ಹಾಸನ ಸಂಸದ ಪ್ರಜ್ವಲ್ ಜೀವಾವಧಿ ಜೈಲು!
– ಮನೆ ಕೆಲಸ ಮಾಡುವ ಮಹಿಳೆ ಮೇಲೆ ಅತ್ಯಾಚಾರ ಕೇಸ್
– ಪ್ರಜ್ವಲ್ ಒಂದು ವರ್ಷದಿಂದಲೂ ಜೈಲಿನಲ್ಲೇ ಇದ್ದಾರೆ!
NAMMUR EXPRESS NEWS
ಹಾಸನ: ಮನೆ ಕೆಲಸ ಮಾಡುವ ಮಹಿಳೆ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಹಾಸನದ ಕ್ಷೇತ್ರದ ಜೆಡಿಎಸ್ ಮಾಜಿ ಸಂಸದ ಹಾಗೂ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಕೋರ್ಟ್ ಶಿಕ್ಷೆ ವಿಧಿಸಿದೆ.
ಶುಕ್ರವಾರ ಈ ಪ್ರಕರಣದ ತೀರ್ಪು ಪ್ರಕಟಿಸಿದ್ದ ಕೋರ್ಟ್, ಅತ್ಯಾಚಾರ ಕೇಸ್ನಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಹೇಳಿತ್ತು. ಶನಿವಾರದಂದು ಶಿಕ್ಷೆಯ ಪ್ರಮಾಣದ ಅಂತಿಮ ತೀರ್ಪು ನೀಡುವುದಾಗಿ ಹೇಳಿತ್ತು. ಕೊನೆಗೂ ವಿಶೇಷ ಕೋರ್ಟ್ ಅಂತಿಮ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನೂ ಪ್ರಕಟಿಸಿದೆ.
ಮನೆ ಕೆಲಸದಾಕೆ ನೀಡಿದ್ದ ದೂರಿನ ಅನ್ವಯ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ತೀರ್ಪು ನೀಡಿದ್ದಾರೆ. ಇಂದು ಶಿಕ್ಷೆಯೂ ಪ್ರಕಟವಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಅವರು ವಾದ-ವಿವಾದಗಳನ್ನು ಆಲಿಸಿದ ನಂತರ ಶನಿವಾರ ಮಧ್ಯಾಹ್ನ ಶಿಕ್ಷೆಯ ಅಂತಿಮ ತೀರ್ಪನ್ನು ಪ್ರಕಟಿಸುವುದಾಗಿ ಹೇಳಿದ್ದರು.
ಸರ್ಕಾರದ ಪರ ವಾದ ಮಂಡಿಸಿದ ಬಿ.ಎನ್.ಜಗದೀಶ್, ʼಪ್ರಜ್ವಲ್ ಕೃತ್ಯವು ಅತ್ಯಂತ ಹೀನ, ಜೀವನೋಪಾಯಕ್ಕಾಗಿ ಕೆಲಸಕ್ಕೆ ಸೇರಿದ್ದ ಆ ಅನಕ್ಷರಸ್ಥ ಮಹಿಳೆಯ ಮೇಲೆ ಇಂತಹ ಘೋರ ಕೃತ್ಯ ಎಸಗಿದ್ದಾರೆ. ವಿಡಿಯೋಗಳು ಎಲ್ಲೆಡೆ ಹರಿದಾಡಿದ್ದರಿಂದ ಸಂತ್ರಸ್ತ ಮಹಿಳೆಯು ಮಾನಸಿಕ ಹಿಂಸೆ ಅನುಭವಿಸಿದ್ದಲ್ಲದೆ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ವಾದ ಮಾಡಿದ್ದರು. ಪ್ರಜ್ವಲ್ ಒಬ್ಬ ಚಟಗಾರ, ಅವರ ವಿರುದ್ಧ ಇನ್ನೂ ಮೂರು ಅತ್ಯಾಚಾರ ಕೇಸ್ಗಳು ಬಾಕಿ ಇವೆ ಎಂದೂ ಉಲ್ಲೇಖಿಸಿದ್ದರು.
