ವೇಷ ಕಳಚುವ ಮುನ್ನವೇ ಮಹಿಷಾಸುರ ಪಾತ್ರಧಾರಿ ಸಾವು!
– ಯಕ್ಷಗಾನ ಕಲಾವಿದ ಈಶ್ವರ ಗೌಡ ಹೃದಯಾಘಾತಕ್ಕೆ ಬಲಿ
– ಶೃಂಗೇರಿ ಮೂಲದ ಮಂದಾರ್ತಿ ಎರಡನೇ ಮೇಳದ ಕಲಾವಿದ
– ಕುಂದಾಪುರದಲ್ಲಿ ಯಕ್ಷಗಾನ ಆಗುವಾಗ ಘಟನೆ
ಶೃಂಗೇರಿ: ವೇಷ ಕಳಚುವ ಮುನ್ನವೇ ಮಹಿಷಾಸುರ ಪಾತ್ರಧಾರಿ,
ಯಕ್ಷಗಾನ ಕಲಾವಿದ ಈಶ್ವರ ಗೌಡ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮಂದಾರ್ತಿ ಮೇಳದ ಬಣ್ಣದ ವೇಷಧಾರಿ ಈಶ್ವರ ಗೌಡ ನೆಮ್ಮಾರ್ ಮಹಿಷಾಸುರ ಪಾತ್ರ ನಿರ್ವಹಿಸಿದ ಬಳಿಕ ಬಣ್ಣದ ಮನೆಯಲ್ಲೇ ಹೃದಯಾಘಾತದಿಂದ ಕುಸಿದು ನಿಧನ ಹೊಂದಿದ ಘಟನೆ ಬುಧವಾರ( ನ19) ಮಧ್ಯ ರಾತ್ರಿ ಕುಂದಾಪುರದ ಸೌಡ ಸಮೀಪ ನಡೆದಿದೆ.
ಮಂದಾರ್ತಿ ಎರಡನೇ ಮೇಳದ ಕಲಾವಿದ ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿಯಾಗಿದ್ದ ಈಶ್ವರ ಗೌಡ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಬದುಕಿಗೆ ಅಂತಿಮ ತೆರೆ ಎಳೆದಿದ್ದಾರೆ.
ಮಂದಾರ್ತಿ 2ನೇ ಮೇಳದ ಕಲಾವಿದ ಬುಧವಾರ ರಾತ್ರಿ ಮಹಿಷಾಸುರ ಪಾತ್ರ ಕೊನೆಯಾಗುತ್ತಿದ್ದಂತೆ ಸಂಪೂರ್ಣ ವೇಷ ಕಳಚುವ ಮುನ್ನ ಹೃದಯಾಘಾತದಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿದ್ದಾರೆ. ಇವರ ಅಪ್ಪ ದೇವಿ ಮಹಾತ್ಮೆಯ ಇದೇ ಪ್ರಸಂಗದಲ್ಲಿ ರಕ್ತಬೀಜ ಪಾತ್ರಧಾರಿ. ರಂಗಸ್ಥಳಕ್ಕೆ ಹೋಗುವಾಗ ಮಾತ್ರ ವಿಶೇಷವಾಗಿ ಅಪ್ಪನಿಂದ ಆಶೀರ್ವಾದ ಪಡೆದು ಹೋಗಿದ್ದರಂತೆ!. ಕಟೀಲು ಮೇಳದ ಮಹಿಷಾಸುರ ಪಾತ್ರಧಾರಿ ಇದೇ ರೀತಿ ರಂಗದಲ್ಲಿಯೇ ಬದುಕನ್ನು ಕೊನೆಗೊಳಿಸಿದ್ದರು.








