ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್..!
– 14 ದಿನಗಳ ನ್ಯಾಯಾಂಗ ಕಸ್ಟಡಿ
– ಮಗನಿಗೆ ಅತ್ಯಂತ ಕಠಿನ ಶಿಕ್ಷೆ ಆಗಲಿ: ಹಂತಕನ ತಂದೆ!
NAMMUR EXPRESS NEWS
ಹುಬ್ಬಳ್ಳಿ: ನೇಹಾ ಹಿರೇಮಠ ಅಂತ್ಯಸಂಸ್ಕಾರ ಮಂಟೂರ ರಸ್ತೆಯ ಕಲಬುರಗಿ ರುದ್ರಭೂಮಿಯಲ್ಲಿ ಶುಕ್ರವಾರ ನೆರವೇರಿತು. ಅತ್ತ ಆರೋಪಿಯ ಊರು ಬೆಳಗಾವಿ ಜಿಲ್ಲೆ ಮುನವಳ್ಳಿಯಲ್ಲಿ ಮೂರು ದಿನಗಳ ಬಂದ್ಗೆ ಕರೆ ನೀಡಲಾಗಿದೆ. ಕಿಮ್ಸ್ ಶವಾಗಾರದಲ್ಲಿ ಇರಿಸಲಾಗಿದ್ದ ಪಾರ್ಥಿವ ಶರೀರವನ್ನು ಬೆಳಗ್ಗೆ ಮರಣೋತ್ತರ ಪರೀಕ್ಷೆಗೊಳಪಡಿಸಿದ ಬಳಿಕ ಮೃತರ ನಿವಾಸಕ್ಕೆ ತಂದಾಗ ಕುಟುಂಬಸ್ಥರ, ಬಂಧುಗಳ ಹಾಗೂ ಸ್ಥಳೀಯರ ಆಕ್ರಂದನ ಹೇಳತೀರದಾಗಿತ್ತು. ನೇಹಾಳ ನಿವಾಸ ಹಾಗೂ ಪಾರ್ಥಿವ ಶರೀರದ ಮೆರವಣಿಗೆ ಸಾಗುತ್ತಿದ್ದ ಮಾರ್ಗದುದ್ದಕ್ಕೂ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಹಂತಕನಿಗೆ ಗಲ್ಲು ಶಿಕ್ಷೆಯಾಗಬೇಕು, ಆರೋಪಿಯನ್ನು ಎನ್ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದರು.
14 ದಿನಗಳ ನ್ಯಾಯಾಂಗ ಕಸ್ಟಡಿ.!
ಶಿಕ್ಷಕ ದಂಪತಿಯ ಪುತ್ರನಾಗಿರುವ ಫಯಾಜ್ ಬಾವಾಸಾಬ್ ಖೊಂಡುನಾಯ್ಕಗೆ 14 ದಿನಗಳ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದ್ದು, ಧಾರವಾಡದ ಜೈಲಿಗೆ ಒಯ್ಯಲಾಗಿದೆ. ಕೊಲೆಯ ಹಿಂದೆ ಕೇವಲ ಫಯಾಜ್ ಒಬ್ಬನೇ ಇರಲಿಕ್ಕಿಲ್ಲ ಎಂದು ನೇಹಾಳ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದ ರಿಂದ, ಈತನಿಗೆ ಯಾರಾದರೂ ಸಹಾಯ ಮಾಡಿದ್ದಾರಾ ಎಂಬುದು ಸಹಿತ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಂತಕನು ನೇಹಾಳಿಗೆ ಒಟ್ಟು 10 ಬಾರಿ ಇರಿದಿದ್ದಾನೆ.
ಮುನವಳ್ಳಿಯಲ್ಲಿ ಸ್ವಯಂಪ್ರೇರಿತ ಬಂದ್!
ಅತ್ತ ಹಂತಕನ ಊರು ಮುನವಳ್ಳಿಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟು ಗಳನ್ನು ಮುಚ್ಚಿದರು. ಖಾಸಗಿ ವಾಹನಗಳು, ಬಸ್ ಸಂಚಾರ ಇರಲಿಲ್ಲ. ವಿವಿಧ ಸಂಘಟನೆಗಳಿಂದ ಮುನವಳ್ಳಿ-ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ ಪ್ರತಿಭಟನಕಾರರು, ಮೂರು ದಿನಗಳ ಕಾಲ ಬಂದ್ ಮಾಡಿ ಶೋಕಾಚರಣೆಗೆ ಕರೆ ನೀಡಿದೆ.
ಮಗನಿಗೆ ಅತ್ಯಂತ ಕಠಿನ ಶಿಕ್ಷೆ ಆಗಲಿ: ಹಂತಕನ ತಂದೆ!
ಬೆಳಗಾವಿ: ನೇಹಾ ಹಿರೇಮಠಳನ್ನು ಕೊಂದ ನನ್ನ ಮಗನಿಗೆ ಅತ್ಯಂತ ಕಠಿನ ಶಿಕ್ಷೆ ಆಗಲಿ. ಆ ಶಿಕ್ಷೆಯನ್ನು ನೋಡಿ ಮುಂದೆ ಯಾರೂ ಇಂಥ ಕ್ರೂರ ಕೆಲಸಕ್ಕೆ ಕೈಹಾಕಬಾರದು ಎಂದು ಕೊಲೆ ಪ್ರಕರಣದ ಆರೋಪಿ ಫಯಾಜ್ನ ತಂದೆ, ಶಿಕ್ಷಕ ಬಾವಾಸಾಹೇಬ(ಭವಾನಿ) ಖೊಂಡುನಾಯ್ಕ ಹೇಳಿದರು.