ಕರಾವಳಿ ಟಾಪ್ ನ್ಯೂಸ್
* ಉಡುಪಿ: ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಶಿಕ್ಷಕ
* ಕುಂದಾಪುರ: ತಾಯಿಗೆ ಚಿಕಿತ್ಸೆ ಕೊಡಿಸಿಲ್ಲವೆಂದು ಮಗಳ ಮೇಲೆ ಹಲ್ಲೆ
* ಬಂಟ್ವಾಳ: ಕಾರು, ದ್ವಿಚಕ್ರ ವಾಹನಗಳ ನಡುವೆ ಅಪಘಾತ; ವಿದ್ಯಾರ್ಥಿನಿ ಸಾವು
* ಸುಳ್ಯ: ಅಕ್ರಮವಾಗಿ ಮರದ ದಿಮ್ಮಿಗಳ ಸಾಗಾಟ
* ಪುತ್ತೂರು: ಮಾದಕ ವಸ್ತು ಮಾರಾಟದ ವಿರುದ್ಧ ಪೊಲೀಸರ ಕಾರ್ಯಾಚರಣೆ
* ಯಲ್ಲಾಪುರ: ದರೋಡೆ ವಿಫಲವಾಗಿ, ಬ್ಯಾಂಕ್ ಗೆ ಬೆಂಕಿ ಹಚ್ಚಿದ ಆರೋಪಿಗಳು ಕೊನೆಗೂ ಸೆರೆ
* ಭಟ್ಕಳ: ಗೃಹ ಬಳಕೆ ವಸ್ತುಗಳ ಮಾರಾಟ ಹೆಸರಿನಲ್ಲಿ ವಂಚಿಸಿದ ಆರೋಪಿಗಳ ಬಂಧನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಉಡುಪಿ: ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ಶಿಕ್ಷಕ
ಉಡುಪಿ: ಶಾಲೆಗೆ ಎಂದಿನಂತೆ ಕರ್ತವ್ಯಕ್ಕೆ ತೆರಳಿದ ಸಂದರ್ಭದಲ್ಲಿ, ದೈಹಿಕ ಶಿಕ್ಷಕರೊಬ್ಬರು ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ ಘಟನೆ, ಮಲ್ಪೆಯಲ್ಲಿ ನಡೆದಿದೆ. ಗಣೇಶ್ ದೇವಾಡಿಗ ಅವರು ಮಲ್ಪೆಯ ನಾರಾಯಣಗುರು ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದು, ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸಹೋದ್ಯೋಗಿಗಳು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು ಎನ್ನುವ ಸಂಗತಿ ತಿಳಿದುಬಂದಿದೆ. ಉಮೇಶ್ ದೇವಾಡಿಗ ಅವರು ಕೇವಲ ದೈಹಿಕ ಶಿಕ್ಷಕರಾಗಿ ಮಾತ್ರವಲ್ಲದೆ ಅಲೆವೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ ಗೆಳೆಯರ ಬಳಗ, ಭಜನಾ ಮಂಡಳಿ ಮತ್ತು ಗದ್ದಿಗೆ ಅಮ್ಮನವರ ಸಮಿತಿಯಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ.
