಾಗೃತಗೊಳಿಸುವ ಕೆಲಸ ಶುರುಮಾಡಿದ ಆರ್ಎಸ್ಎಸ್ ಇಂದಿಗೂ ಸಮಾಜ ವ್ಯಾಪಿಯಾಗಿ ಇದನ್ನು ಮಾಡುತ್ತಲೇ ಇದೆ. ಸ್ವಯಂಸೇವಕರ ನೆಚ್ಚಿನ ಸಂಘಕ್ಕೆ ಇಂದು ಶತಾಬ್ಧಿಯ ಸಂಭ್ರಮ.
* ಆರ್ ಎಸ್ ಎಸ್ ಹುಟ್ಟಿದ್ದು ಹೇಗೆ,ಹೇಗಿತ್ತು ಇದರ ಬಗಳವಣಿಗೆ ?
ಮಹಾರಾಷ್ಟ್ರ ನಾಗಪುರದ ಮಹಲ್ – ಮೊಹಿತೇವಾಡಾದ ಪರಿಸರದಲ್ಲಿ 1925ರ ವಿಜಯದಶಮಿಯ ದಿನ. ಡಾ.ಕೇಶವ ಬಲಿರಾಂ ಹೆಡಗೇವಾರ್ ಸಂಘ ಸ್ಥಾಪನೆಯ ವಿಚಾರ ಪ್ರಕಟಿಸಿದರು. ನಾವೆಲ್ಲರೂ ನಮ್ಮ ಪ್ರೀತಿಪಾತ್ರರನ್ನು ಒಟ್ಟುಗೂಡಿಸುವುದಕ್ಕೆ ಸಾಧ್ಯವಾಗುವಂತೆ, ದೈಹಿಕ, ಬೌದ್ಧಿಕ ಮತ್ತು ಎಲ್ಲ ರೀತಿಯಲ್ಲೂ ನಮ್ಮನ್ನು ನಾವು ಸಜ್ಜುಗೊಳಿಸುವುದು ಸಂಘ ಸ್ಥಾಪನೆಯ ಗುರಿ ಎಂದು ಹೇಳಿದರು. ಡಾ.ಹೆಡಗೇವಾರ್ ಅವರ ಮನೆಯಲ್ಲೇ ಸಂಘ ಔಪಚಾರಿಕವಾಗಿ ಶುರುವಾಯಿತು. ಭಾನುವಾರ ಕವಾಯತು, ಸಂಚಲನಗಳ ತರಬೇತಿ ನೀಡುವುದು, ಗುರುವಾರ ಮತ್ತು ಭಾನುವಾರ ರಾಷ್ಟ್ರೀಯ ವಿಚಾರಗಳ ಬೌದ್ಧಿಕ್ (ಉಪನ್ಯಾಸ) ಎಂದು ತೀರ್ಮಾನವಾಗಿ ಅದರಂತೆಯೇ ನಡೆಯಿತು. ಆರ್ಎಸ್ಎಸ್ನ ಮೊದಲ ದೈನಂದಿನ ‘ಶಾಖೆ’ 1926ರ ಮೇ 28 ರಿಂದ ಮೊಹಿತೇವಾಡಾ ಮೈದಾನದಲ್ಲಿ ಶುರುವಾಯಿತು. ಇದಕ್ಕೆ ನಿಯತ ವೇಳಾಪಟ್ಟಿ ಇತ್ತು.
ಸಂಘ ಶುರುವಾದಾಗ ಹೆಸರು ಆಯ್ಕೆ ಮಾಡಬೇಕಾಗಿತ್ತು. ಆಗ ಹತ್ತಾರು ಹೆಸರು ಪ್ರಸ್ತಾಪವಾಗಿದ್ದವು. ಅದರಲ್ಲಿ ನಾಲ್ಕು ಅಂತಿಮ ಆಯ್ಕೆ ಪರಿಗಣಿಸಲ್ಪಟ್ಟಿದ್ದವು. ಆ ನಾಲ್ಕು ಹೆಸರುಗಳಿವು – ಜರಿಪಟ್ಟ ಮ೦ಡಲ, ಭಾರತ್ ಉಧಾರಕ ಮಂಡಲ, ಹಿಂದು ಸ್ವಯಂಸೇವಕ ಸಂಘ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇದರಲ್ಲಿ ಆಯ್ಕೆಯಾಗಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ.
