ಕರಾವಳಿ ಟಾಪ್ 9 ಕ್ರೈಂ ನ್ಯೂಸ್
* ಉಳ್ಳಾಲ: ದೀಪಾವಳಿ ಆಚರಣೆ; ಪಟಾಕಿ ಸಿಡಿದು ಇಬ್ಬರಿಗೆ ಗಾಯ
* ಉಡುಪಿ: ವಿವಾಹಪೂರ್ವ ಗರ್ಭಿಣಿಯಾದ ಯುವತಿ
* ಬೆಳ್ತಂಗಡಿ: ಆತ್ಮಹತ್ಯೆಗೆ ಶರಣಾದ ಶಿಕ್ಷಕಿ
* ಬಂಟ್ವಾಳ: ಚರಂಡಿಯ ಮೇಲೆ ಹತ್ತಿದ ಕಾರ್
* ಮಣಿಪಾಲ್: ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ
* ಕಾರ್ಕಳ: ಅಕ್ರಮ ಕಲ್ಲುಕೋರೆಯ ಮೇಲೆ ದಾಳಿ
* ಮಂಗಳೂರು: ಅಪರಿಚಿತ ಯುವಕನ ಶವ ಪತ್ತೆ
* ಭಟ್ಕಳ: ಅಂದರ್ ಬಾಹರ್ ಜೂಜಾಟದ ಮೇಲೆ ಪೊಲೀಸರ ದಾಳಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಳ್ಳಾಲ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಷ್ಟೇ ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಪ್ರತಿ ವರ್ಷ ಪಟಾಕಿ ನೆಪದಲ್ಲಿ ಅನಾಹುತ ತಪ್ಪಿದ್ದಲ್ಲ. ಅದೇ ರೀತಿ ಈ ವರ್ಷವೂ ಕೂಡ ರಾಜ್ಯಾದ್ಯಂತ ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಹಚ್ಚುವ ಸಮಯದಲ್ಲಿ ಹಲವರು ಗಾಯಗೊಂಡಿದ್ದಾರೆ. ಉಳ್ಳಾಲದ ಪಾವೂರು ಗ್ರಾಮದ ಮಲಾರ್ ಹೌಸ್ ಎನ್ನುವಲ್ಲಿ 11 ವರ್ಷದ ಇಬ್ಬರು ಬಾಲಕರು ಪಟಾಕಿ ಸಿಡಿಸಿ, ಉಳಿದ ಚೂರುಗಳನ್ನು ಪೇಪರ್ ನಲ್ಲಿ ಸುತ್ತಿ, ಬೆಂಕಿ ಹಚ್ಚಿದ ಪರಿಣಾಮದಿಂದಾಗಿ ಅದು ಸ್ಪೋಟಗೊಂಡು ಗಾಯಗೊಂಡಿದ್ದಾರೆ. ಇಬ್ಬರೂ ದೇರಳಕಟ್ಟೆ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
* ಉಡುಪಿ: ವಿವಾಹಪೂರ್ವ ಗರ್ಭಿಣಿಯಾದ ಯುವತಿ
ಉಡುಪಿ: ಹೊರರಾಜ್ಯದ ಯುವತಿಯೊಬ್ಬಳು ವಿವಾಹಪೂರ್ವದಲ್ಲಿ ಗರ್ಭಿಣಿಯಾಗಿದ್ದು, ಯುವತಿಯಲ್ಲಿ ಧೈರ್ಯ ತುಂಬಿ, ಆಕೆ ಹೆತ್ತ ಮಗುವನ್ನು ಮತ್ತೊಬ್ಬ ಪೋಷಕರಿಗೆ ದತ್ತು ಕೊಡಿಸುವ ಮೂಲಕ ವಿಶು ಶೆಟ್ಟಿ ಅವರು ಮಾನವೀಯತೆ ಮೆರೆದಿದ್ದಾರೆ. ಪ್ರೀತಿಯ ಬಲೆಗೆ ಬಿದ್ದು, ಗರ್ಭಿಣಿಯಾಗಿದ್ದ ಯುವತಿಯು ತನ್ನ ತಪ್ಪಿನಿಂದಾಗಿ ಆದ ಘಟನೆಯಿಂದ ಒತ್ತಡಕ್ಕೆ ಸಿಲುಕಿದ್ದಳು. ಆಗ ಯುವತಿಯ ನೆರವಿಗೆ ಬಂದ ಸಮಾಜ ಸೇವಕರಾದ ವಿಶು ಶೆಟ್ಟಿ ಅವರು, ಆಕೆಗೆ ಸಾಂತ್ವನ ಕೇಂದ್ರದ ಸಂಪರ್ಕ ನೀಡಿ, ಸಮಾಲೋಚನೆ ನಡೆಸುವ ಮೂಲಕ ಯುವತಿಯಲ್ಲಿ ಧೈರ್ಯ ತುಂಬಿ, ಪ್ರಾಣಹಾನಿ ಮಾಡಿಕೊಳ್ಳುವ ದುರಂತದಿಂದ ತಪ್ಪಿಸಿದ್ದಾರೆ. ಬಳಿಕ ಆಕೆಗೆ ಒಂದು ತಿಂಗಳ ಕಾಲ ಆಶ್ರಯ ನೀಡಿ, ಆಸ್ಪತ್ರೆಯೊಂದರಲ್ಲಿ ಹೆರಿಗೆಗೆ ವ್ಯವಸ್ಥೆ ಕಲ್ಪಿಸಿ, ಯುವತಿ ಹೆತ್ತ ಮಗುವನ್ನು ಕಾನೂನು ಪ್ರಕಾರ ಮಕ್ಕಳಿಲ್ಲದ ದಂಪತಿಗಳಿಗೆ ದತ್ತು ಕೊಡಿಸುವ ಮೂಲಕ ಇಬ್ಬರ ಬದುಕಿನಲ್ಲೂ ಆಶಾಕಿರಣ ಮೂಡಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
* ಬೆಳ್ತಂಗಡಿ: ಆತ್ಮಹತ್ಯೆಗೆ ಶರಣಾದ ಶಿಕ್ಷಕಿ
ಬೆಳ್ತಂಗಡಿ: ಕಳೆದ ಎರಡು ವರ್ಷಗಳಿಂದ ಶಾಲೆಯ ಗೌರವಾನ್ವಿತ ಶಿಕ್ಷಕಿ ಎನಿಸಿಕೊಂಡಿದ್ದ ತೇಜಸ್ವಿನಿ ಅವರ ಮೃತದೇಹ, ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಅರಸಿನಮಕ್ಕಿಯ ಅನುದಾನಿತ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತೇಜಸ್ವಿನಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಾವಿಯಲ್ಲಿ ಸಿಕ್ಕಿರುವ ಅವರ ಮೃತದೇಹದಿಂದ ಕಾಲುಜಾರಿ ಬಾವಿಗೆ ಬಿದ್ದರೋ ಅಥವಾ ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎನ್ನುವ ಸಂಗತಿ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಸ್ಥಳಕ್ಕೆ ಆಗಮಿಸಿದ ಧರ್ಮಸ್ಥಳ ಪೊಲೀಸರು ಪರಿಶೀಲನೆಯನ್ನು ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡರು ಎನ್ನುವ ಸಂಗತಿ ತಿಳಿದುಬಂದಿದೆ.
* ಬಂಟ್ವಾಳ: ಚರಂಡಿಯ ಮೇಲೆ ಹತ್ತಿದ ಕಾರ್
ಬಂಟ್ವಾಳ: ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ, ಕಾರೊಂದು ಚರಂಡಿಯ ಮೇಲೆ ಹತ್ತಿದ ಘಟನೆ, ಬುಧವಾರ ರಾತ್ರಿ ಕಲ್ಲಡ್ಕ ಸಮೀಪದ ಕುದ್ರುಬೆಟ್ಟುವಿನಲ್ಲಿ ನಡೆದಿದೆ. ಪುತ್ತೂರು ನಿವಾಸಿಯಾದ ಇರ್ಶಾದ್ ಅವರು ತಮ್ಮ ಪತ್ನಿಯೊಂದಿಗೆ ಮಂಗಳೂರಿಗೆ ತೆರಳುತ್ತಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಇದರಿಂದಾಗಿ ಯಾವುದೇ ರೀತಿಯ ತೊಂದರೆ ಸಂಭವಿಸದೇ, ಇಬ್ಬರೂ ಪಾರಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.
ಮಣಿಪಾಲ: ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ
* ಮಣಿಪಾಲ: ಕಳೆದೆರಡು ದಿನಗಳ ಹಿಂದೆ ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಅವರಿಗೆ, ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ದಾಳಿ ನಡೆಸಿದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಇಬ್ಬರು ಆರೋಪಿಗಳನ್ನು ಸೆರೆ ಹಿಡಿಯಲಾಗಿದ್ದು, ಆರೋಪಿಗಳನ್ನು ಇಮ್ರಾನ್ ಮತ್ತು ಜೈಬಾಯ್ ಎಂದು ಗುರುತಿಸಲಾಗಿದೆ. ಮಣಿಪಾಲದಲ್ಲಿ ಸೆಲ್ಯೂನ್ ಆ್ಯಂಡ್ ಸ್ಪಾ ಬಾಡಿ ಮಸಾಜ್ ಕೇಂದ್ರವನ್ನು ಇಟ್ಟುಕೊಂಡಿದ್ದ ಮಹೇಶ್ ಹಾಗೂ ಅಶೋಕ್ ಅವರ ವ್ಯವಹಾರಕ್ಕೆ ಆರೋಪಿಗಳು ಸಹಕಾರ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
•ಕಾರ್ಕಳ: ಅಕ್ರಮ ಕಲ್ಲುಕೋರೆಯ ಮೇಲೆ ದಾಳಿ
ಕಾರ್ಕಳ: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಲ್ಲುಕೋರೆ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ಎರ್ಲಪಾಡಿ ಗ್ರಾಮದ ಜಾರ್ಕಳದಲ್ಲಿ ನಡೆದಿದೆ. ಸರ್ವೇ ನಂಬರ್ 245ರಲ್ಲಿ ಕಲ್ಲುಕೋರೆ ನಡೆಸುತ್ತಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಕಾರ್ಕಳದ ಉಪನಿರೀಕ್ಷಕರಾದ ಮುರಳಿಧರ ನಾಯ್ಕ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ರಾಜೇಶ್ ಶೆಟ್ಟಿ ಎನ್ನುವಾತ ಅಕ್ರಮವಾಗಿ ಸುಮಾರು 9,500 ರೂಪಾಯಿಯಷ್ಟು ಬೆಲೆಬಾಳುವ, 800 ಸೈಜು ಶಿಲೆಕಲ್ಲುಗಳನ್ನು ಸಾಗಾಟ ಮಾಡಲು ರಾಶಿ ಹಾಕಿ ಇಟ್ಟುಕೊಂಡಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಮಂಗಳೂರು: ಅಪರಿಚಿತ ಯುವಕನ ಶವ ಪತ್ತೆ
ಮಂಗಳೂರು: ಬಂದರಿನ ಹಳೆಯ ದಕ್ಕೆಯ ಬಳಿ, ಪರ್ಶಿಯನ್ ದೋಣಿಗಳನ್ನು ನಿಲ್ಲಿಸುವ ಯಾರ್ಡ್ ನ ನದಿ ಕಿನಾರೆಯಲ್ಲಿ ಬುಧವಾರದಂದು ಅಪರಿಚಿತ ಯುವಕನೊಬ್ಬನ ಶವ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ ಎನ್ನಲಾಗಿದೆ. ಯುವಕನ ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಭಟ್ಕಳ: ಅಂದರ್ ಬಾಹರ್ ಜೂಜಾಟದ ಮೇಲೆ ಪೊಲೀಸರ ದಾಳಿ
ಭಟ್ಕಳ: ಕಳೆದ ಕೆಲವು ದಿನಗಳ ಹಿಂದೆ, ಸಂಜೆ ಮೈದಾನದ ಪಕ್ಕದಲ್ಲಿ ಮೇಣದಬತ್ತಿಯ ಬೆಳಕು ಕಂಡು ಬಂದು, ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ಉಪನಿರೀಕ್ಷಕರಾದ ನವೀನ್ ಅವರ ನೇತೃತ್ವದ ತಂಡ ದಾಳಿ ನಡೆಸಿದ ಘಟನೆ, ಜಾಲಿ ತೆಲಗೇರಿ ಕ್ರಿಕೆಟ್ ಮೈದಾನದ ಸಮೀಪದ ಪ್ರದೇಶದಲ್ಲಿ ನಡೆದಿದೆ. ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಹಣ ಮತ್ತು ಇಸ್ಪೀಟ್ ಎಲೆಗಳನ್ನು ಬಳಸಿಕೊಂಡು ಜೂಜಾಟದಲ್ಲಿ ತೊಡಗಿರುವುದು ಕಂಡುಬಂದಿದೆ. ದಾಳಿ ನಡೆಸಿದ ಸಮಯದಲ್ಲಿ ತೆಲಗೇರಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಮಾದೇವಗೊಂಡ, ಹನುಮನಗರದ ಶಂಕರ ನಾಯ್ಕ ಸೇರಿದಂತೆ ಏಳು ಮಂದಿ ಪರಾರಿಯಾಗಿದ್ದು, ಶೇಡಕುಳಿಯ ಮೀನುಗಾರ ನಾರಾಯಣಗೊಂಡ ಎನ್ನುವ ವ್ಯಕ್ತಿ ಸಿಕ್ಕಿಬಿದ್ದಿದ್ದು, ಹಬ್ಬದ ಆಟ ಎಂದು ಪೊಲೀಸರ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಆರೋಪಿಗಳು ಆಟಕ್ಕೆ ಬಳಸಿದ ಇಸ್ಪೀಟ್ ಎಲೆಗಳು, ಮೇಣದಬತ್ತಿಗಳು, 1700 ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಪರಾರಿಯಾದವರ ಕುರಿತು ಶೋಧನಾ ಕಾರ್ಯವನ್ನು ನಡೆಸುತ್ತಿದ್ದಾರೆ







