ಕರಾವಳಿ ಟಾಪ್ ನ್ಯೂಸ್ : ಏನೇನು?* ಪುತ್ತೂರು: ಕಾರು, ದ್ವಿಚಕ್ರ ವಾಹನ ಅಪಘಾತ
* ಕಾರ್ಕಳ: ಜಿಂಕೆ ಮಾಂಸ ಪತ್ತೆ
* ಕುಂದಾಪುರ: ಹಣ ಮತ್ತು ಬೆಳ್ಳಿ ಗಟ್ಟಿ ಕಳುವು
* ಮೂಲ್ಕಿ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್
* ಬಂಟ್ವಾಳ: ಅವಿವಾಹಿತ ಹುಡುಗಿ ನಾಪತ್ತೆ
* • ಮೂಡಬಿದರೆ:ಆರೋಪಿಯ ಶಿಕ್ಷೆಯ ಪ್ರಮಾಣ ಪ್ರಕಟ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮೂಡಬಿದರೆ: ಕಾಲೇಜೊಂದರ ನೌಕರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಚಿದಾನಂದ ಪರಶು ನಾಯ್ಕ ನ ಶಿಕ್ಷೆಯ ಪ್ರಮಾಣ ಇಂದು ಪ್ರಕಟಗೊಳ್ಳಲಿದೆ. 2020ರ ಅಕ್ಟೋಬರ್ 10ರಂದು ಚಿದಾನಂದ ಪರಶು ನಾಯ್ಕ ನೌಕರರ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದ, ಅದೇ ಕಾಲೇಜಿನ ನೌಕರನಾದ ಚೇತನ್ ಎನ್ನುವವರನ್ನು ಕೊಲೆ ಮಾಡುವ ಸಲುವಾಗಿ, ಕಬ್ಬಿಣದ ಸರಳನ್ನು ತೆಗೆದುಕೊಂಡು ವಿಶ್ರಾಂತಿ ಕೊಠಡಿಗೆ ಅಕ್ರಮವಾಗಿ ಪ್ರವೇಶಿಸಿದ್ದನು. ರಾಜೇಶ್ ಪೂಜಾರಿ ಮತ್ತು ಶಂಕ್ರಪ್ಪ ಎನ್ನುವವರೊಂದಿಗೆ ಮಲಗಿದ್ದ ಚೇತನ್ ಅವರನ್ನು ಚಿದಾನಂದ ಪರಶು ಅವಾಚ್ಯ ಶಬ್ದಗಳಿಂದ ಬೈದು, ಕಬ್ಬಿಣದ ಸರಳಿನಿಂದ ಅವರ ತಲೆ ಮತ್ತು ಮುಖಕ್ಕೆ ಹಲ್ಲೆ ಮಾಡಿರುವುದಷ್ಟೇ ಅಲ್ಲದೆ, ಚೇತನ್ ಅವರ ಮೊಬೈಲ್ ಅನ್ನು ಜಕಂ ಗೊಳಿಸಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ಚೇತನ್ ಅವರು ನವೆಂಬರ್ 9ರಂದು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಚಿದಾನಂದ ಪರಶು ವಿರುದ್ಧ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ನಡೆಸಿದ ಅಂದಿನ ಪೊಲೀಸ್ ನಿರೀಕ್ಷಕರಾದ ದಿನೇಶ್ ಕುಮಾರ್ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ನವೆಂಬರ್ ಒಂದರಂದು ಚಿದಾನಂದ ಪರಶುವನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 50 ಸಾಕ್ಷಿಗಳಲ್ಲಿ 30 ಸಾಕ್ಷಿಗಳ ವಿಚಾರಣೆಯನ್ನು ನಡೆಸಲಾಗಿದ್ದು, ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ಅವರು ಮಂಗಳವಾರದಂದು ತೀರ್ಪನ್ನು ನೀಡಿದ್ದು, ನವೆಂಬರ್ 13ರ ಗುರುವಾರದಂದು ಚಿದಾನಂದ ಪರಶು ನಾಯ್ಕ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುವುದು ಎನ್ನುವ ಮಾಹಿತಿ ಲಭಿಸಿದೆ.
