ಮಂಗಳೂರಿನಲ್ಲಿ ಅತಿ ದೊಡ್ಡ ಟೆಕ್ ಪಾರ್ಕ್!
– ಶೀಘ್ರವೇ ಸಚಿವ ಸಂಪುಟದಲ್ಲಿ ಅನುಮೋದನೆಗೆ ಸಿದ್ಧತೆ
– 3,500 ಉದ್ಯೋಗದೊಂದಿಗೆ ನಿರ್ಮಾಣವಾಗಲಿದೆ ಟೆಕ್ ಪಾರ್ಕ್
– ಐಟಿ ಕ್ಷೇತ್ರದಲ್ಲಿ ಮತ್ತೊಂದು ಬೆಂಗಳೂರು ಆಗಿ ಮಂಗಳೂರು!
NAMMUR EXPRESS NEWS
ಮಂಗಳೂರು: ಮಂಗಳೂರಿನಲ್ಲಿ ಅತಿ ದೊಡ್ಡ ಟೆಕ್ ಪಾರ್ಕ್ ನಿರ್ಮಾಣದ ಪ್ರಸ್ತಾವನೆಯು ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಬರಲಿದೆ. ಈ ಮೂಲಕ ಕರಾವಳಿಗರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ಬುಧವಾರ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ)ನ ಐದನೇ ಆವೃತ್ತಿಯ ಟೆಕ್ನೋವಾಂಜಾ 2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಂಗಳೂರಿನಲ್ಲಿ 3.25 ಎಕರೆ ಭೂಮಿಯಲ್ಲಿ ಟೆಕ್ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು 3.5 ಲಕ್ಷ ಚದರ ಅಡಿ ವಿಸ್ತೀರ್ಣದ ಕಟ್ಟಡ ಮತ್ತು 3,500 ಉದ್ಯೋಗದೊಂದಿಗೆ ಟೆಕ್ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು, ಮುಂದಿನ ಐದು ವರ್ಷದೊಳಗೆ ಮಂಗಳೂರನ್ನು ಐಟಿ ಕ್ಷೇತ್ರದಲ್ಲಿ ಮತ್ತೊಂದು ಬೆಂಗಳೂರು ಆಗಿ ರೂಪಿಸಲು ಪ್ರಯತ್ನವಾಗಲಿದೆ. ಮಂಗಳೂರಿನ ಅಭಿವೃದ್ಧಿಯ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಜತೆಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.
– 3.5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ
ಕರ್ನಾಟಕದ ಜಾಗತಿಕ ಸಾಮರ್ಥ್ಯ ಕೇಂದ್ರ(ಜಿಸಿಸಿ)ಗಳ ನೀತಿಯು ಮಹಾತ್ವಾಕಾಂಕ್ಷೆಯಿಂದ ಕೂಡಿದ್ದು, 2029ರೊಳಗೆ ರಾಜ್ಯದಲ್ಲಿ500 ಹೊಸ ಜಿಸಿಸಿಗಳನ್ನು ಆಕರ್ಷಿಸುವ ಗುರಿ ಹೊಂದಿದ್ದು, ಈ ಮೂಲಕ 3.5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ನಿಗದಿ ಮಾಡಲಾಗಿದೆ. ಇದಕ್ಕಾಗಿ ಮುಂದಿನ ತಿಂಗಳು ಸರಕಾರ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಆರ್ಥಿಕ ನೀತಿಯನ್ನು ರೂಪಿಸಲಿದೆ ಎಂದರು.
ಯುವ ಉದ್ಯಮಿಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಇನ್ಫೋಸಿಸ್ನ ಮಾಜಿ ಸಿಎಫ್ಒ ಮೋಹನದಾಸ್ ಪೈ ಅವರು ಕರ್ನಾಟಕದಲ್ಲಿ ಸ್ಟಾರ್ಟ್ಅಪ್ಗಳನ್ನು ಪೋಷಿಸಲು ಮತ್ತು ರಾಜ್ಯವನ್ನು ಎಐ ಹಬ್ ಆಗಿಸಲು ‘ಎಲಿವೇಚ್ ಎಐ 100 ಕಾರ್ಯಕ್ರಮ’ದ ಅಗತ್ಯತೆ ಬಗ್ಗೆ ತಿಳಿಸಿದಾಗ, ನ.18 ರಿಂದ 20 ರವರೆಗೆ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್ 2025 ರಲ್ಲಿಈ ವಿಚಾರವನ್ನು ಚರ್ಚಿಸಲಾಗುವುದು ಎಂದರು.
– 5 ಕೋಟಿ ರೂ.ಗಳ ಪ್ರತಿಜ್ಞೆ ಮಾಡಲು ಸಿದ್ಧ
ಎಐ ಎಲಿವೇಟ್ 100 ಗಾಗಿ ನಾನು 5 ಕೋಟಿ ರೂ.ಗಳ ಪ್ರತಿಜ್ಞೆ ಮಾಡಲು ಸಿದ್ಧ. ದೇಶದ ಇತರ ಉದ್ಯಮ ಸಂಸ್ಥೆಗಳು ಮುಂಬರುವ ಸಭೆಯಲ್ಲಿಭಾಗವಹಿಸಿ ತಲಾ 5 ಕೋಟಿ ರೂ.ಗಳ ವಾಗ್ದಾನ ಮಾಡುವುದನ್ನು ಖಾತರಿಪಡಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು. ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಕೆಡಿಇಎಂ ಮೂಲಕ ರಾಜ್ಯ ಸರಕಾರವು ಟೆಕ್ನೋವಾಂಜಾ ಕಾರ್ಯಕ್ರಮಕ್ಕೆ ಉತ್ತೇಜನ ನೀಡಿರುವುದು ಅಭಿನಂದನೀಯ. ಜಿಲ್ಲೆಯ ಬಂದರು ಸೇರಿದಂತೆ ಸಾಮರ್ಥ್ಯ ಇರುವ ಇತರ ಉದ್ದಿಮೆ ವಲಯಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಿ, ಅಭಿವೃದ್ಧಿಯ ದಿಸೆಯಲ್ಲಿ ಜನಪ್ರತಿನಿಧಿಗಳು ಒಂದಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು. ಕೆಡಿಇಎಂನ ಅಧ್ಯಕ್ಷ ಬಿ.ವಿ. ನಾಯ್ಡು, ಬೆಂಗಳೂರಿನ ಎಸ್ಟಿಪಿಐ ಸಂಸ್ಥೆಯ ಸಂಜಯ್ ತ್ಯಾಗಿ ಮಾತನಾಡಿದರು. ಶಾಸಕರಾದ ವೇದವ್ಯಾಸ ಕಾಮತ್, ಡಾ. ಮಂಜುನಾಥ ಭಂಡಾರಿ, ಹಿರಿಯ ಅಧಿಕಾರಿ ಎಲ್.ಕೆ. ಅತೀಕ್ ಮೊದಲಾದವರು ಉಪಸ್ಥಿತರಿದ್ದರು.