* ಕುಂದಾಪುರ : ತಾಯಿಗೆ ಚಿಕಿತ್ಸೆ ಕೊಡಿಸಿಲ್ಲವೆಂದು ಮಗಳ ಮೇಲೆ ಹಲ್ಲೆ
ಕುಂದಾಪುರ: ಗಿರಿಜಾ ಎನ್ನುವ ಮಹಿಳೆಯು ಕೈ ಮುರಿದುಕೊಂಡಿದ್ದು, ಆಕೆಯ ಮಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಿಲ್ಲ ಎನ್ನುವ ಕಾರಣಕ್ಕಾಗಿ, ಆಕೆಯ ಮೇಲೆ ತಾಯಿಯ ಸಂಬಂಧಿಕರು ಹಲ್ಲೆ ನಡೆಸಿದ ಘಟನೆ, ಕೊಡ್ಲಾಡಿ ಗ್ರಾಮದ ಹೊಲದಮನೆಯಲ್ಲಿ ನಡೆದಿದೆ. ಮಗಳು ತನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ ಎನ್ನುವ ಕಾರಣಕ್ಕಾಗಿ ಗಿರಿಜಾ ಅವರು ತಮ್ಮ ಸಂಬಂಧಿ ರಾಮ ಮೊಗವೀರ ಅವರ ಹತ್ತಿರ ಕೇಳಿಕೊಂಡರು. ಆಗ ರಾಮ ಮೊಗವೀರ ಮತ್ತು ಅವರ ಮಗನಾದ ಭರತ್ ಅವರು ಗಿರಿಜಾ ಅವರ ಮಗಳಾದ ಇಂದಿರಾ ಅವರಿಗೆ ತಿಳಿಸಿದ್ದಾರೆ. ಆಗ ಇಂದಿರಾ ಮತ್ತು ಅವರ ಪತಿ ಹಾಗೂ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆದು, ರಾಮ ಮೊಗವೀರ ಹಾಗೂ ಭರತ್ ಇಂದಿರಾ ಮತ್ತವರ ಪತಿ ಸತೀಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿರಾ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬಂಟ್ವಾಳ: ಕಾರು, ದ್ವಿಚಕ್ರ ವಾಹನಗಳ ನಡುವೆ ಅಪಘಾತ; ವಿದ್ಯಾರ್ಥಿನಿ ಸಾವು
ಬಂಟ್ವಾಳ: ಕಾರು ಮತ್ತು ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮವಾಗಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ, ಕಾವಳಕಟ್ಟೆ ಎನ್ನುವಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾವಳಕಟ್ಟೆಯಿಂದ ಎನ್ ಸಿ ರಸ್ತೆಗೆ ತೆರಳುವಾಗ ತಿರುವೊಂದು ಎದುರಾಗಲಿದ್ದು, ಅದು ತುಂಬಾ ಅಪಾಯಕಾರಿಯಾಗಿರುವುದೇ ಈ ಅವಘಡಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇಬ್ಬರು ವಿದ್ಯಾರ್ಥಿನಿಯರು ಹೊಂಡಾ ಆಕ್ಟಿವಾದಲ್ಲಿ ಬೆಳ್ತಂಗಡಿಯಿಂದ ಕಾಲೇಜಿಗೆ ತೆರಳುತ್ತಿದ್ದ ಸಮಯದಲ್ಲಿ ವ್ಯಾಗನಾರ್ ಕಾರೊಂದು ಬಂದಿದ್ದು, ಪರಸ್ಪರ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸ್ಕೂಟಿ ಓಡಿಸುತ್ತಿದ್ದ ಅನನ್ಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮತ್ತೋರ್ವ ವಿದ್ಯಾರ್ಥಿನಿ ಸಹ ಸವಾರೆ ಪೃಥ್ವಿ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಅಪಘಾತದ ಬಳಿಕ ಸ್ಥಳಕ್ಕೆ ಆಗಮಿಸಿದ ಪುಂಜಾಲಕಟ್ಟೆ ಎಸ್ ಐ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
* ಸುಳ್ಯ: ಅಕ್ರಮವಾಗಿ ಮರದ ದಿಮ್ಮಿಗಳ ಸಾಗಾಟ
ಸುಳ್ಯ: ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಎರಡು ಪ್ರತ್ಯೇಕ ಕಡೆಗಳಲ್ಲಿ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ ಘಟನೆ ನಡೆದಿದೆ. ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿ ಸಾಗುವಾನಿ ಮರದ ದಿಮ್ಮಿ ಸಾಗಿಸುತ್ತಿದ್ದಾಗ, ಅರಣ್ಯಾಧಿಕಾರಿಗಳು ಒಂದು ಮರದ ದಿಮ್ಮಿಯನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದೇ ರೀತಿಯ ಮತ್ತೊಂದು ಘಟನೆ ಪಂಜ ವ್ಯಾಪ್ತಿಯ ಕಲ್ಲಡ್ಕ ಗ್ರಾಮದ ಓಟೆಕಜೆ ಎನ್ನುವಲ್ಲಿ ನಡೆದಿದ್ದು, ಎರಡು ಕಿರಲ್ ಬೋಗಿ ಜಾತಿಯ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವೇಳೆ, ಜಾಲ್ಸೂರು ಗ್ರಾಮದ ಸೋಣಂಗೇರಿ ಬಳಿ ವಾಹನ ಸಮೇತ ವಶಪಡಿಸಿಕೊಳ್ಳಲಾಯಿತು ಎನ್ನುವ ಮಾಹಿತಿಯನ್ನು ಪಂಜ ವಲಯದ ಆರ್ ಎಫ್ ಒ ಸಂಧ್ಯಾ ಅವರು ನೀಡಿದ್ದಾರೆ. ಈ ಎರಡೂ ಕಾರ್ಯಾಚರಣೆಗಳಲ್ಲಿ ಸುಳ್ಯ ಮತ್ತು ಪಂಜದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ.
