ಕರಾವಳಿ ಟಾಪ್ ನ್ಯೂಸ್
– ಮಲ್ಪೆ ಬಂದರ್ ಮೀನು ಕಳ್ಳರಿಗೆ, ಬೋಟ್ ಕಾರ್ಮಿಕರ ಕೈಗೆಯಿಂದ ಧರ್ಮದೇಟು!
– ಉಳ್ಳಾಲ: ಲಾರಿ-ಬೈಕ್ ಅಪಘಾತ ಮೆಡಿಕಲ್ ಮಾಲೀಕ ದಾರುಣ ಸಾವು!.
– ಮಂಗಳೂರು : ನಿಷೇಧಿತ ಡ್ರಗ್ಸ್ ಸೇವನೆ ಮೂವರು ಪೊಲೀಸ್ ವಶ
NAMMUR EXPRESS NEWS
ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕೆ ಬಂದರಿನ ಜೆಟ್ಟಿಯಲ್ಲಿ ನಿಲ್ಲಿಸಲಾಗಿದ್ದ ಮೀನು ತುಂಬಿರುವ ಬೋಟ್ನಲ್ಲಿ ಕಳ್ಳರು ಸುಮಾರು 15 ಸಾವಿರ ರೂ. ಬೆಲೆ ಬಾಳುವ ಉತ್ತಮ ಜಾತಿಯ ಮೀನನ್ನು ಎಗರಿಸಲು ಮುಂದಾಗಿದ್ದ ವೇಳೆ ಬೋಟ್ನ ಕಾರ್ಮಿಕರ ಕೈಗೆ ಸಿಕ್ಕಿ ಬಿದ್ದು ಧರ್ಮದೇಟು ತಿಂದ ಘಟನೆ ಸಂಭವಿಸಿದೆ. ರಾತ್ರಿ ಸುಮಾರು 12 ಗಂಟೆ ವೇಳೆಗೆ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಬೋಟ್ಗೆ ಮೂವರು ಬಂದು ಬೋಟ್ನ ಕಾರ್ಮಿಕರು ಗಾಢ ನಿದ್ರೆಯಲ್ಲಿರುವುದನ್ನು ಗಮನಿಸಿ ಬೋಟ್ನ ಸ್ಟೋರೇಜ್ನ ಮುಚ್ಚಳ ತೆರೆದು ಅದರೊಳಗೆ ಒಬ್ಬನನ್ನು ಇಳಿಸಿದ್ದರು. ಅಲ್ಲಿಂದ ಕಳವು ಮಾಡುವಾಗ ಬೋಟ್ನ ಕಾರ್ಮಿಕನೋರ್ವನಿಗೆ ಎಚ್ಚರವಾಗಿ ಬೊಬ್ಬೆ ಹಾಕಿದ್ದ. ಬೋಟ್ನ ಮೇಲೆ ಇದ್ದವರಲ್ಲಿ ಇಬ್ಬರು ಓಡಿ ಹೋಗಿದ್ದು, ಒಬ್ಬ ಸ್ಟೋರೇಜ್ನ ಒಳಗೆ ಸಿಕ್ಕಿ ಹಾಕಿಕೊಂಡಿದ್ದ. ಬೋಟ್ನ ಕಾರ್ಮಿಕರು ಆತನನ್ನು ಹಿಡಿದು ವಿಚಾರಿಸಿ ಬೋಟು ಮಾಲಕರಿಗೆ ಒಪ್ಪಿಸಿದ್ದಾರೆ. ಈ ಮೂವರು ಗದಗ ಮೂಲದವರೆಂದು ತಿಳಿದು ಬಂದಿದೆ.
– ಉಳ್ಳಾಲ: ಲಾರಿ-ಬೈಕ್ ಅಪಘಾತ ಮೆಡಿಕಲ್ ಮಾಲೀಕ ದಾರುಣ ಸಾವು!.
ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಮೀಪ ಲಾರಿ-ಬೈಕ್ ಅಪಘಾತದಲ್ಲಿ ಮೆಡಿಕಲ್ ಮಾಲೀಕ ದಾರುಣವಾಗಿ ಮೃತಪಟ್ಟ ಘಟನೆ ನಾಟೆಕಲ್ ಹತ್ತಿರದ ತಿಬ್ಲಪದವು ಎಂಬಲ್ಲಿ ಈ ಘಟನೆ ನಡೆದಿದೆ. ದೇರಳಕಟ್ಟೆ ನಿವಾಸಿ ಮೆಡಿಕಲ್ ಸೆಂಟರ್ ಮಾಲೀಕ ಜಲೀಲ್ ಎಂಬವರ ಪುತ್ರ ಹಾಜಿರಾ ಮೆಡಿಕಲ್ ಮಾಲೀಕ ಅವ್ಸಾಫ್ (25) ಮೃತಪಟ್ಟವರು. ಜ. 6ರಂದು ಸೋಮವಾರ ಮಧ್ಯಾಹ್ನ ದೇರಳಕಟ್ಟೆ ಕಡೆಯಿಂದ ತಿಬ್ಲಪದವು ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ ತಿಬ್ಲಪದವಿನ ಡಿವೈಡರ್ ಸಮೀಪ ಲಾರಿಯೊಂದು ಹಠಾತ್ತನೆ ತಿರುಗಿದ ಪರಿಣಾಮ ಲಾರಿ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ಅವ್ಸಾಫ್ ಮೃತಪಟ್ಟಿದ್ದಾರೆ. ಕೆಲ ವರ್ಷಗಳ ಹಿಂದಷ್ಟೇ ಕಲಿಕೆ ಮುಗಿಸಿ ಅವ್ಸಾಫ್ ದೇರಳಕಟ್ಟೆ ಜಂಕ್ಷನ್ನಲ್ಲಿ ಮೆಡಿಕಲ್ ಅಂಗಡಿಯ ನಡೆಸುತ್ತಾ ಬಂದಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತ ಸಿಸಿಟಿವಿ ವಿಡಿಯೋ ಸೆರೆಯಾಗಿದೆ.
– ಮಂಗಳೂರು : ನಿಷೇಧಿತ ಡ್ರಗ್ಸ್ ಸೇವನೆ ಮೂವರು ಪೊಲೀಸ್ ವಶ
ಮಂಗಳೂರು: ನಿಷೇಧಿತ ಡ್ರಗ್ಸ್ಗಳಾದ ಕೊಕೇನ್ ಮತ್ತು ಚರಸ್ ಸೇವನೆ ಮಾಡಿದ ಆರೋಪದ ಮೇರೆಗೆ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಉರ್ವ ಪೊಲೀಸರು ಕಾರ್ಯಾಚರಣೆ ನಡೆಸಿ ಕಾಪಿಕಾಡ್ನ ಕುರುಂಬಯ್ಯ (29) ಎಂಬತನನ್ನು ವಶಕ್ಕೆ ಪಡೆದಿದ್ದಾರೆ. ಬಿಜೈ ಕಾಪಿಕಾಡ್ ಕುಂಟಿಕಾನದಲ್ಲಿ ಕೊಕೇನ್ ಸೇವನೆ ಮಾಡಿದ್ದಾನೆ ಎನ್ನಲಾದ ಈತ ಕೊಕೇನ್ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ದೃಢಪಟ್ಟಿದೆ.
ಇನ್ನೊಂದು ಪ್ರಕರಣದಲ್ಲಿ ಅತ್ತಾವರ ಕಟ್ಟೆ ಬಳಿ ಕೊಂಚಾಡಿಯ ಶುಭಂ (24) ಮತ್ತು ಬೋಳೂರಿನ ರೋಶನ್ ಪಿ.ಎಸ್ (22) ಎಂಬವರನ್ನು ಬಂಧಿಸಿ ವಿಚಾರಿಸಿದಾಗ ಆರೋಪಿಗಳು ಗೋವಾದಿಂದ ಕೊಕೇನ್ ಮತ್ತು ಚರಸ್ ಖರೀದಿಸಿ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.