ಕರಾವಳಿ ಟಾಪ್ ನ್ಯೂಸ್
* ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ; ನಾಲ್ವರಿಗೆ ಮರು ನೋಟೀಸ್
* ಕಾಪು: ಅಕ್ರಮ ಪಟಾಕಿ ದಾಸ್ತಾನು; ಪೊಲೀಸರಿಂದ ದಾಳಿ
* ಕಾರ್ಕಳ: ಕುಡಿತದ ಚಟಕ್ಕೆ ಬಿದ್ದು, ವ್ಯಕ್ತಿ ಆತ್ಮಹತ್ಯೆ
* ಭಟ್ಕಳ: ಟೆಂಡರ್ ಹೆಸರಿನಲ್ಲಿ ಹಣ ಪಡೆದು ವಂಚನೆ
•ಬಂಟ್ವಾಳ: ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿ; ವ್ಯಕ್ತಿಯ ಬಂಧನ
* ಮೂಡಬಿದರೆ: ಬಾವಿಗೆ ಬಿದ್ದು ಯುವಕ ಸಾವು
•ಪುತ್ತೂರು: ಕೋಳಿ ಅಂಕದ ಮೇಲೆ ದಾಳಿ
* ಕಡಬ: ಘಟ್ಟದ ಕೆಳಗೆ ಮುಗುಚಿ ಬಿದ್ದ ದಿಬ್ಬಣದ ವಾಹನ
* ಮಂಗಳೂರು: ಕಾರ್ಖಾನೆಯ ತ್ಯಾಜ್ಯದಿಂದ ಎದುರಾಗಿದೆ ಸಮಸ್ಯೆ
* ಬೈಂದೂರು: ಮಂಕಿ ಪಾರ್ಕ್ ಗೆ ಸಾರ್ವಜನಿಕರಿಂದ ಬೇಡಿಕೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣ; ನಾಲ್ವರಿಗೆ ಮರು ನೋಟಸ್
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ಕೆಲವು ದಿನಗಳ ಹಿಂದೆ, ಅಂದರೆ ಅಕ್ಟೋಬರ್ 27ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ತಂಡವು ನಾಲ್ವರಿಗೆ ನೋಟಿಸ್ ನೀಡಿದ್ದು, ನಾಲ್ವರ ಪರವಿರುವ ನ್ಯಾಯವಾದಿಗಳು ಎಸ್ಐಟಿ ಕಛೇರಿಗೆ ಆಗಮಿಸಿ, ಅಧಿಕಾರಿಗಳ ಬಳಿ ವಿಚಾರಣೆಗೆ ಸಮಯಾವಕಾಶವನ್ನು ಕೇಳಲಾಗಿದ್ದರಿಂದ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮತಿ ನೀಡಿದ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿಗೆ ಏಳು ದಿನಗಳು ಮತ್ತು ಉಳಿದ ಮೂವರಿಗೆ ಮೂರು ದಿನಗಳ ಕಾಲಾವಕಾಶ ನೀಡಿದ್ದರು. ಇದೀಗ ಸಮಯ ಮುಗಿದಿದ್ದು, ವಿಚಾರಣೆಗೆ ಹಾಜರಾಗುವಂತೆ ಮರು ನೋಟಿಸ್ ನೀಡಲಾಗಿದೆ. ಮರು ನೋಟಿಸ್ ನಲ್ಲಿ ಅಕ್ಟೋಬರ್ 31ರಂದು ವಿಠಲ ಶೆಟ್ಟಿ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಮತ್ತು ಜಯಂತ್ ಟಿ ನವೆಂಬರ್ ಮೂರರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಉಜಿರೆಯ ತಿಮರೋಡಿ ಮನೆ ಮತ್ತು ವಿಠಲ ಗೌಡ ಮನೆಯ ಬಾಗಿಲಿಗೆ ಹಾಗೂ ಬೆಂಗಳೂರಿನಲ್ಲಿ ಜಯಂತ್ ಟಿ ಮತ್ತು ಗಿರೀಶ್ ಮಟ್ಟಣ್ಣನವರ್ ಮನೆಗಳ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಆದರೆ ಸುಜಾತ ಭಟ್ ಮಾತ್ರ ಅಕ್ಟೋಬರ್ 27ರಂದೇ ಎಸ್ಐಟಿ ಕಛೇರಿಗೆ ಆಗಮಿಸಿ, ವಿಚಾರಣೆಯನ್ನು ಎದುರಿಸಿ ತೆರಳಿದ್ದರು ಎನ್ನಲಾಗಿದೆ.
* ಕಾಪು: ಅಕ್ರಮ ಪಟಾಕಿ ದಾಸ್ತಾನು; ಪೊಲೀಸರಿಂದ ದಾಳಿ
ಕಾಪು: ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿದ ಹಿನ್ನೆಲೆಯಲ್ಲಿ, ಪೊಲೀಸರು ದಾಳಿ ನಡೆಸಿದ ಘಟನೆ, ಕಳೆದೆರಡು ದಿನಗಳ ಹಿಂದೆ ಮೂಡಬೆಟ್ಟು ಗ್ರಾಮದಲ್ಲಿ ನಡೆದಿದೆ. ಮೂಡಬೆಟ್ಟು ದೇವಸ್ಥಾನದ ಕಡೆಗೆ ತೆರಳುವ ರಸ್ತೆಯಲ್ಲಿರುವ ಕ್ಲೇರಾ ಮೆಂಡೋನ್ಸ್ ಎನ್ನುವವರ ಮನೆಯಲ್ಲಿ ಪಟಾಕಿಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದು, ಆರೋಪಿಯಾದ ಗೌತಮ್ ಪ್ರಭುವನ್ನು ಸೆರೆಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಒಟ್ಟು ಎರಡು ಲಕ್ಷ ರೂಪಾಯಿಯಷ್ಟು ಬೆಲೆ ಬಾಳುವ, ವಿವಿಧ ಕಂಪನಿಗಳಿಗೆ ಸೇರಿದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕಾರ್ಕಳ: ಕುಡಿತದ ಚಟಕ್ಕೆ ಬಿದ್ದು, ವ್ಯಕ್ತಿ ಆತ್ಮಹತ್ಯೆ
ಕಾರ್ಕಳ: ಇರ್ವತ್ತೂರು ಗ್ರಾಮದ ಮಹೇಶ್ ಶೆಟ್ಟಿ ಎನ್ನುವವರಿಗೆ ಕುಡಿತದ ಚಟ ವಿಪರೀತವಾಗಿದ್ದು, ಇದರಿಂದ ಬೇಸತ್ತ ಪತ್ನಿ ಮನೆಯನ್ನು ಬಿಟ್ಟು ಹೋಗಿದ್ದರು. ಕುಡಿತದ ಚಟಕ್ಕೆ ಬಲಿಯಾಗಿ ಮತ್ತು ಪತ್ನಿ ತನ್ನನ್ನು ಬಿಟ್ಟು ಹೋಗಿರುವ ಕಾರಣ, ಮನನೊಂದು ಮಹೇಶ್ ಶೆಟ್ಟಿ ಕಳೆದೆರಡು ದಿನಗಳ ಹಿಂದೆ, ರಾತ್ರಿಯ ಸಮಯದಲ್ಲಿ ಮನೆಯ ಸಮೀಪದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಭಟ್ಕಳ: ಟೆಂಡರ್ ಹೆಸರಿನಲ್ಲಿ ಹಣ ಪಡೆದು ವಂಚನೆ
ಭಟ್ಕಳ: ವ್ಯಕ್ತಿಯೊಬ್ಬರು ತನಗೆ ಟೆಂಡರ್ ಲಭಿಸಿದ್ದು, ಅದರಲ್ಲಿ ಬರುವ ಲಾಭಾಂಶದಲ್ಲಿ ಸ್ವಲ್ಪ ಪ್ರಮಾಣ ನಿಮಗೆ ನೀಡುತ್ತೇನೆ ಎಂದು ನಂಬಿಸಿ, ಮತ್ತೊಬ್ಬ ವ್ಯಕ್ತಿಯಿಂದ ಹಣ ಪಡೆದು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಆರೋಪಿಯಾದ ಆಸೀಫ್ ಇಕ್ಬಾಲ್, ಕಳೆದ ಎರಡು ವರ್ಷಗಳ ಹಿಂದೆ, ಮೊಹಮ್ಮದ್ ಶಭಿ ಎನ್ನುವವರಿಗೆ ಮೆಟ್ರೋ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಕಂಪನಿಯ ನಕಲಿ ದಾಖಲೆಗಳನ್ನು ತೋರಿಸಿ, ಇದರ ಪ್ರಾಜೆಕ್ಟ್ 2025ರಲ್ಲಿ ಪ್ರಾರಂಭವಾಗಲಿದ್ದು, 25 ಲಕ್ಷದಷ್ಟು ಹಣವನ್ನು ಹೂಡಿಕೆ ಮಾಡಿದರೆ, ಅದರ ಮೂರು ಪಟ್ಟು ಹಣ ಮರಳಿ ಲಭಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಮೊಹಮ್ಮದ್ ಶಭಿ ಅವರು ಮೊದಲಿಗೆ 5 ಲಕ್ಷ ರೂಪಾಯಿ ನೀಡಿ, 2023ರ ಜೂನ್ ತಿಂಗಳಿನಲ್ಲಿ 13 ಲಕ್ಷ, ನಂತರ ಒಂದು ಲಕ್ಷ, ಎರಡು ಲಕ್ಷ ಹೀಗೆ ಹಂತ ಹಂತವಾಗಿ ಸುಮಾರು 21 ಲಕ್ಷದಷ್ಟು ಹಣವನ್ನು ನೀಡಿದ್ದಾರೆ. 2025 ಬಂದರೂ, ಪ್ರಾಜೆಕ್ಟ್ ಕುರಿತು ಯಾವುದೇ ಮಾಹಿತಿ ಲಭಿಸದೆ ಕೇಳಿದಾಗ ಆರೋಪಿ ಪ್ರತಿಕ್ರಿಯಿಸಲಿಲ್ಲ. ಕೊಟ್ಟ ಹಣವನ್ನಾದರೂ ಮರಳಿ ನೀಡು ಎಂದರೂ, ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ಮೊಹಮ್ಮದ್ ಶಭಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಮೊಹಮ್ಮದ್ ಶಭಿ ಅವರ ದೂರಿನ ಆಧಾರದ ಮೇಲೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
* ಬಂಟ್ವಾಳ: ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿ ; ವ್ಯಕ್ತಿಯ ಬಂಧನ
ಬಂಟ್ವಾಳ: ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಸ್ಕೂಟಿ ಸವಾರನೊಬ್ಬ ಸಂಚಾರಕ್ಕೆ ಅಡ್ಡಿ ಪಡಿಸಿದ ಘಟನೆ ನಡೆದಿದೆ. ಮಹಿಳೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮಂಗಳೂರಿನ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತಿತ್ತು. ಆಗ ಬಿ.ಸಿ. ರಸ್ತೆಯ ಎಸ್ ಜಿ ವೃತ್ತದಿಂದ ಆ್ಯಂಬುಲೆನ್ಸ್ ಮುಂಭಾಗದಲ್ಲಿ, ಸ್ಕೂಟಿಯಲ್ಲಿ ಹೋಗುತ್ತಿದ್ದ ಮೊಹಮ್ಮದ್ ಮನ್ಸೂರ್ ಎನ್ನುವ ವ್ಯಕ್ತಿಯು, ಆ್ಯಂಬುಲೆನ್ಸ್ ನ ಶಬ್ದ ಕೇಳಿ ಬಂದರೂ, ದಾರಿಯನ್ನು ಬಿಟ್ಟುಕೊಡದೆ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಬಂಟ್ವಾಳದ ಪೊಲೀಸರು ಮೊಹಮ್ಮದ್ ಮನ್ಸೂರ್ ನನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ. ಈ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೊಹಮ್ಮದ್ ಮನ್ಸೂರ್ ವಿರುದ್ಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಕಾಲಂ 110, 125 ಬಿಎನ್ಎಸ್ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
* ಮೂಡಬಿದರೆ: ಬಾವಿಗೆ ಬಿದ್ದು ಯುವಕ ಸಾವು