* ಪುತ್ತೂರು: ಮಾದಕ ವಸ್ತು ಮಾರಾಟದ ವಿರುದ್ಧ ಪೊಲೀಸರ ಕಾರ್ಯಾಚರಣೆ
ಪುತ್ತೂರು: ಕರಾವಳಿ ಭಾಗದಲ್ಲಿ ಮಾದಕ ವಸ್ತುಗಳ ಮಾರಾಟ ದಂಧೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಅದರ ವಿರುದ್ಧ ಪೊಲೀಸರ ಕಾರ್ಯಾಚರಣೆ ತೀವ್ರವಾಗಿದ್ದು, ಇದಕ್ಕೆ ನಿದರ್ಶನ ಎಂಬಂತೆ ಪುತ್ತೂರಿನ ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ಎಂಡಿಎಂಎ ಅನ್ನು ಇರಿಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಕಬಕ ವಿದ್ಯಾಪುರ ನಿವಾಸಿ ಮುಸ್ತಫ ಎಂದು ಗುರುತಿಸಲಾಗಿದೆ. ಆರೋಪಿಯ ವಿಚಾರಣೆ ನಡೆಸಿದಾಗ ಈಗಾಗಲೇ ಆತನ ವಿರುದ್ಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎನ್ನುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
* ಯಲ್ಲಾಪುರ: ದರೋಡೆ ವಿಫಲವಾಗಿ ಬ್ಯಾಂಕ್ ಗೆ ಬೆಂಕಿ ಹಚ್ಚಿದ ಆರೋಪಿಗಳು ಕೊನೆಗೂ ಸೆರೆ
ಯಲ್ಲಾಪುರ: ಬ್ಯಾಂಕ್ ಗೆ ದರೋಡೆಗೆ ಬಂದು, ಅದರಲ್ಲಿ ವಿಫಲತೆ ಉಂಟಾದ್ದರಿಂದ ಬ್ಯಾಂಕ್ ಗೆ ಬೆಂಕಿ ಹಚ್ಚಿ ತೆರಳಿದ್ದ ಆರೋಪಿಗಳು ಕೊನೆಗೂ ಪೊಲೀಸರ ಅತಿಥಿಯಾಗಿದ್ದಾರೆ. ಸಿಸಿಟಿವಿಯನ್ನು ಆಧರಿಸಿ, ಸುಳಿವನ್ನು ಪಡೆದುಕೊಂಡ ಪೊಲೀಸರು, ಆರೋಪಿಗಳನ್ನು ಬೆಳಗಾವಿಯ ಖಾಸಭಾಗ ಚೌಕದ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಗುಲ್ವಾರ್ ಅಬ್ದುಲ್ ರೆಹಮಾನ್ ಮುಕಾಂದಾರ ಮತ್ತು ಬೈಲಹೊಂಗಲದ ಇಮ್ರಾನ್ ಕುತುಬುದ್ದಿನ್ ತಿಗಡಿ ಎಂದು ಗುರುತಿಸಲಾಗಿದೆ. ಬ್ಯಾಂಕ್ ದರೋಡೆ ಮಾಡಲು ಸಾಧ್ಯವಾಗದಿದ್ದರಿಂದ ಕೋಪಗೊಂಡು ಈ ರೀತಿ ಮಾಡಿದೆವು ಎಂದು ಆರೋಪಿಗಳು ವಿಚಾರಣೆಯ ಸಂದರ್ಭದಲ್ಲಿ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
