ಕರಾವಳಿ ಪ್ರೈಮ್ ನ್ಯೂಸ್..
– ಕುಂದಾಪುರ: ಧೂಮಪಾನ ಮಾಡಿದವರಿಗೆ ಶೌಚಾಲಯ ಸ್ವಚ್ಛಗೊಳಿಸುವ ಶಿಕ್ಷೆ!
– ಮೂಲ್ಕಿ: ಚಿನ್ನದ ಹೆಸ್ರಲ್ಲಿ ಕೋಟಿ ಕೋಟಿ ವಂಚನೆ: ದಂಪತಿ ಅರೆಸ್ಟ್
– ಬಂಟ್ವಾಳ: ಹನಿ ಟ್ರ್ಯಾಪ್; ಆರೋಪಿ ಬಂಧಿಸಿದ ಪೊಲೀಸರು
– ಕಾರ್ಕಳ ಅಭಿಷೇಕ್ ಆತ್ಮಹತ್ಯೆ:ಹನಿ ಟ್ರ್ಯಾಪ್ ಆರೋಪಿಗಳ ಬಂಧನಕ್ಕೆ ಪಟ್ಟು!
NAMMUR EXPRESS NEWS
ಕುಂದಾಪುರ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಾಕ್ಷಿ ಹೇಳಲೆಂದು ನ್ಯಾಯಾಲಯಕ್ಕೆ ಆಗಮಿಸಿದ ಮೂವರು ವ್ಯಕ್ತಿಗಳು, ತಮ್ಮ ಸರದಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಗಟ್ಟಿಯಾಗಿ ಮಾತನಾಡುತ್ತಿದ್ದುದಲ್ಲದೆ, ಸಾರ್ವಜನಿಕ ಸ್ಥಳವಾದ ನ್ಯಾಯಾಲಯದ ಆವರಣದಲ್ಲಿ ಧೂಮಪಾನ ಸಹ ಮಾಡಿದ್ದಾರೆ. ಇದನ್ನು ನೋಡಿದ ನ್ಯಾಯಾಲಯದ ಸಿಬ್ಬಂದಿ, ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕುಂದಾಪುರದ ಒಂದನೇ ಅಧಿಕ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆಯಾದ ಶೃತಿಶ್ರೀ ಅವರು ದಂಡದ ರೂಪವಾಗಿ ಶೌಚಾಲಯವನ್ನು ಸ್ವಚ್ಛಗೊಳಿಸುವಂತಹ ಆದೇಶವನ್ನು ಹೊರಡಿಸಿದ್ದು, ಮೂವರು ವ್ಯಕ್ತಿಗಳು ನ್ಯಾಯಾಲಯದ ಶೌಚಾಲಯ ಸ್ವಚ್ಛಗೊಳಿಸಿ, ಬಳಿಕ ತೆರಳಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
•ಮೂಲ್ಕಿ: ಚಿನ್ನದ ಕಳ್ಳರಾದ ದಂಪತಿಗಳು!
ಮೂಲ್ಕಿ: ಹಣ ಹೂಡಿಕೆಯ ಹೆಸರಿನಲ್ಲಿ ಜನರನ್ನು ವಂಚಿಸಿದ ದಂಪತಿಗಳು, ಕೊನೆಗೂ ಪೊಲೀಸರ ಅತಿಥಿಗಳಾಗಿದ್ದಾರೆ. ಮಾರುಕಟ್ಟೆಯಲ್ಲಿ ಹಣವನ್ನು ಹೂಡಿದರೆ ಲಾಭಾಂಶವನ್ನು ನೀಡಲಾಗುತ್ತದೆ ಎಂದು, ಜನರಿಂದ 1.5 ಕೋಟಿಯಷ್ಟು ಹಣವನ್ನು ಮತ್ತು ಚಿನ್ನವನ್ನು ಸಂಗ್ರಹಿಸಿ ಯಾಮಾರಿಸಿದ್ದರು. ಜನರಿಂದ ಬಂದ ದೂರಿನ ಆಧಾರದ ಮೇಲೆ, ದಂಪತಿಗಳ ವಿರುದ್ಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮ 145/2024 ಮತ್ತು ಅಪರಾಧ ಕ್ರಮ 17/2025ರ ಅನ್ವಯ ಕಾಲಂ 4೦6 ಮತ್ತು ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರಿಂದ ತಪ್ಪಿಸಿಕೊಳ್ಳಲು ದಂಪತಿಗಳು, ಸುಮಾರು ಒಂದು ವರ್ಷಗಳಿಗಿಂತಲೂ ಹೆಚ್ಚು ಕಾಲ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದರು. ಇದೀಗ ಮೂಲ್ಕಿ ಪೊಲೀಸರು ಅವರನ್ನು ಪತ್ತೆ ಹಚ್ಚಿ, ಬಂಧನಕ್ಕೊಳಪಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ದೃಷ್ಟಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳ ಹೆಸರುಗಳು ಹೊರಬೀಳಲಿದ್ದು, ಇದಕ್ಕಾಗಿ ತನಿಖೆಯನ್ನು ಮುಂದುವರಿಸಿದ್ದಾರೆ. ಸಧ್ಯಕ್ಕೆ ನ್ಯಾಯಾಲಯವು ಆರೋಪಿಗಳಾದ ರಿಚರ್ಡ್ ಡಿಸೋಜಾ ದಂಪತಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.
* ಬಂಟ್ವಾಳ: ಹನಿ ಟ್ರ್ಯಾಪ್; ಬಂಧನಕ್ಕೊಳಗಾಗದ ಆರೋಪಿ!