ಮೂಡಬಿದರೆ: ಯುವಕನೊಬ್ಬ ಬಾವಿಗೆ ಬಿದ್ದು ಮೃತಪಟ್ಟ ಘಟನೆ, ಪಡುಮಾರ್ನಾಡು ಗ್ರಾಮದ ಮೊಡಂದೇಲು ಎನ್ನುವಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದಿದೆ. ಸಮೀಪದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಲಕೃಷ್ಣ ಶೆಟ್ಟಿ ಅವರು, ಮರಳಿ ಬರುತ್ತಿದ್ದ ಸಂದರ್ಭದಲ್ಲಿ ತಡೆಗೋಡೆ ಇರದ ಕಾರಣ, ಬಾವಿ ಇರುವುದು ಅವರ ಗಮನಕ್ಕೆ ಬಂದಿಲ್ಲ. ಪರಿಣಾಮವಾಗಿ ಬಾಲಕೃಷ್ಣ ಶೆಟ್ಟಿ ಅವರು ಆಯಾತಪ್ಪಿ ಬಾವಿಯೊಳಗೆ ಬಿದ್ದಿದ್ದಾರೆ. ಘಟನೆ ನಡೆದ ಎರಡು ದಿನಗಳ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಪುತ್ತೂರು: ಕೋಳಿ ಅಂಕದ ಮೇಲೆ ದಾಳಿ
ಪುತ್ತೂರು: ಪೊಲೀಸರಿಗೆ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಕೋಳಿ ಅಂಕದ ಮೇಲೆ ದಾಳಿ ನಡೆಸಿದ ಘಟನೆ, ಬೆಳ್ಳಿಪ್ಪಾಡಿ ಗ್ರಾಮದ ಕಠಾರ ಸಮೀಪದ ಗುಡ್ಡವೊಂದರಲ್ಲಿ ನಡೆದಿದೆ. ಪೊಲೀಸರು ಆಗಮಿಸುತ್ತಿದ್ದಂತೆ ಕೋಳಿ ಅಂಕದಲ್ಲಿ ಭಾಗಿಯಾಗಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪುತ್ತೂರಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
* ಕಡಬ: ಘಟ್ಟದ ಕೆಳಗೆ ಮುಗುಚಿ ಬಿದ್ದ ದಿಬ್ಬಣದ ವಾಹನ
ಕಡಬ: ಮದುವೆಗೆ ಹೊರಟಿದ್ದ ವಾಹನವೊಂದು ಮುಗುಚಿ ಬಿದ್ದ ಘಟನೆ, ಕಳೆದೆರಡು ದಿನಗಳ ಹಿಂದೆ ಬಿಸಿಲೆ ಘಾಟ್ ನಲ್ಲಿ ನಡೆದಿದೆ. ಸಕಲೇಶಪುರ ತಾಲ್ಲೂಕಿನ ವನಗೂರಿನಿಂದ, ಮದುವೆಗೆಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದಾಗ, ವಾಹನವು ಚಾಲಕನ ನಿಯಂತ್ರಣ ತಪ್ಪಿ, ಸುಮಾರು 20 ಅಡಿ ಎತ್ತರದಿಂದ ಕೆಳಗೆ ಉರುಳಿದೆ. ವಾಹನದಲ್ಲಿ 30 ಜನರಿದ್ದು, ಅವರಲ್ಲಿ 20 ಜನರಿಗೆ ಗಾಯಗಳಾಗಿದ್ದು, ಅದರಲ್ಲೂ ಏಳು ಜನರಿಗೆ ಗಂಭೀರ ಗಾಯಗಳಾಗಿವೆ ಎನ್ನುವ ಮಾಹಿತಿ ಲಭಿಸಿದೆ. ಶಿವರಾಜ್ ಎನ್ನುವವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ರಸ್ತೆಯ ಪಕ್ಕದಲ್ಲಿ ಚರಂಡಿ ತೆಗೆಯಲಾಗಿದ್ದು, 15 ದಿನಗಳಾದರೂ ಇನ್ನೂ ಮುಚ್ಚಿಲ್ಲ, ಹಾಗೆಯೇ ದುರಸ್ತಿ ಮಾಡದೆ ಬಿಟ್ಟಿರುವ ಜಾಗದಲ್ಲಿ, ಯಾವುದೇ ಫಲಕವನ್ನು ಸಹ ಅಳವಡಿಸದಿರುವುದು ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಮೊದಲೇ ಬಿಸಿಲೆ ಘಾಟ್ ನ ರಸ್ತೆ ಕಿರಿದಾಗಿದ್ದು, ಚರಂಡಿಯನ್ನು ಸಹ ತೆರೆಯಲಾಗಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಆದಷ್ಟು ಬೇಗ ತಡೆಗೋಡೆಯನ್ನು ನಿರ್ಮಿಸಲು ಸಂಬಂಧಿತ ವ್ಯಕ್ತಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹ ಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಯಳಸೂರು ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಮಂಗಳೂರು: ಕಾರ್ಖಾನೆಯ ತ್ಯಾಜ್ಯದಿಂದ ಎದುರಾಗಿದೆ ಸಮಸ್ಯೆ
ಮಂಗಳೂರು: ಕಾರ್ಖಾನೆಯ ಘಟಕದಿಂದ ಹೊರಹೊಮ್ಮುವ ತ್ಯಾಜ್ಯ ನೀರನ್ನು, ಸಾರ್ವಜನಿಕ ತೋಡಿಗೆ ಬಿಡುತ್ತಿರುವುದರಿಂದ ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದು, ಕಾವಳಪಡೂರು ಗ್ರಾಮದ ಬಂಗೇರಕೆರೆ ಎನ್ನುವಲ್ಲಿ ಬೆಳಕಿಗೆ ಬಂದಿದೆ. ಘಟಕದಲ್ಲಿ ವಸ್ತುಗಳನ್ನು ಉತ್ಪಾದಿಸಿದ ನಂತರ, ಅದರಿಂದ ಉಳಿದುಕೊಳ್ಳುವ ತ್ಯಾಜ್ಯ ಮತ್ತು ಮಲಿನವಾದ ನೀರನ್ನು ಈ ರೀತಿ ಹೊರಬಿಡುತ್ತಿರುವುದರಿಂದ ಕೃಷಿ ಜಮೀನುಗಳ ಚಟುವಟಿಕೆಗೆ ಅಡಚಣೆಯುಂಟಾಗಿದೆ. ಇದರಿಂದ ಸುತ್ತಮುತ್ತಲು ವಾಸವಾಗಿರುವ ಜನರಿಗೆ ದುರ್ವಾಸನೆ ಬರುವುದಷ್ಟೇ ಅಲ್ಲದೆ, ಜಾನುವಾರುಗಳ ಆರೋಗ್ಯದ ಮೇಲೂ ತೀವ್ರತರವಾದ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂತಹ ಅಕೃತ್ಯವನ್ನು ತಡೆಹಿಡಿಯಬೇಕೆಂದು ಆಗ್ರಹಪಡಿಸಿದ್ದಾರೆ. ಕಾವಳಪಾಡೂರು ಮತ್ತು ಇರ್ವತ್ತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಪಿಡಿಒ, ಸ್ಥಳೀಯ ವಾರ್ಡ್ ನ ಸದಸ್ಯರು ಪರಿಶೀಲನೆಯನ್ನು ನಡೆಸಿ, ಕಾರ್ಖಾನೆಗೆ ವೈಜ್ಞಾನಿಕವಾಗಿ ವಿಲೇವರಿ ಮಾಡಬೇಕೆಂದು ಆದೇಶವನ್ನು ಹೊರಡಿಸಿದ್ದರು. ಆದರೆ ಇದುವರೆಗೆ ಕಾರ್ಖಾನೆಯು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹೀಗಾಗಿ ಸಾರ್ವಜನಿಕರು ಕಾರ್ಖಾನೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಂಚಾಯಿತಿಗೆ ಪತ್ರ ಬರೆದಿದ್ದಾರೆ.
