ತಾಪಂ, ಜಿಪಂ ಚುನಾವಣೆಗೆ ಸರ್ಕಾರ ಸಜ್ಜು
– ಕೋರ್ಟ್ ಹೇಳಿದ ತಕ್ಷಣ ಚುನಾವಣೆ ಮಾಡಲು ರೆಡಿ: ಸಿಎಂ ಘೋಷಣೆ
– ಸರ್ಕಾರದ ಜಾಗದಲ್ಲಿ ಯಾವುದೇ ಸಂಘಟನೆಗೆ ಅವಕಾಶ ಇಲ್ಲ
NAMMUR EXPRESS NEWS
ಹಾಸನ: ಕಳೆದ ಮೂರ್ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ
ತಾಪಂ, ಜಿಪಂ ಇತ್ಯಾದಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹಾಸನಾಂಬೆ ದರ್ಶನಕ್ಕೆಂದು ಹಾಸನ ಹೆಲಿಪ್ಯಾಡ್ಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇದಕ್ಕಾಗಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.
ಜಿಪಂ-ತಾಪಂ ಚುನಾವಣೆ ವಿಚಾರ ಕೋರ್ಟ್ನಲ್ಲಿದೆ. ನಾವು ಚುನಾವಣೆ ಮಾಡಲು ತಯಾರಿದ್ದೇವೆ. ಕೋರ್ಟ್ ಹೇಳಿದ ತಕ್ಷಣ ಚುನಾವಣೆ ಮಾಡಲು ರೆಡಿ ಇದ್ದೇವೆ. ಬಾಕಿ ಉಳಿದಿರುವ ಎಲ್ಲ ಚುನಾವಣೆಗಳನ್ನೂ ಹಂತ ಹಂತವಾಗಿ ಮಾಡುತ್ತೇವೆ. ಪ್ರಜಾಪ್ರಭುತ್ವ ಗಟ್ಟಿ ಆಗೋದೇ ಚುನಾವಣೆಗಳಿಂದ ಎಂದು ಸಿಎಂ ಹೇಳಿದರು.
ಸಂಬಂಧ ಇಲ್ಲ: ಒಂದೆಡೆ ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಮೌನ ಮತ್ತೊಂದೆಡೆ ಡಿನ್ನರ್ ಕೂಟ ಆಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಡಿನ್ನರ್ ಪಾರ್ಟಿಗೂ, ರಾಜಕೀಯಕ್ಕೂ ಸಂಬಂಧ ಇಲ್ಲ.
ನಾವು ಸಚಿವರು, ಶಾಸಕರು ಆಗಾಗ ಸೇರುತ್ತೇವೆ. ಪಕ್ಷದ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಜೊತೆಯಲ್ಲಿ ಊಟ ಮಾಡಿ ಗೆಟ್ ಟುಗೆದರ್ ಮಾಡ್ತೇವೆ, ಅದಕ್ಕೂ ನಾಯಕತ್ವ ಬದಲಾವಣೆಗೂ, ರಾಜಕೀಯ ಚರ್ಚೆಗೂ ಯಾವುದೇ ಸಂಬಂಧ ಇಲ್ಲ, ರಾಜಕೀಯದ ಥಳುಕು ಹಾಕುವುದು ಬೇಡ ಎಂದು ಸ್ಪಷ್ಟಪಡಿಸಿದರು.
ನವೆಂಬರ್ ಕ್ರಾಂತಿ ಪ್ರಶ್ನೆಗೆ ವ್ಯಂಗ್ಯವಾಡಿದ ಸಿಎಂ, ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ, ಎಲ್ಲ ಮಾಧ್ಯಮಗಳ ಸೃಷ್ಟಿ ಎಂದು ಸಿಎಂ ನುಡಿದರು.