ಬಂಟ್ವಾಳ: ಕಳೆದ ಕೆಲವು ದಿನಗಳ ಹಿಂದೆ ಕೇರಳ ಮೂಲದ ಗಲ್ಫ್ ನಲ್ಲಿ ಉದ್ಯೋಗದಲ್ಲಿರುವ ಮೊಹಮ್ಮದ್ ಅಶ್ರಫ್ ಎನ್ನುವವರಿಗೆ, ಹುಡುಗಿ ತೋರಿಸುವ ನೆಪದಲ್ಲಿ ಫೋಟೊ, ವೀಡಿಯೋ ತೆಗೆದುಕೊಂಡು ಅದನ್ನು ಬೇರೆ ರೀತಿ ಬಳಸಿಕೊಳ್ಳುವುದಾಗಿ ಬೆದರಿಕೆಯೊಡ್ಡಿ, ಲಕ್ಷಾಂತರ ರೂಪಾಯಿ ದೋಚುವ ಮೂಲಕ ಹನಿ ಟ್ರ್ಯಾಪ್ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಅಶ್ರಫ್ ಅವರು ವಿವರಣೆ ನೀಡಿದ್ದು, ಆರೋಪಿಗಳಾದ ಬಶೀರ್ ಕಡಂಬು, ಸಫಿಯಾ ಮತ್ತು ಇತರ ಆರೋಪಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಾತನಾಡಿದ ಬೆಂಗಳೂರಿನ ವಕೀಲೆಯಾದ ಸೌದಾ ಅವರು ಪ್ರಕರಣ ನಡೆದು ಒಂದು ವಾರ ಕಳೆಯುತ್ತಾ ಬಂದರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರಿದ್ದಾರೆ. ಸಫಿಯಾ 201೦ರಿಂದಲೂ ಇಂತಹ ಹಲವಾರು ಹನಿ ಟ್ರ್ಯಾಪ್ ಗಳಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈ ರೀತಿಯಾಗಿ ಕೆಲವು ತಂಡಗಳು ಜನರನ್ನು ಬಲೆಗೆ ಹಾಕಿಕೊಂಡು, ಹಣವನ್ನು ದೋಚುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ ಕೆಲವು ಸಮುದಾಯದ ನಾಯಕರು ಬಂದು ಈ ಪ್ರಕರಣವನ್ನು ತಡೆಯಲು ಸಹ ಪ್ರಯತ್ನಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೂಡ ಪೊಲೀಸರಿಗೆ ದೂರುನೀಡಲಾಗಿದೆ. ಇಂತಹ ವಿಚಾರಗಳತ್ತ ರಾಜ್ಯ ಸರ್ಕಾರ ತಕ್ಷಣ ಗಮನಹರಿಸಿ, ಕಠಿಣ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಸೌದಾ ಅವರು ಮನವಿ ಮಾಡಿಕೊಂಡಿದ್ದಾರೆ.
ಕಾರ್ಕಳ ಅಭಿಷೇಕ್ ಆತ್ಮಹತ್ಯೆ:ಹನಿ ಟ್ರ್ಯಾಪ್ ಆರೋಪಿಗಳ ಬಂಧನಕ್ಕೆ ಪಟ್ಟು!
ಉಡುಪಿ: ಲೇಡಿಗೋಶನ್ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದ ಅಭಿಲಾಷ್ ಆಚಾರ್ಯ ಎನ್ನುವವರಿಗೆ, ಮಂಗಳೂರು ಮೂಲದ ನಾಲ್ಕು ಜನರ ತಂಡ ಹನಿ ಟ್ರ್ಯಾಪ್ ನ ಬಲೆ ಬೀಸಿದ್ದು, ಹಣ ನೀಡುವಂತೆ ಮಾನಸಿಕ ಹಿಂಸೆಯನ್ನು ನೀಡಿದುದರ ಪರಿಣಾಮವಾಗಿ, ಅಭಿಲಾಶ್ ಆಚಾರ್ಯ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣ ಆಗಿದೆ.
ನಿರೀಕ್ಷಾ, ರಾಕೇಶ್, ರಾಹುಲ್ ಮತ್ತು ತಸ್ಲಿಂ ಸೇರಿ ಅಭಿಲಾಶ್ ಅವರ ಚಿತ್ರಗಳನ್ನು ಅಶ್ಲೀಲ ರೀತಿಯಲ್ಲಿ ಗುಪ್ತ ಕ್ಯಾಮೆರಾದ ಮೂಲಕ ಸೆರೆ ಹಿಡಿದು, ಮೂರರಿಂದ ನಾಲ್ಕು ಲಕ್ಷದಷ್ಟು ಹಣವನ್ನು ದೋಚಿಕೊಂಡಿದ್ದರು. ಅಷ್ಟೇ ಅಲ್ಲದೆ ಈ ವಿಚಾರವಾಗಿ ಪೊಲೀಸರಿಗೆ ತಿಳಿಸಿದರೆ ನಾವು ಸುಮ್ಮನಿರುವುದಿಲ್ಲ ಎಂಬ ಕೊಲೆ ಬೆದರಿಕೆಯನ್ನು ಸಹ ಒಡ್ಡಿದ್ದಾರೆ ಎನ್ನಲಾಗಿದೆ. ಈ ಘಟನೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಡೆತ್ ನೋಟಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಶ್ವಕರ್ಮ ಯುವ ಮಿಲನ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ವಿಕ್ರಂ ಆಚಾರ್ಯ ಅವರು ಆಗ್ರಹಪಡಿಸಿದ್ದಾರೆ.







