ಟಾಪ್ 5 ನ್ಯೂಸ್ ಹಾಸನ -ಮೈಸೂರು
– ಹಾಸನ : ಪತ್ನಿಯ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ವ್ಯಕ್ತಿಯ ಕೊಲೆ
– ಮೈಸೂರು: ಪ್ರೀತಿಯ ಹುಚ್ಚಾಟಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಯುವಕ
– ಹಾಸನ : ಲಂಚ ಪಡೆದ ಆರೋಪದಿಂದ ಡಿಡಿಪಿಐ ಅಮಾನತು
– ಮೈಸೂರು: ಹಸುವಿನ ಕೆಚ್ಚಲು ಕತ್ತರಿಸಿರುವ ಕಹಿ ಘಟನೆ ಮಾಸುವ ಮುನ್ನವೇ ಮತ್ತೊಂದು ಗೋವಿನ ಮೇಲೆ ದಾಳಿ
– ಹಾಸನ : ಹಾಲಿನ ಬೂತ್ಗಳಲ್ಲಿ ತಂಬಾಕು ಉತ್ಪನ್ನ ಮಾರಾಟದಿಂದ ಪರವಾನಗಿ ರದ್ದು ಮಾಡಲು ಡಿ ಸಿ ಸೂಚನೆ
NAMMUR EXPRESS NEWS
ಹಾಸನ : ಪತ್ನಿಯ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಆಕೆಯ ಪತಿಯನ್ನು, ಪ್ರಿಯಕರ ಹಾಗೂ ತಂಡ ಒಂದು ಸಿನಿಮೀಯ ರೀತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೋಬಳಿಯ ಮರುವನಹಳ್ಳಿ-ಮಡಬ ರಸ್ತೆಯಲ್ಲಿ ನಡೆದಿದೆ. ಬಾಗೂರು ಹೋಬಳಿ ಕುಂಬಾರಹಳ್ಳಿ ಗ್ರಾಮದ ನಂಜುಂಡೇಗೌಡ ಉರ್ಫ್ ಲೋಕೇಶ್ (44) ಕೊಲೆಯಾದ ವ್ಯಕ್ತಿ. ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ನಂಜುಂಡೇಗೌಡ, ಮುನಿಸಿಕೊಂಡು ಒಂದು ವರ್ಷದ ಹಿಂದೆ ಮುಂಬೈಗೆ ತೆರಳಿದ್ದರು. ಕೆಲ ದಿನಗಳ ನಂತರ ಸಂಬಂಧಿಕರು ಊರಿಗೆ ಕರೆಸಿ, ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನು ಒಂದುಗೂಡಿಸಿದ್ದರು. ನಂತರ ಹಾಲಿನ ಕ್ಯಾನ್ ಸಾಗಿಸುವ ಕೆಲಸ ವಹಿಸಿಕೊಂಡಿದ್ದ ನಂಜುಂಡೇಗೌಡ, ಮಹೀಂದ್ರ ವಾಹನದಲ್ಲಿ ವ್ಯಾಪ್ತಿಯ ಗ್ರಾಮಗಳ ಹಾಲಿನ ಕ್ಯಾನ್ಗಳನ್ನು ಹಾಕಿಕೊಂಡು ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಮರುವನಹಳ್ಳಿ-ಮಡಬ ರಸ್ತೆಯಲ್ಲಿ ಮರದ ಪಟ್ಟಿಗೆ ಮೊಳೆ ಇಟ್ಟು ನಂಜುಂಡೇಗೌಡರ ವಾಹನವನ್ನು ದುಷ್ಕರ್ಮಿಗಳು ಪಂಕ್ಚರ್ ಮಾಡಿದ್ದಾರೆ. ಟಯರ್ ನೋಡಲು ವಾಹನದಿಂದ ಕೆಳಗಿಳಿದ ಕೂಡಲೇ ನಂಜುಂಡೇಗೌಡರ ಕಣ್ಣಿಗೆ ಖಾರದ ಪುಡಿ ಎರಚಿದ ಆರೋಪಿಗಳು, ಮಾರಕಾಸ್ತ್ರಗಳಿಂದ ತಲೆ, ಕುತ್ತಿಗೆ, ಕೈ ಹಾಗೂ ದೇಹದ ವಿವಿಧೆಡೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಮಾರಕಾಸ್ತ್ರಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಅದೇ ಗ್ರಾಮದ ಅರುಣ ಎಂಬಾತ ನಂಜುಂಡೇಗೌಡರ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಆತನೇ ತನ್ನ ಸಹಚರರ ಜೊತೆ ಸೇರಿ ಕೊಲೆ ಮಾಡಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಮೃತನ ಭಾವ ಸುರೇಶ್ ದೂರು ನೀಡಿದ್ದು, ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಮೈಸೂರು: ಪ್ರೀತಿಯ ಹುಚ್ಚಾಟಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಯುವಕ
ಮೈಸೂರು : ಪ್ರೇಯಸಿ ದೂರವಾಗಿದ್ದಕ್ಕೆ ಲವರ್ ಬಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡು ಪ್ರಾಣಬಿಟ್ಟಿದ್ದಾನೆ. ಈ ಘಟನೆ ಮೈಸೂರಿನ ಮೇಗಳಾಪುರದಲ್ಲಿ ನಡೆದಿದೆ. ಈತನ ಹೆಸರು ವಿನಯ್. ಮೈಸೂರು ತಾಲ್ಲೂಕು ಯಲಚೇನಹಳ್ಳಿ ಗ್ರಾಮದ ನಿವಾಸಿ. ವಿನಯ್ ಬಾಲ್ಯದಿಂದ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ. ಆಕೆಯೂ ವಿನಯ್ನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಲವ್ ಲೋಕದಲ್ಲಿ ಮುಳುಗಿ ಹೋಗಿದ್ರು. ಇಬ್ಬರ ಸುತ್ತಾಟ ಓಡಾಟ ಜೋರಾಗಿತ್ತು. ಆದ್ರೆ, ಹುಡುಗಿ ಕುಟುಂಬದವರು ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೂ ಸಹ ಇಬ್ಬರ ಪ್ರೀತಿ, ಪ್ರಣಯ ಮುಂದುವರಿದಿತ್ತು. ಅದು ಕುಟುಂಬಸ್ಥರಿಗೂ ಗೊತ್ತಾಗಿ ಅಂತಿಮವಾಗಿ ವಿನಯ್ನಿಂದ ದೂರವಾಗಿದ್ದಾಳೆ. ಇದರಿಂದ ಮನನೊಂದು ವಿನಯ್ ಪ್ರಾಣ ಕಳೆದುಕೊಂಡಿದ್ದಾನೆ. ಯುವತಿ ಪೋಷಕರು ಈತನ ಪ್ರೀತಿಗೆ ಅಡ್ಡಿಯಾದರೂ. ಅಷ್ಟೇ ಅಲ್ಲ ಯುವತಿಯನ್ನು ಬೇರೆ ಯುವಕನಿಗೆ ಕೊಟ್ಟು ಮದುವೆ ಮಾಡಿದ್ರು. ಯುವತಿ ಬೇರೆ ಹುಡುಗನ ಜೊತೆ ಮದುವೆಯಾದ ಮೇಲೆ ಎಲ್ಲಾ ಸರಿಯಾಗುತ್ತೇ ಅಂದುಕೊಂಡಿದ್ದರು. ಆದ್ರೆ ಆಗಿದ್ದೇ ಬೇರೆ. ಬೇರೆಯವನನ್ನು ಮದುವೆಯಾದರೂ ವಿನಯ್, ಆಕೆಯನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಯುವತಿ ಸಹ ತಾನು ಬೇರೆಯವನನ್ನು ಮದುವೆಯಾದರೂ ವಿನಯ್ ಜೊತೆ ಸಂಪರ್ಕ ಹೊಂದಿದ್ದಳು. ಮದುವೆ ಆದ ಮೇಲೂ ಸಹ ಚೆನ್ನಾಗಿದ್ದಳು, ಅವರ ಮನೆಯವರು ಅವಮಾನ ಮಾಡಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಅನ್ನೋದು ವಿನಯ್ ಮನೆಯವರ ಒತ್ತಾಯ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಗೆ ವಿನಯ್ ಸಂಬಂಧಿಕರು ದೂರು ನೀಡಿದ್ದಾರೆ. ಇದೆಲ್ಲಾ ಏನೇ ಇರಲಿ ಮದುವೆಯ ನಂತರವೂ ಪ್ರೀತಿಯ ಹುಚ್ಚಾಟಕ್ಕೆ ಬಿದ್ದ ವಿನಯ್ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದು ಮಾತ್ರ ದುರಂತ.