ಭಾರತದಲ್ಲಿ ಪ್ರಸ್ತುತ 83,127 ದೈನಿಕ ಶಾಖೆಗಳು, 32,147 ಸಾಪ್ತಾಹಿಕ ಮಿಲನ್ (ವಾರಕ್ಕೊಮ್ಮೆ ಸೇರುವ ಶಾಖೆ), 51,710 ಸ್ಥಾನಗಳು,12,091 ಮಂಡಲಗಳಿವೆ. ಜಗತ್ತಿನ 53 ದೇಶಗಳಲ್ಲಿ ವಿಶ್ವವಿಭಾಗ- ಹಿಂದು ಸ್ವಯಂಸೇವಕ ಸಂಘದ ಶಾಖೆಗಳು ನಡೆಯುತ್ತಿವೆ.
ಆರ್ಎಸ್ಎಸ್ ಮತ್ತು ಅದರ ಪರಿವಾರ ಸಂಘಟನೆಗಳು. ಇದರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ), ವನವಾಸಿ ಕಲ್ಯಾಣ, ಭಾರತೀಯ ಕಿಸಾನ್ ಸಂಘ, ಭಾರತೀಯ ಮಜ್ದೂರ್ ಸಂಘ, ವಿಶ್ವ ಹಿಂದೂ ಪರಿಷದ್, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹೀಗೆ ಹತ್ತಾರು ಸಂಘಟನೆಗಳಿವೆ. ಇದಲ್ಲದೇ, ಇದೇ ವಿಚಾರಧಾರೆಯಿಂದ ಪ್ರಭಾವಿತವಾಗಿ ಹುಟ್ಟಿಕೊಂಡ ಅನೇಕ ಸಂಸ್ಥೆಗಳೂ ಇವೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಈಗ ಆರನೇ ಸರಸಂಘಚಾಲಕರು ಮುನ್ನಡೆಸುತ್ತಿದ್ದಾರೆ. ಡಾಕ್ಟರ್ಜೀ ಎಂದೇ ಜನಪ್ರಿಯರಾಗಿದ್ದ ಡಾ.ಕೇಶವ ಬಲಿರಾಂ ಹೆಡಗೇವಾರ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರು ಮತ್ತು ಮೊದಲ ಸರಸಂಘಚಾಲಕರು (1925-1940). ಗುರೂಜಿ ಎಂದೇ ಗುರುತಿಸಿಕೊಂಡಿದ್ದ ಮಾಧವರಾವ್ ಸದಾಶಿವರಾವ್ ಗೋಳ್ವಾಲ್ಕರ್ ಅವರು ಎರಡನೇ ಸರಸಂಘಚಾಲಕರು (1940-1973). ಬಾಳಾಸಾಹೇಬ್ ದೇವರಸ್ ಎಂದೇ ಪ್ರಸಿದ್ಧರಾಗಿದ್ದ ಮಧುಕರ ದತ್ತಾತ್ರೇಯ ದೇವರಸ್ ಅವರು ಮೂರನೇ ಸರಸಂಘಚಾಲಕರು (1973- 1993). ರಜ್ಜೂ ಭೈಯ್ಯಾ ಎಂದೇ ಖ್ಯಾತರಾಗಿದ್ದ ಪ್ರೊಫೆಸರ್ ರಾಜೇಂದ್ರ ಸಿಂಗ್ ಅವರು ನಾಲ್ಕನೇ ಸರಸಂಘಚಾಲಕರು (1993- 2000). ಮೈಸೂರಿನವರಾದ ಕು.ಸೀ.ಸುದರ್ಶನ್ ಅವರು 5ನೇ ಸರಸಂಘಚಾಲಕರು (2000- 2009). ಮೋಹನ್ಜೀ ಭಾಗವತ್ ಎಂದೇ ಖ್ಯಾತರಾದ ಡಾ. ಮೋಹನ್ ಭಾಗವತ್ (ಮೋಹನ್ ಮಧುಕರರಾವ್ ಭಾಗ್ವತ್) ಅವರು ಆರನೇ ಅಂದರೆ ಹಾಲಿ ಸರಸಂಘಚಾಲಕರು. ಅವರು 2009 ರಿಂದ ಈ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ.
* ಹೇಗಿರುತ್ತೆ ಆರ್ಎಸ್ಎಸ್ ಶಾಖೆ ?
ಮುಂಜಾನೆ ಅಂದ್ರೆ ಸೂರ್ಯೋದಯಕ್ಕೆ ಮೊದಲೇ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಏಕಾತ್ಮತಾ ಸ್ತೋತ್ರ ಪಠಿಸುವುದು. ಅದಾಗಿ ಶಾಖೆಗೆ ಹೋಗುವುದು. ಶಾಖೆ ನಡೆಯುವುದು ಆಟದ ಮೈದಾನದಲ್ಲಿ. ಅಲ್ಲಿ ಮಧ್ಯದಲ್ಲಿ ಕೇಸರಿ ಧ್ವಜ (ಭಗವಾ ಧ್ವಜ)ವನ್ನು ಹಾರಿಸಲಾಗುತ್ತದೆ. ಅಲ್ಲಿ ಸ್ವಯಂ ಸೇವಕರೊಂದಿಗೆ ಸೇರಿ ಸ್ವಲ್ಪ ಹೊತ್ತು ಆಟ, ವ್ಯಾಯಾಮ ಇತ್ಯಾದಿ ಮಾಡಿದ ಬಳಿಕ ಗುಂಪಿನ ನಾಯಕ ಎಲ್ಲರೂ ಧ್ವಜದ ಎದುರು ಸಾಲಾಗಿ ಶಿಸ್ತಿನಿಂದ ನಿಲ್ಲುವಂತೆ ಸೂಚಿಸುತ್ತಾನೆ. ಎಲ್ಲರೂ ಮಾತೃಭೂಮಿಗೆ ನಮಸ್ಕರಿಸುವ ಸಂಕೇತವಾಗಿ ತಮ್ಮ ಬಲಕೈಯನ್ನು ಎದೆಮಟ್ಟಕ್ಕೆ ಅಡ್ಡ ಹಿಡಿದು “ನಮಸ್ತೆ ಸದಾ ವತ್ಸಲೇ ಮಾತೃಭೂಮಿ” ಪ್ರಾರ್ಥನೆ ಹೇಳುತ್ತಾರೆ. ಅದಾಗಿ ಭಾರತ್ ಮಾತಾಕಿ ಜೈ ಘೋಷಣೆ ಕೂಗಿ, ಶಾಖೆಯ ಸಂಖ್ಯೆ ತಗೊಂಡು ಆ ಹೊತ್ತಿನ ಶಾಖಾ ಚಟುವಟಿಕೆ ಮುಗಿಸುತ್ತಾರೆ. ಇದಾಗಿ ಸ್ವಲ್ಪ ಹೊತ್ತು ಅನೌಪಚಾರಿಕವಾಗಿ ನೀತಿ ಕಥೆಗಳು, ಧನಾತ್ಮಕವಾಗಿ ಪರಿಣಾಮ ಬೀರುವ ನಿತ್ಯ ಬದುಕಿನ ಘಟನೆಗಳನ್ನು ಹಂಚಿಕೊಳ್ಳುವ ಪರಿಪಾಠವೂ ಇದೆ. ಸಂಜೆ ಶಾಖೆ ಕೂಡ ಇದೆ. ಅಲ್ಲೂ ಶಾಖಾ ದಿನಚರಿ ಇದೇ ರೀತಿ. ವಿಶೇಷ ದಿನಗಳಲ್ಲಿ ಬೌದ್ಧಿಕ್ ಅಂದ್ರೆ ರಾಷ್ಟ್ರ ಭಾವ ಜಾಗೃತಗೊಳಿಸುವ ಉಪನ್ಯಾಸ. ಆಹ್ವಾನಿತ ಹಿರಿಯರು ಅಂದ್ರೆ ಆರ್ಎಸ್ಎಸ್ನ ವಿವಿಧ ಹೊಣೆಗಾರಿಕೆ ನಿಭಾಯಿಸುತ್ತಿರುವವರ ಪೈಕಿ ಯಾರಾದರೂ ಬಂದು ಈ ಉಪನ್ಯಾಸ ಕೊಡುತ್ತಾರೆ. ಪ್ರಚಲಿತ ವಿದ್ಯಮಾನಗಳ ವಿಚಾರವೂ ಇದರಲ್ಲಿರುತ್ತದೆ.
