ಕರಾವಳಿ ಟಾಪ್ ನ್ಯೂಸ್
ಬನ್ನೂರು ಅಪ್ಪಣ್ಣ ಹೆಗ್ಡೆ ವಿಧಿವಶ
• ರಾಜಕೀಯ, ಧಾರ್ಮಿಕ, ಸಹಕಾರ, ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ: ಗಣ್ಯರ ಸಂತಾಪ
• ಮೂಡಬಿದರೆ: ಮಹಾವೀರ ಕಾಲೇಜು ಸಮೀಪ ತೋಟಕ್ಕೆ ಬೆಂಕಿ
• ಕಡಬ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು
• ಮಂಗಳೂರು: ಭಾರತೀಯರ ಟಾರ್ಗೆಟ್ ಮಾಡಿದ್ದ ಗುಂಪು ಅರೆಸ್ಟ್!
• ಕಾಪು: ಆಟೋ ನಿಲ್ದಾಣ ತೆರವು: ಪುರಸಭೆಗೆ ಮುತ್ತಿಗೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕುಂದಾಪುರ: ರಾಜಕೀಯ, ಧಾರ್ಮಿಕ, ಸಹಕಾರ, ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ನಾಯಕ ಬನ್ನೂರು ಅಪ್ಪಣ್ಣ ಹೆಗ್ಡೆ ಶನಿವಾರ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಕೊನೆಯುಸಿರೆಳೆದಿದ್ದಾರೆ.
1983-1985 ಅವಧಿಯಲ್ಲಿ ಜನತಾ ಪಕ್ಷದಿಂದ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕರಾಗಿದ್ದ ಅಪ್ಪಣ್ಣ ಹೆಗ್ಡೆ ಅವರು ರಾಜಕೀಯ ಜೀವನದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಿದ್ದು, ಜನಪ್ರತಿನಿಧಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಕೆಗೆ ಹೆಸರುವಾಸಿಯಾಗಿದ್ದರು. ಶಾಸಕರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು. ಧಾರ್ಮಿಕ ಕ್ಷೇತ್ರದಲ್ಲಿಯೂ ಅವರ ಸೇವೆ ಗಣನೀಯವಾಗಿದ್ದು, ಅನೇಕ ದೇವಾಲಯಗಳ ಅಭಿವೃದ್ಧಿ, ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಹಾಗೂ ಸಂರಕ್ಷಣೆಗೆ ಅವರು ಮುನ್ನಡೆ ನೀಡಿದ್ದರು. ರಾಜಕೀಯ ಹಾಗೂ ನಿಜ ಜೀವನದಲ್ಲಿ ಅಜಾತ ಶತ್ರು ಎನಿಸಿಕೊಂಡಿದ್ದರು. ಸಾಮಾಜಿಕ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದ ಅವರು ತಾಲೂಕು ಕೋ ಅಪರೇಟಿವ್ ಮಾರಾಟ ಸೊಸೈಟಿ ಹಾಗೂ ಭೂ ಅಭಿವೃದ್ಧಿ ಬ್ಯಾಂಕ್ ಉಪಾಧ್ಯಕ್ಷರಾಗಿ, ಬನ್ನೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಬನ್ನೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಖ್ಯಸ್ಥರಾಗಿ, ಕೊಲ್ಲೂರು ಮೂಕಾಂಬಿಕಾ ದೇವಳದ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.ಮೃತರು ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
• ಮೂಡಬಿದರೆ: ಮಹಾವೀರ ಕಾಲೇಜು ಸಮೀಪ ತೋಟಕ್ಕೆ ಬೆಂಕಿ
ಮೂಡಬಿದರೆ: ಶ್ರೀಮಹಾವೀರ ಕಾಲೇಜಿನ ಸಮೀಪದಲ್ಲಿರುವ ತೆಂಗಿನ ತೋಟವೊಂದಕ್ಕೆ ಬೆಂಕಿ ತಗುಲಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವ ಕಾರ್ಯವನ್ನು ನಡೆಸಿದರೂ ಕೂಡ ಅನೇಕ ಮರ ಗಿಡಗಳು ಸುಟ್ಟು ಬೂದಿಯಾದ ಪರಿಣಾಮವಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ರಾತ್ರಿಯ ವೇಳೆ ಕೂಡ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವ ಮೂಲಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
• ಕಡಬ: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು
ಕಡಬ: ಸೀತಾರಾಮ ಗೌಡ ಎನ್ನುವ ವ್ಯಕ್ತಿಯು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿದರ ಪರಿಣಾಮವಾಗಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ, ಕಡಬ-ಪಂಜ ರಸ್ತೆಯಲ್ಲಿರುವ ಕೋಡಿಂಬಾಳ ಗ್ರಾಮದ ಪಡೆಜ್ಜಾರು ಮುರಚೆಡವು ಎನ್ನುವ ಪ್ರದೇಶದಲ್ಲಿ ನಡೆದಿದೆ. ಪರಿಣಾಮವಾಗಿ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ನಷ್ಟ ಸಂಭವಿಸಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೆಸ್ಕಾಂ ನ ಕಡಬ ಶಾಖೆಯ ಸಹಾಯಕ ಇಂಜಿನಿಯರ್ ಆಗಿರುವ ಸತ್ಯನಾರಾಯಣ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
• ಮಂಗಳೂರು: ಭಾರತೀಯರ ಟಾರ್ಗೆಟ್ ಮಾಡಿದ್ದ ಗುಂಪು
ಮಂಗಳೂರು: ಭಾರತೀಯರನ್ನು ಟಾರ್ಗೆಟ್ ಮಾಡಿ, ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ ತಂಡವೊಂದನ್ನು ನಗರದ ಸೈಬರ್ ಕ್ರೈಂ ಠಾಣೆಯ ಪೊಲೀಸರು ಬಲೆ ಬೀಸಿ, ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನೇಪಾಳದಲ್ಲಿ ಕುಳಿತುಕೊಂಡು ಆ ತಂಡವು ಇಂತಹ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿತ್ತು ಎನ್ನಲಾಗಿದೆ. ತಂಡದಲ್ಲಿ ಕೇವಲ ನೇಪಾಳದವರಷ್ಟೇ ಅಲ್ಲದೆ ಭಾರತೀಯರು ಮತ್ತು ಚೈನಾದವರು ಕೂಡ ಸೇರಿಕೊಂಡಿದ್ದರು ಎನ್ನುವ ಮಾಹಿತಿ ಲಭಿಸಿದೆ. ಚೈನಾದ ವಂಚಕರನ್ನು ನೇಪಾಳದ ಪೊಲೀಸರು ದಸ್ತಗಿರಿ ಮಾಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಪೊಲೀಸರ ಬಲೆಗೆ ಸಿಲುಕಿದ ಆರೋಪಿಗಳನ್ನು ಮಕವನ್ ವಿಕ್ರಂ, ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ, ಪುಪ್ಲ ಶಿವಕುಮಾರ್ ರಾವ್, ಗೌರವ್ ಪಾಂಡೆ, ಹರ್ಸ್ ಮಿಸ್ರಾ, ರಾಜೇಶ್ ಮಂಡನ್, ಮೊಹಮ್ಮದ್ ಆಕೀಬ್ ಅಲಿ, ರಾಜೀವ್ ರಂಜನ್ ಕುಮಾರ್, ಮಿಥುನ್ ಕುಮಾರ್ ಮಂಗರಾಜ್, ನೌಶಾದ್ ಅಲಿ ಮತ್ತು ಓಂ ಪ್ರಕಾಶ್ ಯಾದವ್ ಎಂದು ಗುರುತಿಸಲಾಗಿದೆ. ಬಂಧನಕ್ಕೆ ಒಳಪಡಿಸುವ ಸಂದರ್ಭದಲ್ಲಿ ಆರೋಪಿಗಳ ಬಳಿಯಿದ್ದ ಒಂದು ಲ್ಯಾಪ್ ಟಾಪ್, 21 ಮೊಬೈಲ್ ಗಳು, ವಿವಿಧ ಕಂಪನಿಯ 20 ಸಿಮ್ ಕಾರ್ಡ್ ಗಳು ಮತ್ತು ಬೇರೆ ಬೇರೆ ಬ್ಯಾಂಕ್ ಗಳ 20 ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ಫೋನ್ ಮತ್ತು ಲ್ಯಾಪ್ ಟಾಪ್ ಗಳನ್ನು ಪರಿಶೀಲಿಸಿದಾಗ 624 ಬ್ಯಾಂಕ್ ಖಾತೆಗಳ ವಿವರಣೆ ಕಂಡು ಬಂದಿದ್ದು, ಸದರಿ ಬ್ಯಾಂಕ್ ಖಾತೆಗಳ ಮೇಲೆ ಒಟ್ಟು 4580ಕ್ಕೂ ಹೆಚ್ಚಿನ ಎನ್ ಸಿ ಆರ್ ಪಿ ಪೋರ್ಟಲ್ ನಲ್ಲಿ ಪ್ರಕರಣಗಳು ದಾಖಲಾಗಿದ್ದು, ಒಂದು ಬ್ಯಾಂಕ್ ಖಾತೆಯಲ್ಲಿ 167 ಕೋಟಿ ರೂಪಾಯಿಯಷ್ಟು ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಬಳಸಿದ 10 ಬ್ಯಾಂಕ್ ಖಾತೆಗಳಲ್ಲಿ ಸುಮಾರು 30.70.26.725 ರೂಪಾಯಿಗಳಷ್ಟು ಹಣ ವರ್ಗಾವಣೆಯಾಗಿದ್ದು, ಉಳಿದ 623 ಬ್ಯಾಂಕ್ ಖಾತೆಗಳ ವಿವರಗಳನ್ನು ಇನ್ನಷ್ಟೇ ಪಡೆಯಬೇಕಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಆದ ಸುಧೀರ್ ಕುಮಾರ್ ರೆಡ್ಡಿ ಅವರು “ಐದು ಮಂದಿ ಭಾರತೀಯ ಆರೋಪಿಗಳು ತಲೆಮರಿಸಿಕೊಂಡಿದ್ದು, ಪತ್ತೆ ಹಚ್ಚುವ ಕಾರ್ಯವನ್ನು ಮುಂದುವರಿಸಲಾಗಿದೆ” ಎನ್ನುವ ಮಾಹಿತಿ ನೀಡಿದ್ದಾರೆ.
• ಕಾಪು: ಆಟೋ ನಿಲ್ದಾಣ ತೆರವು:
ಕಾಪು: ಉಚ್ಚ ನ್ಯಾಯಾಲಯದ ಆದೇಶದಂತೆ ಪುರಸಭೆಯು ಆಟೋ ನಿಲ್ದಾಣವನ್ನು ತೆರವುಗೊಳಿಸಲು ಮುಂದಾಗಿರುವ ಘಟನೆ ನಡೆದಿದೆ. ಖಾಸಗಿ ಕುಟುಂಬಕ್ಕೆ ಸೇರಿರುವ ಜಾಗ ಅದಾಗಿರುವುದರಿಂದ, ಸುತ್ತಮುತ್ತಲು ಅಂಗಡಿಗಳನ್ನು ಬಾಡಿಗೆಗೆ ಪಡೆದು ವ್ಯಾಪಾರ ನಡೆಸುತ್ತಿರುವ ವರ್ತಕರಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಖಾಸಗಿಯವರು ಉಚ್ಚ ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದರು. ಪರಿಣಾಮವಾಗಿ ನ್ಯಾಯಾಲಯವು ಖಾಸಗಿಯವರ ಪರವಾಗಿ ತೀರ್ಪನ್ನು ನೀಡಿ, ಆಟೋ ನಿಲ್ದಾಣವನ್ನು ತೆರವುಗೊಳಿಸಲು ಸೂಚನೆ ನೀಡಿತು. ಈ ಹಿನ್ನೆಲೆಯಲ್ಲಿ ಪುರಸಭೆಯು ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಆಟೋ ನಿಲ್ದಾಣ ತೆರವುಗೊಳಿಸುವ ವಿಚಾರದ ಕುರಿತು ಚರ್ಚಿಸಲು ಮತ್ತು ಆದೇಶವನ್ನು ಜಾರಿಗೆ ತರುವ ವಿಷಯವಾಗಿ ಚರ್ಚೆ ನಡೆಸಲು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಪ್ರತಿನಿಧಿಗಳಿಗೆ ನೋಟಿಸ್ ಜಾರಿ ಮಾಡಿತ್ತು. ಇದ್ದಕ್ಕಿದ್ದಂತೆ ನ್ಯಾಯಾಲಯದಿಂದ ನೋಟಿಸ್ ಜಾರಿ ಆಗಿರುವುದರಿಂದ ಗಾಬರಿಗೊಂಡ ಆಟೋ ಚಾಲಕರು ಪುರಸಭೆಗೆ ಆಗಮಿಸಿ ಮುತ್ತಿಗೆ ಹಾಕಿದರು ಎನ್ನಲಾಗಿದೆ. ಇದರಿಂದಾಗಿ ಕೆಲವು ಗಂಟೆಗಳ ಕಾಲ ಪುರಸಭೆಯ ಎದುರಿನಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.
