ಕರಾವಳಿ ಟಾಪ್ 9 ನ್ಯೂಸ್
* ಬೆಳ್ತಂಗಡಿ: ಚಿನ್ನಯ್ಯನ ವಿಚಾರಣೆ ಮುಂದುವರಿಸಿದ ಎಸ್ಐಟಿ
* ಮಂಗಳೂರು: ಎಂಡಿಎಂಎ ಮಾರಾಟ: ಆರೋಪಿಗಳ ಬಂಧನ
* ಸುಳ್ಯ: ತ್ಯಾಜ್ಯ ಎಸೆದ ಅಂಗಡಿ ಮಾಲೀಕನ ವಿರುದ್ಧ ದೂರು
* ಬೈಂದೂರು: ಆಟೋ ಪಿಕಪ್ ನಡುವೆ ಅಪಘಾತ
* ಕುಂದಾಪುರ: ಕೃಷಿಕ ಆತ್ಮಹತ್ಯೆಗೆ ಶರಣು
•ಕಾಪು: ಅಪಘಾತಗಳ ಆಗರವಾಗಿದೆ ಕರಾವಳಿ ಸಂಪರ್ಕ ಯೋಜನೆ
* ಅಂಕೋಲಾ: ಮೂರು ಬಾರಿ ಪಲ್ಟಿ ಹೊಡೆದ ರಾಜ್ಯ ರಸ್ತೆ ಸಾರಿಗೆ ಬಸ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಿನ್ನಯ್ಯನಿಂದ ಹೆಚ್ಚಿನ ಹೇಳಿಕೆಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ, ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಇರಿಸಲಾಗಿದ್ದ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ್ದರು. ಎಸ್ಐಟಿ ತನಿಖಾಧಿಕಾರಿಯಾದ ಜಿತೇಂದ್ರ ಕುಮಾರ್ ದಯಾಮ ಅವರ ನೇತೃತ್ವದ ತಂಡವು ಶುಕ್ರವಾರದಂದು ಶಿವಮೊಗ್ಗಕ್ಕೆ ಆಗಮಿಸಿ, ಚಿನ್ನಯ್ಯನಿಂದ ಮತ್ತಷ್ಟು ಹೇಳಿಕೆಗಳನ್ನು ಪಡೆದುಕೊಂಡಿದ್ದು, ಶನಿವಾರದಂದು ಆತನ ವಿಚಾರಣೆಗೆ ಸಂಬಂಧಿಸಿದಂತೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಚಿನ್ನಯ್ಯನ ವಿಚಾರಣೆಯಿಂದ ದೊರೆತ ಹೇಳಿಕೆಯ ಆಧಾರದ ಮೇಲೆ, ಮುಂದಿನ ತನಿಖೆಯನ್ನು ಕೈಗೊಳ್ಳಲಾಗುತ್ತದೆ. ಅಲ್ಲದೆ ಮತ್ತೊಂದಿಷ್ಟು ಜನರ ವಿಚಾರಣೆಯನ್ನು ನಡೆಸಿ, ಹಲವಾರು ದೃಷ್ಟಿಕೋನಗಳಿಂದ ತನಿಖೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದ, ಗಿರೀಶ್ ಮಟ್ಟಣ್ಣನವರ್ ಅಕ್ಟೋಬರ್ 11ರಂದು ಮಾಧ್ಯಮಗಳಿಗೆ ಹೇಳಿಕೆ ಕೊಡುವ ಸಂದರ್ಭದಲ್ಲಿ ಮಹೇಶ್ ಶೆಟ್ಟಿ ಎಲ್ಲೂ ಓಡಿ ಹೋಗಿಲ್ಲ, ಪೊಲೀಸರಿಗೆ ಸಿಗದಿದ್ದರೆ ಅದು ನನ್ನ ತಪ್ಪಾ ಎಂದು ಉಡಾಫೆಯಿಂದ ಮಾತನಾಡಿದ್ದು, ಈ ಹಿನ್ನೆಲೆಯಲ್ಲಿ ಅಕ್ಟೋಬರ್ 15ರಂದು ಅಂಗಡಿ ಪೊಲೀಸರು ಗಿರೀಶ್ ಮಟ್ಟಣ್ಣನವರ್ ಗೆ ಬೆಂಗಳೂರಿನ ಮನೆಗೆ ತೆರಳಿ ನೋಟಿಸ್ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಶನಿವಾರದಂದು ಗಿರೀಶ್ ಮಟ್ಟಣ್ಣನವರ್ ವಿಚಾರಣೆಯನ್ನು ಎದುರಿಸಿ ತೆರಳಿರುವ ಸಂಗತಿ ತಿಳಿದುಬಂದಿದೆ.
* ಮಂಗಳೂರು: ಎಂಡಿಎಂಎ ಮಾರಾಟ ಮಾಡಲು ಪ್ರಯತ್ನಿಸಿದ ಆರೋಪಿಗಳ ಬಂಧನ
ಮಂಗಳೂರು: ಎಂಡಿಎಂಎ ಮಾರಾಟ ಮಾಡಲು ಪ್ರಯತ್ನಿಸಿದ ಸಂದರ್ಭದಲ್ಲಿ, ಪೊಲೀಸರು ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಿದ ಘಟನೆ, ಜಪ್ಪು ಕುಡುಪಾಡಿ ರೈಲ್ವೆ ಸೇತುವೆಯ ಬಳಿ ನಡೆದಿದೆ. ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಸಿಬಿ ಘಟಕದ ಉಪನಿರೀಕ್ಷಕರಾದ ಸುದೀಪ್ ಎಂಪಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ದಾಳಿ ನಡೆಸಿದರು. ಆರೋಪಿಗಳಾದ ಮಾಹಿನ್ ಅಬ್ದುಲ್ ರೆಹಮಾನ್ ಮತ್ತು ಮೊಹಮ್ಮದ್ ಅಮ್ರಾಜ್ ನನ್ನು ಬಂಧಿಸಿದ್ದು, ಅವರ ಬಳಿಯಿದ್ದ 60,000 ಮೌಲ್ಯದ 14.44 ಗ್ರಾಂ ತೂಕದ ಎಂಡಿಎಂಎ, ಮೊಬೈಲ್ ಫೋನ್, ಸ್ಕೂಟರ್ ಸೇರಿದಂತೆ ಒಟ್ಟು 1.53 ಲಕ್ಷ ರೂಪಾಯಿಯಷ್ಟು ಬೆಲೆಬಾಳುವ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಸುಳ್ಯ: ತ್ಯಾಜ್ಯ ಎಸೆದ ಅಂಗಡಿ ಮಾಲೀಕನ ವಿರುದ್ಧ ದೂರು
ಸುಳ್ಯ: ತಮ್ಮ ಅಂಗಡಿಯ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ, ಬಟ್ಟೆ ಅಂಗಡಿಯ ಮಾಲೀಕನ ವಿರುದ್ಧ ದೂರು ನೀಡಿದ ಘಟನೆ, ಐವರ್ನಾಡು ಗ್ರಾಮದ ಬೇಂಗಮಲೆಯಲ್ಲಿ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಬೇಂಗಮಲೆಯ ಮೂರು ಕಡೆಗಳಲ್ಲಿ ತ್ಯಾಜ್ಯ ತುಂಬಿದ ಚೀಲಗಳು ಕಂಡುಬಂದಿದ್ದು, ಅದನ್ನು ಪರಿಶೀಲಿಸಿದಾಗ, ಅದರಲ್ಲಿರುವ ವಿದ್ಯುತ್ ಬಿಲ್ ಗೆ ಸಂಬಂಧಿಸಿದ ದಾಖಲೆಗಳು, ಮಳಿಗೆಯ ಹೆಸರಿಗೆ ನೀಡಲಾಗಿರುವ ಜಾತ್ರೆಯ ಆಮಂತ್ರಣ ಪತ್ರದ ಆಧಾರದ ಮೇಲೆ, ಇದು ಗಾಂಧಿನಗರದ ಬಟ್ಟೆ ಅಂಗಡಿಯೊಂದಕ್ಕೆ ಸಂಬಂಧಿಸಿದ್ದು ಎನ್ನುವುದು ತಿಳಿದುಬಂದಿದೆ. ಆ ಮೂರು ಚೀಲಗಳನ್ನು ಒಂದು ವಾರದೊಳಗಾಗಿ ಬೇಂಗಮಲೆಯ ಸುತ್ತ ಎಲ್ಲಿಂದರಲ್ಲಿ ಎಸೆದು ಹೋಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಿಂದ ಅಂಗಡಿಯ ಮಾಲೀಕರಿಗೆ ಕರೆ ಹೋಗಿ, ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ಆಗ ಅಂಗಡಿಯ ಮಾಲೀಕರು ದಂಡವನ್ನು ಪಾವತಿಸಲು ನಿರಾಕರಿಸಿದ್ದಾರೆ. ಬದಲಿಗೆ ಅದೇ ದಿನ ರಾತ್ರಿ ಅಂಗಡಿಯವರು, ತ್ಯಾಜ್ಯ ತುಂಬಿಸಿಟ್ಟಿದ್ದ ಆ ಮೂರು ಚೀಲಗಳನ್ನು ಹಿಂತೆಗೆದುಕೊಂಡು ಹೋಗಿದ್ದಾರೆ. ಆದರೆ ದಂಡ ಪಾವತಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಐವರ್ನಾಡು ಪಂಚಾಯಿತಿ ಅಭಿವೃದ್ಧಿಯ ಅಧಿಕಾರಿಯಾದ ಶ್ಯಾಮ್ ಪ್ರಸಾದ್ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಬಟ್ಟೆ ಅಂಗಡಿಯ ವಿರುದ್ಧ ದೂರು ನೀಡಿದ್ದಾರೆ.
* ಬೈಂದೂರು: ಆಟೋ ಪಿಕಪ್ ನಡುವೆ ಅಪಘಾತ
ಬೈಂದೂರು: ಮಲ್ಪೆಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಮೀನುಗಳಿರುವ ಪಿಕಪ್ ವಾಹನವೊಂದು ಆಟೋಗೆ ಢಿಕ್ಕಿ ಹೊಡೆದ ಘಟನೆ, ಶಿರೂರಿನ ಕೆಳಪೇಟೆಯಲ್ಲಿ ನಡೆದಿದೆ. ಪರಿಣಾಮವಾಗಿ ಆಟೋ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಆಟೋ ಚಾಲಕ, ಹಡವಿನಕೋಣೆಯ ನ್ಯೂ ಕಾಲೋನಿಯ ನಿವಾಸಿಯಾದ ಇಲಿಯಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
* ಕುಂದಾಪುರ: ಕೃಷಿಕ ಆತ್ಮಹತ್ಯೆಗೆ ಶರಣು
ಕುಂದಾಪುರ: ಅನಾರೋಗ್ಯದಿಂದ ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ, ಶಂಕರನಾರಾಯಣ ಗ್ರಾಮದಲ್ಲಿ ನಡೆದಿದೆ. ಸುಬ್ಬ ಕುಲಾಲ ಅವರು ಕೃಷಿಕರಾಗಿದ್ದು, ಕೈ ಕಾಲು ನಡುಗುವ ಸಮಸ್ಯೆಯಿಂದ ಬಳಲುತ್ತಿದ್ದರು. ಎಷ್ಟೇ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ. ಶನಿವಾರದಂದು ಆಸ್ಪತ್ರೆಗೆ ತಪಾಸಣೆಗೆಂದು ಹೋದವರು ಮನೆಗೆ ಮರಳಿ ಬರಲಿಲ್ಲ. ಭಾನುವಾರದಂದು ಮನೆಯ ಸಮೀಪದ ಹಾಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಕಾಯಿಲೆ ಗುಣವಾಗದೆ, ಜೀವನದಲ್ಲಿ ಜುಗುಪ್ಸೆಯುಂಟಾಗಿ, ಈ ರೀತಿ ಮಾಡಿಕೊಂಡಿದ್ದಾರೆ ಎಂದು, ಅವರ ಪುತ್ರರಾದ ಕರುಣಾಕರ ಅವರು ಹೇಳಿಕೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕಾಪು: ಅಪಘಾತಗಳ ಆಗರವಾಗಿದೆ ಕರಾವಳಿ ಸಂಪರ್ಕ
ಕಾಪು: ಹೆಜಮಾಡಿ ಬಳಿಯ ಮುಟ್ಟಳಿವೆ ಬಳಿ ಕಳೆದ ಏಳು ವರ್ಷಗಳ ಹಿಂದೆ, ಪಡುಬಿದ್ರಿ ಮತ್ತು ಹೆಜಮಾಡಿ ನಡುವೆ ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ ನಬಾರ್ಡ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಸಂಪರ್ಕ ಸೇತು ಇಂದು ನಿಷ್ಪ್ರಯೋಜಕವಾಗಿದೆ. ಅಷ್ಟೇ ಅಲ್ಲದೆ ಹಲವಾರು ಅವಘಡಗಳಿಗೆ ಕಾರಣವಾಗಿದೆ. 2017- 18ರಲ್ಲಿ ಸುಮಾರು 2.8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೇತುವೆಯಲ್ಲಿ ಐದು ತೂಬುಗಳಿದ್ದು, ನದಿಯ ನೀರು ಸಮುದ್ರಕ್ಕೆ ಸೇರುವಂತೆ ಸಂಪರ್ಕ ಕಲ್ಪಿಸಲಾಗಿತ್ತು. ವಿಪರ್ಯಾಸವೆಂದರೆ ಕಾಮಿನಿ ನದಿಯ ನೀರು ಸಮುದ್ರವನ್ನು ಸೇರುವ ಬದಲು, ಸಮುದ್ರದ ನೀರೇ ಕಾಮಿನಿ ನದಿಯನ್ನು ಸೇರಲು ದಾರಿ ಮಾಡಿಕೊಟ್ಟಂತಾಗಿದೆ. ನಿರ್ಮಾಣದ ಸಂದರ್ಭದಲ್ಲಿಯೇ ಸ್ಥಳೀಯರು ಮತ್ತು ಮೊಗವೀರರು ತಮ್ಮ ಅನುಭವದ ಹಿನ್ನೆಲೆಯಲ್ಲಿ, ಈ ನಿರ್ಮಾಣ ಅವೈಜ್ಞಾನಿಕವಾಗಿದೆ ಎಂದು ತಿಳಿಸಿದ್ದರೂ, ಸರ್ಕಾರ ಗಮನಹರಿಸಿರಲಿಲ್ಲ. ಕಾಮಿನಿ ನದಿಯ ಹಿನ್ನೀರು ಪ್ರದೇಶದಲ್ಲಿ ಈಜಲು ತೆರಳಿದ ಯುವಕನೋರ್ವ ಮೃತಪಟ್ಟ ಘಟನೆ ಕೂಡ ನಡೆದಿದೆ. ಜೊತೆಗೆ ಕೃಷಿಭೂಮಿಯಲ್ಲೂ ಇದರಿಂದಾಗಿ ನೆರೆ ನೀರು ನಿಲ್ಲುವುದರಿಂದ, ಕೃಷಿ ಚಟುವಟಿಕೆಗಳನ್ನು ನಡೆಸಲು ರೈತರಿಗೆ ಸಮಸ್ಯೆ ಉಂಟಾಗಿದೆ. ಅಂದು ಇಲಾಖೆಯ ಇಂಜಿನಿಯರ್ ಆಗಿದ್ದ ನಾಗರಾಜ್ ಈ ಸೇತುವೆಯನ್ನು ನಿರ್ಮಿಸಿದ್ದು, ನೂರು ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎಂದು ಭರವಸೆ ನೀಡಿದ್ದರು. ಆದರೆ, ಏಳು ಎಂಟು ವರ್ಷಗಳ ಒಳಗಾಗಿ ಯಾವುದೇ ಪ್ರಯೋಜನಕ್ಕೂ ಬಾರದಂತಾಗಿದೆ.
* ಅಂಕೋಲ: ಮೂರು ಬಾರಿ ಪಲ್ಟಿ ಹೊಡೆದ ರಾಜ್ಯ ರಸ್ತೆ ಸಾರಿಗೆ ಬಸ್
ಅಂಕೋಲ: ಕುಮಟಾ- ಶಿರಸಿ ಮಾರ್ಗವನ್ನು ದುರಸ್ತಿಯ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದು, ಈ ಮಾರ್ಗದಲ್ಲಿ ಚಲಿಸುವ ವಾಹನಗಳು ವಡ್ಡಿ ಮಾರ್ಗವನ್ನು ಹಿಡಿಯಬೇಕಿದೆ. ಇದು ಘಟ್ಟ ಪ್ರದೇಶವಾಗಿದ್ದು, ಹಲವಾರು ತಿರುವುಗಳನ್ನು ಹೊಂದಿರುವ ಪರಿಣಾಮವಾಗಿ, ಚಾಲಕನ ನಿಯಂತ್ರಣ ತಪ್ಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಮೂರು ಬಾರಿ ಪಲ್ಟಿ ಹೊಡೆದು, ಕಂದಕಕ್ಕೆ ಉರುಳಿದ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದೆ. ಬಸ್ ನಲ್ಲಿ ಒಟ್ಟು 49 ಜನ ಪ್ರಯಾಣಿಕರಿದ್ದು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ, ಗಾಯಾಳುಗಳನ್ನು ಮೇಲಕ್ಕೆತ್ತಿ ಖಾಸಗಿ ವಾಹನಗಳ ಮೂಲಕ ಅವರನ್ನು ಅಂಕೋಲಾ ಮತ್ತು ಕುಮಟಾ ಆಸ್ಪತ್ರೆಗಳಿಗೆ ಕಳುಹಿಸಿದರು. ಕುಮಟಾ ಘಟಕಕ್ಕೆ ಸೇರಿದ ಈ ಬಸ್ ಬಳ್ಳಾರಿಯಿಂದ ಕುಮಟಾದ ಕಡೆಗೆ ಸಾಗುತ್ತಿತ್ತು ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಂಕೋಲಾ ಪೊಲೀಸರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಿ.ಎಂ.ಶೆಟ್ಟಿ ಅವರು ವಡ್ಡಿಘಾಟ್ ಪ್ರದೇಶದಲ್ಲಿನ ತಿರುವುಗಳು ಬಹಳ ಅಪಾಯಕಾರಿಯಾಗಿದ್ದು, ರಸ್ತೆಯನ್ನು ಅಗಲೀಕರಿಸಿ, ತಿರುವುಗಳನ್ನು ಸರಿಪಡಿಸುವ ಮೂಲಕ ಸುರಕ್ಷತಾ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಪಡಿಸಿದರು.







