ಆಗುಂಬೆ ಘಾಟಿಗೆ ಸುರಂಗ ಮಾರ್ಗ ಪ್ಲಾನಿಗೆ ಟೆಂಡರ್!
– ಕೇಂದ್ರ ಸರ್ಕಾರದಿಂದ ₹2.33 ಕೋಟಿ ವೆಚ್ಚದಲ್ಲಿ ಡಿಪಿಆರ್ ಟೆಂಡರ್
– ಸಂಸದ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ವಿಶೇಷ ಪ್ರಯತ್ನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ/ ಹೆಬ್ರಿ: ಆಗುಂಬೆ ಘಾಟ್ ರಸ್ತೆ ಅಭಿವೃದ್ಧಿಗೆ ಮಹತ್ವದ ಸುದ್ದಿ ಸಿಕ್ಕಿದೆ. ಆಗುಂಬೆ ಘಾಟ್ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ–169ಎ (ಕಿ.ಮೀ. 30.75 ರಿಂದ 51.60) ಮೇಲ್ದರ್ಜೆಗೇರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸರ್ಕಾರವು ₹2.33 ಕೋಟಿ ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಿದೆ. ವಿಶೇಷವಾಗಿ ಸುರಂಗ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನ, ಭೂ-ತಾಂತ್ರಿಕ ಪರಿಶೀಲನೆಗಳು ಮತ್ತು ತಜ್ಞರ ನೇಮಕಾತಿ ಒಳಗೊಂಡಿರುವುದು ಈ ಘೋಷಣೆಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ರಾಘವೇಂದ್ರ ಬಿ. ವೈ ಅವರು ಹೇಳಿಕೆ ನೀಡಿದ್ದಾರೆ.
ಹಲವು ದಶಕಗಳಿಂದ ಜನರು ಎದುರಿಸುತ್ತಿದ್ದ ಅಪಾಯಕರ ಪ್ರಯಾಣಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ದಿಕ್ಕಿನಲ್ಲಿ ಇದು ಮೊದಲ ನಿರ್ಣಾಯಕ ಹೆಜ್ಜೆ. ಈ ಯೋಜನೆ ಮಲೆನಾಡು–ಕರಾವಳಿ ಜಿಲ್ಲೆಗಳ ಸಂಪರ್ಕ ಸುಧಾರಿಸಿ, ಸುರಕ್ಷತೆ, ವ್ಯಾಪಾರ, ಪ್ರವಾಸೋದ್ಯಮ ಮತ್ತು ಸ್ಥಳೀಯ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ಈ ಯೋಜನೆಗೆ ಒಪ್ಪಿಗೆ ನೀಡಿದೆ.
ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಸುಮಾರು 8 ವರ್ಷದ ಹಿಂದೆ ಈ ಬಗ್ಗೆ ವಿಶೇಷ ವರದಿ ಮಾಡಿತ್ತು.
ಆಗುಂಬೆ ಘಾಟ್ ರಸ್ತೆ ಮೇಲ್ದರ್ಜೆ ಯೋಜನೆ ಜೊತೆಗೆ ಸುರಂಗ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನದೊಂದಿಗೆ 6 ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಟೆಂಡರ್ ಗೆ ಆಹ್ವಾನ, 2.33 ಕೋಟಿ ರೂ. ಮೀಸಲು ಇಡಲಾಗಿದೆ.
ಕೇಂದ್ರ ಸರ್ಕಾರದ ಮಹತ್ವಪೂರ್ಣ ನಿರ್ಣಯವನ್ನು ಸ್ವಾಗತಿಸಿದ ಸಂಸದ ಬಿವೈ ರಾಘವೇಂದ್ರರವರುಸುರಕ್ಷಿತ,ಸುಗಮ ಸಂಪರ್ಕ ಕಲ್ಪಿಸುವ ಜೊತೆಗೆ ಮಲೆನಾಡು – ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಹೊಸ ದಿಕ್ಕು, ಹೊಸ ವೇಗ ನೀಡುವ ಕ್ರಮ ಎಂದಿರುವ ಸಂಸದರು,ಆಗುಂಬೆ ಘಾಟ್ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ–169ಎ ರಸ್ತೆಯನ್ನು (ಕಿ.ಮೀ. 30.75 ರಿಂದ 51.60ರವರೆಗೆ) ಎರಡು ಲೇನ್ ರಸ್ತೆ, ಎರಡೂ ಬದಿ ಪಾದಚಾರಿ ಮಾರ್ಗ ಸಹಿತ ವಿಸ್ತರಿಸುವ ಉದ್ದೇಶದಿಂದ ಕಾರ್ಯಸಾಧ್ಯತಾ ಅಧ್ಯಯನ, ವಿವರವಾದ ಯೋಜನಾ ವರದಿ (ಡಿಪಿಆರ್), ಸಮೀಕ್ಷೆ ಹಾಗೂ ಭೂ ಯೋಜನೆ ತಯಾರಿಕೆಗಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಟೆಂಡರ್ ಆಹ್ವಾನಿಸಿರುವುದನ್ನು ಸಂಸದರಾದ ಬಿ.ವೈ.ರಾಘವೇಂದ್ರ ರವರು ಸ್ವಾಗತಿಸಿದ್ದಾರೆ.
ಗಮನಾರ್ಹವೆಂದರೆ, ಡಿಪಿಆರ್ ವ್ಯಾಪ್ತಿಯು ನಿರ್ದಿಷ್ಟವಾಗಿ ಸುರಂಗ ವಿನ್ಯಾಸ ತಜ್ಞರು ಮತ್ತು ಹಿರಿಯ ಭೂ-ಭೌತಶಾಸ್ತ್ರಜ್ಞರ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿದ್ದು, ಆಗುಂಬೆ ಘಾಟ್ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಾಣದ ಆಯ್ಕೆಯ ಕಾರ್ಯಸಾಧ್ಯತೆಯನ್ನು ಪರೀಕ್ಷಿಸಲು, ವಿವರವಾದ ಭೂ-ತಾಂತ್ರಿಕ ತನಿಖೆಗಳಿಗೆ ಮೀಸಲಾದ ಬಜೆಟ್ ನಿಬಂಧನೆಗಳೊಂದಿಗೆ, ಅವಕಾಶ ಕಲ್ಪಿಸಲಾಗಿದೆ. ದಶಕಗಳಿಂದಲೂ ಬಾಕಿ ಉಳಿದಿದ್ದ ಆಗುಂಬೆ ಘಾಟ್ ಮೇಲ್ದರ್ಜೆಗೇರಿಸುವ ಜನರ ಬೇಡಿಕೆಗೆ ಇದು ಸ್ಪಷ್ಟ, ನಿರ್ಣಾಯಕ ಮತ್ತು ಆಡಳಿತಾತ್ಮಕವಾಗಿ ಮೊದಲ ಹೆಜ್ಜೆಯಾಗಿದೆ. ಮಲೆನಾಡು – ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಹೊಸ ದಿಕ್ಕು ಲಭ್ಯವಾಗಲಿದ್ದು, ಸ್ಥಳೀಯ ನಿವಾಸಿಗಳು, ರೈತರು, ಅಕ್ಕಪಕ್ಕದ ಜಿಲ್ಲೆಗಳು, ಪ್ರವಾಸೋದ್ಯಮ ಹಾಗೂ ತುರ್ತು ಸೇವೆಗಳಿಗೆ ಗಣನೀಯ ಲಾಭವಾಗಲಿದೆ. ಭೂಸ್ವಾಧೀನ ಮತ್ತು ಕಾನೂನು ಪ್ರಕ್ರಿಯೆಗಳಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.








