ಹೊಸದುರ್ಗದಲ್ಲಿ ಯಶಸ್ವಿಯಾಗಿ ನಡೆದ ವಚನಾಧಾರಿತ ನಿಜಾಚರಣೆ ಕಮ್ಮಟ
– ಕರ್ನಾಟಕದ ಬೇರೆ ಬೇರೆ ಭಾಗಗಳಿಂದ 2೦೦ ಜನ ಶಿಬಿರಾರ್ಥಿಗಳು
– ಸಾಣೆಹಳ್ಳಿಯ ರಂಗ ಜಂಗಮ ಪಂಡಿತರ ಶಿವಾಚಾರ್ಯ ಶ್ರೀ ಮಾತು
NAMMUR EXPRESS NEWS
ಹೊಸದುರ್ಗ: ನಮ್ಮ ನಡೆ ನುಡಿ ಹೇಗಿರಬೇಕೆಂಬ ಎಚ್ಚರ ಪ್ರತಿಯೊಬ್ಬ ವ್ಯಕ್ತಿಗೆ ಇರಬೇಕು. ಮಾತು ಮತ್ತು ಕ್ರಿಯೆ ಒಂದಾದಾಗ ವ್ಯಕ್ತಿಯ ವ್ಯಕ್ತಿತ್ವ ಅರಳುವುದು. ಮಾತು ಒಂದು ಕೃತಿ ಮತ್ತೊಂದು ಆದರೆ ಅವನ ಬದುಕು ಕಮರಿಹೋಗುವುದು ಎಂದು ಎಂದು ಸಾಣೆ ಹಳ್ಳಿಯ ರಂಗ ಜಂಗಮ ಪಂಡಿತರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ತಾಲೂಕಿನ ರಂಗಕಾಶಿ ಸಾಣೇಹಳ್ಳಿ ಗುರುಬಸವ ಮಹಾಮನೆಯಲ್ಲಿ ಎರಡು ದಿನಗಳ ಕಾಲ ನಡೆದ `ವಚನಾಧಾರಿತ ನಿಜಾಚರಣೆ ಕಮ್ಮಟ’ದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಲಿಂಗಾವಂತ ಧರ್ಮ ನಮ್ಮನ್ನು ಸದಾ ಎಚ್ಚರವಾಗಿರುವಂತೆ ಮಾಡುತ್ತದೆ. ಜಾಗೃತಗೊಳಿಸುತ್ತದೆ. ಲಿಂಗಾವಂತರನ್ನು ಬಹಳಷ್ಟು ಜನ ಟೀಕೆ ಮಾಡಬಹುದು. ಅದಕ್ಕೆ ಅಂಜಬೇಕಾಗಿಲ್ಲ. ಬಸವನ ಶಕ್ತಿ ನಮ್ಮ ಬೆನ್ನ ಹಿಂದೆ ಇದ್ದರೆ ಯಾರಿಗೂ ಅಂಜದೇ ಸುಖಸಂತೋಷದಿಂದ ಬಾಳಬಹುದು ಎಂದರು.
ಎರಡು ದಿನಗಳ ಕಾಲ ನಡೆದ ಕಮ್ಮಟ ತುಂಬಾ ಪರಿಣಾಮಕಾರಿಯಾಗಿ ನಡೆಯಿತು. ಮುಂದಿನ ಕಾರ್ಯ ಸಾಧನೆಯನ್ನು ಕಮ್ಮಟಕ್ಕೆ ಭಾಗವಹಿಸಿದ ಶಿಬಿರಾರ್ಥಿಗಳು ಮುಂದುವರಿಸಿಕೊಂಡು ಹೋಗಬೇಕು. ಮುಂದಿನ ದಿನಮಾನಗಳಲ್ಲಿ ಯುವಕರಿಗೆ ಇಂತಹ ಶಿಬಿರವನ್ನು ನೆರವೇರಿಸುತ್ತೇವೆ ಎಂದರು.
ಗೃಹಪ್ರವೇಶ, ಕಲ್ಯಾಣ ಮಹೋತ್ಸವ, ಲಿಂಗಾಧಾರಣೆ, ಶವಸಂಸ್ಕಾರದ ವಚನಾಧಾರಿತ ನಿಜಾಚರಣೆಯ ವಿಷಯ ಮಂಡನೆ ಹಾಗೂ ಪ್ರಾತ್ಯಕ್ಷಿಕೆಯನ್ನು ತುಂಬಾ ಪರಿಣಾಮಕಾರಿಯಾಗಿ ಪಿ ರುದ್ರಪ್ಪ, ಎಸ್ ಎನ್ ಅರಬಾವಿ, ಎಂ ಎಂ ಸಂಗೊಳ್ಳಿ, ಎಂ ಎಂ ಮಡಿವಾಳರ ನೆರವೇರಿಸಿದರು. ಶಿವಮೂರ್ತಯ್ಯ ಸ್ವಾಗತಿಸಿದರೆ ವಿಶ್ವೇಶ್ವರಯ್ಯ ನಿರೂಪಿಸಿ ವಂದಿಸಿದರು. ನಾಗರಾಜ್ ಹೆಚ್ ಎಸ್ ಹಾಗೂ ಶರಣ ನಿಜಾಚರಣೆಗೆ ಸಂಬಂಧಪಟ್ಟ ವಚನಗಳನ್ನು ಹಾಡಿದರು. ಕಮ್ಮಟಕ್ಕೆ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ 2೦೦ ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.