ಶಾಖೆಗೆ ಹೋದರೆ ಏನು ಲಾಭ ಎಂಬುದು ಸಹಜ ಕುತೂಹಲ ಪ್ರಶ್ನೆ. ಸಮಾಜದ ವಿವಿಧ ವರ್ಗದವರು ಒಂದೆಡೆ ಸೇರುವ ಒಂದು ವೇದಿಕೆ ಅಂತ ಸರಳವಾಗಿ ಹೇಳಬಹುದು. ಅಲ್ಲಿ ವಯಸ್ಸಿನ ಅಥವಾ ಇನ್ಯಾವುದೇ ಭೇದಭಾವಗಳಿರುವುದಿಲ್ಲ. ಐದಾರು ವರ್ಷದ ಮಗುವಿನಿಂದ ಹಿಡಿದು ಅರವತ್ತು ಎಪ್ಪತ್ತು ವರ್ಷ ಮೇಲ್ಪಟ್ಟವರೂ ಇರುತ್ತಾರೆ. ಎಲ್ಲರೂ ಎಲ್ಲರಿಗೂ ಕಿವಿಯಾಗುತ್ತಾರೆ. ಸ್ಪಂದಿಸುತ್ತಾರೆ. ವ್ಯಕ್ತಿ ನಿರ್ಮಾಣದ ಮೂಲಕ ಸಮಾಜ ಪರಿವರ್ತನೆ- ರಾಷ್ಟ್ರದ ಸರ್ವಾಂಗೀಣ ಉನ್ನತಿ ಎಂಬ ಆಶಯ ಅಲ್ಲಿ ಎದ್ದುಕಾಣುತ್ತದೆ. ಇವೆಲ್ಲದರ ನಡುವೆ ಆರ್ಎಸ್ಎಸ್ ಅಂದರೆ ಹಿಂದು ಸಂಘಟನೆ, ಹಿಂದುಗಳ ಜಾಗೃತಿ ಮೂಡಿಸುತ್ತದೆ ಎಂಬಿತ್ಯಾದಿ ಮಾತುಗಳಿವೆ. ಇದೇ ವಿಚಾರಕ್ಕೆ ಉತ್ತರ ಎನ್ನುವಂತಹ ಅಂಶಗಳು ಆರ್ಎಸ್ಎಸ್ನ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ಅವರು ಬರೆದ “ನೂರನೇ ವರ್ಷದ ಹೊಸ್ತಿಲಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ” ಎಂಬ ಲೇಖನದಲ್ಲಿದೆ.
ಸಂಘದ ವ್ಯಾಖ್ಯೆ ಇಷ್ಟೇ -ಭಾರತವನ್ನು ಸದಾ ಎಚ್ಚರದಲ್ಲಿಡಲು ಬೇಕಾದ ನಿತ್ಯ ಸಿದ್ಧ ಸಂಘಟಿತ ಶಕ್ತಿಯೇ ಆರ್ಎಸ್ಎಸ್ ಎಂಬ ವಿವರಣೆಯನ್ನು ಅನೇಕ ಸಂಘತರ ದೇಶಭಕ್ತರು ಕೊಟಿರುತ್ತಾರೆ.”.
ಒಟ್ಟಾರೆ ಇಷ್ಟು ಅರ್ಥ ಮಾಡಿಕೊಳ್ಳಬಹುದು – ವ್ಯಕ್ತಿ ನಿರ್ಮಾಣ ಆಗಬೇಕು ಎಂದರೆ ವ್ಯಕ್ತಿ ಸಮಾಜಮುಖಿಯಾಗಬೇಕು. ಸಮಾಜಮುಖಿಯಾಗುವಾಗ ಇರಬೇಕಾದ ಮನಸ್ಥಿತಿ ಸ್ವಾರ್ಥಕ್ಕಿಂತ ಹೆಚ್ಚು ಸಮಾಜವೇ ಮುಖ್ಯವಾಗಬೇಕು. ಎಲ್ಲದಕ್ಕೂ ಮೊದಲು ದೇಶವೇ ಇರಬೇಕು. ಈ ಚಿಂತನೆ ದೇಶದ ಅಭಿವೃದ್ಧಿಗೆ ಪೂರಕ. ಇದನ್ನೇ ಆರ್ಎಸ್ಎಸ್ ಮಾಡುತ್ತ ಬಂದಿದೆ. ಆದ್ದರಿಂದಲೇ ಇಂದು ಜಗತ್ತಿನ ಅತಿದೊಡ್ಡ ಸಾಮಾಜಿಕ ಸಂಘಟನೆಯಾಗಿ ಸಮಾಜದೊಳಗೆ ಒಂದಾಗಿ ಸಾಗಿದೆ.
