ನಮ್ಮೂರ್ ಎಕ್ಸ್ ಪ್ರೆಸ್ ಹೆಲ್ತ್ ನ್ಯೂಸ್
ಹೃದಯಾಘಾತಕ್ಕೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಇಂಜೆಕ್ಷನ್!
– ಪುನೀತ್ ರಾಜ್ಕುಮಾರ್ ಯೋಜನೆಯಡಿ ಚುಚ್ಚುಮದ್ದು
– ಯುವ ಜನತೆಯಲ್ಲಿ ಹೆಚ್ಚುತ್ತಿರುವ ಹಾರ್ಟ್ ಅಟ್ಯಾಕ್..!
NAMMUR EXPRESS NEWS
ಹೃದಯಾಘಾತ ಈಗ ಹುಟ್ಟಿದ ಮಕ್ಕಳಿಂದ ಹಿಡಿದು ಹಿರಿಯರನ್ನು ಕಾಡುತ್ತಿರುವ ದೊಡ್ಡ ರೋಗ. ಈಗಿನ ಆಹಾರ ಪದ್ಧತಿ, ಜೀವನ ಶೈಲಿ, ಒತ್ತಡ, ಪರಿಸರ ಕಾರಣದಿಂದ ಹೃದಯಾಘಾತ ಮಾಮೂಲಿ ಆಗಿದೆ. ಈಗಾಗಲೇ ನಾವು ನಮ್ಮವರನ್ನು ಕಳೆದುಕೊಂಡಿದ್ದೇವೆ.ಹಾಗಾದ್ರೆ ಹೃದಯ ಅಘಾತ ಆದ ಕೂಡಲೇ ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ಪುನೀತ್ ರಾಜ್ಕುಮಾರ್ ಯೋಜನೆಯಡಿ ಸಿಗುವ ಚುಚ್ಚುಮದ್ದು ಬಗ್ಗೆ ನಾವು ಇಂದಿನ ನಮ್ಮೂರ್ ಎಕ್ಸ್ ಪ್ರೆಸ್ ಹೆಲ್ತ್ ನ್ಯೂಸ್ ಅಲ್ಲಿ ತಿಳಿಯೋಣ.
ಸಮಾಜಸೇವೆ ಮೂಲಕ ಸದ್ದಿಲ್ಲದೇ ಸುದ್ದಿ ಮಾಡಿದ ಖ್ಯಾತ ನಟ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಹೃದಯಾಘಾತಕ್ಕೆ ಬಲಿಯಾಗಿ ನಮ್ಮನ್ನು ಅಗಲಿದ್ದು ಗೊತ್ತೇ ಇದೆ. ಸಾವಿರಾರು ಜನರಿಗೆ ಹೇಳಿಕೊಳ್ಳದೆ ಸಹಾಯ ಮಾಡಿದ್ದ ನಟನ ಹೆಸರಿನಲ್ಲಿ ಸರಕಾರ ಆರೋಗ್ಯ ಇಲಾಖೆ ಜಾರಿಗೆ ತಂದಿರುವ ಮಹತ್ವದ ಯೋಜನೆಯೊಂದು ‘ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ’.. ಈ ಯೋಜನೆ ಮೂಲಕ ಹೃದಯಘಾತದಿಂದಾಗುವ ಸಾವು ನೋವಿನ ಪ್ರಮಾಣವನ್ನು ತಡೆಗಟ್ಟಲು ಸರ್ಕಾರ ಮುಂದಾಗಿದೆ.
40 ಸಾವಿರ ಬೆಲೆಯ ಚುಚ್ಚುಮದ್ದು!
ವ್ಯಕ್ತಿಗೆ ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿ ನಂತರ ಇಸಿಜಿ ಪರೀಕ್ಷೆಯಲ್ಲಿ ವ್ಯತ್ಯಾಸ ಕಂಡು ಬಂದರೆ ವೈದ್ಯರು ಸುಮಾರು 36 ಸಾವಿರದಿಂದ 40 ಸಾವಿರ ವೆಚ್ಚದ ಈ ಚುಚ್ಚುಮದ್ದನು ನೀಡಲಿದ್ದಾರೆ. ಈ ಚುಚ್ಚುಮದ್ದು ಪಡೆದ 120 ನಿಮಿಷ (2 ಗಂಟೆ)ಗಳವರೆಗೆ ಹೃದಯಾಘಾತವಾಗುವುದನ್ನು ತಡೆಗಟ್ಟುತ್ತದೆ.ನಂತರದಲ್ಲಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಹೃದಯ ಆಸ್ಪತ್ರೆಗೆ ರೋಗಿಯು ದಾಖಲಾಗಿ ಹೆಚ್ಚಿನ ಪರೀಕ್ಷೆ ಪಡೆಯುವ ಮೂಲಕ ಇನ್ನಷ್ಟು ಹೆಚ್ಚಿನ ಚಿಕಿತ್ಸೆ ಪಡೆಯಬಹುದು.
ಸರ್ಕಾರಿ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆಯಬಹುದು!
ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯು ಸರಕಾರಿ ಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗಿದ್ದು, ಖಾಸಗಿ ಆಸ್ಪತ್ರೆ ಸೇರಿದಂತೆ ಬೇರೆಡೆ ಈ ಚುಚ್ಚುಮದ್ದು ಲಭ್ಯವಿರುವುದಿಲ್ಲ. ಹೃದಯಾಘಾತಕ್ಕೊಳಗಾದ ವ್ಯಕ್ತಿಗಳು ಪ್ರಾಥಮಿಕವಾಗಿ ಈ ಚುಚ್ಚುಮದ್ದು ಪಡೆದು ಹಾಗೂ ಹೆಚ್ಚಿನ ಚಿಕಿತ್ಸೆಯ ನಂತರ ಯಾವುದೇ ತೊಂದರೆಯಿಲ್ಲದೆ ನಿಶ್ಚಿಂತೆಯಿಂದಿದ್ದಾರೆ.ಈ ಯೋಜನೆ ಎಲ್ಲ ವರ್ಗದವರಿಗೂ ಮಾನ್ಯವಿದ್ದು, ಹೃದಯಾಘಾತದ ಮುನ್ಸೂಚನೆ ಅರಿತ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳಿ ಡಾ.ಪುನೀತ್ ಹೃದಯ ಜ್ಯೋತಿ ಚುಚ್ಚುಮದ್ದು ನೀಡಿ ಸಾವಿನಿಂದ ಪಾರುಮಾಡಬಹುದು. ಈ ಬಗ್ಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಮಾಹಿತಿ ಪಡೆಯಿರಿ.
ಧನ್ಯವಾದಗಳು. ಮತ್ತೊಂದು ಹೆಲ್ತ್ ನ್ಯೂಸ್ ಜತೆಗೆ ನಾಳೆ ಬರುತ್ತೇವೆ.
ನಮ್ಮೂರ್ ಎಕ್ಸ್ ಪ್ರೆಸ್
ನಿಮ್ಮ ಸುದ್ದಿಯ ಜೊತೆಗಾರ..!