ಕರಾವಳಿ ಟಾಪ್ ನ್ಯೂಸ್
* ಸುಳ್ಯ: ಚಪ್ಪಲಿಯೊಳಗಿದ್ದ ಹಾವು ಕಚ್ಚಿ ಮಹಿಳೆ ಅಸ್ವಸ್ಥ!
* ಮಂಗಳೂರು: ಸಂಕಷ್ಟಕ್ಕೆ ಸಿಲುಕಿದ 31 ಮಂದಿ ಮೀನುಗಾರರ ರಕ್ಷಣೆ
* ಕುಂದಾಪುರ: ಸಾಗುವಾನಿ ಮರ ಕಳ್ಳರೀಗ ದೋಷಮುಕ್ತ
* ಉಡುಪಿ: ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು
* ಮೂಡಬಿದರೆ: ಮಹಿಳೆಗೆ ಕತ್ತಿಯಿಂದ ಇರಿದ ಯುವಕ
* ಪುತ್ತೂರು: ಬಸ್ ಚಾಲಕನ ಮೇಲೆ ಹಣಕ್ಕಾಗಿ ಹಲ್ಲೆ
* ಕಡಬ: ಎರಡು ಕಾರುಗಳ ನಡುವೆ ಡಿಕ್ಕಿ
* ಬ್ರಹ್ಮಾವರ: ಸಾಲ ದೊರಕಿಸಿಕೊಡುವುದಾಗಿ ವಂಚನೆ
* ಹೊನ್ನಾವರ: ಯುವತಿ ಆತ್ಮಹತ್ಯೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಮೀನುಗಾರಿಕಾ ದೋಣಿಯೊಂದು ಸ್ಟೀಯರಿಂಗ್ ಗೆ ದೋಷದ ಪರಿಣಾಮವಾಗಿ ನಿಯಂತ್ರಣ ತಪ್ಪಿ, 31 ಮಂದಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ರಕ್ಷಿಸಿದ ಘಟನೆ ನಡೆದಿದೆ. ಗೋವಾ ಮೂಲದ ಐಎಫ್ ಬಿ ಸಂತ್ ಅಂಟಾನ್ -1 ಎಂಬ ಹೆಸರಿನ ದೋಣಿಯು ಮಂಗಳೂರಿನ ಕರಾವಳಿ ಭಾಗದಿಂದ ಸುಮಾರು 185 ಕಿಲೋಮೀಟರ್ ದೂರದಲ್ಲಿ, ಸಮುದ್ರದ ನಡುವೆಯೇ 11 ದಿನಗಳಿಂದ ತೇಲಾಡುತ್ತಿತ್ತು. ಹವಾಮಾನ ವೈಪರೀತ್ಯದ ನಡುವೆಯೂ, ಐಸಿಜಿಎಸ್ ಕಸ್ತೂರ್ ಬಾ ಗಾಂಧಿ ನೌಕೆ ಹಾಗೂ ಕೊಚ್ಚಿಯಿಂದ ಕರಾವಳಿ ರಕ್ಷಣಾ ದಳದ ಡೊರ್ನಿಯರ್ ವಿಮಾನದ ಮೂಲಕ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕರಾವಳಿ ರಕ್ಷಣಾ ದಳದ ಸಿಬ್ಬಂದಿಗಳು ಸಮುದ್ರದ ನಡುವೆ ತೇಲಾಡುತ್ತಿದ್ದ ಮೀನುಗಾರಿಕಾ ದೋಣಿಗೆ ತಾಂತ್ರಿಕ ಮತ್ತು ಲಾಜಿಸ್ಟಿಕ್ ನೆರವನ್ನು ನೀಡಿದರು. ಈ ಮೂಲಕ ಸ್ಟೀರಿಂಗ್ ದೋಷವು ನಿವಾರಣೆಯಾಗಿ, ದೋಣಿಯನ್ನು ಹೊನ್ನಾವರದ ಮೀನುಗಾರಿಕಾ ಬಂದರಿಗೆ ಎಳೆದು ತರುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಸುಮಾರು 31 ಜನ ಮೀನುಗಾರರು ಕೋಸ್ಟ್ ಗಾರ್ಡ್ ಅವರ ಕಾರ್ಯಾಚರಣೆಯ ನೆರವಿನಿಂದ ರಕ್ಷಣೆ ಪಡೆದುಕೊಂಡರು ಎನ್ನಲಾಗಿದೆ.
* ಕುಂದಾಪುರ: ಸಾಗುವಾನಿ ಮರ ಕಳ್ಳರೀಗ ದೋಷಮುಕ್ತ
ಕುಂದಾಪುರ: ನೇರಳೆಕಟ್ಟೆ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ, ಸಾಗುವಾನಿ ಜಾತಿಯ ಮರಗಳನ್ನು ಕಡಿದು, ಸಾಗಾಟ ಮಾಡಿರುವ ಕುರಿತು ಕುಂದಾಪುರ ವಲಯ ಅರಣ್ಯಾಧಿಕಾರಿಗಳು ಆರೋಪಿಗಳ ವಿರುದ್ಧ ದೂರು ನೀಡಿದ್ದರು.ಆರೋಪಿಗಳಾದ ಆನಗಳ್ಳಿಯ ದಿನೇಶ್ ಗಾಣಿಗ, ಸಂತೋಷ್ ಮತ್ತು ಶಾಂತರಾಮ್ ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗಿತ್ತು. ಕುಂದಾಪುರದ ಜೆಎಂಎಫ್ ಸಿ ನ್ಯಾಯಾಲಯವು ವಿಚಾರಣೆಯನ್ನು ನಡೆಸುವ ಸಂದರ್ಭದಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಿಗಳನ್ನು ದೋಷಮುಕ್ತ ಎಂದು ಆದೇಶವನ್ನು ಹೊರಡಿಸಿದೆ.
* ಉಡುಪಿ: ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು
ಉಡುಪಿ: ತೆಂಗಿನಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ, ಅಲೆವೂರು ಗ್ರಾಮದ ಪಡುಅಲೆವೂರಿನಲ್ಲಿ ನಡೆದಿದೆ. ಮನೆಯ ಬಳಿಯ ಸರ್ಕಾರಿ ಜಾಗದಲ್ಲಿದ್ದ ತೆಂಗಿನಮರವನ್ನು ಹತ್ತಿದ ಸಂದರ್ಭದಲ್ಲಿ, ಸುರೇಶ್ ಅವರು ಬಿದ್ದಿದ್ದಾರೆ. ಇದರ ಪರಿಣಾಮವಾಗಿ ತಲೆ, ಬೆನ್ನು ಮತ್ತು ಕಣ್ಣಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಸುರೇಶ್ ಅವರನ್ನು ಪರೀಕ್ಷಿಸಿದ ವೈದ್ಯರು, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದರು. ಬಳಿಕ ಅಲ್ಲಿಂದ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಅವರು ಸಾವನ್ನಪ್ಪಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುರೇಶ್ ಅವರ ಸಹೋದರಿ ಸುಜಾತ ದೇವಾಡಿಗ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಹೇಳಿಕೆಯ ಆಧಾರದ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಮೂಡಬಿದರೆ: ಮಹಿಳೆಗೆ ಕತ್ತಿಯಿಂದ ಇರಿದ ಯುವಕ
ಮೂಡಬಿದರೆ: ಕಳೆದೆರಡು ದಿನಗಳ ಹಿಂದೆ ಮಹಿಳೆಯೊಬ್ಬರಿಗೆ ಯುವಕನೋರ್ವ ಕತ್ತಿಯಿಂದ ಇರಿದ ಘಟನೆ, ವರ್ಣಬೆಟ್ಟುವಿನಲ್ಲಿ ನಡೆದಿದೆ. ಕೆರೆಕೋಡಿ ನಿವಾಸಿಯಾದ ಸಂಜೀವಿ ಅಥವಾ ನಯನಾ ನಾಯ್ಕ ಅವರಿಗೆ, ರಾಮ್ ಮೋಹನ ನಗರದ ನಿವಾಸಿಯಾದ ರಾಜೇಶ್ ನಾಯ್ಕ ಕತ್ತಿಯಿಂದ ಇರಿದಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಇದರ ಪರಿಣಾಮವಾಗಿ ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದು, ತಲೆ, ಕೈ ಮತ್ತು ಕಾಲುಗಳಿಗೆ ತೀವ್ರವಾಗಿ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರ ತಿಳಿಯುತ್ತಿದ್ದ ಹಾಗೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ಅವರು, ರಾಜೇಶ್ ನಾಯ್ಕನನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಮೂಲಕ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭಿಸಬೇಕಿದೆ ಎನ್ನಲಾಗಿದೆ.
* ಪುತ್ತೂರು: ಬಸ್ ಚಾಲಕನ ಮೇಲೆ ಹಣಕ್ಕಾಗಿ ಹಲ್ಲೆ
ಪುತ್ತೂರು: ಕೊಕ್ಕಡ ಗ್ರಾಮದ ನಿವಾಸಿಯಾದ ಮ್ಯಾಕ್ಸಿಮ್ ಪಿಂಟೋ ಎನ್ನುವವರು ಬಸ್ ಚಾಲಕರಾಗಿದ್ದು, ತಮ್ಮ ಕರ್ತವ್ಯವನ್ನು ಮುಗಿಸಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಅವರ ಮೇಲೆ ಹಲ್ಲೆಯಾದ ಘಟನೆ ಇಳಂತಿಲ ಗ್ರಾಮದ ಅಲೆಕ್ಕಿ ಎಂಬಲ್ಲಿ ನಡೆದಿದೆ. ಬೈಕ್ ವೊಂದರಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮ್ಯಾಕ್ಸಿನ್ ಅವರ ಬೈಕ್ ಗೆ ಅಡ್ಡಗಟ್ಟಿ ಹಲ್ಲೆ ನಡೆಸಿ, ಬಳಿಕ ನಾಲ್ಕು ಸಾವಿರ ರೂಪಾಯಿಯಷ್ಟು ಹಣವನ್ನು ದೋಚಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಮಹಜರು ನಡೆಸುವ ಮೂಲಕ ತನಿಖೆಯನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.
* ಕಡಬ: ಎರಡು ಕಾರುಗಳ ನಡುವೆ ಢಿಕ್ಕಿ
ಕಡಬ: ಬದಿಯಡ್ಕ ಕಡೆಯಿಂದ ಸಕಲೇಶಪುರಕ್ಕೆ ತೆರಳುತ್ತಿದ್ದ, ಕೇರಳ ಮೂಲದ ವ್ಯಾಗನಾರ್ ಮತ್ತು ಸುಬ್ರಹ್ಮಣ್ಯದಿಂದ ಮಡಿಕೇರಿಯ ಕಡೆಗೆ ತೆರಳುತ್ತಿದ್ದ, ಚಿತ್ರದುರ್ಗ ಮೂಲದ ಕಾರುಗಳ ನಡುವೆ ಢಿಕ್ಕಿ ಸಂಭವಿಸದ ಘಟನೆ, ಭಾನುವಾರದಂದು ನಡೆದಿದೆ. ಕೇರಳ ಮೂಲದವರ ಕಾರಿನಲ್ಲಿದ್ದ ಮಗು ಮತ್ತು ಮಹಿಳೆ ಸೇರಿದಂತೆ ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿತ್ರದುರ್ಗ ಮೂಲದವರ ಕಾರಿನಲ್ಲಿದ್ದ ಓರ್ವ ಪ್ರಯಾಣಿಕನಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸುಬ್ರಹ್ಮಣ್ಯ ಪೊಲೀಸರು ಪರಿಶೀಲನೆಯನ್ನು ನಡೆಸಿದರು.