* ಬೈಂದೂರು: ಮಂಕಿ ಪಾರ್ಕ್ ಗೆ ಸಾರ್ವಜನಿಕರಿಂದ ಬೇಡಿಕೆ
ಬೈಂದೂರು: ಕರಾವಳಿಯ ಬಹುತೇಕ ಭಾಗಗಳಲ್ಲಿ ಮಂಗನ ಕಾಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದರ ಬೆನ್ನಲ್ಲೇ ಬೈಂದೂರು ತಾಲ್ಲೂಕಿನ ಹಲವು ಭಾಗಗಳಲ್ಲಿ ಕೃಷಿ ಮತ್ತು ಜನರ ದೈನಂದಿನ ಚಟುವಟಿಕೆಗಳಿಗೆ ಮಂಗಗಳ ಉಪಟಳ ವಿಪರೀತವಾಗಿದೆ. ಒಂದೆಡೆ ಮಳೆಯ ತೀವ್ರತೆಯಿಂದಾಗಿ ಬೆಳೆಯ ಪ್ರಮಾಣ ಕಡಿಮೆಯಾಗಿದ್ದು, ಉಳಿದ ಬೆಳೆಯನ್ನು ಮಂಗಗಳ ಕಣ್ಣಿಗೆ ಬೀಳದಂತೆ ರಕ್ಷಣೆ ಮಾಡುವುದೇ ಹರಸಾಹಸವಾಗಿದೆ. ಮಂಗಗಳು ಗುಂಪು ಗುಂಪಾಗಿ ತೋಟಗಳಿಗೆ ಮುತ್ತಿಗೆ ಹಾಕುತ್ತಿದ್ದು, ತೆಂಗಿನ ಮರ ಹತ್ತಿ ಎಳನೀರನ್ನು ಕುಡಿದು ಕೆಳಕ್ಕೆ ಎಸೆಯುತ್ತಿವೆ, ಒಳ್ಳೆಯ ತೆಂಗಿನ ಫಸಲನ್ನು ನಾಶ ಮಾಡುತ್ತಿವೆ. ಅಷ್ಟೇ ಅಲ್ಲದೆ ಅಡಿಕೆ ತೋಟಗಳಿಗೂ ಸಹ ನುಗ್ಗಿ, ಹಿಂಗಾರವನ್ನು ಹಾಳು ಮಾಡುತ್ತಿದೆ. ಇದರೊಂದಿಗೆ ಬಾಳೆಮರದ ಕಂದು, ಪಪ್ಪಾಯಿ, ಪೇರಲೆ, ತರಕಾರಿಗಳನ್ನು ಸಹ ಧ್ವಂಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಂಕಿ ಪಾರ್ಕ್ ವೊಂದನ್ನು ನಿರ್ಮಿಸಿ, ಮಂಗಗಳಿಗೆ ಪುನರ್ವಸತಿ ಕಲ್ಪಿಸಬೇಕೆಂದು ಆಗ್ರಹಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.







