ಚಿತ್ರದುರ್ಗ : ಜಿಲ್ಲಾಸ್ಪತ್ರೆಯಲ್ಲಿ ಮೇಲ್ಚಾವಣಿ ಸಿಮೆಂಟ್ ಕುಸಿತ, ರೋಗಿಯ ತಲೆಗೆ ಗಾಯ.!
– ದಾವಣಗೆರೆ: ಗೃಹಲಕ್ಷ್ಮೀ ಯೋಜನೆ ಹಣ ಡ್ರಾ ಮಾಡಿಕೊಂಡು ಬರಲು ಹೋಗಿದ್ದ ಮಹಿಳೆ ಗಂಡನಿಂದಲೇ ಹತ್ಯೆ!
– ಚಿತ್ರದುರ್ಗ: ಅಕಾಲಿಕ ಮಳೆಯಿಂದ ಶೇಂಗಾ ಬೆಳೆಗಾರರಿಗೆ ಆತಂಕ..!
NAMMUR EXPRESS NEWS
ಚಿತ್ರದುರ್ಗ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜನತೆ ತತ್ತರಿಸಿದ್ದಾರೆ. ಅಲ್ಲದೆ ಅಪಾರ ಬೆಳೆ, ಮನೆ ಹಾನಿಯಾಗಿದೆ. ಇದಲ್ಲದೆ, ಚಿತ್ರದುರ್ಗ ನಗರದ ಸಾರ್ವಜನಿಕ ಜಿಲ್ಲಾಸ್ಪತ್ರೆಯಲ್ಲಿ ಛಾವಣಿ ಸಿಮೆಂಟ್ ಕುಸಿದು ಬಿದ್ದಿದ್ದು, ಅದೃಷ್ಟಾವತ್ ಬಹುದೊಡ್ಡ ದುರಂತವೊಂದು ತಪ್ಪಿದೆ. ಮೇಲ್ಭಾಗದ ಛಾವಣಿಯ ಸಿಮೆಂಟ್ ಕುಸಿದು ರೋಗಿ ಇದ್ದ ಬೆಡ್ ಮೇಲೆ ಬಿದ್ದಿದ್ದು, ರೋಗಿಯ ತಲೆಗೆ ಗಾಯವಾಗಿದೆ. ಗಾಯಗೊಂಡವರನ್ನು ಆಂಧ್ರಪ್ರದೇಶ ಮೂಲದ ಲಕ್ಷ್ಮಕ್ಕ ಎಂದು ಗುರುತಿಸಲಾಗಿದೆ. ಲಕ್ಷ್ಮಕ್ಕ ಅವರು ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಡ್ ಮೇಲೆ ಮಲಗಿದ್ದಾಗ ಛಾವಣಿಯ ಸಿಮೆಂಟ್ ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ರೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಛಾವಣಿ ಸಿಮೆಂಟ್ ಬಿದ್ದಿದ್ದರಿಂದ ಆಸ್ಪತ್ರೆಯಲ್ಲಿ ಕ್ಷಣ ಕಾಲ ಆತಂಕ ಸೃಷ್ಟಿಯಾಗಿತ್ತು. ಜಿಲ್ಲಾಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
– ದಾವಣಗೆರೆ: ಗೃಹಲಕ್ಷ್ಮೀ ಯೋಜನೆ ಹಣ ಡ್ರಾ ಮಾಡಿಕೊಂಡು ಬರಲು ಹೋಗಿದ್ದ ಮಹಿಳೆ ಗಂಡನಿಂದಲೇ ಹತ್ಯೆ!
ದಾವಣಗೆರೆ : ಗೃಹಲಕ್ಷ್ಮೀ ಯೋಜನೆ ಹಣ ತರಲು ಬ್ಯಾಂಕ್ಗೆ ಹೋಗಿದ್ದ ಪತ್ನಿಯನ್ನು ಪತಿ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಗಳೂರು ತಾಲೂಕಿನ ಉಜ್ಜಪ್ಪರ ಒಡೆರಹಳ್ಳಿ ಗ್ರಾಮದಲ್ಲಿ ನಡೆದಿದೆ. ಉಸಿರುಗಟ್ಟಿಸಿ ಪತ್ನಿ ಸತ್ಯಮ್ಮಳನ್ನು ಕೊಲೆಮಾಡಿ ಪತಿ ಅಣ್ಣಪ್ಪ ಪರಾರಿಯಾಗಿದ್ದಾನೆ. ದಂಪತಿ 12 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಇದೆ. ಪತಿ ಅಣ್ಣಪ್ಪ ನಿತ್ಯ ಕುಡಿದು ಬಂದು ಪತ್ನಿ ಸತ್ಯಮ್ಮರಿಗೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತ ಸತ್ಯಮ್ಮ ತವರು ಮನೆ ಸೇರಿದ್ದರು. ಆದ್ರೆ, ಗೃಹ ಲಕ್ಷ್ಮಿ ಹಣ ಡ್ರಾ ಮಾಡಿಕೊಳ್ಳಲು ಒಡೆರಹಳ್ಳಿ ಗ್ರಾಮಕ್ಕೆ ಬಂದಿದ್ದಾಳೆ. ಈ ವೇಳೆ ಪತಿ ಅಣ್ಣಪ್ಪ ಕೊಲೆ ಮಾಡಿದ್ದಾನೆ. ಬ್ಯಾಂಕ್ಗೆ ಬಂದ ಪತಿ ಅಣ್ಣಪ್ಪ ಪತ್ನಿ ಸತ್ಯಮ್ಮಳನ್ನ ಮನವೊಲಿಸಿ ಜಮೀನಿಗೆ ಕರೆದೊಯ್ದು ಹಲ್ಲೆ ಮಾಡಿದ್ದಾನೆ. ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಚಿತ್ರದುರ್ಗ: ಅಕಾಲಿಕ ಮಳೆಯಿಂದ ಶೇಂಗಾ ಬೆಳೆಗಾರರಿಗೆ ಆತಂಕ..!
ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಸುರಿದ ಮಳೆಗೆ ಶೇಂಗಾ ಬೆಳೆ ಅತಂತ್ರ ಸ್ಥಿತಿಯಲ್ಲಿದ್ದು, ಈ ಬಾರಿಯೂ ಕೂಡಾ ಶೇಂಗಾ ಬೆಳೆ ಕೈ ಕೊಡುವ ಆತಂಕ ರೈತರಿಗೆ ಎದುರಾಗಿದೆ. ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೇರ್ ಶೇಂಗಾ ಬಿತ್ತನೆಯಾಗಿದ್ದು, ಶೇ.25ರಿಂದ 30 ರಷ್ಟು ಬೆಳೆ ಮಾತ್ರ ಸಿಗುವ ಸಾಧ್ಯತೆಗಳಿವೆ. ಜಿಲ್ಲೆಯ ಚಳ್ಳಕೆರೆಯಲ್ಲಿ 65 ಸಾವಿರ, ಹಿರಿಯೂರಿನಲ್ಲಿ 11 ಸಾವಿರ, ಮೊಳಕಾಲ್ಮೂರಲ್ಲಿ 19 ಸಾವಿರ ಹೆಕ್ಟೇರ್ ಶೇಂಗಾ ಬಿತ್ತನೆಯಾಗಿದೆ. ಅಕಾಲಿಕ ಮಳೆಯಿಂದಾಗಿ ಮೇ ಕೊನೆಯ ವಾರದಿಂದ ಆಗಸ್ಟ್ ಕೊನೆಯ ವಾರದ ತನಕ ಶೇಂಗಾ ನಾನಾ ಹಂತಗಳಲ್ಲಿ ಬಿತ್ತನೆಯಾಗಿತ್ತು. ಜೂನ್ ಅಂತ್ಯಕ್ಕೆ 23 ಸಾವಿರ ಹೆಕ್ಟೇರ್, ಜುಲೈ ಅಂತ್ಯಕ್ಕೆ 54 ಸಾವಿರ ಹೆಕ್ಟೇರ್, ಆಗಸ್ಟ್ ಅಂತ್ಯಕ್ಕೆ 95 ಸಾವಿರ ಹೆಕ್ಟೇರ್, ಸೆಪ್ಟಂಬರ್ ಅಂತ್ಯಕ್ಕೆ 1.10 ಲಕ್ಷ ಹೆಕ್ಟೇರ್ ಶೇಂಗಾ ಬಿತ್ತನೆಯಾಗಿದೆ. ಕಳೆದೆರಡು ವಾರಗಳಿಂದ ಬರುತ್ತಿರುವ ಮಳೆ ಆರಂಭಿಕವಾಗಿ ಬಿತ್ತನೆ ಮಾಡಿ, ಕಟಾವು ಮಾಡಿರುವ ಬೆಳೆಯನ್ನು ಹಾಳು ಮಾಡಿದರೆ, ನಂತರದ ಹಂತದಲ್ಲಿ ಬಿತ್ತನೆ ಮಾಡಿರುವ ಶೇಂಗಾ ಬೆಳೆಗೆ ರೋಗ ಅಡರುವಂತೆ ಮಾಡಿದೆ. ಕೊಳೆ, ಬುಡ, ಬೆಂಕಿ ರೋಗ ಎಲ್ಲೆಡೆ ಆವರಿಸಿಕೊಂಡಿವೆ. ಅಲ್ಲೊಂದು, ಇಲ್ಲೊಂದು ತಾಕು ಮಾತ್ರ ಬೆಳೆ ಸಿಗುವ ಭರವಸೆ ಹುಟ್ಟಿಸಿವೆ. ಕೃಷಿ ಇಲಾಖೆ ಈಗ ಹೆಚ್ಚುವರಿ ಮಳೆಯಿಂದಾಗಿ ಜಿಲ್ಲೆಯಲ್ಲಿ 110 ಹೆಕ್ಟೇರ್ ಶೇಂಗಾ ಬೆಳೆ ನಾಶವಾಗಿದೆ ಎಂದು ಹೇಳಿದೆ. ಇದು ನೇರವಾಗಿ ಮಳೆಗೆ ಹಾನಿಯಾದ ಬೆಳೆ ವಿವರ ಮಾತ್ರ. ಆದರೆ, ಮಳೆಯಿಂದಾಗಿ ರೈತರಿಗೆ ಬೇರೆ ಬೇರೆ ಆಯಾಮಗಳಲ್ಲಿ ಆಗಿರುವ ನಷ್ಟದ ಅಂದಾಜು ಕೃಷಿ ಇಲಾಖೆ ಬಳಿ ಇಲ್ಲ. ಅಂತದ್ದೊಂದು ಸಮೀಕ್ಷೆ ಸಹಾ ಇನ್ನೂ ನಡೆದಿಲ್ಲ. ಇದರ ಜತೆಗೆ ಮಳೆಯಿಂದಾಗಿ ನೇರ ಹಾನಿಗೊಳಗಾಗಿರುವ ಜಿಲ್ಲೆಯ 380 ರೈತರು ಮಾತ್ರ ಪರಿಹಾರ ಕೋರಿ ಅರ್ಜಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ.