ಕರಾವಳಿ ಟಾಪ್ ನ್ಯೂಸ್
* ಬಂಟ್ವಾಳ: ಬಾವಿಗೆ ಹಾರಿ ಆತ್ಮಹತ್ಯೆ
* ಮಂಗಳೂರು: ಅಪಾರ್ಟ್ ಮೆಂಟ್ ಫ್ಲಾಟ್ ಗಳಲ್ಲಿ ಕಳುವು
* ಮೂಡಬಿದರೆ: ಟ್ರ್ಯಾಕ್ಟರ್ ಸಹಿತ ಬಾವಿಗೆ ಬಿದ್ದ ಯುವಕ
* ಮೂಲ್ಕಿ: ಕರ್ತವ್ಯಕ್ಕೆ ಅಡ್ಡಿ; 11 ಮಂದಿ ಬಂಧನ
* ಪುತ್ತೂರು: ಹೆಜ್ಜೇನು ಕಡಿದು ಮೃತಪಟ್ಟ ಬಾಲಕಿಗೆ ಪರಿಹಾರ
* ಬೈಂದೂರು: ಮೀನು ವ್ಯವಹಾರ ಕಛೇರಿಗೆ ನುಗ್ಗಿ ಕಳ್ಳತನ
* ಉಡುಪಿ: ದಕ್ಕೆಯ ನೀರಿಗೆ ಬಿದ್ದು ಮೀನುಗಾರ ಸಾವು
•ಭಟ್ಕಳ: ಯುವಕ ನಾಪತ್ತೆ
* ಕಾಸರಗೋಡು: ವಿದ್ಯುತ್ ಅವಘಡದಿಂದ ವ್ಯಕ್ತಿ ಸಾವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಟ್ವಾಳ: ಕಾಶಿಮಠದ ನಿವಾಸಿಯಾದ ರಾಮಕ್ಕ ಎನ್ನುವವರು, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ, ಮಂಗಳವಾರದಂದು ವಿಟ್ಲದಲ್ಲಿ ನಡೆದಿದೆ. ಮುರಳಿಧರ ಅವರ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದವರು ಮೃತದೇಹವನ್ನು ಬಾವಿಯಿಂದ ಮೇಲಕ್ಕೆ ಎತ್ತಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಪರಿಶೀಲನೆಯನ್ನು ನಡೆಸಿದರು. ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.
* ಮಂಗಳೂರು: ಅಪಾರ್ಟ್ ಮೆಂಟ್ ನ ಮೂರು ಫ್ಲಾಟ್ ಗಳಲ್ಲಿ ಕಳುವು
ಮಂಗಳೂರು: ಕಳೆದೆರಡು ದಿನಗಳ ಹಿಂದೆ ಅಪಾರ್ಟ್ ಮೆಂಟ್ ವೊಂದರಲ್ಲಿ ಮೂರು ಫ್ಲಾಟ್ ಗಳಲ್ಲಿ ಕಳ್ಳತನ ನಡೆದಿದ್ದು, ಇದಕ್ಕೆ ಸಂಬಂಧಿಸಿದಂತೆ, ರಿಯಾಜ್ ರಶೀದ್ ಎನ್ನುವವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, 20 ಗಂಟೆಗಳ ಒಳಗಾಗಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಅಸ್ಸಾಂ ರಾಜ್ಯದ ಅಭಿಜಿತ್ ದಾಸ್ ಮತ್ತು ದೇಬಾ ದಾಸ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮೂರು ಫ್ಲಾಟ್ ಗಳಲ್ಲಿ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು, 5,000 ನಗದು ಹಣವನ್ನು, 6,000 ರೂಪಾಯಿಯಷ್ಟು ಬೆಲೆಬಾಳುವ ಅರಬ್ ಕರೆನ್ಸಿಯಾದ ದಿಹ್ರಾಮ್ ಮತ್ತು ಮೊಬೈಲ್ ಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರಿನ ಆಧಾರದ ಮೇಲೆಯೇ ಪ್ರಕರಣ ದಾಖಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ, ಉರ್ವ ಪೊಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳು, ಶ್ವಾನದಳ, ಬೆರಳಚ್ಚು ತಜ್ಞರು ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎನ್ನಲಾಗಿದೆ.
