ಸಕ್ಕರೆ ಕಾಯಿಲೆ ಇರೋರಿಗೆ ಗುಡ್ ನ್ಯೂಸ್…!
– ಮಧುಮೇಹದ ಔಷಧದ ಬೆಲೆ ಶೇ.90 ಇಳಿಕೆ
– 1 ಮಾತ್ರೆ ಬೆಲೆ ₹60 ನಿಂದ ಕೇವಲ 9 ರೂಪಾಯಿಗೆ ಲಭ್ಯ
NAMMUR EXPRESS NEWS
ಮಧುಮೇಹದಿಂದ ಬಳಲುತ್ತಿರುವ ಕೋಟ್ಯಾಂತರ ಭಾರತೀಯರಿಗೆ ಒಂದು ಶುಭ ಸುದ್ದಿ ಇದೆ. ಅದುವೇ, ಮಧುಮೇಹದ ಔಷಧಿಯ ಬೆಲೆ ಬರೋಬರಿ ಶೇ.85 ರಷ್ಟು ಕಡಿಮೆಯಾಗಲಿದೆ. ಇದರಿಂದ ದೇಶದ 10 ಕೋಟಿಗೂ ಅಧಿಕ ಭಾರತೀಯರಿಗೆ ನಿರಾಳತೆ ಸಿಗಲಿದೆ. ಹೌದು, ಇಲ್ಲಿಯವರೆಗೆ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದ ಮಧುಮೇಹದ ಔಷಧಿಯಾದ ಎಂಪಾಗ್ಲಿಫ್ಲೋಜಿನ್ ಅನ್ನು ಶೀಘ್ರದಲ್ಲೇ ದೇಶೀಯ ಔಷಧ ಕಂಪನಿಗಳು ಅತ್ಯಂತ ಅಗ್ಗದ ಬೆಲೆಗೆ ಮಾರಾಟ ಮಾಡಲಿವೆ. ಇದರೊಂದಿಗೆ ಪ್ರತಿ ಟ್ಯಾಬ್ಲೆಟ್ಗೆ 60 ರೂ.ಗೆ ಬೆಲೆಯಿದ್ದ ಈ ಔಷಧಿಯು, ಇನ್ನು ಮುಂದೆ ಕೇವಲ 9 ರೂಪಾಯಿಗೆ ಲಭ್ಯವಾಗಲಿದೆ.
ಜರ್ಮನಿಯ ಔಷಧ ಕಂಪನಿಯಾದ ಬೋಹ್ರಿಂಗರ್ ಇಂಗೆಲ್ಹೀಮ್ನ ಪೇಟೆಂಟ್ ಮಾರ್ಚ್ 11 ರಂದು ಮುಕ್ತಾಯಗೊಳ್ಳಲಿದೆ. ಇದರೊಂದಿಗೆ, ಭಾರತೀಯ ಕಂಪನಿಗಳು ತಮ್ಮದೇ ಆದ ಬ್ರಾಂಡ್ ಅಡಿಯಲ್ಲಿ ಮಧುಮೇಹದ ಎಂಪಾಗ್ಲಿಫ್ಲೋಜಿನ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿವೆ. ಇವುಗಳಲ್ಲಿ ಮ್ಯಾನ್ಕೈಂಡ್ ಫಾರ್ಮಾ, ಟೊರೆಂಟ್, ಅಲ್ಕೆಮ್, ಡಾ. ರೆಡ್ಡೀಸ್ ಮತ್ತು ಲುಪಿನ್ನಂತಹ ಪ್ರಮುಖ ಔಷಧ ತಯಾರಿಕಾ ಕಂಪನಿಗಳು ಸೇರಿವೆ. ವಿಶೇಷವೆಂದರೆ ಮ್ಯಾನ್ಕೈಂಡ್ ಫಾರ್ಮಾ ಈ ಔಷಧಿಯನ್ನು ಶೇಕಡಾ 90 ರಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
ಬೆಲೆ ಇಳಿಕೆಯಿಂದ ಕೋಟ್ಯಾಂತರ ಭಾರತೀಯರಿಗೆ ಲಾಭ
ಹೃದಯ ವೈಫಲ್ಯವನ್ನು ತಡೆಗಟ್ಟಲು, ಮೂತ್ರಪಿಂಡದ ಹಾನಿಯನ್ನು ಕಡಿಮೆ ಮಾಡಲು ಎಂಪಾಗ್ಲಿಫ್ಲೋಜಿನ್ ಅನ್ನು ಬಳಸಲಾಗುತ್ತದೆ. ಆದಾಗ್ಯೂ, ಅದರ ಹೆಚ್ಚಿನ ವೆಚ್ಚದಿಂದಾಗಿ, ಇಲ್ಲಿಯವರೆಗೆ ಇದು ಸೀಮಿತ ಸಂಖ್ಯೆಯ ರೋಗಿಗಳಿಗೆ ಮಾತ್ರ ಲಭ್ಯವಿತ್ತು. ಆದರೆ ಈಗ ಭಾರತೀಯ ಕಂಪನಿಗಳು ಇದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದರಿಂದ ಲಕ್ಷಾಂತರ ಜನರಿಗೆ ವರದಾನವಾಗಲಿದೆ. ಇನ್ನು ಈ ಬೆಲೆ ಕಡಿತವು ಭಾರತದ ಮಧುಮೇಹ ಔಷಧ ಮಾರುಕಟ್ಟೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು ಎನ್ನಲಾಗಿದೆ. ಯಾಕೆಂದರೆ 2021 ರಲ್ಲಿ 14,000 ಕೋಟಿ ರೂಪಾಯಿ ಇದ್ದ ಮಧುಮೇಹ ಔಷಧಿಯ ಮಾರುಕಟ್ಟೆ ಇಂದು ಸುಮಾರು 20,000 ಕೋಟಿ ರೂಪಾಯಿಗೆ ಬೆಳೆದಿದೆ. ಆದ್ದರಿಂದ ಬೆಲೆ ಇಳಿಕೆಯು ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಇನ್ನು ಭಾರತದಲ್ಲಿ ಮಧುಮೇಹ ಕುರಿತ ಆರ್ಥಿಕ ಹೊರೆ ಈಗಾಗಲೇ ಹೆಚ್ಚಿದ್ದು, ಸೀಮಿತ ವಿಮಾ ರಕ್ಷಣೆಯಿಂದಾಗಿ, ಹೆಚ್ಚಿನ ರೋಗಿಗಳು ತಮ್ಮ ಔಷಧಿಗಳ ವೆಚ್ಚವನ್ನು ತಾವೇ ಭರಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಎಂಪಾಗ್ಲಿಫ್ಲೋಜಿನ್ ಬೆಲೆಯಲ್ಲಿನ ಭಾರಿ ಕಡಿತವು ಮಧುಮೇಹ ರೋಗಿಗಳಿಗೆ ದೊಡ್ಡ ಪರಿಹಾರವಾಗಿದೆ.








