ವಸಂತ ಕಾಲ ಬಂದಾಗ..!
– ಮತ್ತೆ ಬಂದಿದೆ ಋತುಗಳ ರಾಜ ವಸಂತ
– ಹಸಿರಿನಿಂದ ಕಂಗೊಳಿಸುತ್ತಿರುವ ಪರಿಸರ
– ಮಾವು, ಹಲಸು ಫಸಲು: ಗಿಡ ಮರಗಳಲ್ಲಿ ಹಸಿರು
NAMMUR EXPRESS NEWS
ಕುಹೂ ಕುಹೂ ಎಂದು ಕೂಗುವ ಕೋಗಿಲೆ. ಫಸಲು ಬಿಡುತ್ತಿರುವ ಮಾವು, ಹಲಸು. ಗಿಡ ಮರಗಳಲ್ಲಿ ನವ ಚೈತನ್ಯ, ಹೊಸ ಚಿಗುರು ಕಾಣುತ್ತಿದೆ. ವಸಂತ ಮಾಸದಲ್ಲಿ ಮರಗಳಲ್ಲಿ ಒಣಗಿದ ಎಲೆಗಳು ಉದುರುತ್ತಿದೆ, ಹಚ್ಚ ಹಸಿರಾದ ಹೊಸ ಎಲೆಗಳಿಂದ ಗಿಡಮರಗಳು ನಳನಳಿಸುತ್ತಿವೆ. ಪ್ರಕೃತಿ ಮಾತೆ ಹಳೆಯದೆಲ್ಲ ಕಳಚಿ ಹೊಸ ರೂಪ ಪಡೆಯುತ್ತಿದ್ದಾಳೆ. ಹಸಿರಿನಿಂದ ಪರಿಸರವೆಲ್ಲ ಕಂಗೊಳಿಸುತ್ತಿದೆ. ಋತುಗಳ ರಾಜ ವಸಂತನ ಪುನರಾಗಮನವಾಗಿದೆ. ವಸಂತ ಋತುವಿನ ಆಗಮನವಾಗುತ್ತಲೇ, ಪ್ರಕೃತಿಯ ಎಲ್ಲಾ ತತ್ವಗಳಾದ ಮಾನವ, ಪಶು, ಪಕ್ಷಿ, ಗಿಡ ಮರಗಳಲೆಲ್ಲ ಉತ್ಸಾಹ ಉಕ್ಕಿ ಹರಿಯುತ್ತದೆ.
ವಸಂತ ಬರುತಲೆ ಚಳಿಗಾಲ ಮುಕ್ತಾಯವಾಗುತ್ತದೆ. ವಸಂತ ನಮ್ಮ ಆಂತರಿಕ ಕಲ್ಪನೆಗಳ ಮೊಗ್ಗು ಅರಳಿಸಲು ಬರುತ್ತಾನೆ. ಒಣ ಭೂಮಿಯಂತಿರುವ ನಮ್ಮ ಮನದಲ್ಲಿ ಹೊಸ ಉತ್ಸಾಹ ಚಿಗುರುಡೆಯುತ್ತಾನೆ. ವಸಂತ ಹೊಸತನದ ಆರಂಭ, ಆತ ಪ್ರಕೃತಿಯ ಶೃಂಗಾರ ಮತ್ತು ಸೌಂದರ್ಯದ ಉತ್ಸಾಹವನ್ನು ಹೊತ್ತು ತರುತ್ತಾನೆ. ವಸಂತ ಪಂಚಮಿಯ ನಂತರ ಹಳೆಯದೆಲ್ಲ ಉದುರಿ ಬೀಳುತ್ತದೆ. ಮಂಜು ಕರಗಿ ಹೋಗುತ್ತದೆ, ಮೊಗ್ಗುಗಳು ಅರಳಿ ತೂಗುಯ್ಯಾಲೆ ಆಡದೊಡಗುತ್ತವೆ. ಕೋಗಿಲೆ ಹಾಡುತ್ತದೆ, ಚಳಿಗಾಲದಲ್ಲಿ ತಟಸ್ಥವಾಗಿದ್ದ ಗಿಡ ಮರಗಳು ಮೈಚಳಿ ಬಿಟ್ಟು ಅಲುಗಾಡ ತೊಡಗುತ್ತವೆ. ನಾವು ಕೂಡ ವಸಂತನನ್ನು ಸ್ವಾಗತಿಸೋಣ, ಪ್ರಕೃತಿಯಂತೆ ಹೊಸದನ್ನು ಅಳವಡಿಸಿಕೊಳ್ಳೋಣ. ಹಳೆಯದೆಲ್ಲವನ್ನು ಮರೆತು ಬಿಡೋಣ, ಹೊಸದನ್ನೇನಾದರೂ ಸಾದಿಸೋಣ.