ಹೊಸನಗರ ವಿಧಾನಸಭಾ ಕ್ಷೇತ್ರಕ್ಕಾಗಿ ಹೋರಾಟ ಶುರು!
– ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯಿಸಿ ಹೋರಾಟ ಜೋರು
– ಸಮಸ್ತ ಜನತೆಗೆ ಆಹ್ವಾನ ನೀಡಿದ ಸ್ವಾಮೀಜಿ, ಪ್ರಮುಖರು
ನಮ್ಮ ಕ್ಷೇತ್ರ.. ನಮ್ಮ ಹಕ್ಕು..!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ: ಹೊಸನಗರ ವಿಧಾನ ಸಭಾ ಕ್ಷೇತ್ರಕ್ಕಾಗಿ ಹೋರಾಟ ಇದೀಗ ಶುರುವಾಗಿದೆ. ಮೂಲ ಭೂತ ಸೌಕರ್ಯ ಇಲ್ಲದೆ ತಾಲೂಕು ಸತತವಾಗಿ 5 ಜಲಾಶಯಗಳ ನಿರ್ಮಾಣದಿಂದ ಭೌಗೋಳಿಕವಾಗಿ ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳುತ್ತ ಬಂದಿದೆ.
ಹೊಸನಗರ ತಾಲೂಕು ಕೇಂದ್ರವು ಈ ಹಿಂದೆ ವಿಧಾನಸಭಾ ಕ್ಷೇತ್ರದ ಮಾನ್ಯತೆ ಸಹ ಹೊಂದಿತ್ತು. ಅದರೆ ಇಂದು ಎರಡು ಹೋಬಳಿ ಸಾಗರ ಕ್ಷೇತ್ರಕ್ಕೆ ಎರಡು ಹೋಬಳಿ ತೀರ್ಥಹಳ್ಳಿ ಕ್ಷೇತ್ರಕ್ಕೆ ಹಂಚಿಕೆಯಾಗಿ ಇಂದಿಗೂ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿವೆ. ಈ ಹಿನ್ನಲೆಯಲ್ಲಿ ತಾಲೂಕಿನ ಮೂಲೆಗದ್ದೆ ಮಠದ ಶ್ರೀ ಸದಾನಂದ ಶಿವಯೋಗಾಶ್ರಮದ ಪೀಠಾಧ್ಯಕ್ಷ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಹೊಸನಗರ ಪಟ್ಟಣದ ಕೇಂದ್ರ ಸ್ಥಾನದಿಂದ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲು ಸಿದ್ಧತೆ ನಡೆದಿದೆ.
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರವರು ಹಾಗೂ ಮಾಜಿ ಕಿಮ್ಮನೆ ರತ್ನಾಕರ್ ಅವರು ಸಹಾ ಈ ವಿಚಾರವಾಗಿ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.
ಹೋರಾಟದ ದನಿ ಇಂದಿನದಲ್ಲ.!
ಹೊಸನಗರ ಕ್ಷೇತ್ರದ ಮಾಜಿ ಶಾಸಕರಾದ ಬಿ. ಸ್ವಾಮಿರಾವ್ ರವರು ಕ್ಷೇತ್ರ ಮರುಸ್ಥಾಪನೆಗೆ ಧ್ವನಿ ಎತ್ತಿದ್ದಾರೆ. ಇತ್ತೀಚೆಗೆ ನಗರ ಗ್ರಾಮ ಪಂಚಾಯತಿ ಸದಸ್ಯರಾದ ಕರುಣಾಕರ ಶೆಟ್ಟಿಯವರು ತಾಲ್ಲೂಕಿನ 30 ಗ್ರಾಮ ಪಂಚಾಯತಿಗಳಿಗೆ ಸೈಕಲ್ ಜಾಥದ ಮೂಲಕ ಭೇಟಿ ನೀಡಿ ಜಾಗೃತಿ ಮೂಡಿಸಿದ್ದಾರೆ.
ಹೋರಾಟದ ಪೂರ್ವಭಾವಿ ಸಭೆಯನ್ನು ಫೆಬ್ರವರಿ 12 ಗುರುವಾರ ಬೆಳಗ್ಗೆ 10: 30 ಗಂಟೆಗೆ ಸರಿಯಾಗಿ ಹೊಸನಗರದ ಶ್ರೀ ಗಾಯತ್ರಿ ಮಂದಿರದಲ್ಲಿ ಮೂಲೆಗದ್ದೆ ಮಠದ ಶ್ರೀಗಳ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಭೆಗೆ ಎಲ್ಲಾ ಸಂಘ ಸಂಸ್ಥೆಗಳು ಅದರ ಪದಾಧಿಕಾರಿಗಳು, ಎಲ್ಲಾ ಜನಪ್ರತಿನಿಧಿಗಳು, ಮಹಿಳಾ ಸಂಘಗಳು ಹಾಗೂ ತಾಲೂಕಿನ ಸಮಸ್ತ ಜನತೆ ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಆಗಮಿಸಿ ಸಭೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳಲು ಹಾಗು ಹೋರಾಟದ ಮುಂದಿನ ರೂಪುರೇಷೆ ಕುರಿತು ಚರ್ಚಿಸಲು ಹೋರಾಟ ಸಮಿತಿ ಆಹ್ವಾನ ನೀಡಿದೆ. ಕಾಂಗ್ರೆಸ್ ಹಾಗೂ ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳು, ಸಂಘಟನೆಗಳು, ಪ್ರಮುಖರು e ಹೋರಾಟಕ್ಕೆ ಸಾಥ್ ನೀಡಿದ್ದಾರೆ.
ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾ ಕೂಡ ಈ ಹೋರಾಟಕ್ಕೆ ಬೆಂಬಲ ನೀಡಿದೆ.