ಪ್ರಜ್ವಲ್ ಪರ ವಾದ ಮಂಡಿಸಿದ್ದ ವಕೀಲರು, ಪ್ರಜ್ವಲ್ ಹಣಕ್ಕಾಗಿ ರಾಜಕೀಯಕ್ಕೆ ಬಂದಿದ್ದಲ್ಲ, ಜನಸೇವೆ ಅವರ ಉದ್ದೇಶ. ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಈ ವಿಡಿಯೋಗಳನ್ನು ದುರುದ್ದೇಶದಿಂದ ಹರಿಬಿಡಲಾಗಿತ್ತು. ಇದು ಅವರ ರಾಜಕೀಯ ಭವಿಷ್ಯ ಹಾಳು ಮಾಡಲು ನಡೆಸಿದ ಕುತಂತ್ರ ಎಂದು ಪ್ರತಿವಾದಿಸಿದ್ದರು. ಪ್ರಜ್ವಲ್ ಒಂದು ವರ್ಷದಿಂದಲೂ ಜೈಲಿನಲ್ಲೇ ಇದ್ದಾರೆ. ಈ ಕೇಸ್ನಿಂದ ಅವರು ಅಪಾರ ನಷ್ಟವನ್ನೂ ಅನುಭವಿಸಿದ್ದಾರೆ. ಹಾಗಾಗಿ ಅವರ ವೃತ್ತಿ ಜೀವನಕ್ಕೆ ಮಾರಕವಾಗುವ ಯಾವುದೇ ಶಿಕ್ಷೆ ಕೊಡಬಾರದು ಎಂದು ಕೋರಿದ್ದರು.
* ಪ್ರಜ್ವಲ್ ರೇವಣ್ಣ ಹೇಳಿದ್ದೇನು?
ಕೋರ್ಟ್ ಎದುರು ಮಾತನಾಡಿದ ಪ್ರಜ್ವಲ್ ರೇವಣ್ಣ, ನಾನು ಹಲವು ಮಹಿಳೆಯ ಜೊತೆ ಈ ಕೃತ್ಯ ನಡೆಸಿದ್ದೇನೆ ಎಂಬ ಆರೋಪ ಹೊರಿಸಿದ್ದಾರೆ. ಆದರೆ ನಾನು ಸಂಸದನಾಗಿದ್ದ ಸಮಯದಲ್ಲಿ ಯಾಕೆ ಯಾರೂ ಈ ಆರೋಪ ಮಾಡಲಿಲ್ಲ? ನಾನು ಅತ್ಯಾಚಾರ ಮಾಡಿದ್ದರೆ ಅವರು ಯಾಕೆ ಯಾರಿಗೂ ಹೇಳಲಿಲ್ಲ? ಲೋಕಸಭೆ ಚುನಾವಣೆ ಸಮಯದಲ್ಲೇ ಈ ಆರೋಪ ಯಾಕೆ ಮಾಡಿದರು? ಪೊಲೀಸರೇ ಈ ಕೆಲಸ ಮಾಡಿದ್ದಾರೆ ಎಂದು ಪ್ರಜ್ವಲ್ ಕಣ್ಣೀರಿಟ್ಟಿದ್ದರು. ನಾನು ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದ್ದೇನೆ. ಕಳೆದ ಆರು ತಿಂಗಳಿಂದ ತಂದೆ ತಾಯಿಯನ್ನು ನೋಡಿಲ್ಲ. ಕೋರ್ಟ್ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧ. ಆದೇಶಕ್ಕೆ ತಲೆ ಬಾಗುತ್ತೇನೆ. ಶಿಕ್ಷೆ ನೀಡುವಾಗ ನನ್ನ ಕುಟುಂಬವನ್ನು ಪರಿಗಣಿಸಿ ಎಂದು ಬೇಡಿಕೊಂಡಿದ್ದರು.
* ಪ್ರಜ್ವಲ್ಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
ಮಹಿಳೆ ಮೇಲೆ ಅತ್ಯಾಚಾರ ಮಾಡಿರುವ ಕೇಸ್ನಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ತೀರ್ಪು ನೀಡಿರುವ ಜನಪ್ರತಿನಿಧಿಗಳ ನ್ಯಾಯಾಲಯ, ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದರ ಜೊತೆ ಐದು ಲಕ್ಷ ದಂಡ ಕೂಡ ವಿಧಿಸಲಾಗಿದೆ. ಈ ಮೂಲಕ ಪ್ರಜ್ವಲ್ ರೇವಣ್ಣ ಕೇಸ್ನಲ್ಲಿ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಇದರಿಂದ ಪ್ರಜ್ವಲ್ ರಾಜಕೀಯ ಜೀವನ ಕೂಡ ಅಂತ್ಯ ಎಂದು ಹೇಳಲಾಗುತ್ತಿದೆ.







