ಚಿಕ್ಕಮಗಳೂರು ಟಾಪ್ ನ್ಯೂಸ್
• ತರೀಕೆರೆ: ಬದುಕಿದ್ದಾಗಲೇ ವೈಕುಂಠ ಸಮಾರಾಧನೆಯ ಆಹ್ವಾನ!
• ಮೂಡಿಗೆರೆ: ಕಾಫಿ ತೋಟದಲ್ಲಿ ಮಹಿಳೆಯರ ಮೇಲೆ ಚಿರತೆ ದಾಳಿ
• ಚಿಕ್ಕಮಗಳೂರು: ಆಟೋ ಢಿಕ್ಕಿ ಹೊಡೆದು ವೃದ್ಧ ಸಾವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತರೀಕೆರೆ: ಶ್ರೀಗಂಧದ ಬೆಳೆಗಾರರೊಬ್ಬರು ಸರ್ಕಾರದ ವ್ಯವಸ್ಥೆ ಮತ್ತು ಅಧಿಕಾರಿಗಳ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆಯನ್ನು ನಡೆಸಿದ್ದು, ತಾವು ಬದುಕಿರುವಾಗಲೇ ಸಂಬಂಧಿತ ಅಧಿಕಾರಿಗಳಿಗೆ ವೈಕುಂಠ ಸಮಾರಾಧನೆಗೆ ಆಹ್ವಾನ ನೀಡಿದ ಘಟನೆ, ಹಳಿಯೂರು ಗ್ರಾಮದಲ್ಲಿ ನಡೆದಿದೆ. ವಿಷುಕುಮಾರ್ ಎನ್ನುವ ರೈತರೊಬ್ಬರು “ಫೆಬ್ರವರಿ 9ರ ಸೋಮವಾರದಂದು ಬೆಳಿಗ್ಗೆ 10:00ಗಂಟೆಗೆ ನನ್ನ ಸಾವಿನ ಸಂತಾಪ ಸೂಚನಾ ಸಭೆ ನಡೆಯಲಿದ್ದು, ಮಧ್ಯಾಹ್ನ 1:00ಗಂಟೆಗೆ ತಿಥಿ ಊಟವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಬೇಕು” ಎನ್ನುವ ರೀತಿಯಲ್ಲಿ ಆಹ್ವಾನ ಪತ್ರಿಕೆಯನ್ನು ಸಿದ್ಧಪಡಿಸಿ, ಅಧಿಕಾರಿಗಳಿಗೆ ರವಾನಿಸಿ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನೆಪದಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಮತ್ತು ಶ್ರೀಗಂಧದ ಮರಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಷ್ಟೇ ಅಲ್ಲದೆ, ಪರಿಹಾರವನ್ನು ನಿಗದಿಪಡಿಸುವ ವಿಚಾರದಲ್ಲಿ ತೀವ್ರತರವಾದ ಅನ್ಯಾಯವನ್ನೆಸಗಿದ್ದಾರೆ ಎಂದು ವಿಷುಕುಮಾರ್ ಅವರು ತಮ್ಮ ಆಕ್ರೋಶವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ.
• ಮೂಡಿಗೆರೆ: ಕಾಫಿ ತೋಟದಲ್ಲಿ ಮಹಿಳೆಯರ ಮೇಲೆ ಚಿರತೆ ದಾಳಿ
ಮೂಡಿಗೆರೆ: ಅಸ್ಸಾಂ ಮೂಲದ ಇಬ್ಬರು ಮಹಿಳಾ ಕಾರ್ಮಿಕರು ಕಾಫಿ ತೋಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ಚಿರತೆಯೊಂದು ಏಕಾಏಕಿ ಮೇಲೆರಗಿ ದಾಳಿ ನಡೆಸಿದ ಘಟನೆ, ಗೌತಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದು ತಕ್ಷಣ ಅವರನ್ನು ಮೂಡಿಗೆರೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಚಿರತೆಯನ್ನು ಕೂಡಲೇ ಸೆರೆಹಿಡಿದು ಅರಣ್ಯಕ್ಕೆ ಬಿಡುವಂತೆ ಇಲಾಖೆಯವರಿಗೆ ಆಗ್ರಹಪಡಿಸಿದ್ದಾರೆ.
• ಚಿಕ್ಕಮಗಳೂರು: ಆಟೋ ಢಿಕ್ಕಿ ಹೊಡೆದು ವೃದ್ಧ ಸಾವು
ಚಿಕ್ಕಮಗಳೂರು: ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರಿಗೆ ಹಿಂದಿನಿಂದ ಬಂದ ಆಟೋವೊಂದು ಢಿಕ್ಕಿ ಹೊಡೆದ ಘಟನೆ, ಕಬ್ಬಿಣ ಸೇತುವೆ ಗ್ರಾಮದ ಸಮೀಪದ ಹೆದ್ದಾರಿಯಲ್ಲಿ ನಡೆದಿದೆ. ಪರಿಣಾಮವಾಗಿ ಸ್ಕೂಟಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯನ್ನು ಉದ್ದೇಗೌಡ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಲ್ದೂರು ಪೊಲೀಸರು ಆಟೋ ಚಾಲಕನನ್ನು ಸೆರೆಹಿಡಿದಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.








