ಮೊಬೈಲ್ ಮಾಯೆ ಮಕ್ಕಳನ್ನು ಹಾಳು ಮಾಡುತ್ತಿದೆ
– ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ ಮತ್ತು ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ವಿಚಾರ ಸಂಕಿರಣ
– ಸಮಾಜದಲ್ಲಿ ಧರ್ಮಸ್ಥಳ ಯೋಜನೆಯಿಂದ ಸಾಮಾಜಿಕ ಕ್ರಾಂತಿ
NAMMUR EXPRESS NEWS
ಹೊಸದುರ್ಗ: ಜಾಗತೀಕರಣದ ಹಾವಳಿಯಿಂದಾಗಿ ಮನುಷ್ಯ ಮನುಷ್ಯರ ಮಧ್ಯೆ ಸಂಬಂಧವೇ ದೂರವಾಗಿದೆ. ಮೊಬೈಲ್ ಎಂಬ ಮಾಯೆ ಮಕ್ಕಳನ್ನ ಬಿಡದೆ ಬಾಧಿಸುತ್ತಿದೆ. ಇದು ಇದೇ ರೀತಿ ಮುಂದುವರೆದರೆ ತಂದೆ ಮಕ್ಕಳ ಬಾಂಧವ್ಯದ ಬದುಕೆ ದೂರವಾಗಿದ್ದು ಅತಿಯಾದ ಮೊಬೈಲ್ ಬಳಕೆಯಿಂದ ಭಾವನಾತ್ಮಕ ಸಂಬಂಧ ದೂರವಾಗಿ ಬುದ್ಧಿಶಕ್ತಿಯನ್ನೇ ಕಳೆದುಕೊಳ್ಳುತ್ತಾರೆ ಎಂದು ಭದ್ರಾವತಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ಉಪನ್ಯಾಸಕ ನಾಗೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ರಾಧಾಕೃಷ್ಣ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹಾಲು ರಾಮೇಶ್ವರ ಯೋಜನಾ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಶಿಕ್ಷಣದಲ್ಲಿ ಪೋಷಕರ ಪಾತ್ರ ಮತ್ತು ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತ ವಿಚಾರ ಸಂಕೀರ್ಣದಲ್ಲಿ ಅವರು ಮಾತನಾಡಿದರು.
ನಾವೆಲ್ಲಾ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಬದುಕು ಕಟ್ಟಿಕೊಂಡೆವು. ನಮ್ಮ ಮಕ್ಕಳಿಗೆ ಕಾನ್ವೆಂಟ್ ಶಿಕ್ಷಣ ಕೊಡಿಸುವುದರ ಮೂಲಕ ಅವರ ಭಾವನಾತ್ಮಕ ಸಂಬಂಧವನ್ನೇ ಹಾಳು ಮಾಡುತ್ತಿದ್ದೇವೆ. ನಾವು ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕೊಡುವ ಜವಾಬ್ದಾರಿ ತಾಯಂದಿರ ಮೇಲೆ ಇರುತ್ತದೆ. ಮಗು ಪೋಷಕರನ್ನ ಅಥವಾ ತಂದೆ-ತಾಯಿಯನ್ನು ಬಿಟ್ಟು ಇರಬಹುದು. ಆದರೆ, ಮೊಬೈಲ್ ಬಿಟ್ಟಿರಲು ಸಾಧ್ಯವಿಲ್ಲದಂತ ಪರಿಸ್ಥಿತಿಗೆ ಮಗುವನ್ನ ತಂದು ಬಿಟ್ಟಿದ್ದೇವೆ. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಏನೇಂಬುದನ್ನ ನಾವು ಅರಿಯಬೇಕಿದೆ. ಚಿಕ್ಕ ವಯಸ್ಸಿನಲ್ಲಿ ಮಗು ಅಳುವಾಗ ತಕ್ಷಣ ಮಗುವಿನ ಕೈಗೆ ಮೊಬೈಲ್ ಕೊಡುವ ಚಾಳಿಯನ್ನು ಬೆಳೆಸಿಕೊಂಡಿದ್ದೇವೆ. ಅತಿಯಾದ ಮೊಬೈಲ್ ಬಳಸಿದವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಅವನ ಶೈಕ್ಷಣಿಕ ಬುದ್ಧಿಮಟ್ಟ ಕುಂಠಿತವಾಗುತ್ತದೆ. ಶಿಕ್ಷಣದ ಭವಿಷ್ಯಕ್ಕೆ ಮಿತವಾದ ಮೊಬೈಲ್ ಬಳಕೆ ಜೀವನಕ್ಕೆ ದಾರಿಯಾಗಬಲ್ಲದು ಎಂದು ಹೇಳಿದರು.
ಕೇಂದ್ರ ಬ್ಯಾಂಕ್ ವಿಶ್ರಾಂತ ವ್ಯವಸ್ಥಾಪಕಿ ನಾಗಲಾಂಬಿಕ ಕಲ್ಮಠ ಮಾತನಾಡಿ, ಮೊಬೈಲ್ ದುರ್ಬಳಕೆಯನ್ನು ಹೊರತುಪಡಿಸಿ ನಮ್ಮ ಮಕ್ಕಳ ಹಬ್ಬದ ಬಗ್ಗೆ ಪೋಷಕರಾದ ನಾವುಗಳು ಏಳ್ಗೆ ಬಯಸಬೇಕು ಎಂದರು.
ಕಳೆದ 50 ವರ್ಷಗಳಿಂದ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಡೆಯವರು ಕೇವಲ ಧರ್ಮಸ್ಥಳವನ್ನಲ್ಲದೆ ನಾಡಿನ ಎಲ್ಲಾ ಸ್ಥಳಗಳ ಅಭಿವೃದ್ಧಿಯ ಚಿಂತನೆ ನಡೆಸಿ ಬಿ ಸಿ ಟ್ರಸ್ಟ್ ಮುಖಾಂತರ ನೊಂದ ಬಡ ಕುಟುಂಬಗಳ ಅಭಿವೃದ್ಧಿಗಾಗಿ ತನ್ನನ್ನ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಅಮ್ಮನವರು ಮಾಡುತ್ತಿರುವ ನೂರಾರು ಜನಪರ ಕಾರ್ಯಕ್ರಮಗಳು ನಾಡಿನ ಜನರನ್ನ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯತ್ತ ಕೊಂಡಯುವಲ್ಲಿ ಧರ್ಮಸ್ಥಳ ಸಂಘ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ
ಗೂಳಿಹಟ್ಟಿ ಕೃಷ್ಣಮೂರ್ತಿ ಹೇಳಿದರು
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸದಸ್ಯರಾದ ಸಿಂಧೂ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಚಂದ್ರಶೇಖರ್ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಗೂಳಿಹಟ್ಟಿ ಕೃಷ್ಣಮೂರ್ತಿ, ತುಂಬಿನಕೆರೆ ಬಸವರಾಜ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗಂಗಮ್ಮ, ವಲಯ ಮೇಲ್ವಿಚಾರಕ ನಾಗರಾಜ್ ಮತ್ತು ಜ್ಞಾನವಿಕಾಸ ಸೇವಾ ಪ್ರತಿನಿಧಿಗಳು ಇದ್ದರು.