ಕರಾವಳಿ ಟಾಪ್ 9 ನ್ಯೂಸ್
* ಉಡುಪಿ: ಜೂಜಾಟದ ಆರೋಪಿಗಳ ಬಂಧನ
* ಕುಂದಾಪುರ: ಬೈಕ್ ಡಿಕ್ಕಿ; ವ್ಯಕ್ತಿಗೆ ಗಾಯ
* ಉಳ್ಳಾಲ: ಮಲ ತಂದೆಯಿಂದಲೇ ಅತ್ಯಾಚಾರ
* ಪುತ್ತೂರು: ಸಿಡಿಲ ಹೊಡೆತಕ್ಕೆ ನಾಲ್ವರು ಅಸ್ವಸ್ಥ
* ಮಂಗಳೂರು: ಕ್ಯಾಂಟೀನ್ ಪಾತ್ರೆಗಳ ಕಳುವು
* ಸುಳ್ಯ: ಅಪರೂಪದ ಕಾಯಿಲೆಯಿಂದ ಮಹಿಳೆ ಸಾವು
* ಮೂಡಬಿದರೆ: ಮಿತಿ ಮೀರಿದ ಗಾಳಿ ಮಳೆಯಿಂದಾಗಿ ಅವಘಡ
* ಕಾರ್ಕಳ: ಅಭಿಷೇಕ್ ಆತ್ಮಹತ್ಯೆ; ಯುವತಿಯ ಬಂಧನ
* ಹೊನ್ನಾವರ: ವಿದ್ಯುತ್ ತಂತಿ ತಗುಲಿ ದಂಪತಿಗಳ ಸಾವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಹಿರೇಬೆಟ್ಟು ಗ್ರಾಮದ ಬಾಳ್ಕಟ್ಟ ಎನ್ನುವಲ್ಲಿ, ಸಾರ್ವಜನಿಕ ಪ್ರದೇಶದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಮಣಿಪಾಲದ ಪೊಲೀಸರು ದಾಳಿ ನಡೆಸಿದ್ದಾರೆ. ಕೋಳಿ ಅಂಕ ನಡೆಸುತ್ತಿದ್ದ, ಐದು ಮಂದಿ ಆರೋಪಿಗಳಾದ ಹಿರೇಬೆಟ್ಟಿನ ಶೇಖರ ಪೂಜಾರಿ, ಗಣಪತಿ ನಾಯ್ಕ, ರವಿ ಶೆಟ್ಟಿ, 80 ಬಡಗಬೆಟ್ಟಿನ ಸುರೇಶ್ ಪೂಜಾರಿ ಮತ್ತು ಅತ್ರಾಡಿಯ ಈರಪ್ಪ ನಲ್ಕೆ ಅವರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಸಾವಿರಾರು ರೂಪಾಯಿ ಹಣ, ಮೊಬೈಲ್ ಗಳು, ದ್ವಿಚಕ್ರವಾಹನಗಳು ಹಾಗೂ ಕೋಳಿ ಅಂಕಕ್ಕೆ ಬಳಸಿದ ವಿವಿಧ ತಳಿಯ ಕೋಳಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕುಂದಾಪುರ: ಬೈಕ್ ಢಿಕ್ಕಿ; ವ್ಯಕ್ತಿಗೆ ಗಾಯ
ಕುಂದಾಪುರ: ಗಂಗೊಳ್ಳಿಯ ಬಂದರಿನ ರಸ್ತೆಯಲ್ಲಿ ಚಂದು ಎನ್ನುವ ವ್ಯಕ್ತಿಯು, ಮೀನುಗಳು ತುಂಬಿರುವ ಬುಟ್ಟಿಯನ್ನು ಹೊತ್ತುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಬೈಕ್ ಒಂದು ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ನೆಲಕ್ಕೆ ಬಿದ್ದ ಚಂದು ಅವರು ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಘಟನೆಗೆ ಸಂಬಂಧಿಸಿದಂತೆ ಭವಾನಿ ಖಾರ್ವಿ ಎನ್ನುವವರು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಉಳ್ಳಾಲ: ಮಲತಂದೆಯಿಂದಲೇ ಅತ್ಯಾಚಾರ.
