ಭೂಮಿ ಹುಣ್ಣಿಮೆ ಸಂಭ್ರಮದಲ್ಲಿ ಮಲೆನಾಡು!
– ಈ ಭೂಮಿ ಹುಣ್ಣಿಮೆ ಎಲ್ಲರ ಬದುಕಲ್ಲಿ ಸಂಭ್ರಮವ ಹೊತ್ತು ತರಲಿ…
– ಭೂಮಿ ತಾಯಿ ಎಲ್ಲರ ಕಾಪಾಡಲಿ…ಮುಂಜಾನೆಯೇ ಎಲ್ಲೆಡೆ ಹಬ್ಬ
ವಿಶೇಷ ವರದಿ: ಪೂಜಾ ತೀರ್ಥಹಳ್ಳಿ
ಮಲೆನಾಡು ವಿಶಿಷ್ಟತೆಯನ್ನು ತನ್ನೊಡಲಲ್ಲಿ ಗರ್ಭೀಕರಿಸಿಕೊಂಡಿರುವ ನಾಡು.. ತನ್ನ ವಿಭಿನ್ನ ಸಂಸ್ಕೃತಿ,ಭಾಷಾ ಶೈಲಿ, ಜೀವನ ವಿಧಾನ, ಹೇರಳ ಪ್ರಕೃತಿ ಸಂಪತ್ತಿನಿಂದ ಸದಾ ಎಲ್ಲರನ್ನು ಸೆಳೆಯುವ ಮಲೆನಾಡಿನಲ್ಲಿ ಪ್ರತಿ ಹಬ್ಬವೂ ವಿಭಿನ್ನ ಮತ್ತು ವಿಶಿಷ್ಟ.
ಉತ್ತರ ಕರ್ನಾಟಕದ ಮಂದಿಗೆ ಇಂದು ಸೀಗೆ ಹುಣ್ಣಿಮೆಯ ಸಂಭ್ರಮವಾದರೆ ಮಲೆನಾಡ (ಕೆಲವು ತಾಲ್ಲೂಕುಗಳಿಗೆ ಸೀಮಿತ) ಮಕ್ಕಳಿಗೆ ತಮ್ಮ ಸಲುಹುವ ಭೂಮಿ ತಾಯಿಯ ಆರಾಧಿಸುವ ಸುಘಳಿಗೆ, ಭತ್ತ ಹಾಲೊಡೆಯುವ ಸಮಯದಲ್ಲಿ ಭೂಮಿ ತಾಯಿಗೆ ಬಯಕೆ ಹಾಕುವುದು ಎಂಬ ಹಿನ್ನೆಲೆಯಲ್ಲಿ ಈ ಆಚರಣೆ ಚಾಲ್ತಿಯಲ್ಲಿದೆ..
ಕಾಗೆ ಕೂಗುವ ಮುನ್ನ ಎದ್ದು ಐದು ಬಗೆಯ ಕುಡಿ ಎಲೆಗಳನ್ನ ತಂದು ಭೂಮಿ ಹುಣ್ಣಿಮೆ ಆಚರಣೆಗೆ ವಿದ್ಯುಕ್ತ ಚಾಲನೆ ನೀಡಿ.. ಹೆಸರೇ ಗೊತ್ತಿಲ್ಲದ ನೂರೆಂಟು ಬಗೆಯ ಚಿಗುರೆಲೆಗಳನ್ನು ಸಂಗ್ರಹಿಸಿ (ಕೆಲವು ಬಗೆಯ ಎಲೆಗಳನ್ನು ಹೊರತುಪಡಿಸಿ) ರಾತ್ರಿಯೆಲ್ಲಾ ಮನೆಯ ಹೆಂಗಸರು ಪಟಪಟ ಅಂತ ಭೂಮಿ ತಾಯಿಯ ಆರಾಧನೆಗೆ ಸಾಂಪ್ರಾದಾಯಿಕವಾದ ಎಲ್ಲಾ ಅಡುಗೆಗಳನ್ನು ನಿದ್ದೆಗೆಟ್ಟು ಮಾಡಿ ಭೂಮಿಗೆ ಉಣ ಬಡಿಸಿದ್ದಾರೆ.
ಹಗಲಿಡೀ ಸಂಗ್ರಹಿಸಿದ ಎಲೆಗಳಿಂದ ತಯಾರಿಸಿದ ಬೆರಕೆ ಸೊಪ್ಪಿನ ಅನ್ನ, ಅಚ್ಚಂಬಲಿ, ಅಳಿಯಂಬಲಿ, ಕೊಟ್ಟೆ ಕಡುಬು, ಇರೋ ಬರೋ ತರಕಾರಿಯೆಲ್ಲಾ ಹಾಕಿ ಮಾಡಿದ ಸಾಂಬಾರು, ಪಲ್ಯ, ಬುತ್ತಿಉಂಡೆ. ಒಂದ ಎರಡಾ ಹೀಗೆ ಬಗೆ ಬಗೆಯ ವಿಶಿಷ್ಟ ಅಡುಗೆಗಳು ರಾತ್ರಿಯಿಡಿ ತಯಾರಾಗುತ್ತವೆ. ಇನ್ನೇನು ಸಿಹಿಯಾದ ಕನಸು ಬೀಳುವ ಹೊತ್ತಿನ ಮುಂಜಾವಿನಲ್ಲಿ ಸರಿಯಾಗಿ ಬೆಳಕು ಹರಿಯದ ಬ್ರಾಹ್ಮಿ ಮುಹೂರ್ತದಲ್ಲಿ ಭೂಮಿ ತಾಯಿಯ ಪೂಜೆಗೆ ಮನೆಮಂದಿಯೆಲ್ಲಾ ತೆರಳುತ್ತಾರೆ. ಹೊಸ ಬುಟ್ಟಿಗೆ ಬೆರೆಕೆಸೊಪ್ಪಿನ ಅನ್ನ ತುಂಬಿಸಿಕೊಂಡು, ಮಾಡಿದ ಎಲ್ಲಾ ಅಡುಗೆಗಳನ್ನು ಎಡೆ ಮಾಡಿಕೊಂಡು, ಪೂಜಾ ಸಾಮಾಗ್ರಿಗಳನ್ನ ತೆಗೆದುಕೊಂಡು ಕೈಯಲ್ಲೊಂದು ದೊಂದಿ ಹಿಡಿದು ಮೊದಲೆ ನಿಗದಿಪಡಿಸಿ ತೋರಣ ಕಟ್ಟಿ ಸಿಂಗರಿಸಿದ ಗದ್ದೆಗೆ ಹೋಗಿ ಅಲ್ಲಿ ಪೂಜೆಯನ್ನು ಮಾಡಿ. ಒಂದು ಕೊಟ್ಟೆ ಕಡುಬನ್ನು ಪೂಜೆ ಮಾಡಿದ ಗದ್ದೆಗೆ ಹುಗಿಯುತ್ತಾರೆ ಅದನ್ನು ಮುಂದೆ ಭತ್ತದ ಕೊಯ್ಲು ಮುಗಿದ ಕೊನೆಯ ದಿನ ಕಿತ್ತು ಅದರಲ್ಲಿ ಸಿಹಿಖಾದ್ಯ ಮಾಡಿ ಮನೆಯವರೆಲ್ಲಾ ಹಂಚಿ ತಿನ್ನುತ್ತಾರೆ. ರಾತ್ರಿಯಿಡಿ ಮಾಡಿದ ಅಡುಗೆಗಳನ್ನು ಭೂಮಿ ತಾಯಿಗೆ ಬಡಿಸಿ. ಪ್ರಸಾದದ ರೂಪದಲ್ಲಿ ಅದನ್ನು ಅಲ್ಲಿಯೇ ತಿಂದು. ಬೆರಕೆ ಸೊಪ್ಪಿನ ಅನ್ನವನ್ನು ಬೆಳಕು ಹರಿಯುವ ಮುನ್ನವೇ ಎಲ್ಲಾ ಗದ್ದೆಗಳಿಗೂ ಬೀರುತ್ತಾ..”ಅಚ್ಚಂಬಲಿ, ಅಳಿಯಂಬಲಿ, ಬೇಲಿ ಮೇಲಿರೋ ದಾರ್ ಹೀರೆಕಾಯಿ ಊಟ ಮಾಡು ಬಾ ಭೂ ತಾಯಿ ಎಂದು ಕೂಗುತ್ತಾ” ಭೂಮಿ ತಾಯಿಗೆ ಅರ್ಪಿಸುತ್ತಾರೆ. ಮನೆಗೆ ಮರಳಿದ ಮೇಲೆ ಮತ್ತೊಮ್ಮೆ ಎಡೆ ಹಾಕಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕೂತು ಭೂಮಿ ಹುಣ್ಣಿಮೆಯ ಭೂರಿ ಭೋಜನವನ್ನು ಸವಿಯುತ್ತಾರೆ. ವರ್ಷಪೂರ್ತಿ ನಮ್ಮ ಹಸಿವು ನೀಗಿಸುವ ಭೂಮಿ ತಾಯಿಗೆ ಮಲೆನಾಡಿಗರು ಕೃತಜ್ಞತೆ ಅರ್ಪಿಸುವ ಈ ವಿಧಾನ ಭೂಮಿ ಹುಣ್ಣಿಮೆ ಹೆಸರಿನಲ್ಲಿ ವಿಶಿಷ್ಟ ಆಚರಣೆಯಾಗಿ ಚಾಲ್ತಿಯಲ್ಲಿರುವುದು. ಸಮಸ್ತ ಮಲೆನಾಡ ಬಾಂಧವರಿಗೆ.
ಮಲೆನಾಡಿನಲ್ಲಿದ್ದು ಹಬ್ಬ ಮಾಡುವ ಪುಣ್ಯವಂತರಿಗೆ,ಮಲೆನಾಡಿನಿಂದ ದೂರವಾಗಿ ಎಂದೋ ಮಾಡಿದ ಹಬ್ಬದ ನೆನಪಲ್ಲೇ ದಿನ ದೂಡುವ ಮಲೆನಾಡ ಮಕ್ಕಳಿಗೆ ಮಲೆನಾಡಿಗರ ಹಬ್ಬ ಭೂಮಿ ಹುಣ್ಣಿಮೆಯ ಅನಂತ ಶುಭಾಶಯಗಳು…
ಈ ಭೂಮಿ ಹುಣ್ಣಿಮೆ ಎಲ್ಲರ ಬದುಕಲ್ಲಿ ಸಂಭ್ರಮವ ಹೊತ್ತು ತರಲಿ…