ಮುಂದಿನ ದಿನಗಳಲ್ಲಿ ಕ್ರಮ: ರಾಜ್ಯದಲ್ಲೂ ಆರ್ಎಸ್ಎಸ್
ಚಟುವಟಿಕೆಗಳಿಗೆ ಕಡಿವಾಣ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಬರೀ ಆರ್ಎಸ್ಎಸ್ ಅಲ್ಲ, ಬೇರೆ ಯಾವುದೇ ಸಂಘಟನೆ ಇರಲಿ, ಸರ್ಕಾರಿ ಶಾಲೆ ಅಥವಾ ಸಾರ್ವಜನಿಕ ಜಾಗದಲ್ಲಿ ಯಾವುದೇ ಚಟುವಟಿಕೆ ಮಾಡಬಾರದು, ಯಾರಿಗೂ ತೊಂದರೆ ಕೊಡಬಾರದು ಎಂಬುದು ನಮ್ಮ ಉದ್ದೇಶ. ಈಗಾಗಲೇ ತಮಿಳುನಾಡಿನಲ್ಲಿ ನಿಷೇಧ ಮಾಡಿದ್ದಾರೆ. ಅಲ್ಲಿಯ ವಿಧಾನ ನೋಡಿಕೊಂಡು, ವರದಿ ಪಡೆದು ರಾಜ್ಯದಲ್ಲೂ ಕ್ರಮ ಕೈಗೊಳ್ಳುತ್ತೇವೆ ಎಂದರು.
ವಿಪಕ್ಷಗಳ ವಿರುದ್ಧ ಗರಂ: ರಾಜ್ಯ ಸರ್ಕಾರದಿಂದ ಅನುದಾನ ತಾರತಮ್ಯ ವಿಚಾರವಾಗಿ ಕೆಲ ಜೆಡಿಎಸ್ ಶಾಸಕರು ಹೈಕೋರ್ಟ್ ಮೊರೆ ಹೋಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಗರಂ ಆದ ಸಿಎಂ, ಅವರು ಅಧಿಕಾರದಲ್ಲಿದ್ದಾಗ, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಎಷ್ಟು ಅನುದಾನ ಕೊಟ್ಟಿದ್ರು, ನಮ್ಮ ಶಾಸಕರಿಗೆ ಎಷ್ಟು ಅನುದಾನ ನೀಡಿದ್ರು ಎಂದು ಪ್ರಶ್ನಿಸಿದರು. ಎಷ್ಟು ಕೊಡಬೇಕೋ ಅಷ್ಟು ಕೊಟ್ಟಿದ್ದೇವೆ, ಆದರೂ ಕೊಟ್ಟೇ ಇಲ್ಲ ಎಂದು ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಅವರು ಏನೂ ಮಾಡದೆ, ಸುಳ್ಳು ಹೇಳಿ ಜನರ ದಾರಿತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಅವರು ಅಧಿಕಾರದಲ್ಲಿದ್ದಾಗ ಏನನ್ನೂ ಮಾಡಲಿಲ್ಲ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು. ಕೋರ್ಟ್ನಲ್ಲೇ ತೀರ್ಮಾನ ಆಗಲಿ ಬಿಡಿ ಎಂದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಾಚನೆ ಬಗ್ಗೆ
ಕೇಳಿದ ಪ್ರಶ್ನೆಗೆ ಚುನಾವಣೆ ಮುಗಿಯಲಿ ಆಮೇಲೆ ನೋಡೋಣ ಎನ್ನುವ ಮೂಲಕ ಸಂಪುಟ ಬದಲಾವಣೆ ಮಾಡುವ ಸುಳಿವು ನೀಡಿದರು. ಹೈಕಮಾಂಡ್ ಈಗ ಬಿಹಾರ ಚುನಾವಣೆ ಬಗ್ಗೆ ಗಮನ ಹರಿಸಿದೆ, ಆಮೆಲೆ ನೋಡೋಣ, ಹೈಕಮಾಂಡ್ ಹೇಳಿದಂತೆ ಮಾಡೋಣ ಎನ್ನುವ ಮೂಲಕ ಸಂಪುಟ ಬದಲಾವಣೆ ಖಚಿತ ಪಡಿಸಿದರು.