* ಬ್ರಹ್ಮಾವರ: ಯೋಜನೆ ಅಡಿಯಲ್ಲಿ ಸಾಲ ದೊರಕಿಸಿಕೊಡುವುದಾಗಿ ವಂಚನೆ
ಬ್ರಹ್ಮಾವರ: ಕಳೆದ ಕೆಲವು ದಿನಗಳಿಂದ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಅಡಿಯಲ್ಲಿ, ಸಬ್ಸಿಡಿ ಸಾಲ ಕೊಡಿಸುವುದಾಗಿ ನಂಬಿಸಿ, ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಘಟನೆ, ಬ್ರಹ್ಮಾವರ ಉಡುಪಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ಜನರು ಉಡುಪಿ ಮತ್ತು ಬ್ರಹ್ಮಾವರ ಠಾಣೆಗಳಲ್ಲಿ ದೂರು ನೀಡಿದ್ದು, ಪೊಲೀಸರು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಂಚನೆಯ ಜಾಲದ ಕಿಂಗ್ ಪಿನ್ ಆಗಿರುವ, ಬ್ರಹ್ಮಾವರ ತಾಲ್ಲೂಕಿನ ಆಲೂರು ಗ್ರಾಮದ ಕೌಸಲ್ಯಾ ಎನ್ನುವ ಮಹಿಳೆಯನ್ನು ಬಂಧಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಜೊತೆಗೆ ಇನ್ನಿಬ್ಬರು ವಂಚಕರಾದ ಕೊಕ್ಕರ್ಣೆ ಮತ್ತು ಬೈಂದೂರಿನ ವ್ಯಕ್ತಿಗಳನ್ನು ಸೆರೆಹಿಡಿದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೆರಾಡಿ ಗ್ರಾಮದ ಸರಿತಾ ಲೂಯಿಸ್ ಎನ್ನುವವರು ಯೋಜನೆ ಅಡಿಯಲ್ಲಿ ಸಬ್ಸಿಡಿ ಸಾಲವನ್ನು ಕೊಡಿಸುವುದಾಗಿ, ತಮ್ಮಿಂದ 80,72,000 ಮತ್ತು ತಮ್ಮ ಸಂಬಂಧಿಕರಾದ ಅಂಜಲಿನ್ ಡಿಸಿಲ್ವಾ ಅವರಿಂದ 65,೦೦,೦೦೦ ರೂಪಾಯಿಯಷ್ಟು ಹಣವನ್ನು ಲಪಟಾಯಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಕೌಸಲ್ಯಾ , ಆಕೆಯ ಪತಿ ಸಂದೇಶ್, ಪ್ರಕಾಶ್, ಆಶೀಶ್ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತಾ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್ ಹರಿಪ್ರಸಾದ್, ನಾಗರಾಜ್ ಮತ್ತು ಭಾರತಿ ಸಿಂಗ್ ಎನ್ನುವವರು ತಮ್ಮ ತಮ್ಮ ಖಾತೆಗಳಿಗೆ ಹಂತಹಂತವಾಗಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 218/2025ರಂತೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
* ಸುಳ್ಯ: ಚಪ್ಪಲಿಯೊಳಗಿದ್ದ ಹಾವು ಕಚ್ಚಿ ಮಹಿಳೆ ಅಸ್ವಸ್ಥ.
ಸುಳ್ಯ: ಚಪ್ಪಲಿಯೊಳಗೆ ಅಡಗಿ ಕುಳಿತಿದ್ದ ಹಾವೊಂದು ಕಚ್ಚಿ, ಮಹಿಳೆಯೊಬ್ಬರು ಅಸ್ವಸ್ಥರಾದ ಘಟನೆ ಆಲೆಟ್ಟಿ ಗ್ರಾಮದ ಕೊಲ್ಚಾರಿನಲ್ಲಿ ಭಾನುವಾರದಂದು ನಡೆದಿದೆ. ಕೊಲ್ಚಾರಿನ ನಿವಾಸಿಯಾದ ವಿನುತಾ ಎನ್ನುವವರು, ಬೆಳಗಿನ ಸಮಯದಲ್ಲಿ ಮನೆಯ ಹೊರಗಡೆ ಇರಿಸಿದ್ದ ಚಪ್ಪಲಿಯನ್ನು ಹಾಕಿಕೊಳ್ಳಲು ಹೋದ ಸಂದರ್ಭದಲ್ಲಿ, ಚಪ್ಪಲಿಯ ಒಳಗಡೆ ಸೇರಿಕೊಂಡಿದ್ದ ಹಾವು ಅವರ ಕಾಲಿಗೆ ಕಚ್ಚಿದೆ. ತಕ್ಷಣ ಮನೆಯವರು ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.
* ಹೊನ್ನಾವರ: ಯುವತಿ ಆತ್ಮಹತ್ಯೆ
ಹೊನ್ನಾವರ: ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ, ಭಾನುವಾರದಂದು ಚಿಕ್ಕನಕೋಡ ಗ್ರಾಮದ ಗುಂಡಿಬೈಲ್ ನಲ್ಲಿ ನಡೆದಿದೆ. ಯಾವುದೋ ವಿಷಯವೊಂದನ್ನು ಮನಸ್ಸಿಗೆ ಹಚ್ಚಿಕೊಂಡು, ಬದುಕಿನ ಬಗ್ಗೆ ಬೇಸರಗೊಂಡು, ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