ಉಳ್ಳಾಲ: ಬಾಲಕಿಯೊಬ್ಬಳು ತನ್ನ ಮಲತಂದೆಯಿಂದಲೇ ನಿರಂತರವಾಗಿ ಅತ್ಯಾಚಾರಕ್ಕೆ ಒಳಗಾದ ಘಟನೆ ನಡೆದಿದೆ. ಮಾಸ್ತಿಕಟ್ಟೆಯ ನಿವಾಸಿಯಾದ ಅಮೀರ್ ಎನ್ನುವ ವ್ಯಕ್ತಿ ಈ ದುಷ್ಕೃತ್ಯವನ್ನು ಎಸಗಿದ ದುರುಳನಾಗಿದ್ದಾನೆ. ಬಾಲಕಿಯು ಏಳು ವರ್ಷದವಳಿದ್ದಾಗ ಅಮೀರ್ ಅತ್ಯಾಚಾರವೆಸಗಿದ್ದು, ಈಗ ಆಕೆ 12 ವರ್ಷದವಳಾಗಿದ್ದು, ಬಾಲಕಿಯ ಮೇಲೆ ಸತತವಾಗಿ ಅತ್ಯಾಚಾರ ನಡೆಸುತ್ತಲೇ ಇದ್ದ ಎನ್ನಲಾಗಿದೆ. ಬಾಲಕಿಯ ಮನೆಯವರು ಮರ್ಯಾದೆಗೆ ಹೆದರಿ, ಪೊಲೀಸರಿಗೆ ದೂರು ನೀಡಲು ನಿರಾಕರಿಸಿದ್ದರು. ಮಾನಸಿಕವಾಗಿ ನೊಂದಿದ್ದ ಹಿನ್ನೆಲೆಯಲ್ಲಿ, ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಅತ್ಯಾಚಾರದ ಸಂಗತಿ ಬೆಳಕಿಗೆ ಬಂದಿದೆ. ಉಳ್ಳಾಲದ ಪೊಲೀಸರು ಆರೋಪಿಯಾದ ಅಮೀರ್ ನನ್ನು ಪೋಕ್ಸೋ ಪ್ರಕರಣದಡಿ ಬಂಧನಕ್ಕೆ ಒಳಪಡಿಸಿದ್ದಾರೆ.
* ಪುತ್ತೂರು: ಸಿಡಿಲ ಹೊಡೆತಕ್ಕೆ ನಾಲ್ವರು ಅಸ್ವಸ್ಥ
ಪುತ್ತೂರು: ಕಳೆದೆರಡು ದಿನಗಳ ಹಿಂದೆ, ಸಿಡಿಲಿನ ಹೊಡೆತಕ್ಕೆ ಮಗು ಸೇರಿದಂತೆ ನಾಲ್ವರು ಅಸ್ವಸ್ಥಗೊಂಡ ಘಟನೆ ಬೆದ್ರಾಳ ಸಮೀಪದ ನೆಲ್ಲಿಗೇರಿಯಲ್ಲಿ ನಡೆದಿದೆ. ದಯಾನಂದ ಕುಲಾಲ್ ಎನ್ನುವವರಿಗೆ ಸೇರಿದ ಮನೆಗೆ ಸಿಡಿಲು ಬಡಿದಿದ್ದು, ಅದರ ಆರ್ಭಟಕ್ಕೆ ಮನೆ ಹಾನಿಗೊಳಪಟ್ಟಿದೆ. ಇದರ ಪರಿಣಾಮವಾಗಿ ಮನೆಯೊಳಗಿದ್ದ ದಯಾನಂದ ಕುಲಾಲ್, ಅವರ ಒಂದು ವರ್ಷದ ಮಗು, ತಾಯಿ ಮತ್ತು ಪತ್ನಿ ಅಸ್ವಸ್ಥಗೊಂಡಿದ್ದಾರೆ. ದಯಾನಂದ್ ಕುಟುಂಬದವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷರಾದ ಕೆ.ಬಾಲಚಂದ್ರ ಅವರು ಭೇಟಿ ನೀಡಿದರು.
* ಮಂಗಳೂರು: ಕ್ಯಾಂಟೀನ್ ಪಾತ್ರೆಗಳ ಕಳುವು
ಮಂಗಳೂರು: ಕಳೆದ ಕೆಲವು ದಿನಗಳ ಹಿಂದೆ, ಬಾವುಟಗುಡ್ಡೆಯ ಸುಜಿತ್ ಎಸ್ ನಾಯ್ಕ ಎನ್ನುವವರಿಗೆ ಸೇರಿದ ಕ್ಯಾಂಟೀನ್ ನ ಪಾತ್ರೆಗಳು ಕಳುವಾದ ಘಟನೆ ಬೆಳಕಿಗೆ ಬಂದಿದೆ. ಶನಿವಾರದಂದು ಕ್ಯಾಂಟೀನ್ ಅಡುಗೆ ಕೋಣೆಯನ್ನು ಶುಚಿಗೊಳಿಸುವ ಸಲುವಾಗಿ ಪಾತ್ರೆಗಳನ್ನು ಹೊರಗಿರಿಸಲಾಗಿತ್ತು. ಮರುದಿನ ಬೆಳಿಗ್ಗೆ ಒಂಭತ್ತು ಗಂಟೆಯ ಸುಮಾರಿಗೆ ಬಂದು ನೋಡಿದಾಗ ಪಾತ್ರೆಗಳು ಅಲ್ಲಿಯೇ ಇದ್ದವು. ಕ್ಯಾಂಟೀನ್ ಮಾಲೀಕರು ಮಧ್ಯಾಹ್ನ 12 ಗಂಟೆಯವರೆಗೆ ಇದ್ದು, ಮನೆಗೆ ತೆರಳಿದ್ದರು. ಪುನಃ ಮೂರು ಗಂಟೆಗೆ ಬಂದಾಗ ಪಾತ್ರೆಗಳು ಕಳುವಾಗಿದ್ದವು. ಸುಮಾರು 24.೦೦೦ ರೂಪಾಯಿ ಮೌಲ್ಯದ ಅಲ್ಯುಮಿನಿಯಂ ಪಾತ್ರೆಗಳು ಕಳ್ಳತನವಾಗಿದೆ ಎಂದು ಸುಜಿತ್ ಅವರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಸುಳ್ಯ: ಅಪರೂಪದ ಕಾಯಿಲೆಯಿಂದ ಮಹಿಳೆ ಸಾವು
ಸುಳ್ಯ: ಚಾಂದಿನಿ ಎನ್ನುವ ಮಹಿಳೆಯೊಬ್ಬರು ಹೈಪರ್ ಐಜಿಇ ಮೆಡಿಕೇಟೆಡ್ ಮತ್ಸ್ ಸೆಲ್ ಆ್ಯಕ್ಟಿವೇಷನ್ ಸಿಂಡ್ರೋಮ್ ಎನ್ನುವ ಅಪರೂಪದ ಕಾಯಿಲೆಯಿಂದ ಹಲವಾರು ವರ್ಷಗಳಿಂದ ಬಳಲುತ್ತಿದ್ದರು. ಕಳೆದ 30 ವರ್ಷಗಳಿಂದ ಇಪ್ಪತ್ತಕ್ಕೂ ಹೆಚ್ಚು ಬಾರಿ ಶಸ್ತ್ರಚಿಕಿತ್ಸೆ, ಹತ್ತಕ್ಕೂ ಹೆಚ್ಚು ಬಾರಿ ಕೃತಕ ಉಸಿರಾಟ, ಕಿಮೋಥೆರಪಿ, ಶಾಕ್ ಟ್ರೀಟ್ ಮೆಂಟ್ ಜೊತೆಗೆ ಪರಿಣಾಮಕಾರಿಯಾದ ಔಷಧಿಗಳ ಸೇವನೆ ಮೊದಲಾದ ಚಿಕಿತ್ಸೆಗಳನ್ನು ಪಡೆಯುತ್ತಿದ್ದರು. ಅಲ್ಲದೆ ತಮ್ಮ ಕಾಯಿಲೆಯ ಚಿಕಿತ್ಸೆಗಾಗಿ ಹೊರ ರಾಜ್ಯಗಳ ಆಸ್ಪತ್ರೆಗಳಿಗೂ ದಾಖಲಾಗಿದ್ದರು. ದುಬಾರಿ ವೆಚ್ಚದ ಚಿಕಿತ್ಸೆಗಾಗಿ, ಅವರ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವಂತೆ ಅಧಿವೇಶನದಲ್ಲಿ ಸರ್ಕಾರಕ್ಕೆ ಮನವಿಯನ್ನು ಸಹ ಸಲ್ಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಚಾಂದಿನಿ ಅವರು ಕಳೆದೆರಡು ದಿನಗಳ ಹಿಂದೆ ಮೃತಪಟ್ಟಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
* ಮೂಡಬಿದರೆ: ಮಿತಿಮೀರಿದ ಗಾಳಿ ಮಳೆಯಿಂದಾಗಿ ಅವಘಡ
ಮೂಡಬಿದರೆ: ಶನಿವಾರದಂದು ಗಾಳಿ ಸಹಿತ ಸುರಿದ ಧಾರಾಕಾರ ಮಳೆಯಿಂದಾಗಿ, ತಾಲ್ಲೂಕಿನ ಸುತ್ತಮುತ್ತ ಅನೇಕ ರೀತಿಯ ಅವಘಡಗಳು ಸಂಭವಿಸಿವೆ. ಸಿಡಿಲ ಅಬ್ಬರಕ್ಕೆ ಇರುವೈಲು ದೇವರುಗುಡ್ಡೆಯಲ್ಲಿರುವ ರೇವತಿ ಪೂಜಾರ್ತಿ ಎನ್ನುವವರಿಗೆ ಸೇರಿದ ಮನೆ ಹಾನಿಗೊಳಪಟ್ಟಿದೆ. ಈ ಅವಘಡ ನಡೆಯುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಲಿಲ್ಲ. ಆದರೆ ಸಿಡಿಲಿನ ಹೊಡೆತಕ್ಕೆ ಮನೆಯ ವಿದ್ಯುತ್ ಉಪಕರಣಗಳು ಮತ್ತು ಇತರ ವಸ್ತುಗಳು ಹಾಳಾಗಿವೆ ಎನ್ನುವ ಸಂಗತಿ ತಿಳಿದುಬಂದಿದೆ.
•ಕಾರ್ಕಳ: ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಹನಿ ಟ್ರ್ಯಾಪ್ ಗೆ ಒಳಪಟ್ಟು, ಮಾನಸಿಕವಾಗಿ ನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಎನ್ನಲಾದ, ನಿಟ್ಟೆಯ ಪರಪ್ಪಾಡಿ ನಿವಾಸಿ ಅಭಿಷೇಕ್ ಆಚಾರ್ಯ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸರು ಯುವತಿಯೊಬ್ಬಳನ್ನು ಬಂಧಿಸಿದ್ದಾರೆ. ಅಭಿಷೇಕ್ ಬರೆದಿಟ್ಟ ಡೆತ್ ನೋಟ್ ನಲ್ಲಿ ನಿರೀಕ್ಷಾ ಎಂಬ ಹೆಸರು ದಾಖಲಾಗಿತ್ತು, ಈ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಚಿಕ್ಕಮಗಳೂರು ಮೂಲದ ನಿರೀಕ್ಷಾ ತನ್ನಿಬ್ಬರು ಸ್ನೇಹಿತೆಯರೊಂದಿಗೆ ಕುದ್ಕೋರಿಗುಡ್ಡೆ ಎನ್ನುವಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಳು. ನಿರೀಕ್ಷಾ, ತನ್ನ ಸ್ನೇಹಿತೆಯರು ಬಟ್ಟೆ ಬದಲಾಯಿಸುವ ಸಂದರ್ಭದಲ್ಲಿ ರಹಸ್ಯವಾಗಿ ವೀಡಿಯೋ ಮಾಡಿಕೊಂಡು, ಬಹಿರಂಗವಾಗಿ ಹರಿಯಬಿಟ್ಟಿದ್ದಳು. ಜೊತೆಗೆ ಅದನ್ನು ಅಭಿಷೇಕ್ ಅವರಿಗೂ ಕಳುಹಿಸಿದ್ದಳು ಎನ್ನುವ ಸಂಗತಿ ಪೊಲೀಸರು ತನಿಖೆ ನಡೆಸುವ ಸಮಯದಲ್ಲಿ ಬೆಳಕಿಗೆ ಬಂದಿದೆ. ಅಭಿಷೇಕ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಟ್ರುತ್ ಗ್ರೂಪ್ ಎನ್ನುವ ವಾಟ್ಸಾಪ್ ಗ್ರೂಪನ್ನು ರಚಿಸಿ, ಅದರಲ್ಲಿ ನಿರೀಕ್ಷಾ ಕಳುಹಿಸಿದ ವೀಡಿಯೋಗಳು ಸೇರಿದಂತೆ, ಇದೇ ರೀತಿಯ ಇತರೆ ವೀಡಿಯೋಗಳನ್ನು ಆ ಗ್ರೂಪಿನಲ್ಲಿ ಹಾಕಿದ್ದನು. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಾದ ನಿರೀಕ್ಷಾ ಸ್ನೇಹಿತೆಯರು, ಕದ್ರಿ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ನಿರೀಕ್ಷಾಳನ್ನು ಬಂಧಿಸಿದ್ದಾರೆ. ನಿರೀಕ್ಷಾ ಅಭಿಷೇಕ್ ನನ್ನು ಪ್ರೀತಿಸುತ್ತಿದ್ದು, ಆಕೆಯ ಗುಂಪಿನಲ್ಲಿ ರಾಕೇಶ್, ರಾಹುಲ್ ಮತ್ತು ತಸ್ಲೀಮ್ ಸೇರಿಕೊಂಡಿದ್ದು, ಹಣ ನೀಡುವಂತೆ ಮಾನಸಿಕ ಹಿಂಸೆ ನೀಡಿರುವುದಷ್ಟೇ ಅಲ್ಲದೆ, ದೈಹಿಕ ಕಿರುಕುಳವನ್ನು ಸಹ ನೀಡಿ ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಅಭಿಷೇಕ್ ಡೆತ್ ನೋಟ್ ನಲ್ಲಿ ಬರೆದಿದ್ದ ಎನ್ನಲಾಗಿದೆ.
* ಹೊನ್ನಾವರ: ವಿದ್ಯುತ್ ತಂತಿ ತಗುಲಿ ದಂಪತಿಗಳ ಸಾವು
ಹೊನ್ನಾವರ: ಬಟ್ಟೆ ವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಆಕಸ್ಮಿಕವಾಗಿ ಅದು ತಗುಲಿ ದಂಪತಿಗಳು ಮೃತಪಟ್ಟ ಘಟನೆ ಕಾಸರಕೋಡಿನಲ್ಲಿ ನಡೆದಿದೆ. ಸಂತೋಷ್ ಗಣಪು ಗೌಡ ಅವರ ಮನೆಯ ಅಂಗಳದ ಸಮೀಪವೇ ಹೈಟೆನ್ಶನ್ ತಂತಿ ಬಿದ್ದಿದ್ದು, ಆಕಸ್ಮಿಕವಾಗಿ ಅದನ್ನು ಸ್ಪರ್ಶಿಸಿದ ಪರಿಣಾಮದಿಂದಾಗಿ ಸಂತೋಷ್ ಗಣಪು ಗೌಡ ಮತ್ತು ಸೀತು ಸಂತೋಷ್ ಗೌಡ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇಬ್ಬರ ಮೃತದೇಹಗಳನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ವಿದ್ಯುತ್ ಇಲಾಖೆಯ ನಿರ್ಲಕ್ಷದಿಂದಲೇ ಈ ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ, ಸಚಿವರಾದ ಮಂಕಾಳ ವೈದ್ಯ ಮೃತರ ಕುಟುಂಬಸ್ಥರಿಗೆ ಸಾಂತ್ವನವನ್ನು ಹೇಳಿ, ಆರ್ಥಿಕ ನೆರವನ್ನು ನೀಡಿದರು ಎನ್ನುವ ಸಂಗತಿ ತಿಳಿದುಬಂದಿದೆ







