ನೀರಿನಲ್ಲಿ ಕೊಚ್ಚಿ ಹೋದ 200 ಚೀಲ ಅಡಕೆ!!
* ಇಡೀ ದಿನ ರಾಜ್ಯ ಹೆದ್ದಾರಿ ಬಂದ್!!
* ಹಳ್ಳದಲ್ಲಿ ಕೊಚ್ಚಿ ಹೋದ ವೃದ್ಧ ಸಾವು
NAMMUR EXPRESS NEWS
ನಾಯಕನಹಟ್ಟಿ/ಚಿತ್ರದುರ್ಗ: ನಾಗಣ್ಣ ಎಂಬುವರು ಜಮೀನಿನಲ್ಲಿ ಒಣಗಲು ಹಾಕಿದ್ದ 100 ಚೀಲ ಚಾಲಿ ಅಡಕೆ ಹಳ್ಳದ ನೀರಿಗೆ ಕೊಚ್ಚಿ ಹೋಗಿದೆ. ಕಾಂತರಾಜ್ಗೆ ಸೇರಿದ 8 ಕ್ವಿಂಟಲ್ ಒಣ ಅಡಕೆ ನೀರು ಪಾಲಾಗಿದೆ. ಅಡಕೆ ಸುಲಿಯುವ ಯಂತ್ರ, ಎರಡು ಬೈಕ್ಗಳು ನೀರಿನಲ್ಲಿ ಮುಳುಗಿವೆ. ಬಿ.ಟಿ.ತಿಪ್ಪೇಸ್ವಾಮಿ ಯವರು 400 ಚೀಲ ಅಡಕೆಯನ್ನು ಒಣಗಲು ಮೈದಾನದಲ್ಲಿ ಹಾಕಿದ್ದರು. ಇದರಲ್ಲಿ 100 ಚೀಲ ಕೊಚ್ಚಿ ಹೋಗಿದೆ. ಹಳ್ಳ ಮತ್ತು ಜಾಲಿಗಿಡದಲ್ಲಿ ಸಿಕ್ಕಿಕೊಂಡಿರುವ ಅಡಕೆಯನ್ನು ಕೂಲಿ ಕಾರ್ಮಿಕರಿಂದ ಆರಿಸಲಾಗುತ್ತಿದೆ.
ಇಡೀ ದಿನ ರಾಜ್ಯ ಹೆದ್ದಾರಿ ಬಂದ್!!
ಚಳ್ಳ ಕೆರೆ ತಾಲೂಕಿನ ಮನಮೈನಹಟ್ಟಿ ಹಾಗೂ ನಾಯಕನಹಟ್ಟಿ’ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ 45ರಲ್ಲಿ ಚಿಕ್ಕಹಳ್ಳ ಮತ್ತು ಕೆರೆ ಕೋಡಿ ನೀರು ಭಾರಿ ಪ್ರಮಾಣದಲ್ಲಿ ಹರಿದಿದೆ. ಇದರಿಂದ ಕೋಡಿ ನೀರು ಹರಿವ ಪ್ರದೇಶವನ್ನು ಪೊಲೀಸರು ಬಂದ್ ಮಾಡಿದ್ದಾರೆ. ಅ 21ರಂದು ರಾತ್ರಿಯಿಂದ 22ರ ಸಂಜೆವರೆಗೆ ಹೆದ್ದಾರಿಯನ್ನು ಪೂರ್ಣವಾಗಿ ಬಂದ್ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ 50 ಮತ್ತು 150ಎ ಸಂಪರ್ಕಿಸುವ ಈ ಹೆದ್ದಾರಿಯ ಲಾರಿಗಳು ಮತ್ತು ವಾಹನಗಳು ಪರದಾಡುವಂತಾಯಿತು. ಚಿಕ್ಕಕೆರೆಯಲ್ಲಿ ಕೋಡಿಯಿಂದ ಭಾರಿ ಪ್ರಮಾಣದ ನೀರು ಹರಿದು ಹಲವು ಅವಾಂತರ ಸೃಷ್ಟಿಸಿದೆ. 52 ವರ್ಷಗಳಲ್ಲಿ ಕಂಡು, ಕೇಳರಿಯದಷ್ಟು ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಹಳ್ಳಗಳು ತುಂಬಿ ಹರಿದಿವೆ. ಚಳ್ಳಕೆರೆ, ಜಗಳೂರು ರಸ್ತೆ ಸಂಪೂರ್ಣ ಸ್ಥಗಿತಗೊಂಡಿದೆ. ನಾಲ್ಕು ಸೇತುವೆಗಳು ಕುಸಿದಿವೆ.
ಹಳ್ಳದಲ್ಲಿ ಕೊಚ್ಚಿ ಹೋದ ವೃದ್ಧ ಸಾವು
ಚಿತ್ರದುರ್ಗ: ಜಿಲ್ಲೆಯಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಸರಾಸರಿ 25.6 ಮಿ.ಮೀ. ಮಳೆಯಾಗಿದೆ. ಹೊಳಲ್ಕೆರೆ ತಾಲೂಕಿನಲ್ಲಿ ಹಳ್ಳದಾಟುತ್ತಿದ್ದ ವೃದ್ದರೊಬ್ಬರು ಹಳ್ಳದ ಹರಿವಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಹಲವು ಕಡೆ ಮಳೆಗೆ 120 ಮನೆಗಳು ಭಾಗಶಃ ಹಾನಿ ಆಗಿವೆ. ಹೊಳಲ್ಕೆರೆ ತಾಲೂಕಿನ ರಾಮಘಟ್ಟ ನಿವಾಸಿ ರಾಜಪ್ಪ(70) ಮೃತರು. ದನ ಮೇಯಿಸಲು ಹೋಗಿ ಸಂಜೆ ವಾಪಸ್ ಬರುವಾಗ ಈ ಘಟನೆ ಸಂಭವಿಸಿದೆ. ಚಿಕ್ಕಜಾಜೂರು ಪೊಲೀಸರು ಭೇಟಿ ಪರಿಶೀಲಿಸಿದ್ದಾರೆ.