ಅ.1 ರಿಂದ ದೇಶಾದ್ಯಂತ ಆನ್ಲೈನ್ ಬೆಟ್ಟಿಂಗ್ ಗೇಮ್ ನಿಷೇಧ
– ಗೇಮಿಂಗ್ ಕಂಪನಿಗಳ ಜತೆ ಚರ್ಚಿಸಿಯೇ ನಿಯಮ ರಚನೆ
– ನಿಯಮಗಳು ಉಲ್ಲಂಘಿಸುವವರಿಗೆ ಕಾನೂನಿನ ಮೂಲಕ ಶಿಕ್ಷೆ
NAMMUR EXPRESS NEWS
ನವದೆಹಲಿ: ಈ ಸಲದ ಸಂಸತ್ ಕಲಾಪದ ವೇಳೆ ಆನ್ಲೈನ್ ಗೇಮಿಂಗ್ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸಿದ ಬೆನ್ನಲ್ಲೇ ಈಗ ಅಕ್ಟೋಬರ್ 1ರಿಂದ ನಿಯಮಗಳು ಜಾರಿಗೆ ಬರಲಿದ್ದು, ಕಾನೂನು ಉಲ್ಲಂಘಿಸುವವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಕಾನೂನನ್ನು ಸಂಸತ್ತಿನಲ್ಲಿ ಅಂಗೀಕರಿಸಿದ ನಂತರವೂ ಆನ್ಲೈನ್ ಗೇಮಿಂಗ್ ಕಂಪನಿಗಳು ಮತ್ತು ಅವುಗಳ ಪಾಲುದಾರರ ಜತೆ ನಾವು ಮಾತನಾಡಿದ್ದೇವೆ. ಈ ಚರ್ಚೆಯ ವೇಳೆಯೇ ನಿಯಮಗಳನ್ನು ಅಂತಿಮ ಮಾಡಲಾಗಿದೆ. ಅವು ಜಾರಿಯಾಗುವ ಮುನ್ನ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಸಚಿವರು ತಿಳಿಸಿದರು. ನಿಯಮ ಜಾರಿಗೂ ಮುನ್ನ ನಡೆಯಲಿರುವ ಮತ್ತೊಂದು ಸುತ್ತಿನ ಚರ್ಚೆಯಲ್ಲಿ ಹೆಚ್ಚಿನ ಸಮಯಾವಕಾಶಬೇಕು ಎಂದು ಅನಿಸಿದರೆ, ಅದನ್ನು ಪರಿಗಣಿಸಲಾಗುವುದು. ಆದರೆ ಸದ್ಯದ ಮಟ್ಟಿಗೆ ಅಕ್ಟೋಬರ್ 1ರಿಂದಲೇ ಶಾಸನ ಹಾಗೂ ಅದರ ನಿಯಮವನ್ನು ಜಾರಿಗೆ ತರುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.
ಆಗಸ್ಟ್ ತಿಂಗಳಲ್ಲಿ ಎಲ್ಲ ರೀತಿಯ ಆನ್ಲೈನ್ ಬೆಟ್ಟಿಂಗ್ ಗೇಮ್ ಗಳನ್ನು ನಿಷೇಧಿಸುವ ಕಾನೂನನ್ನು ಸಂಸತ್ತಿನ ಉಭಯ ಸದನಗಳಲ್ಲಿ ಕೇಂದ್ರ ಸರ್ಕಾರ ಮಂಡಿಸಿತ್ತು. ಅದಕ್ಕೆ ಆಗಸ್ಟ್ 22ರಂದು ರಾಷ್ಟ್ರಪತಿ ದೌಪದಿ ಮುರ್ಮು ಅವರು ಅಂಕಿತ ಹಾಕಿದ್ದರು. ನಿಷೇಧಿಸಿದೆಯಾದರೂ ಹಣವನ್ನು ಹಾಕಿ ಆಡುವ ಆನ್ಲೈನ್ ಗೇಮ್ಗಳ ಪ್ರಚಾರ ಪ್ರಚಾರ ಹಾಗೂ ಅವುಗಳ ಹಣಕಾಸು ವಹಿವಾಟನ್ನು ಕೇಂದ್ರ ಸರ್ಕಾರ ಇ-ಸ್ಪೋರ್ಟ್ಸ್ ಮತ್ತು ಸಾಮಾಜಿಕ ಆನ್ಲೈನ್ ಆಟಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಹಣಕೊಟ್ಟು ಆಡುವ ಬೆಟ್ಟಿಂಗ್ ಗೇಮ್ಗಳು ಹಾಗೂ ಆ್ಯಪ್ಗಳ ಕಾರಣ ದೇಶದ ಲಕ್ಷಾಂತರ ಜನ ಸಂಕಷ್ಟಕ್ಕೆ ಸಿಲುಕಿದ ಹಾಗೂ ಮನೆ ಮಠಗಳನ್ನು ಕಳೆದುಕೊಂಡ ಉದಾಹರಣೆಗಳು ಇವೆ. ಈಗ ಈ ಹೊಸ ಕಾನೂನಿನಿಂದ ಅಂಥ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗಲಿವೆ.
– ಹೊಸ ಕಾನೂನು?
*ಹಣ ಕೊಟ್ಟು ಆಡುವ ಆನ್ಲೈನ್ ಗೇಮಿಂಗ್ ದೇಶಾದ್ಯಂತ ನಿಷೇಧ
*ಇಂತಹ ಆಟಗಳನ್ನು ಆಡುವುದು ಅಥವಾ ಪರಿಚಯಿಸುವುದು ಅಪರಾಧ
*ಹೊಸ ಕಾನೂನಿನ ಪ್ರಕಾರ ಈ ಅಪರಾಧ ಜಾಮೀನು ರಹಿತವಾಗಿ ಇರುತ್ತದೆ.
* ಈ ಆನ್ಲೈನ್ ಬೆಟ್ಟಿಂಗ್ ಆಟಗಳಿಗೆ ಲಿಂಕ್ ಆಗಿರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೂಡ ಕಾನೂನಿನಡಿ ನಿರ್ಬಂಧಿಸಲಾಗುತ್ತದೆ.