* ಭಟ್ಕಳ: ಗೃಹಬಳಕೆ ವಸ್ತುಗಳ ಮಾರಾಟ ಹೆಸರಿನಲ್ಲಿ ವಂಚಿಸಿದ ಆರೋಪಿಗಳ ಬಂಧನ
* ಭಟ್ಕಳ: ಕಳೆದ ಕೆಲವು ದಿನಗಳ ಹಿಂದೆ ಗೃಹಬಳಕೆ ವಸ್ತುಗಳನ್ನು ಅರ್ಧ ಬೆಲೆಗೆ ನೀಡುವುದಾಗಿ ನಂಬಿಸಿ, ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ, ಪರಾರಿಯಾಗಿದ್ದ ಗ್ಯಾಂಗ್ ನ ಮೂವರು ಆರೋಪಿಗಳನ್ನು ಪೊಲೀಸರು ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ ಘಟನೆ, ಮಂಗಳವಾರದಂದು ನಡೆದಿದೆ. ಆರೋಪಿಗಳನ್ನು ಎಂ. ಗಣೇಶ್(ಮತಯ್ಯ) ತ್ಯಾಗರಾಜನ್ (ಶಿವಕಡಸಂ)ಮತ್ತು ಮೈನಾದನ್ (ಕೃಪಯ್ಯ) ಎಂದು ಗುರುತಿಸಲಾಗಿದೆ. ಭಟ್ಕಳಕ್ಕೆ ಬಿಗಿ ಭದ್ರತೆಯಲ್ಲಿ ಆರೋಪಿಗಳನ್ನು ಕರೆತಂದ ಬಳಿಕ, ಗ್ಲೋಬಲ್ ಎಂಟರ್ಪ್ರೈಸಸ್ ಮಳಿಗೆಯನ್ನು ಪರಿಶೀಲಿಸಿ ಮಹತ್ವದ ದಾಖಲೆಗಳು, ಸಾಕ್ಷ್ಯಗಳನ್ನು ಸಂಗ್ರಹಿಸಿ, ಅವರು ನಡೆಸುತ್ತಿದ್ದ ಅಕ್ರಮ ಚಟುವಟಿಕೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು. ಜೊತೆಗೆ ಆರೋಪಿಗಳು ವಾಸವಾಗಿದ್ದ ಬಾಡಿಗೆ ಮನೆಯನ್ನು ಪರಿಶೀಲಿಸಿ, ಸುತ್ತಮುತ್ತಲಿನ ಜನರಿಂದ ಆರೋಪಿಗಳ ವರ್ತನೆಯ ಕುರಿತು ವಿವರಣೆಗಳನ್ನು ಪಡೆದುಕೊಂಡರು ಎನ್ನಲಾಗಿದೆ. ಡಿವೈಎಸ್ಪಿ ಮಹೇಶ್ ಅವರ ನೇತೃತ್ವದಲ್ಲಿ ಸಿಪಿಐ ದಿವಾಕರ್, ಪಿಎಸ್ಐ ನವೀನ್, ಪಿಎಸ್ಐ ತಂಪ ಮುಗೇರ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯನ್ನು ನಡೆಸಿದ್ದು, ಆರೋಪಿಗಳ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿ, ಖಾತೆಯಲ್ಲಿನ ಹಣ ನಡೆದಿರುವ ವ್ಯವಹಾರ ಮತ್ತು ಅನುಮಾನಾಸ್ಪದವಾಗಿ ನಡೆದ ವರ್ಗಾವಣೆ ಕುರಿತು ಗಂಭೀರ ಪರಿಶೀಲನೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಲಭಿಸಿದೆ.







