ಶೃಂಗೇರಿ ಶ್ರೀಶಾರದಾ ಶರನ್ನವರಾತ್ರಿಗೆ ವೈಭವದ ತೆರೆ
* ಅದ್ದೂರಿ ಶ್ರೀಶಾರದಾ ಮಹಾರಥೋತ್ಸವ ಹಾಗೂ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ
* ನೂರಾರು ಸ್ಥಬ್ಧಚಿತ್ರ,ಕಲಾತಂಡ,ಸಾವಿರಾರು ಭಕ್ತರು ಭಾಗಿ.
NAMMMUR EXPRESS NEWS
ಶೃಂಗೇರಿ: ವಿಶ್ವ ಪ್ರಸಿದ್ದ ಶೃಂಗೇರಿಯ ಶ್ರೀಶಾರದಾ ಶರನ್ನವರಾತ್ರಿಗೆ ಇಂದು ವೈಭವದ ತೆರೆ ಬಿದ್ದಿದೆ. ಇಂದು ಬೆಳಿಗ್ಗೆ ಶ್ರೀಶಾರದಾ ಮಹಾರಥೋತ್ಸವ ಹಾಗೂ ಜಗದ್ಗುರು ವಿದುಶೇಖರ ಭಾರತೀ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವು ಅತ್ಯಂತ ಸಂಭ್ರಮದಿಂದ ನೆರವೇರಿತು.
ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದು,ನೂರಾರು ಆಕರ್ಷಕ ಸ್ಥಬ್ದ ಚಿತ್ರಗಳು,ಕಲಾ ತಂಡಗಳು ಪಾಲ್ಗೊಂಡು ಉತ್ಸವದ ಮೆರುಗು ಹೆಚ್ಚಿಸಿದವು.ಇದರೊಂದಿಗೆ ವೈಭವದ ಶ್ರೀಶಾರದಾ ಶರನ್ನವರಾತ್ರಿಗೆ ಸಂಭ್ರಮದ ತೆರೆಬಿದ್ದಿದೆ.ವರ್ಷಕ್ಕೊಮ್ಮೆ ನಡೆಯುವ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವವನ್ನು ಕಂಡು ಸಾವಿರಾರು ಭಕ್ತರು ಧನ್ಯರಾದರು.
ನವರಾತ್ರಿ ಮಹೋತ್ಸವದಲ್ಲಿ ಜಗನ್ಮಾತೆಗೆ ಪ್ರತಿದಿನ ವೈವಿಧ್ಯ ಅಲಂಕಾರಗಳು,ಶ್ರೀಮಠದಲ್ಲಿ ನಡೆದ ವೇದಗಳ ಪಾರಾಯಣಗಳು,ಹೋಮ ಹವನಗಳು,ದರ್ಬಾರಿನಲ್ಲಿ ಬಂಗಾರ ದಿಂಡೀ ಉತ್ಸವ,ಅನಾದಿ ಕಾಲದಿಂದ ನಡೆದುಕೊಂಡು ಬಂದ ಪಾರಂಪರಿಕ ಮೌಲ್ಯಗಳಿಗೆ ಕಿಂಚಿತ್ತೂ ಚ್ಯುತಿ ಬಾರದಂತೆ ನಡೆದುಕೊಂಡ ಜಗದ್ಗುರು ಪರಂಪರೆ ಸನಾತನ ಧರ್ಮದ ಉನ್ನತೀಕರಣ ಮೌಲ್ಯವನ್ನು ಎತ್ತಿ ಹಿಡಿಯುವಲ್ಲಿ ಯಶಸ್ಸುಗಳಿಸಿತು.ನಾಡಿನ ಎಲ್ಲಾ ವರ್ಗದ ಜನಸಾಮಾನ್ಯರಲ್ಲೂ ನಿರಂತರ ಧನ್ಯತಾ ಭಾವ ಮೂಡಿಸುವ ಶೃಂಗೇರಿ ಶರನ್ನವರಾತ್ರಿ ಸನಾತನ ಧರ್ಮದ ಉನ್ನತೀಕರಣದ ರೂಪಕ.
ಕಳೆದ 13 ದಿನಗಳಿಂದ ನಡೆದ ಅನೇಕ ಸಾಂಸ್ಕೃತಿಕ,ಧಾರ್ಮಿಕ ಆಚರಣೆಗಳು ಅತ್ಯಂತ ಅಚ್ಚುಕಟ್ಟಾಗಿ ನಡೆದಿದ್ದು ಪಾಲ್ಗೊಂಡ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.








