ಗಾಂಧಿಮೈದಾನ ವರ್ತಕರ ನೆರವಿಗೆ ನಿಂತ ವಿಶ್ವನಾಥ್ ಗದ್ದೆಮನೆ
* ಹೊಳೆ ಕರಾಬು ಆದೇಶ ಮಾಡಿ 26 ಅಂಗಡಿಗಳ ನೆಲಸಮ ಮಾಡಿದ್ದ ಜಿಲ್ಲಾಡಳಿತ
* ಅತಂತ್ರ ಸ್ಥಿತಿಗೆ ಬಂದಿದ್ದ ಗಾಂಧಿ ಮೈದಾನ ವರ್ತಕರು
NAMMMUR EXPRESS NEWS
ಶೃಂಗೇರಿ: ಪಟ್ಟದ ಗಾಂಧಿಮೈದಾನದಲ್ಲಿನ ಅಂಗಡಿಗಳ ತೆರವಿನಿಂದ ಅತಂತ್ರವಾಗಿದ್ದ 26 ಕುಟುಂಬಗಳ ನೆರವಿಗೆ ವಿಶ್ವನಾಥ್ ಗದ್ದೆಮನೆ ನಿಂತಿದ್ದಾರೆ.
ಅ.23 ರ ಗುರುವಾರ ಶೃಂಗೇರಿಯಲ್ಲಿ ಗಾಂಧಿಮೈದಾನದ ನೊಂದ ವರ್ತಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ವಿಶ್ವನಾಥ್ ಗದ್ದೆಮನೆ,ನೊಂದ ಕುಟುಂಬಗಳ ಜೊತೆ ಸದಾ ಇರುವುದಾಗಿ ತಿಳಿಸಿದ್ದು, ಅಂಗಡಿಗಳನ್ನು ಕಳೆದುಕೊಂಡ ವರ್ತಕರಿಗೆ ಧನ ಸಹಾಯ ಮಾಡಿದರು.
ವಿಶ್ವನಾಥ್ ಗದ್ದೆಮನೆಯವರು ಮಾಡಿದ ಸಹಾಯ ಸ್ವೀಕರಿಸಿದ ವರ್ತಕರು ದಾನಿಗಳ ಸಹಾಯಕ್ಕೆ ಮತ್ತು ಅವರ ಸಾಂತ್ವನದ ಮಾತುಗಳಿಗೆ ಧನ್ಯವಾದ ತಿಳಿಸಿದರು. ಕಷ್ಟಕಾಲದಲ್ಲಿ ನೆರವಿಗೆ ಬಂದು ಮಾಡಿದ ಈ ಸಹಾಯದಿಂದ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದ್ದು, ಈ ಸಂದರ್ಭದಲ್ಲಿ ಜೊತೆನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಸ್ವತಃ ವಕೀಲರಾದ ವಿಶ್ವನಾಥ್ ಗದ್ದೆಮನೆಯವರು ವರ್ತಕರ ಕಾನೂನು ಹೋರಾಟದಲ್ಲಿ ಅಗತ್ಯಬಿದ್ದರೆ ಸಹಕರಿಸುವುದಾಗಿ ತಿಳಿಸಿದರು. ಯಾರೂ ಕೂಡ ಈ ಸಂಕಷ್ಟದಿಂದ ಎದೆಗುಂದದೆ ನ್ಯಾಯಕ್ಕಾಗಿ ಹೋರಾಡೋಣ,ಇಷ್ಟು ವರ್ಷಗಳ ನಿಮ್ಮೆಲ್ಲರ ಪರಿಶ್ರಮಕ್ಕೆ ದೇವರು ಒಳಿತನ್ನೇ ಮಾಡುತ್ತಾನೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಹಾಗೂ ಸಹಕಾರಿ ನಾಯಕ ರಾಮಸ್ವಾಮಿ ಶೆಟ್ಟಿಗದ್ದೆ,ವಿಶ್ವಹಿಂದೂ ಪರಿಷದ್ ಬಜರಂಗದಳ ಶೃಂಗೇರಿ ಜಿಲ್ಲಾಧ್ಯಕ್ಷರಾದ ಸುರೇಶ್, ವಿಶ್ವಹಿಂದೂ ಪರಿಷದ್ ಹಾಸನ ವಿಭಾಗ ಕಾರ್ಯದರ್ಶಿಗಳಾದ ಮಹೇಂದ್ರ,ವಿಶ್ವ ಹಿಂದೂ ಪರಿಷದ್ ಶೃಂಗೇರಿ ಜಿಲ್ಲಾ ಕಾರ್ಯದರ್ಶಿಗಳಾದ ದಿವೀರ್ ಮಲ್ನಾಡ್ ಹಾಗೂ ತಾಲೂಕು ಸಹ ಸಂಯೋಜಕರಾದ ಸಂತೋಷ್ ಕೆರೆಮನೆ ಇವರುಗಳು ಉಪಸ್ಥಿತರಿದ್ದರು.








