ಕರಾವಳಿ ಟಾಪ್ ನ್ಯೂಸ್
* ಮಂಗಳೂರು: ನಿವೃತ್ತ ಉದ್ಯೋಗಿ ಆತ್ಮಹತ್ಯೆ
* ಉಳ್ಳಾಲ: ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ
* ಮೂಡಬಿದರೆ: ಬಿರುಗಾಳಿ, ಸಿಡಿಲು; ಅಪಾರ ಹಾನಿ
* ಕುಂದಾಪುರ: ಸ್ಕೂಟರ್ ಅಪಘಾತ: ಗಂಭೀರ ಗಾಯ
* ಪುತ್ತೂರು: ಕಣಜದ ಹುಳು ದಾಳಿ; ವಿದ್ಯಾರ್ಥಿನಿ ಸಾವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಬಜಪೆಯ ರೋಟರಿ ಕ್ಲಬ್, ಕೋರ್ದಬ್ದು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ವಿಜಯ ವಿಠಲ ಭಜನಾ ಮಂದಿರದ ಅಧ್ಯಕ್ಷರಾದ ಪ್ರಶಾಂತ್ ಆಳ್ವಾ ಅವರು, ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಡಾರುಗುತ್ತುವಿನಲ್ಲಿ ನಡೆದಿದೆ. ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯ ಉದ್ಯೋಗಿಯಾಗಿ ಪ್ರಶಾಂತ್ ಆಳ್ವ ಅವರು ನಿವೃತ್ತರಾಗಿದ್ದರು. ಭಾನುವಾರದಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು. ಇದಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ.
* ಉಳ್ಳಾಲ: ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ
ಉಳ್ಳಾಲ: ಗುಜರಿ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಹೆದ್ದಾರಿಯ ಸುತ್ತಮುತ್ತ ದಟ್ಟ ಹೊಗೆ ಆವರಿಸಿಕೊಂಡ ಪರಿಣಾಮವಾಗಿ, ಭಾನುವಾರದಂದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು. ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರೂ, ಅರ್ಧ ಗಂಟೆಯ ತನಕ ಬೆಂಕಿಯನ್ನು ಆರಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ಅದು ಪಕ್ಕದ ಮನೆಗೂ ವ್ಯಾಪಿಸಿ ಮತ್ತಷ್ಟು ಆತಂಕವನ್ನುಂಟು ಮಾಡಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು, ದಕ್ಷಿಣ ಸಂಚಾರಿ ಪೊಲೀಸರು, ಉಳ್ಳಾಲ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗಳ ಜೊತೆ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಜನರು ಅಧಿಕ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದು, ಕೆಲಸಕ್ಕೆ ಅಡಚಣೆಯುಂಟಾಗುತ್ತಿದ್ದರಿಂದ ಮತ್ತು ಅಪಾಯ ಎದುರಾಗಬಾರದು ಎಂಬ ಕಳಕಳಿಯಿಂದ ಪೊಲೀಸರು ಅವರನ್ನು ಹಿಂತಿರುಗಿ ಹೋಗುವಂತೆ ಮನವಿ ಮಾಡಿಕೊಂಡರು.
* ಮೂಡಬಿದರೆ: ಬಿರುಗಾಳಿ ಗುಡುಗು, ಸಿಡಿಲು; ಅಪಾರ ಹಾನಿ
ಮೂಡಬಿದರೆ: ವರ್ಷದ ಕೊನೆಯ ಮಳೆಯಿಂದಾಗಿ, ಶನಿವಾರದಂದು ತಾಲ್ಲೂಕಿನ ಸುತ್ತಮುತ್ತ ವಿಪರೀತ ಹಾನಿಯುಂಟಾಗಿದೆ. ಮೂಡಬಿದರೆ ಕಾರ್ಕಳ ಹೆದ್ದಾರಿಯ ಅಲಂಗಾರಿನಲ್ಲಿ ಮರವೊಂದು ಕೊಂಬೆ ಮುರಿದು ಬಿದ್ದು, ವಿದ್ಯುತ್ ಕಂಬ ತುಂಡಾಗಿ, ಅಲ್ಲಿ ಹಾಕಲಾಗಿದ್ದ ನಾಟಕದ ಫ್ಲೆಕ್ಸ್ ಮೇಲೆ ಬಿದ್ದು ಹಾನಿಯುಂಟಾಗಿದೆ. ಇದರಿಂದಾಗಿ ಸಂಚಾರಕ್ಕೆ ಕೆಲವು ಗಂಟೆಗಳ ಅಡಚಣೆ ಉಂಟಾಯಿತು. ಮೂಡಬಿದರೆ ಪೇಟೆಯಲ್ಲಿ ಸಮಾಜ ಮಂದಿರದ ಎದುರಿಗಿದ್ದ ಮತ್ತೊಂದು ಮರದ ಕೊಂಬೆಯು ಆಟೋ ನಿಲ್ದಾಣದ ತಗಡಿನ ಛಾವಣಿಯ ಮೇಲೆ ಬಿದ್ದು, ಹಾನಿಯುಂಟಾಗಿದೆ. ಛಾವಣಿಯು ಬಿದ್ದು ಪಕ್ಕದಲ್ಲಿದ್ದ ಎಳನೀರಿನ ಅಂಗಡಿಯ ಮೇಲೆ ವಾಲಿದ್ದರಿಂದ, ಅಂಗಡಿಯವರು ಮರದಡಿಯಲ್ಲಿ ಸಿಲುಕಿಕೊಂಡರು. ಬಳಿಕ ಪ್ರಯಾಸ ಪಟ್ಟು ಹೊರಬಂದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಲವಾರು ದಿನಗಳಿಂದಲೂ ಆಟೋ ಚಾಲಕರು ಈ ಮರವನ್ನು ತೆರವುಗೊಳಿಸಿ ಎಂದು ಅರಣ್ಯ ಇಲಾಖೆಯವರಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಈ ರೀತಿಯ ಪರಿಸ್ಥಿತಿ ಎದುರಾಗಿದೆ ಎನ್ನುವುದು ತಿಳಿದುಬಂದಿದೆ. ಇನ್ನು ಅಲಂಗಾರು ಪ್ರದೇಶದಲ್ಲಿರುವ ಸಂತ ಥಾಮಸ್ ಪ್ರೌಢ ಶಾಲೆಯ ಮೇಲ್ಛಾವಣಿಯು ಹಾರಿ, 100 ಮೀಟರ್ ದೂರದಲ್ಲಿ ಬಿದ್ದಿದೆ ಎನ್ನಲಾಗಿದೆ. ಆಸುಪಾಸಿನಲ್ಲೇ ವಿದ್ಯುತ್ ತಂತಿಗಳು ನೆಲಕ್ಕೆ ಉರುಳಿರುವುದು, ಮನೆಯೊಂದರ ಮೇಲೆ ಮರ ಬಿದ್ದಿರುವುದು ಕಂಡುಬಂದಿದೆ. ಎಲ್ಲದರ ಪರಿಣಾಮವಾಗಿ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ ಎನ್ನುವ ಮಾಹಿತಿ ಲಭಿಸಿದೆ.
* ಕುಂದಾಪುರ: ಆಯಾತಪ್ಪಿ ರಸ್ತೆಗೆ ಬಿದ್ದ ಸ್ಕೂಟರ್; ಸವಾರ ಗಂಭೀರ ಗಾಯ
ಕುಂದಾಪುರ: ಮಣೂರಿನ ಕಂಬಳಗದ್ದೆಬೆಟ್ಟು ನಿವಾಸಿ ಅಭಿಷೇಕ್ ಪೂಜಾರಿ ಎನ್ನುವವರು, ಕೆಲಸದ ನಿಮಿತ್ತ ಕುಂದಾಪುರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ, ಆಯಾತಪ್ಪಿ ರಸ್ತೆಗೆ ಬಿದ್ದ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದೆ. ಪಲ್ಸರ್ ಬೈಕ್ ವೊಂದು ಇದ್ದಕ್ಕಿದ್ದಂತೆ ಅಭಿಷೇಕ್ ಅವರ ಸ್ಕೂಟರ್ ಗೆ ಅಡ್ಡ ಬಂದಿದ್ದರಿಂದ, ಅವರಿಗೆ ವಾಹನದ ಮೇಲಿನ ನಿಯಂತ್ರಣ ತಪ್ಪಿ, ರಸ್ತೆಗೆ ಬಿದ್ದರು. ಇನ್ನೇನು ಎದ್ದು ಚೇತರಿಸಿಕೊಳ್ಳಬೇಕೆನ್ನುವಷ್ಟರಲ್ಲಿ, ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕ್ರೈನ್ ಅಭಿಷೇಕ್ ಅವರ ಮೇಲೆ ಹರಿದಿದೆ. ತಕ್ಷಣ ಅವರನ್ನು ಸ್ಥಳೀಯರು ಕೋಟೇಶ್ವರದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿ, ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತ ಸ್ಥಳದಲ್ಲಿ ವಾಹನದ ನಿಯಂತ್ರಣಕ್ಕಾಗಿ ಬ್ಯಾರಿಕೇಡ್ ಅಳವಡಿಸಿದ್ದರೂ ಸಹ, ಕ್ರೈನ್ ಚಾಲಕ ಮೊಬೈಲ್ ನಲ್ಲಿ ಮಾತನಾಡಿಕೊಂಡು ವಾಹನವನ್ನು ಚಲಾಯಿಸಿದುದರ ಪರಿಣಾಮವಾಗಿ, ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಕ್ರೈನ್ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತು ಆತನ ತಪ್ಪು ಏನೆಂಬುದು ಸಿಸಿ ಕ್ಯಾಮೆರಾದ ಮೂಲಕ ಸ್ಪಷ್ಟವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೋಟ ಠಾಣಾಧಿಕಾರಿಯದ ಸುಧಾ ಪ್ರಭು ಅವರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
* ಪುತ್ತೂರು: ಕಣಜದ ಹುಳು ದಾಳಿ; ವಿದ್ಯಾರ್ಥಿನಿ ಸಾವು
ಪುತ್ತೂರು: ಪಡ್ನೂರು ಗ್ರಾಮದ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ, ಎರಡನೇ ತರಗತಿಯಲ್ಲಿ ಓದುತ್ತಿದ್ದ ಇಶಾ ಅವರು ಕಣಜದ ಹುಳುವಿನ ದಾಳಿಗೆ ಮೃತಪಟ್ಟ ಘಟನೆ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಇಶಾ, ಅದೇ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದ ಪ್ರತ್ಯೂಶ್ ಮತ್ತು ಸ್ಥಳೀಯ ನಾರಾಯಣ ಎನ್ನುವವರು ಕಣಜದ ಹುಳುವಿನ ದಾಳಿಗೆ ತುತ್ತಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಇಶಾ ಮೃತಪಟ್ಟಳು. ಪ್ರತ್ಯೂಶ್ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಸಂತ ಬಂಗೇರ ಎನ್ನುವವರು ಪೊಲೀಸರಿಗೆ ಹೇಳಿಕೆ ನೀಡಿದ್ದು. ಹೇಳಿಕೆಯ ಆಧಾರದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.







