ಕರಾವಳಿಯಲ್ಲಿ ಏನೇನಾಯ್ತು? ಇಲ್ಲಿದೆ ರಿಪೋರ್ಟ್!
* ಕುಂದಾಪುರ: ವ್ಯಕ್ತಿಗೆ ಡಿಕ್ಕಿ ಹೊಡೆದು ವಾಹನ ಚಾಲಕ ಪರಾರಿ
* ಪುತ್ತೂರು: ಮಾದಕ ವಸ್ತು ಮಾರಾಟ ಆರೋಪಿ ಸೆರೆ
* ಬೈಂದೂರು: ಸೇತುವೆಗೆ ಡಿಕ್ಕಿ ಹೊಡೆದ ಕಂಟೈನರ್ ಲಾರಿ
* ಕಡಬ: ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆ
* ಮಂಗಳೂರು: ರಸ್ತೆ ಅಪಘಾತ; ಮಹಿಳೆಗೆ ಗಾಯ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಕುಂದಾಪುರ: ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಅಪಘಾತವಾಗಿ ಬಿದ್ದಿರುವ ಘಟನೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಬಳಿ, ಕಳೆದೆರಡು ದಿನಗಳ ಹಿಂದೆ ರಾತ್ರಿಯ ಸಮಯದಲ್ಲಿ ನಡೆದಿದೆ. ಇದನ್ನು ಮರುದಿನ ಕಂಡ ಸ್ಥಳೀಯರು, ಯಾವುದೋ ವಾಹನ ಢಿಕ್ಕಿ ಹೊಡೆದು, ಚಾಲಕ ಪರಾರಿಯಾಗಿರಬಹುದು ಎಂದು ಅನುಮಾನಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷಿಸಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ವ್ಯಕ್ತಿಯ ಕುರಿತು ಮಾಹಿತಿ ಕಲೆ ಹಾಕಿದಾಗ, ಅವರು ಬೆಂಗಳೂರಿನ ಲಕ್ಷ್ಮಣ ಪ್ರಸಾದ್ ಎನ್ನುವುದು ತಿಳಿದುಬಂದಿತು. ಆದರೆ, ಅಪಘಾತವಾದ ಮರುದಿನ ಆಸ್ಪತ್ರೆಗೆ ಕರೆದುಕೊಂಡು ಹೋದುದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟರು. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಪುತ್ತೂರು: ಮಾದಕ ವಸ್ತು ಮಾರಾಟ ಜಾಲವನ್ನು ಪತ್ತೆ ಹಚ್ಚಿ, ಕಾರಿನಲ್ಲಿ ಎಂಡಿಎಂಎಯನ್ನು ಸಾಗಾಟ ಮಾಡುತ್ತಿದ್ದ, ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಹಿರ್ತಡ್ಕ ಮನೆಯ ನಿವಾಸಿ ರಜಾಕ್ ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಮೆಜೆಸ್ಟಿಕ್ ನ ಅಪರಿಚಿತ ವ್ಯಕ್ತಿಯಿಂದ ಮಾದಕ ದ್ರವ್ಯ ಪಡೆದುಕೊಂಡು, ಮಾರಾಟ ಮಾಡಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಅಲ್ಲದೆ ಆತನನ್ನು ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ ಮಾದಕ ವಸ್ತು ಸೇವನೆ ಮಾಡಿರುವುದು ಕೂಡ ದೃಢಪಟ್ಟಿದೆ. ಈ ಸಂದರ್ಭದಲ್ಲಿ ರಜಾಕ್ ಬಳಿ ಇದ್ದ 20 ಸಾವಿರ ರೂಪಾಯಿ ಮೌಲ್ಯದ, 12.35 ಗ್ರಾಂ ತೂಕದ ಮಾದಕ ದ್ರವ್ಯ ಮತ್ತು ಎರಡು ಮೊಬೈಲ್ ಹಾಗೂ ಕಾರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಪಾರ ಪ್ರಶಂಸೆ ವ್ಯಕ್ತವಾಗಿದೆ.
* ಬೈಂದೂರು: ಸೇತುವೆಗೆ ಢಿಕ್ಕಿ ಹೊಡೆದ ಕಂಟೈನರ್ ಲಾರಿ
ಬೈಂದೂರು: ಸೇತುವೆಯೊಂದಕ್ಕೆ ಮಂಗಳೂರಿನಿಂದ ಗೋವಾ ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿ ಢಿಕ್ಕಿ ಹೊಡೆದ ಘಟನೆ, ರಾಷ್ಟ್ರೀಯ ಹೆದ್ದಾರಿ 66ರ ಕಂಬದಕೋಣೆ ಎನ್ನುವಲ್ಲಿ ನಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ನದಿಗೆ ಉರುಳುವ ಸ್ಥಿತಿಯಲ್ಲಿದ್ದು, ತಕ್ಷಣ ಸೇತುವೆಯಲ್ಲಿ ನಿಂತ ಕಾರಣ ಕೂದಲೆಳೆಯ ಅಂತರದಲ್ಲಿ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
* ಕಡಬ: ತಲೆಮರಿಸಿಕೊಂಡಿದ್ದ ಆರೋಪಿ ಸೆರೆ
ಕಡಬ: ಪೆರಾಬೆ ಗ್ರಾಮದ ನಿವಾಸಿ ಗಣೇಶ್ ಎಂಬಾತ ಪ್ರಕರಣವೊಂದರ ಆರೋಪಿಯಾಗಿದ್ದು, ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಕಳೆದೆರಡು ದಿನಗಳ ಹಿಂದೆ ಈತನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಬಂಧಿಸಿದ ಬಳಿಕ ಆತನನ್ನು ಕಡಬ ಪೊಲೀಸ್ ಠಾಣೆಯಲ್ಲಿ ಇರಿಸಿದ್ದು, ಗುರುವಾರದಂದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
• ಮಂಗಳೂರು: ರಸ್ತೆ ಅಪಘಾತ; ಮಹಿಳೆಗೆ ಗಾಯ
ಮಂಗಳೂರು: ಎರಡು ಕಾರುಗಳ ನಡುವೆ ಅಪಘಾತ ನಡೆದ ಪರಿಣಾಮವಾಗಿ, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಲಾಲ್ ಬಾಗ್ ಜಂಕ್ಷನ್ ಬಳಿ ನಡೆದಿದೆ. ಮನೋಜ್ ಕುಮಾರ್ ಶೆಟ್ಟಿ ಎನ್ನುವವರು ತಮ್ಮ ಮೊಮ್ಮಗ, ಅಕ್ಕ ಮತ್ತು ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ, ಈ ಅಪಘಾತ ಸಂಭವಿಸಿದೆ. ಇನ್ನೊಂದು ಕಾರಿನ ಚಾಲಕನು ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಎರಡೂ ಕಾರುಗಳು ಜಖಂಗೊಂಡಿದ್ದು, ಮನೋಜ್ ಕುಮಾರ್ ಅವರ ಪತ್ನಿಗೆ ಹಣೆಯ ಭಾಗದಲ್ಲಿ ಗಾಯವಾಗಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







