ಹೋಂ ಮಿನಿಸ್ಟರ್ ವಿರುದ್ಧ ಅವಹೇಳನಕಾರಿ ಹೇಳಿಕೆ, ಸಂತೋಷ್ ಕೋಟ್ಯಾನ್ ಬಂಧನ
* ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್
* ಠಾಣೆ ಮುಂದೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಕೋರ್ಟ್ಗೆ ಸಂತೋಷ್
NAMMMUR EXPRESS NEWS
ಚಿಕ್ಕಮಗಳೂರು: ರಾಜ್ಯ ಸರ್ಕಾರದ ವಿರುದ್ಧ ಚಿಕ್ಕಮಗಳೂರು ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಗೃಹಸಚಿವ ಡಾ. ಜಿ ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ಸೌಲಭ್ಯವನ್ನು ಖಂಡಿಸಿ ಮಂಗಳವಾರ ನಡೆದಿದ್ದ ಬಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಸಂತೋಷ್ ಕೊಟ್ಯಾನ್ ಮಾತನಾಡಿದ್ದರು. ಈ ವೇಳೆ ಅವರು ಗೃಹಸಚಿವ ಡಾ. ಪರಮೇಶ್ವರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾಗಿ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದರು.
ಕಾಂಗ್ರೆಸ್ ಕಾರ್ಯಕರ್ತರ ದೂರಿನ ಆಧಾರದಲ್ಲಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಪೊಲೀಸರು ಸಂತೋಷ್ ಕೊಟ್ಯಾನ್ ಅವರನ್ನು ಬಂಧಿಸಿ, ಹೌಸಿಂಗ್ ಬೋರ್ಡ್ ನ್ಯಾಯಧೀಶರ ನಿವಾಸಕ್ಕೆ ಹಾಜರುಪಡಿಸಿದರು. ನಂತರ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದರು.
* ಮಾರ್ಕೆಟ್ ರಸ್ತೆ ಉದ್ವಿಗ್ನ ಪರಿಸ್ಥಿತಿ
ಬಂಧನದ ವೇಳೆ ಚಿಕ್ಕಮಗಳೂರು ನಗರದಲ್ಲಿರುವ ಮಾರ್ಕೆಟ್ ರಸ್ತೆಯಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ಕಂಡುಬಂದಿತು. ಸಂತೋಷ್ ಕೋಟ್ಯಾನ್ ಅವರನ್ನು ಪೊಲೀಸ್ ಜೀಪ್ಗೆ ಕರೆದೊಯ್ಯುವ ವೇಳೆ ಬಿಜೆಪಿ ಕಾರ್ಯಕರ್ತರು ಅಡ್ಡಬಂದಿದ್ದು, ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ನೂಕಾಟ ತಳ್ಳಾಟ ನಡೆಯಿತು. ಸಂತೋಷ್ ಬಂಧನ ಖಂಡಿಸಿ ನಗರ ಠಾಣೆ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಠಾಣೆ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
* ಸಂತೋಷ್ ಕೋಟ್ಯಾನ್ ಭಾಷಣದಲ್ಲಿ ಹೇಳಿದ್ದೇನು ?
ಪ್ರತಿಭಟನೆಯಲ್ಲಿ ಮಾತನಾಡಿದ ಸಂತೋಷ್ ಕೋಟ್ಯಾನ್ ಅವರು, ‘ರಾಜ್ಯದಲ್ಲಿ ಏನು ನಡೆದರೂ ಗೃಹಸಚಿವರಿಗೆ ಗೊತ್ತಿಲ್ಲ, ಗೊತ್ತಿಲ್ಲ. ಇದಕ್ಕಾಗಿಯೇ ಪರಮೇಶ್ವರ್ ಮಗ ಮಗಳಾಗಿ ಪರಿವರ್ತನೆಯಾಗಿದ್ದಾರೆ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು.
ಪ್ರಸ್ತುತ ಸಂತೋಷ್ ಕೋಟ್ಯಾನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಚಿಕ್ಕಮಗಳೂರು ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.








