ವಿವಿ ಸಾಗರ ಜಲಾಶಯ ಭರ್ತಿಯತ್ತ!
– ಹಿನ್ನೀರಿನ ಕೆಲ ಗ್ರಾಮಗಳಿಗೆ ನೀರು ನುಗ್ಗುವ ಭೀತಿ
– 89 ವರ್ಷಗಳ ಬಳಿಕ ತುಂಬುತ್ತಿರುವ ನೀರು
NAMMUR EXPRESS NEWS
ಹೊಸದುರ್ಗ: ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ ಪ್ರಸ್ತುತ ವರ್ಷದಲ್ಲಿ ತುಂಬುವ ಹಂತಕ್ಕೆ ಬಂದಿದೆ. ಡ್ಯಾಂ 3ನೇ ಬಾರಿಗೆ ಕೋಡಿಬೀಳುವ ಎಲ್ಲಾ ಸಾಧ್ಯತೆಗಳಿದ್ದು, ಜಲಾಶಯದ ಹಿನ್ನೀರಿನ ಹೊಸದುರ್ಗ ತಾಲೂಕಿನ ಕೆಲ ಗ್ರಾಮಗಳ ಜನರಲ್ಲಿ ಈಗಾಗಲೇ ಆತಂಕ ಶುರುವಾಗಿದೆ. ಡ್ಯಾಮ್ ತುಂಬಿದಾಗ ಈ ಜನರ ಗೋಳು ಕೇಳುವವರ್ಯಾರು” 2022.ಸೆಪ್ಟೆಂಬರ್ ತಿಂಗಳಿನಲ್ಲಿ ಜಲಾಶಯ ಭರ್ತಿಯಾಗಿ 2 ನೇ ಬಾರಿಗೆ ಕೋಡಿ ಬಿದ್ದು ಮೈದುಂಬಿ ನಿರಂತರವಾಗಿ ಎರಡು ತಿಂಗಳುಗಳ ಕಾಲ ಹರಿದಿತ್ತು. 89 ವರ್ಷಗಳ ಬಳಿಕ ಡ್ಯಾಮ್ ಕೋಡಿಬಿದ್ದ ಸಂತೋಷ ಒಂದು ಕಡೆಯಾದರೆ, ಹಿನ್ನೀರಿನ ಗ್ರಾಮಗಳ ಜನರು ಸಂಕಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಡದಕೆರೆ ಹೋಬಳಿಯ ಪೂಜಾರಹಟ್ಟಿ ಗ್ರಾಮಕ್ಕೆ ನೀರು ನುಗ್ಗಿ ಬಹಳಷ್ಟು ಮನೆಗಳು ಜಲಾಶಯದ ಹಿನ್ನೀರಿನಲ್ಲಿ ಮುಳುಗಿ, ಜನರು ಮನೆ ತೊರೆದು ಊರ ಹೊರೆಗೆ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದರು. ಇನ್ನೂ ಮತ್ತೊಡು ಹೋಬಳಿಯ ನಾಗತಿಹಳ್ಳಿ, ಹಿಂಡೇ ದೇವರಹಟ್ಟಿ, ಅರೇಹಳ್ಳಿ ಮತ್ತು ಇನ್ನಿತರ ಗ್ರಾಮಗಳಲ್ಲಿ ತೇವಾಂಶದಿಂದಾಗಿ ಬಹಳಷ್ಟು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದವು. ಇದರಿಂದಾಗಿ ಗ್ರಾಮಗಳ ಜನರು ಜೀವ ಹಿಡಿದುಕೊಂಡೆ ಜೀವನ ದೂಡುವಂತಹ ದುಸ್ಥಿತಿ ನಿರ್ಮಾಣವಾಗಿತ್ತು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು, ಚಿಕ್ಕಮಗಳೂರು ಜಿಲ್ಲೆಯ ಹಲೆವೆಡೆ ಈ ವರ್ಷವೂ ಕೂಡ ಆಗಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯದಲ್ಲಿನ ನೀರಿನ ಮಟ್ಟ 123 ಅಡಿಗೆ ಬಂದು ತಲುಪಿದೆ. ಈಗಾಗಲೇ, ನೀರು ಕೋಡಿ ಬಾಯಿಗೆ ಬಂದು ನಿಂತಿದ್ದು, ಇನ್ನೂ 7 ಅಡಿಗೆ ನೀರು ಸಂಗ್ರಹವಾದರೆ ಜಲಾಶಯ ಕೋಡಿ ಬೀಳುವ ಸಾಧ್ಯತೆ ದಟ್ಟವಾಗಿದೆ. ಕೆಲ್ಲೋಡು ವೇದಾವತಿ ನದಿಯ ಮೂಲಕ ನೀರು ಹರಿದು ಬರುತ್ತಿದ್ದು, ಇನ್ನೇನು 2 ತಿಂಗಳ ಒಳಗಾಗಿಯೇ ಜಲಾಶಯ ಕೋಡಿ ಬೀಳುತ್ತದೆ. ಕಳೆದ ಬಾರಿ ಹಿನ್ನೀರಿನ ಸಮೀಪದ ಗ್ರಾಮಗಳ ಜನರು ಬಹಳಷ್ಟು ತೊಂದರೆ ಅನುಭವಿಸಿದ್ದರು. ಈ ಬಾರಿ ಯಾವುದೇ ರೀತಿ ತೊಂದರೆ ಆಗದಂತೆ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಮುಂಜಾಗ್ರತ ಕ್ರಮವಹಿಸಬೇಕಾಗಿದೆ ಎಂದು ಸುತ್ತಮುತ್ತದ ಗ್ರಾಮಗಳ ಜನರ ಒತ್ತಾಯವಾಗಿದೆ.