– ಹಾಸನ : ಲಂಚ ಪಡೆದ ಆರೋಪದಿಂದ ಡಿಡಿಪಿಐ ಅಮಾನತು
ಹಾಸನ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಎಫ್ಡಿಎ ಮಂಜುನಾಥ ಅವರನ್ನು ಸೇವೆಯಿಂದ ಅಮಾನತು ಮಾಡಿದ್ದ ಇಲ್ಲಿನ ಡಿಡಿಪಿಐ ಎಚ್.ಕೆ. ಪಾಂಡು ಅವರು, ಲಂಚ ಪ್ರಕರಣದಲ್ಲಿ ತಾವೇ ಅಮಾನತುಗೊಂಡರು. ಕಚೇರಿ ಅಧೀಕ್ಷಕ ವೇಣುಗೋಪಾಲ್ ಅವರನ್ನೂ ಅಮಾನತುಗೊಳಿಸಲಾಗಿದೆ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು. ಅವರು ಗುರುವಾರ ಜಾಮೀನು ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದರು.
– ಮೈಸೂರು: ಹಸುವಿನ ಕೆಚ್ಚಲು ಕತ್ತರಿಸಿರುವ ಕಹಿ ಘಟನೆ ಮಾಸುವ ಮುನ್ನವೇ ಮತ್ತೊಂದು ಗೋವಿನ ಮೇಲೆ ದಾಳಿ
– ನಂಜನಗೂಡಿನಲ್ಲಿ ಆಕಳು ಕರುವಿನ ಬಾಲ ಕತ್ತರಿಸಿ ವಿಕೃತಿ!
ಮೈಸೂರು : ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ಘಟನೆ ಮಾಸುವ ಮುನ್ನವೇ ಮೈಸೂರಿನ ನಂಜನಗೂಡಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಹರಕೆಗೆ ಬಿಟ್ಟ ಆಕಳು ಕರುವಿನ ಬಾಲವನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ. ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಬಳಿ ಅಮಾನವೀಯ ಘಟನೆ ನಡೆದಿದೆ. ಗಾಯಗೊಂಡಿರುವ ಕರುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂಜುಂಡೇಶ್ವರ ದೇವಾಲಯಕ್ಕೆ ಭಕ್ತರು ಹರಕೆ ರೂಪದಲ್ಲಿ ಹಸುಗಳನ್ನು ದಾನವಾಗಿ ನೀಡಿದ್ದರು. ಈ ಕರು ರಾತ್ರಿ ರಸ್ತೆಯಲ್ಲಿ ನಿಂತಿರುವಾಗ ಗೋವು ಕಳ್ಳರು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಆಗ ಕರು ತಪ್ಪಿಸಿಕೊಂಡು ಹೋಗಲು ಯತ್ನಿಸಿದೆ. ಈ ವೇಳೆ ಮಚ್ಚಿನಿಂದ ಕರುವಿನ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ಬಾಲವು ಕಟ್ಟಾಗಿ ಬಿದ್ದಿದೆ. ಕೆಲ ಸಮಯದ ನಂತರ ಅದೇ ರಸ್ತೆಯಲ್ಲಿ ಬಂದ ಸಾರ್ವಜನಿಕರಿಗೆ ವಿಷಯಗೊತ್ತಾಗಿದೆ. ರಕ್ತದ ಮಡುವಿನಲ್ಲಿ ಬಿದ್ದು ಕರು ನರಳಾಡಿದೆ. ಗೋಳೂರು ಸ್ನೇಕ್ ಬಸವರಾಜು, ದೇವರಸನಹಳ್ಳಿ ರಾಮಕೃಷ್ಣ, ಪೈಲ್ವಾನ್ ಆದಿ ಸೇರಿದಂತೆ ಹಲವು ಆಸ್ಪತ್ರೆಗೆ ಸಾಗಿಸಿದ್ದಾರೆ. ಪಶು ವೈದ್ಯರು ಕರುವಿಗೆ ಸೂಕ್ತ ಚಿಕಿತ್ಸೆ ನೀಡಿ ರಕ್ಷಣೆ ಮಾಡಿದ್ದಾರೆ. ಕರುವಿನ ಬಾಲಕ್ಕೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದ ನಂತರ ಸ್ಥಳಕ್ಕೆ ನಂಜನಗೂಡು ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಸನಾತನ ಹಾಗೂ ಹಿಂದೂ ಧರ್ಮದದಲ್ಲಿ ಪೂಜ್ಯನೀಯ ಸ್ಥಾನದಲ್ಲಿರುವ ಗೋಮಾತೆ ಹಾಗೂ ಬಸವಗಳಿಗೆ ಈ ರೀತಿ ಚಿತ್ರಹಿಂಸೆ ನೀಡುವುದು ವಿಷಾದಕರ ಸಂಗತಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಅಮಾನವೀಯ ಘಟನೆಗೆ ಕಾರಣರಾದವರನ್ನು ಪೊಲೀಸರು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.
– ಹಾಸನ : ಹಾಲಿನ ಬೂತ್ಗಳಲ್ಲಿ ತಂಬಾಕು ಉತ್ಪನ್ನ ಮಾರಾಟದಿಂದ ಪರವಾನಗಿ ರದ್ದು ಮಾಡಲು ಡಿ ಸಿ ಸೂಚನೆ
ಹಾಸನ: ನಂದಿನಿ ಹಾಲು ಮಾರಾಟದ ಬೂತ್ಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಅಂತಹ ಬೂತ್ಗಳ ಪರವಾನಗಿ ರದ್ದು ಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ತಂಬಾಕು ಸೇವನೆ ಮಾಡುತ್ತಿರುವುದು ಕಂಡುಬರುತ್ತಿದೆ. ಪೋಷಕರು ಹಾಗೂ ಶಿಕ್ಷಕ ವೃಂದ ಎಚ್ಚರವಹಿಸಿ, ಮಕ್ಕಳಿಗೆ ತಿಳಿವಳಿಕೆ ನೀಡಿ ಸರಿದಾರಿಯಲ್ಲಿ ನಡೆಯುವಂತೆ ಸಂಸ್ಕಾರ ಕಲಿಸಬೇಕು ಎಂದು ತಿಳಿಸಿದರು. ಶಾಲಾ– ಕಾಲೇಜು ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಾವೆಲ್ಲ ವಿದ್ಯಾವಂತರೆ. ಆದರೆ ಪ್ರಾಮಾಣಿಕತೆ ಕಡಿಮೆಯಾಗಿದೆ ಎಂದ ಅವರು, ನನ್ನ ಕರ್ತವ್ಯ ಮತ್ತು ಸಾಮಾಜಿಕ ಜವಾಬ್ದಾರಿ ಏನು ಎಂಬುದನ್ನು ಅರಿತು ನಡೆಯಬೇಕು. ಎಲ್ಲ ನೀತಿ- ನಿಯಮಗಳು ಮನೆಯಿಂದಲೇ ಪ್ರಾರಂಭವಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು. ಸಾರ್ವಜನಿಕರು ಕೂಡ ಎಚ್ಚರಿಕೆ ವಹಿಸಬೇಕು. ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವಿರಬೇಕು. ಸ್ವತಃ ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ಮನೋಭಾವವನ್ನು ಜನರು ಬೆಳೆಸಿಕೊಳ್ಳಬೇಕು ಎಂದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.