ಕರಾವಳಿ ಟಾಪ್ ನ್ಯೂಸ್
* ಅಕ್ಕನ ಸಾವಿನಿಂದ ಮನನೊಂದು ತಂಗಿ ಸಾವು!
* ಕುಂದಾಪುರ: ಆಟೋ ಮತ್ತು ಬೈಕ್ ನಡುವೆ ಢಿಕ್ಕಿ
* ಉಡುಪಿ: ಚಿನ್ನ ಶುದ್ಧೀಕರಣ ಕೊಠಡಿಗೆ ಕನ್ನ
* ಕಾಪು: ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಹೋದಾಗ ಅಪಘಾತ
* ಬೈಂದೂರು: ಕಬ್ಬಿಣದ ಸೆಂಟ್ರಿಂಗ್ ಶೀಟ್ ಮಾಯ
* ಬೆಳ್ತಂಗಡಿ: ಅನಾರೋಗ್ಯದಿಂದ ವಿದ್ಯಾರ್ಥಿನಿ ಸಾವು
* ಪುತ್ತೂರು: ಬೈಕ್ ಗೆ ಢಿಕ್ಕಿ ಹೊಡೆದ ಟ್ಯಾಂಕರ್; ಸವಾರ ಗಂಭೀರ ಗಾಯ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬ್ರಹ್ಮಾವರ: ಅಕ್ಕನ ಸಾವಿನಿಂದಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡು, ತಂಗಿ ಸಾವನ್ನಪ್ಪಿದ ಘಟನೆ ಹಾವಂಜೆ ಗ್ರಾಮದ ಕೊಳಲಗಿರಿಯಲ್ಲಿ ನಡೆದಿದೆ. ಅಕ್ಕ ಶಾಂತ ಅವರು ಐದು ದಿನಗಳ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದರು. ಇದರಿಂದ ಮನನೊಂದು ಅವರ ತಂಗಿ ಶಕುಂತಲಾ ಅವರು, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಕುಂತಲಾ ಅವರು ಅವಿವಾಹಿತರಾಗಿದ್ದು, ಮಾನಸಿಕ ಕಾಯಿಲೆಯಿಂದ ಕೂಡ ಬಳಲುತ್ತಿದ್ದರು ಎನ್ನಲಾಗಿದೆ.
* ಕುಂದಾಪುರ: ಆಟೋ ಮತ್ತು ಬೈಕ್ ನಡುವೆ ಢಿಕ್ಕಿ
ಕುಂದಾಪುರ: ಜಪ್ತಿ ಗ್ರಾಮದ ನಿವಾಸಿಯಾದ ಪ್ರವೀಣ್ ಪೂಜಾರಿ ಮತ್ತು ಸಹಸವಾರ ಶ್ರೀಕಾಂತ್ ಅವರು, ಕಂಡ್ಲೂರು ಕಡೆಯಿಂದ ಬರುತ್ತಿದ್ದ ಸಂದರ್ಭದಲ್ಲಿ, ಎದುರಿನಿಂದ ಬಂದ ಆಟೋವೊಂದು ಢಿಕ್ಕಿ ಹೊಡೆದ ಘಟನೆ, ಬಸ್ರೂರು ಗ್ರಾಮದ ಕೊಳ್ಕೇರಿ ತಿರುವಿನ ಬಳಿ ನಡೆದಿದೆ. ಅತಿಯಾದ ವೇಗ ಮತ್ತು ಅಜಾಗರೂಕತೆಯಿಂದ ಆಟೋ ಚಲಾಯಿಸುತ್ತಿದ್ದ ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ ಢಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಪರಿಣಾಮವಾಗಿ ಬೈಕ್ ನಲ್ಲಿದ್ದ ಇಬ್ಬರೂ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಉಡುಪಿ: ಚಿನ್ನ ಶುದ್ಧೀಕರಣ ಕೊಠಡಿಗೆ ಕನ್ನ
ಉಡುಪಿ: ಅಜಯ್ ತುಕಾರಾಮ್ ಜಾದವ್ ಎನ್ನುವವರ ಮಾಲೀಕತ್ವದ ಚಿನ್ನ ಶುದ್ಧೀಕರಣ ಕೊಠಡಿಗೆ ಕನ್ನ ಹಾಕಿದ ಕಳ್ಳರು, ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಪೌಡರ್ ಅನ್ನು ಲಪಟಾಯಿಸಿದ ಘಟನೆ ಗುಂಡಿಬೈಲಿನಲ್ಲಿ ನಡೆದಿದೆ. ಮಂಗಳವಾರ ತಡರಾತ್ರಿಯವರೆಗೆ ಕೆಲಸಗಾರರಾದ ಪಾಂಡುರಂಗ ಮಹಡಿಕ್ ಮತ್ತು ರೋಹಿತ್ ಘೋರ್ಪಡೆ ಅವರು ಚಿನ್ನದ ಶುದ್ಧೀಕರಣ ಕೆಲಸ ಮಾಡಿಕೊಂಡಿದ್ದು, 12:30 ರ ಸುಮಾರಿಗೆ ತಮ್ಮ ಕೆಲಸವನ್ನು ಮುಗಿಸಿ, ಚಿನ್ನವನ್ನು ಪಾತ್ರೆಯಲ್ಲಿಯೇ ಬಿಟ್ಟು ರೂಮಿಗೆ ಬೇಗ ಹಾಕಿ ತೆರಳಿದ್ದಾರೆ. ಬುಧವಾರ ಬೆಳಿಗ್ಗೆ 7.30 ರ ಸುಮಾರಿಗೆ ಪಾಂಡುರಂಗ ಅವರು ಕೆಲಸ ಪ್ರಾರಂಭಿಸಲೆಂದು ಕೊಠಡಿಯ ಬಾಗಿಲನ್ನು