ಅಧಿಕಾರಿಗಳ ಭೇಟಿ
ಈಗಾಗಲೇ, ವಿವಿಸಾಗರ ಜಲಾಶಯದ ಸಮೀಪವಿರುವ ಹಿನ್ನೀರಿನ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಮತ್ತು ಅಲ್ಲಿರುವ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ಜಲಾಶಯ ಕೊಡಿ ಬಿದ್ದರು, ಜನರಿಗೆ ಯಾವುದೇ ರೀತಿಯಾಗಿ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ರಾಜಸ್ವ ನಿರೀಕ್ಷಕರು ಮತ್ತು ಗ್ರಾಮಾಡಳಿತ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಜಲಾಶಯ ಭರ್ತಿಯಾಗುತ್ತಿರುವುದರಿಂದ ಹಿನ್ನೀರಿನ ಯಾವುದೇ ಗ್ರಾಮಗಳಿಗೆ ತೊಂದರೆಯಾಗದಂತೆ ನಿಗವಹಿಸಲಾಗಿದೆ ಎಂದು ತಹಸೀಲ್ದಾರ್ ತಿರುಪತಿ ಪಾಟೀಲ್ ಹೇಳಿದ್ದಾರೆ.
ತಾತ್ಕಾಲಿಕ ಮನೆ ನಿರ್ಮಾಣ
ಊರಿನ ಸಮೀಪಕ್ಕೆ ಜಲಾಶಯದ ನೀರು ಬಂದಿದ್ದು, ಕೆಲ್ಲೋಡು ಬ್ಯಾರೇಜ್ ಹಾಗೂ ಇತರ ಕೆರೆಗಳಿಂದ ಹೀಗೆಯೇ ನೀರು ಹರಿದು ಬಂದರೆ, ಒಂದು ವಾರದ ಒಳಗಾಗಿಯೇ ಗ್ರಾಮಕ್ಕೆ ನೀರು ಬರಲಿವೆ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡು ತೆರಳಿದ್ದಾರೆ. ಗ್ರಾಮದ ಒಳಗಡೆ ನೀರು ನುಗ್ಗಿ ಸಂಕಟಪಟ್ಟ ಗ್ರಾಮದ ಜನರು ಈಗಾಗಲೇ, ಮುನ್ನೆಚ್ಚರಿಕೆಯಿಂದ ಗ್ರಾಮದ ಹೊರಗಡೆ ಗುಡಿಸಲುಗಳನ್ನು ಮತ್ತು ತಾತ್ಕಾಲಿಕವಾಗಿ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂದು ದಾಸಪ್ಪ, ಪೂಜಾರಹಟ್ಟಿ ಗ್ರಾಮದ ನಿವಾಸಿ ಹೇಳಿದ್ದಾರೆ.
ಚಿತ್ರಗಳು : ಕಳೆದ ವರ್ಷ ವಿವಿ ಸಾಗರ ಡ್ಯಾಮ್ ಭರ್ತಿಯಾದ ಸಂದರ್ಭದಲ್ಲಿ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಪೂಜಾರಹಟ್ಟಿ ಗ್ರಾಮದ ಮನೆಗಳು.