* ಪುತ್ತೂರು: ಕಾರು, ದ್ವಿಚಕ್ರ ವಾಹನ ಅಪಘಾತ
ಪುತ್ತೂರು: ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ ಘಟನೆ, ಕಳೆದೆರಡು ದಿನಗಳ ಹಿಂದೆ ಮಾಣಿ ಮತ್ತು ಮೈಸೂರು ಹೆದ್ದಾರಿಯ ಪೋಳ್ಯ ತಿರುವಿನಲ್ಲಿ ನಡೆದಿದೆ. ಕಾರು ಢಿಕ್ಕಿ ಹೊಡೆದ ರಭಸಕ್ಕೆ ಚಾಲಕ ಸ್ಕೂಟರ್ ನ ನಿಯಂತ್ರಣ ತಪ್ಪಿ, ಹೆದ್ದಾರಿಯ ಪಕ್ಕದಲ್ಲಿದ್ದ ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೇ ರೀತಿ ಕಾರು 200ಮೀ ನಷ್ಟು ದೂರಕ್ಕೆ ಬಂದು ಮತ್ತೊಂದು ಗುಂಡಿಯಲ್ಲಿ ಬಿದ್ದಿದೆ. ತಲೆ ಮತ್ತು ಕೈಗೆ ಗಂಭೀರವಾಗಿ ಗಾಯವಾಗಿ ಬಳಲುತ್ತಿದ್ದ ಸ್ಕೂಟರ್ ಸವಾರನನ್ನು ಸ್ಥಳೀಯರು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದರು. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ದ್ವಿಚಕ್ರ ವಾಹನವು ಶಶಿಕುಮಾರ್ ಎನ್ನುವವರಿಗೆ ಸೇರಿದ್ದು, ಕಾರನ್ನು ಚಲಾಯಿಸುತ್ತಿದ್ದ ಕಬಕ ನಿವಾಸಿ ಮೊಹಮ್ಮದ್ ತೌಫಿಕ್ ಅಪಘಾತ ನಡೆಯುತ್ತಿದ್ದಂತೆ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಸ್ಥಳೀಯರ ಪ್ರಕಾರ ಆತ ಮಾದಕ ವಸ್ತು ಸೇವಿಸಿದ್ದ ಎನ್ನಲಾಗಿದ್ದು, ಪೊಲೀಸರ ಕಾರ್ಯಾಚರಣೆಯ ಬಳಿಕ ಸ್ಪಷ್ಟ ಮಾಹಿತಿ ಲಭಿಸಬೇಕಿದೆ.
* ಕಾರ್ಕಳ: ಜಿಂಕೆ ಮಾಂಸ ಪತ್ತೆ
ಕಾರ್ಕಳ: ಹದಿನೇಳು ಕೆಜಿ ಜಿಂಕೆಯ ಮಾಂಸ ಪತ್ತೆಯಾದ ಘಟನೆ ದುರ್ಗಾ ಗ್ರಾಮದ ತೆಳ್ಳಾರಿಯ ಮನೆಯೊಂದರಲ್ಲಿ ನಡೆದಿದೆ. ಬುಧವಾರದಂದು ಗೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ, ಜಿಂಕೆ ಮಾಂಸ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಸಾದತ್ ಮತ್ತು ಶಫತ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆಗಮಿಸುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ. ಅಲ್ಲದೆ ಇಬ್ಬರು ಆರೋಪಿಗಳು ಗೋಕಳ್ಳತನ ಮತ್ತು ಅಕ್ರಮ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದವರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ, ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಲಾಗಿದ್ದು, ಮುಂದಿನ ತನಿಖೆಯನ್ನು ಅವರು ನಡೆಸುತ್ತಾರೆ ಎನ್ನುವ ಸಂಗತಿ ತಿಳಿದುಬಂದಿದೆ.
* ಕುಂದಾಪುರ: ಹಣ ಮತ್ತು ಬೆಳ್ಳಿ ಗಟ್ಟಿ ಕಳುವು
ಕುಂದಾಪುರ: ವ್ಯಕ್ತಿಯೊಬ್ಬರು ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ, ಅವರ ಬಳಿಯಿದ್ದ ಹದಿನೈದು ಲಕ್ಷ ರೂಪಾಯಿ ಮತ್ತು ಬೆಳ್ಳಿ ಗಟ್ಟಿ ಕಳುವಾದ ಘಟನೆ ನಡೆದಿದೆ. ಹಂಗಳೂರು ನಿವಾಸಿಯಾದ ಕೃಷ್ಣಮೂರ್ತಿ ಶೇಟ್ ಅವರು ತಮ್ಮ ಪತ್ನಿಯೊಂದಿಗೆ ಬೆಂಗಳೂರಿನಲ್ಲಿ ಆಭರಣಗಳನ್ನು ಖರೀದಿಸಿ, ನಂತರ ವೋಲ್ವೋ ಬಸ್ ನಲ್ಲಿ ಕುಂದಾಪುರಕ್ಕೆ ತೆರಳುತ್ತಿದ್ದ ವೇಳೆ ಈ ರೀತಿಯ ಸನ್ನಿವೇಶ ಎದುರಾಗಿದೆ. ಹತ್ತು ಕೆಜಿ ಬೆಳ್ಳಿಯ ಗಟ್ಟಿಯನ್ನು ಒಂದು ಪ್ಯಾಕೆಟ್ ನಲ್ಲಿ ಹಾಕಿ ಕಾಲಿನ ಬಳಿ ಮತ್ತು ಇನ್ನೊಂದು ಹತ್ತು ಕೆಜಿ ಬೆಳ್ಳಿಯ ಗಟ್ಟಿಯನ್ನು ಹಾಗೂ ಮೂರು ಲಕ್ಷ ರೂಪಾಯಿ ನಗದು ಹಣವನ್ನು ಬ್ಯಾಗ್ ನಲ್ಲಿ ಇರಿಸಿ, ಮೇಲಿರುವ ಬಸ್ಸಿನ ಲಗೇಜ್ ಇಡುವ ಸ್ಥಳದಲ್ಲಿ ಇರಿಸಿದ್ದರು. ಬೆಳಿಗ್ಗೆ ಬ್ಯಾಗ್ ಅನ್ನು ತೆಗೆದುಕೊಳ್ಳಲು ಎದ್ದು ನೋಡಿದಾಗ, ಬ್ಯಾಗ್ ನ ಜಿಪ್ ತೆರೆದಿದ್ದು, ಹತ್ತು ಕೆಜಿ ಬೆಳ್ಳಿಯ ಗಟ್ಟಿ ಮತ್ತು ಮೂರು ಲಕ್ಷ ರೂಪಾಯಿ ನಗದು ಹಣ ಕಳುವಾಗಿರುವುದು ಬೆಳಕಿಗೆ ಬಂದಿದೆ. ಹತ್ತು ಕೆಜಿ ಬೆಳ್ಳಿಯ ಗಟ್ಟಿ ಬೆಲೆ ಸುಮಾರು 15,39,655 ರೂಪಾಯಿ ಎಂದು ಅಂದಾಜಿಸಲಾಗಿದೆ. ಮತ್ತು ಮೂರು ಲಕ್ಷ ನಗದು ಹಣ ಸೇರಿ ಒಟ್ಟು 18,39,655 ರುಪಾಯಿಯಷ್ಟು ಕಳುವಾಗಿದೆ ಎನ್ನಲಾಗಿದೆ.
* ಮೂಲ್ಕಿ: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಖಾಸಗಿ ಬಸ್
ಮೂಲ್ಕಿ: ಖಾಸಗಿ ಬಸ್ ವೊಂದು ಹೆದ್ದಾರಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ, ಕಳೆದೆರಡು ದಿನಗಳ ಹಿಂದೆ ಮೂಲ್ಕಿ ಸಮೀಪದಲ್ಲಿ ನಡೆದಿದೆ. ಬಸ್ ಚಾಲಕನಿಗೆ ನಿದ್ದೆಯ ಮಂಪರು ಆವರಿಸಿರಬೇಕು ಎಂಬ ಅನುಮಾನಗಳು ವ್ಯಕ್ತವಾಗಿದೆ. ಅಪಘಾತದಿಂದ ಬಸ್ ಮತ್ತು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಲಿಲ್ಲ ಎನ್ನುವ ಮಾಹಿತಿ ಲಭಿಸಿದೆ.
* ಬಂಟ್ವಾಳ: ಅವಿವಾಹಿತ ಹುಡುಗಿ ನಾಪತ್ತೆ
ಬಂಟ್ವಾಳ: ಮುಂಬೈ ಮೂಲದ ಯುವತಿಯೊಬ್ಬರು ಕಾಣೆಯಾಗಿರುವ ಘಟನೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಆಲ್ಬರ್ಟ್ ಡಿಸೋಜಾ ಎನ್ನುವವರ ಪುತ್ರಿ ಮರಿಯಾ ಅವರು ಮುಂಬೈ ನಲ್ಲಿ ನೆಲೆನಿಂತಿದ್ದು, ಕಳೆದ ಐದು ತಿಂಗಳಿನ ಹಿಂದೆ ಕರ್ನಾಟಕಕ್ಕೆ ಆಗಮಿಸಿದ್ದು, ಬೆಂಜನಪದವುವಿನ ಶಿವಾಜಿನಗರದಲ್ಲಿರುವ ತಮ್ಮ ಅತ್ತೆ ಮನೆಯಲ್ಲಿ ಉಳಿದುಕೊಂಡಿದ್ದರು. ಮರಿಯಾ ಅವರ ತಾಯಿ ಒಂದು ವರ್ಷದ ಹಿಂದೆ ನಿಧನರಾಗಿದ್ದು, ತಂದೆ ಕೂಡ ಮುಂಬೈನಲ್ಲಿ ನೆಲೆಸಿದ್ದರು. ಕಳೆದೆರಡು ದಿನಗಳ ಹಿಂದೆ ಮರಿಯಾ ಅವರ ಅತ್ತೆ ಮೋಲಿ ಟೆಲ್ಲಿಸ್ ಅವರು ಚರ್ಚ್ ನಲ್ಲಿ ಪೂಜೆಯನ್ನು ಮುಗಿಸಿ, ಮನೆಗೆ ಹಿಂತಿರುಗಿದ ಸಮಯದಲ್ಲಿ ಮರಿಯಾ ಅವರು ಮನೆಯಲ್ಲಿ ಇಲ್ಲದೆ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮೋಲಿ ಟೆಲ್ಲಿಸ್ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