* ಶತಮಾನೋತ್ಸವಕ್ಕೆ 100 ರೂ.ಗಳ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ
ಶತಮಾನೋತ್ಸವ ಸಮಾರಂಭದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ₹100 ಮುಖಬೆಲೆಯ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.
ದೆಹಲಿಯ ಡಾ. ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು. ಇದೇ ವೇಳೆ ಮಾತನಾಡಿದ ಅವರು, ‘ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರವನ್ನು ನಾಣ್ಯದ ಮೇಲೆ ಮುದ್ರಿಸಲಾಗಿದೆ. ಇದು ಬಹಳ ಹೆಮ್ಮೆ ಮತ್ತು ಐತಿಹಾಸಿಕ ಮಹತ್ವವನ್ನು ಸೂಚಿಸುತ್ತದೆ’ ಎಂದು ಹೇಳಿದ್ದಾರೆ.
* ಹೇಗಿದೆ 100 ರೂ. ನಾಣ್ಯ !
₹100 ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನವನ್ನು ಮತ್ತು ಇನ್ನೊಂದು ಬದಿಯಲ್ಲಿ ‘ವರದ ಮುದ್ರೆ’ಯಲ್ಲಿ ಸಿಂಹದ ಮೇಲೆ ಕುಳಿತಿರುವ ಭಾರತ ಮಾತೆಯ ಚಿತ್ರವಿದೆ ಮತ್ತು ಸ್ವಯಂಸೇವಕರು ಆಕೆಯ ಮುಂದೆ ಸಮರ್ಪಣಾ ಭಾವದಿಂದ ನಮಸ್ಕರಿಸುವ ಚಿತ್ರ ಮುದ್ರಿಸಲಾಗಿದೆ. ಅದರೊಂದಿಗೆ ಹಿಂದಿ ಹಾಗೂ ಇಂಗ್ಲೀಷ್ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ವರ್ಷ ಎಂದು ಬರೆಯಲಾಗಿದೆ.
ನಾಣ್ಯದ ಮೇಲೆ ಆರ್ಎಸ್ಎಸ್ ಧೈಯ ವಾಕ್ಯವನ್ನು ಸಹ ಮುದ್ರಿಸಲಾಗಿದ್ದು, ‘ಎಲ್ಲವೂ ರಾಷ್ಟ್ರಕ್ಕೆ ಸಮರ್ಪಿತವಾಗಿದೆ. ಎಲ್ಲವೂ ರಾಷ್ಟ್ರದ್ದು, ಯಾವುದೂ ನನ್ನದಲ್ಲ..’ ಎಂಬುದು ಇದರ ಅರ್ಥ.
1963ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಅರ್ಎಸ್ಎಸ್ ಸ್ವಯಂಸೇವಕರು ಭಾಗವಹಿಸಿದ್ದನ್ನು ಅಂಚೆ ಚೀಟಿಯಲ್ಲಿ ಚಿತ್ರಿಸಲಾಗಿದೆ. ಇದು ಸಂಘದ ಐತಿಹಾಸಿಕ ಕೊಡುಗೆಗಳನ್ನು ಒತ್ತಿಹೇಳುತ್ತದೆ. ಜತೆಗೆ, ಭಾರತ ಮಾತೆಗೆ, ಆರ್ಎಸ್ಎಸ್ನ ಶತಮಾನಗಳಷ್ಟು ಹಳೆಯ ಸೇವೆ ಮತ್ತು ಸಮರ್ಪಣಾ ಪ್ರಯಾಣಕ್ಕೆ ಹೆಮ್ಮೆಯ ಗೌರವ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸಮಾರಂಭದಲ್ಲಿ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಭಾಗವಹಿಸಿದ್ದರು.