* ಮೂಡಬಿದರೆ: ಟ್ರ್ಯಾಕ್ಟರ್ ಸಹಿತ ಬಾವಿಗೆ ಬಿದ್ದ ಯುವಕ
ಮೂಡಬಿದರೆ: ರಾಜೇಶ್ ಎನ್ನುವ ವ್ಯಕ್ತಿಯು ತನ್ನ ಸಂಬಂಧಿಕರಿಗೆ ಸೇರಿದ ಟ್ರ್ಯಾಕ್ಟರ್ ಅನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ, ಆಕಸ್ಮಿಕವಾಗಿ ಟ್ರ್ಯಾಕ್ಟರ್ ಸಹಿತ ಬಾವಿಗೆ ಬಿದ್ದ ಘಟನೆ, ಮಂಗಳವಾರದಂದು ನೆಲ್ಲಿಕಾರು ಗ್ರಾಮದ ಮಾಂಟ್ರಾಡಿ ಕೊಂಬೆಟ್ಟು ಎಂಬಲ್ಲಿ ನಡೆದಿದೆ. ಟ್ರ್ಯಾಕ್ಟರ್ ಅನ್ನು ತೊಳೆಯುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಅದು ಚಲಿಸಲಾರಂಭಿಸಿದೆ. ಅದನ್ನು ತಡೆಯಲು ಹೋಗಿ, ರಾಜೇಶ್ ಅವರು ಕೂಡ ನಿಯಂತ್ರಣ ತಪ್ಪಿ ಬಾವಿಗೆ ಬೀಳುವಂತಾಯಿತು ಎನ್ನಲಾಗಿದೆ.
* ಮೂಲ್ಕಿ: ಕರ್ತವ್ಯಕ್ಕೆ ಅಡ್ಡಿ; 11 ಮಂದಿ ಬಂಧನ
ಮೂಲ್ಕಿ: ವಕೀಲರಾದ ಡೇನಿಯಲ್ ದೇವರಾಜ್ ಮತ್ತು ಇತರರು ಸೇರಿ ತನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು, ಉಪನೋಂದಣಾಧಿಕಾರಿಯಾದ ರಾಜೇಶ್ವರಿ ಹೆಗಡೆ ಅವರು ಕಳೆದ ಕೆಲವು ದಿನಗಳ ಹಿಂದೆ ಮೂಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು 11 ಜನರನ್ನು ಬಂಧಿಸಿ, ಮಂಗಳವಾರದಂದು ಮೂಡಬಿದರೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಡೇನಿಯಲ್ ದೇವರಾಜ್ ಅವರು ರಾಹುಲ್ ಹಳೆಯಂಗಡಿ, ಚೈತ್ರ, ಸತೀಶ್ ಹಳೆಯಂಗಡಿ, ಅಮೆಲ್ ಬಟ್ಟಕೋಡಿ, ಅಬ್ದುಲ್ ರಜಾಕ್ ಮೂಲ್ಕಿ, ಸುವಿನ್ ಪಕ್ಷಿಕರೆ, ಶೇಕ್ ಅಖಿಲ್ ಬೆಳ್ತಂಗಡಿ, ತೇಜ್ ಪಾಲ ಹಳೆಯಂಗಡಿ, ಗಣೇಶ್ ಚೇಳ್ಯಾರ, ವಿಕೇಶ್ ಹಳೆಯಂಗಡಿ ಅವರನ್ನೆಲ್ಲ ಸೇರಿಕೊಂಡು, ರಿಜಿಸ್ಟರ್ ಕಛೇರಿ ಎದುರು ಪ್ರತಿಭಟನೆಯ ಹೆಸರಿನಲ್ಲಿ, ತನ್ನನ್ನು ಒಳಗೊಂಡಂತೆ ಕಛೇರಿಯ ಸಿಬ್ಬಂದಿಗಳಿಗೆ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಪಡಿಸಿದರು ಎಂದು ರಾಜೇಶ್ವರಿ ಹೆಗಡೆ ದೂರಿದ್ದರು. ಇದಕ್ಕೆ ಸಂಬಂಧಿಸಿದಂತೆ ಡೇನಿಯಲ್ ದೇವರಾಜ್ ಅವರು ವೈಯಕ್ತಿಕ ದ್ವೇಷದಿಂದಾಗಿ ರಾಜೇಶ್ವರಿ ಹೆಗಡೆ ತನ್ನ ವಿರುದ್ಧ ವಿನಾಕಾರಣ ದೂರು ನೀಡಿದ್ದಾರೆ, ಎಂದು ಪ್ರತಿದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರದಂದು ನ್ಯಾಯಾಧೀಶರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಗಿದ್ದು, ಆರೋಪಿಗಳಿಗೆ ಜಾಮೀನನ್ನು ಮಂಜೂರು ಮಾಡಲಾಗಿದೆ. ಈ ಸಂದರ್ಭದಲ್ಲಿ ಮೂಲ್ಕಿಯ ಸರ್ಕಾರಿ ನೌಕರರ ಸಂಘವು ಸರ್ಕಾರಿ ನೌಕರರಿಗೆ ರಕ್ಷಣೆ ನೀಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಮನವಿಯನ್ನು ಸಲ್ಲಿಸಿದರು.
* ಪುತ್ತೂರು: ಹೆಜ್ಜೇನು ಕಡಿದು ಮೃತಪಟ್ಟ ಬಾಲಕಿ; ಸರಕಾರದಿಂದ ಕುಟುಂಬಕ್ಕೆ ಪರಿಹಾರ
ಪುತ್ತೂರು: ಕಳೆದ ಕೆಲವು ದಿನಗಳ ಹಿಂದೆ ಹೆಜ್ಜೇನು ದಾಳಿಗೆ ಮೂವರು ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಎರಡನೇ ತರಗತಿಯಲ್ಲಿ ಓದುತ್ತಿದ್ದ ಜಿಶಾ ಎನ್ನುವ ಪುಟ್ಟ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳು. ಸೋಮವಾರದಂದು ಪುತ್ತೂರಿನಲ್ಲಿ ನಡೆದ ಜನಮನ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು “ಅಶೋಕ್ ರೈ ಅವರು ಘಟನೆಯ ವಿಚಾರವನ್ನು ನಮ್ಮ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಮೃತ ಬಾಲಕಿಯ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶವನ್ನು ಹೊರಡಿಸಲಾಗಿದೆ” ಎಂದು ತಿಳಿಸಿದರು.
* ಬೈಂದೂರು: ಮೀನು ವ್ಯವಹಾರ ಕಛೇರಿಗೆ ನುಗ್ಗಿ ಕಳ್ಳತನ
ಬೈಂದೂರು: ಮೀನು ವ್ಯವಹಾರಕ್ಕೆ ಸಂಬಂಧಿಸಿದ ಕಛೇರಿಗೆ ನುಗ್ಗಿ, ಲಕ್ಷಾಂತರ ರೂಪಾಯಿ ದೋಚಿದ ಘಟನೆ ನಾವುಂದ ಎಂಬಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದಿದೆ. ನೌಶಾದ್ ಎನ್ನುವವರು ಮೀನು ಖರೀದಿ ಮತ್ತು ಸಾಗಾಟದ ವ್ಯವಹಾರವನ್ನು ಮಾಡಿಕೊಂಡಿದ್ದು, ಇದಕ್ಕಾಗಿ ಮನೆಯ ಸಮೀಪದಲ್ಲೇ ಒಂದು ಕಛೇರಿಯನ್ನು ತೆರೆದಿದ್ದರು. ಶುಕ್ರವಾರದಂದು 11 ಗಂಟೆಯ ಸುಮಾರಿಗೆ ಮೀನಿನ ವ್ಯವಹಾರದಿಂದ 1,88,000 ರೂಪಾಯಿಯಷ್ಟು ಹಣ ನೌಶಾದ್ ಅವರಿಗೆ ಬಂದಿತ್ತು. ಅದನ್ನು ತಮ್ಮ ಕಛೇರಿಯ ಡ್ರಾವರ್ ನಲ್ಲಿ ಇರಿಸಿ, ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ ಕಛೇರಿಗೆ ಬಂದ ಸಮಯದಲ್ಲಿ, ಡ್ರಾವರ್ ನಲ್ಲಿ ಇರಿಸಿದ್ದ ಹಣ ಕಳುವಾಗಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಲು ತನಿಖೆಯನ್ನು ನಡೆಸುತ್ತಿದ್ದಾರೆ.