ತೆರೆಯಲು ಹೋದ ಸಂದರ್ಭದಲ್ಲಿ, ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪಾಂಡುರಂಗ ಅವರು ಯಜಮಾನರಾದ ಅಜಯ್ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಕೆಳಗಡೆ ಮನೆಯಲ್ಲಿದ್ದ ಅಜಯ್ ಅವರು, ಮೇಲಕ್ಕೆ ಬಂದು ಕೊಠಡಿಯನ್ನು ಪರಿಶೀಲಿಸಿದಾಗ, ಪಾತ್ರೆಯಲ್ಲಿ ಇರಿಸಿದ್ದ ಚಿನ್ನದ ಪೌಡರ್ ಕಾಣೆಯಾಗಿರುವುದು ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಜಯ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಕಳುವಾಗಿರುವ ಚಿನ್ನದ ಮೌಲ್ಯ ಎಷ್ಟು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಶೋಧನೆಯಲ್ಲಿ ತೊಡಗಿದ್ದಾರೆ.
* ಕಾಪು: ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋದಾಗ ಅಪಘಾತ
ಕಾಪು: ಕಾರ್ಕಳದ ಕಣಜಾರು ನಿವಾಸಿ ಮೋಹಿತ್ ಅವರು, ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಲು ತೆರಳಿದ್ದ ಸಂದರ್ಭದಲ್ಲಿ, ಅಪಘಾತವಾಗಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪುವಿನ ಕೊಪ್ಪಲಂಗಡಿಯಲ್ಲಿ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೋಹಿತ್, ವರ್ಕ್ ಫ್ರಂ ಹೋಂ ಮಾಡುತ್ತಿದ್ದು, ಕಳೆದೆರಡು ದಿನಗಳ ಹಿಂದೆ ತನ್ನ ಮದುವೆಯ ಆಹ್ವಾನ ಪತ್ರಿಕೆ ನೀಡಲು ತೆರಳುತ್ತಿದ್ದ ವೇಳೆ, ಕಾರೊಂದು ಢಿಕ್ಕಿ ಹೊಡೆದು ಈ ರೀತಿಯ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ.
* ಬೈಂದೂರು: ಕಬ್ಬಿಣದ ಸೆಂಟ್ರಿಂಗ್ ಶೀಟ್ ಮಾಯ
ಬೈಂದೂರು: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ನಾಯ್ಕ, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರಿಯಂವದಾ ಅವರ ನಿರ್ದೇಶನದಲ್ಲಿ, ಶಿರ್ವ ಠಾಣಾಧಿಕಾರಿಗಳಾದ ಮಂಜುನಾಥ ಮರಬದ ಮತ್ತು ಪಿಎಸ್ಐ ಲೋಹಿತ್ ಕುಮಾರ್ ಅವರ ನೇತೃತ್ವದ ತಂಡವು, ಕುಖ್ಯಾತ ಆರೋಪಿಯಾದ ರಶೀದ್ ಮೊಯಿದ್ದೀನ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೈಂದೂರು ಮೂಲದ ರಶೀದ್ ಕಳೆದ ಕೆಲವು ದಿನಗಳ ಹಿಂದೆ, ಬಂಟಕಲ್ಲು ನಿವಾಸಿಯಾದ ಲೂಯಿಸ್ ಮಥಾಯಿಸ್ ಮನೆಯ ಬಳಿ ಇರಿಸಿದ್ದ, ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಕಳ್ಳತನ ಮಾಡಿದ್ದಾನೆ. ಯಾರೋ ಕಳ್ಳರು ಈ ರೀತಿ ಮಾಡಿರಬೇಕೆಂದು ಶಿರ್ವ ಪೊಲೀಸರು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಕಾರ್ಯಾಚರಣೆಯ ಸಂದರ್ಭದಲ್ಲಿ ರಶೀದ್ ಪೊಲೀಸರಿಗೆ ಸೆರೆ ಸಿಕ್ಕಿದ್ದು, ಆತನನ್ನು ವಿಚಾರಣೆಗೊಳಪಡಿಸಿದಾಗ ಶಿರ್ವ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಬಂಟಕಲ್ಲು, ಪಂಜಿಮಾರ್ ಪಡುಬಿದ್ರಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಎಲ್ಲೂರು ಮತ್ತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಕಟ್ ಬೆಳ್ತೂರು ಎನ್ನುವ ಕಡೆಗಳಲ್ಲೆಲ್ಲಾ ಕಬ್ಬಿಣದ ಶೀಟ್ ಗಳನ್ನು ಕಳುವು ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ರಶೀದ್ ನನ್ನು ಬಂಧಿಸುವ ಸಂದರ್ಭದಲ್ಲಿ ಆತನ ಬಳಿಯಿದ್ದ 300 ಕಬ್ಬಿಣದ ಶೀಟ್ ಗಳು, ಕಳ್ಳತನಕ್ಕೆ ಬಳಸಲಾದ ಮಹಿಂದ್ರ ಸುಪ್ರೋ ವಾಹನ ಸೇರಿದಂತೆ ಸುಮಾರು 5,50,000 ಬೆಲೆಬಾಳುವ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ರಶೀದ್ ವಿರುದ್ಧ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಶಿರ್ವ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸಿದ್ಧರಾಯಪ್ಪ, ಶಿವಾನಂದಪ್ಪ ಮತ್ತು ಪಡುಬಿದ್ರೆ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ನವೀನ್ ಮತ್ತು ಸಂದೇಶ್ ಅವರು ಈ ಕಾರ್ಯಾಚರಣೆಯಲ್ಲಿ ಸಹಕಾರ ನೀಡಿದರು.
* ಬೆಳ್ತಂಗಡಿ: ಅನಾರೋಗ್ಯದಿಂದ ವಿದ್ಯಾರ್ಥಿನಿ ಆತ್ಮಹತ್ಯೆ
ಬೆಳ್ತಂಗಡಿ: ಕಣಿಯೂರು ಗ್ರಾಮದ ನಿವಾಸಿಗಳಾದ ಯಶೋಧರ್ ಶೆಟ್ಟಿ ಅವರ ಮಗಳಾದ, ಸಾನ್ವಿ ಶೆಟ್ಟಿ ಅವರು ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದುದರ ಹಿನ್ನೆಲೆಯಲ್ಲಿ ಅವರು ಅಂದಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರದಂದು ಸಾವನ್ನಪ್ಪಿರುವ ಘಟನೆ ನಡೆದಿದೆ.
* ಪುತ್ತೂರು: ಬೈಕ್ ಗೆ ಢಿಕ್ಕಿ ಹೊಡೆದ ಟ್ಯಾಂಕರ್; ಸವಾರ ಗಂಭೀರ ಗಾಯ
ಪುತ್ತೂರು: ರಸ್ತೆ ಅಪಘಾತದಲ್ಲಿ ಪದವಿ ವಿದ್ಯಾರ್ಥಿಗಳಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ, ಕುಟೇಲ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹಿರೇಬಂಡಾಡಿ ಗ್ರಾಮದ ಯತೀಶ್ ಮತ್ತು ಉಪ್ಪಿನಂಗಡಿಯ ಅವನೀಶ್ ಇಬ್ಬರು ಊಟಕ್ಕೆಂದು ತಮ್ಮ ಬೈಕಿನಲ್ಲಿ ತೆರಳಿದ್ದು, ಕೂಟೇಲುನಲ್ಲಿರುವ ಹೆದ್ದಾರಿಯ ಬಲಭಾಗದಲ್ಲಿನ ಕ್ಯಾಂಟೀನ್ ಗೆ ಹೋಗಲು ತಿರುವು ಪಡೆಯುತ್ತಿದ್ದ ಸಮಯದಲ್ಲಿ, ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಟ್ಯಾಂಕರ್ ಬೈಕ್ ಗೆ ಬಲವಾಗಿ ಢಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಬೈಕ್ ಡಿವೈಡರ್ ಮೇಲೆ ಎಸೆಯಲ್ಪಟ್ಟಿದ್ದು, ಇಬ್ಬರು ಯುವಕರು ಧರಿಸಿದ್ದ ಹೆಲ್ಮೆಟ್ ಎರಡು ಭಾಗವಾಗಿದೆ. ಪಕ್ಕದಲ್ಲಿದ್ದ ಮಣ್ಣಿನ ರಾಶಿಯ ಮೇಲೆ ಯುವಕರು ಬಿದ್ದಿದ್ದರಿಂದ ಪ್ರಾಣಾಪಾಯ ಸಂಭವಿಸಲಿಲ್ಲ. ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ಸಂಚಾರಿ ಪೊಲೀಸರು ಅಪಘಾತಕ್ಕೆ ಸಂಬಂಧಿಸಿದಂತೆ ಪರಿಶೀಲನೆಯನ್ನು ನಡೆಸಿದರು.