* ಉಡುಪಿ: ದಕ್ಕೆಯ ನೀರಿಗೆ ಬಿದ್ದು ಮೀನುಗಾರ ಸಾವು
ಉಡುಪಿ: ಶ್ರೀವೀರಾಂಜನೇಯ ಎಂಬ ಹೆಸರಿನ ಮೀನುಗಾರಿಕಾ ದೋಣಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮೀನುಗಾರರೊಬ್ಬರು, ದಕ್ಕೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಒರಿಸ್ಸಾ ಮೂಲದ ಆದಿಯಾ ಮುಂಡ ಎಂದು ಗುರುತಿಸಲಾಗಿದೆ. ಸೋಮವಾರದಂದು ದಕ್ಕೆಯಲ್ಲಿ ನಿಲ್ಲಿಸಿದ್ದ ದೋಣಿಯ ಬಲೆಯ ಮೇಲೆ ಕುಳಿತುಕೊಂಡು ಆದಿಯಾ ಊಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ದಕ್ಕೆಯ ನೀರಿಗೆ ಬಿದ್ದ ಆದಿಯಾ ಮೃತಪಟ್ಟರು ಎನ್ನುವ ಸಂಗತಿ ತಿಳಿದುಬಂದಿದೆ. ಆಕಸ್ಮಿಕ ಸಾವಿಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಭಟ್ಕಳ: ಯುವಕ ನಾಪತ್ತೆ
ಭಟ್ಕಳ: ತನ್ನ ಅಣ್ಣ ಅತ್ತಿಗೆ ಮತ್ತು ಅವರ ಮಗಳೊಂದಿಗೆ, ಭಟ್ಕಳಕ್ಕೆ ಮದುವೆಗೆ ಚಿನ್ನ ಖರೀದಿಸಲೆಂದು ಬಂದಿದ್ದ ಯುವಕ, ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆ ಆಗಿರುವ ಜಾಕೀರ ಬುಡಾನ್ ಬೇಗ್ ಕುಮಟಾದ ಮದ್ಗುಣಿ ಹಳ್ಳಾರ ಚಿತ್ರಗಿಯ ನಿವಾಸಿಯಾಗಿದ್ದು, ವಿದೇಶದಲ್ಲಿ ಉದ್ಯೋಗದಲ್ಲಿದ್ದರು ಎನ್ನಲಾಗಿದೆ. ಖರೀದಿಯ ನಂತರ ಅಣ್ಣ ಅತ್ತಿಗೆಯನ್ನು ಗುಳ್ಮಿಯಲ್ಲಿರುವ ಅತ್ತಿಗೆಯ ತವರು ಮನೆಗೆ ಕಳುಹಿಸಿ, ಶುಕ್ರವಾರದ ನಮಾಜ್ ಗಾಗಿ ಭಟ್ಕಳದ ಬಸ್ ನಿಲ್ದಾಣದ ಸಮೀಪದಲ್ಲಿರುವ ಮಸೀದಿಗೆ ತೆರಳಿದ್ದರು. ನಮಾಜ್ ಮುಗಿಸಿ ಹೊರಬಂದ ಬಳಿಕ ಆತ ನಾಪತ್ತೆಯಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಜಾಕೀರ ಅವರ ಅಣ್ಣ ಗಫೂರ್ ಬೇಗ್ ಅವರು ಭಟ್ಕಳದ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆಯನ್ನು ಮುಂದುವರಿಸಿದ್ದಾರೆ.
* ಕಾಸರಗೋಡು: ವಿದ್ಯುತ್ ಅವಘಡದಿಂದ ವ್ಯಕ್ತಿ ಸಾವು
ಕಾಸರಗೋಡು: ವಿದ್ಯುತ್ ಅವಘಡದ ಪರಿಣಾಮವಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ, ಸೀತಾಂಗೋಳಿಯ ಬಳಿ ಸೋಮವಾರ ರಾತ್ರಿ ನಡೆದಿದೆ. ಆಚಾರಿಮೂಲೆ ನಿವಾಸಿಯಾದ ರಾಜೇಶ್ ಆಚಾರ್ಯ ಅವರು, ವೃತ್ತಿಯಲ್ಲಿ ಬಡಗಿಯಾಗಿದ್ದರು. ದೀಪಾವಳಿ ಹಬ್ಬದ ಆಚರಣೆಯ ಸಂಭ್ರಮದಲ್ಲಿದ್ದ ಅವರು, ತಮ್ಮ ಮನೆಯನ್ನು ಅಲಂಕಾರಿಕ ದೀಪಗಳಿಂದ ಅಲಂಕರಿಸಿ, ಹಬ್ಬದ ಸಡಗರವನ್ನು ಹೆಚ್ಚಿಸುವ ತಯಾರಿಯಲ್ಲಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿದೆ. ತಕ್ಷಣ ಅವರನ್ನು ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಹ ಯಾವುದೇ ಪ್ರಯೋಜನವಾಗದೆ, ರಾಜೇಶ್ ಅವರು ಸಾವನ್ನಪ್ಪಿದರು ಎನ್ನಲಾಗಿದೆ. ರಾಜೇಶ್ ಅವರ ಮೃತದೇಹವನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ







