ಕರಾವಳಿ ಟಾಪ್ ನ್ಯೂಸ್
* ಕಡಬ: ಕುಸಿದು ಬಿದ್ದು ಮೃತಪಟ್ಟ ಕಾರ್ಮಿಕ
* ಪುತ್ತೂರು: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರ್
* ಸುಳ್ಯ: ನೇಣು ಬಿಗಿದುಕೊಂಡು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು
* ಕುಂದಾಪುರ: ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ
•ಬೆಳ್ತಂಗಡಿ: ಅಕ್ರಮ ಗೋಮಾಂಸ ಅಡ್ಡೆ ಮೇಲೆ ದಾಳಿ
* ಕಾರವಾರ: ಒಂದು ಕೋಟಿ ರೂಪಾಯಿ ಸಾಗಾಟ; ವಶಪಡಿಸಿಕೊಂಡ ಪೊಲೀಸರು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಕಡಬ: ಕುಸಿದು ಬಿದ್ದು ಮೃತಪಟ್ಟ ಕಾರ್ಮಿಕ
ಕಡಬ: ಮರ್ದಾಳ ಭ್ರಾಂತಿಕಟ್ಟೆ ಎಂಬಲ್ಲಿ, ಸುಬ್ರಹ್ಮಣ್ಯ ರಬ್ಬರ್ ಆರ್ ಆರ್ ಕೆ 2014ನೇ, ರಬ್ಬರ್ ತೋಟವೊಂದರಲ್ಲಿ ಖಾಯಂ ರಬ್ಬರ್ ಟ್ಯಾಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್ ಎನ್ನುವವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಮೃತಪಟ್ಟ ಘಟನೆ ಕಳೆದೆರಡು ದಿನಗಳ ಹಿಂದೆ ಐತ್ತೂರು ಗ್ರಾಮದಲ್ಲಿ ನಡೆದಿದೆ. ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಸಮಯದಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸುರೇಶ್ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದರು. ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಸುರೇಶ್ ಅವರು ಹೃದಯಾಘಾತ ಅಥವಾ ಇನ್ನಾವುದೋ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
* ಪುತ್ತೂರು: ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರ್
ಪುತ್ತೂರು: ಚಾಲಕನಿಗೆ ಕಾರಿನ ಮೇಲಿನ ನಿಯಂತ್ರಣ ತಪ್ಪಿ, ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಬೆದ್ರಾಳದಲ್ಲಿ ನಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಜನರಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎನ್ನುವ ಸಂಗತಿ ತಿಳಿದುಬಂದಿದೆ.
* ಸುಳ್ಯ: ನೇಣು ಬಿಗಿದುಕೊಂಡು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು
ಸುಳ್ಯ: ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ, ಮಂಗಳವಾರದಂದು ಜಟ್ಟಿಪಳ್ಳದ ಕಾನತ್ತಿಲದಲ್ಲಿ ನಡೆದಿದೆ. ಕಾಲೇಜಿನಲ್ಲಿ ಪರೀಕ್ಷೆ ಬರೆದು, ಮನೆಗೆ ಹಿಂತಿರುಗಿದ ವೀಕ್ಷಿತ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಸಾವಿಗೆ ಶರಣಾಗಿದ್ದಾರೆ. ಕೆಲಸಕ್ಕೆ ತೆರಳಿದ್ದ ತಾಯಿ, ಸಂಜೆ ಮನೆಗೆ ಕರೆದುಕೊಂಡು ಹೋಗಲು ಮಗ ಬಾರದಿದ್ದುದನ್ನು, ಫೋನ್ ಮಾಡಿದರೂ ಪ್ರತಿಕ್ರಿಯಿಸದ ಕಾರಣ, ಪಕ್ಕದ ಮನೆಯವರಿಗೆ ಕರೆ ಮಾಡಿದ್ದಾರೆ. ಪಕ್ಕದ ಮನೆಯವರು ವೀಕ್ಷಿತ್ ಅವರ ಮನೆಗೆ ಬಂದು ನೋಡಿದಾಗ ಆತ ಸಾವನ್ನಪ್ಪಿರುವುದು ಕಂಡುಬಂದಿದೆ. ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.
* ಕುಂದಾಪುರ: ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ
ಕುಂದಾಪುರ: ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಅಭಿವೃದ್ಧಿಯ ನೆಪದಲ್ಲಿ ಸಾರ್ವಜನಿಕರಿಂದ ಡೊನೇಷನ್ ರೂಪದಲ್ಲಿ ಹಣವನ್ನು ಸಂಗ್ರಹಿಸಿ, ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಬೇಳೂರು ಗ್ರಾಮದಲ್ಲಿ ನಡೆದಿದೆ. ಹಣಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ ಲೆಕ್ಕಪರಿಶೋಧನೆ ನಡೆಸದೆ, ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಕಟ್ಟಡವನ್ನೇ ಶಾಲಾ ಟ್ರಸ್ಟ್ ನ ಕಛೇರಿ ಎಂದು ನಮೂದಿಸಿ, ತರಗತಿಯ ಅವಧಿಯಲ್ಲಿ ಟ್ರಸ್ಟಿನ ಸಭೆಗಳನ್ನು ನಡೆಸುವ ಮೂಲಕ, ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣವನ್ನು ಶಾಲೆಗಳಿಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿಯ ನೆಪದಲ್ಲಿ ಲಪಟಾಯಿಸಿ, ಶಾಲಾ ಬಸ್ ಗಳನ್ನು ನಿಲ್ಲಿಸಿ, ಪೆಟ್ರೋಲ್ ಬಂಕ್ ನಲ್ಲಿ ಲಕ್ಷಾಂತರ ರೂಪಾಯಿಯಷ್ಟು ಹಣವನ್ನು ನೀಡದೆ ಬಾಕಿ ಉಳಿಸಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬೇಳೂರು ಗ್ರಾಮದ ಕರುಣಾಕರ ಶೆಟ್ಟಿ, ಸತ್ಯನಾರಾಯಣ ಅಡಿಗ, ಸತೀಶ್ ಶೆಟ್ಟಿ ಮಡಿಯಾಣ, ವಿಜಯ್ ಕುಮಾರ್ ಶೆಟ್ಟಿ ಕೊಯಿಕೂರು, ಪ್ರಭಾವತಿ ಶೆಟ್ಟಿ, ರಾಜೀವ ಶೆಟ್ಟಿ, ಸುರೇಶ್ ಮೊಗವೀರ, ಜಯಶೀಲ ಶೆಟ್ಟಿ, ದೇವಕಿ ಶೆಟ್ಟಿ, ಸೀತಾರಾಮ ಶೆಟ್ಟಿ, ರಾಜೇಂದ್ರ ಶೆಟ್ಟಿ ಅವರ ಮೇಲೆ, ದಾಖಲೆಗಳ ಸಮೇತ ನ್ಯಾಯವಾದಿಗಳಾದ ಅವಿನಾಶ ಶೆಟ್ಟಿ ಅವರು ಲಿಖಿತ ದೂರನ್ನು ನೀಡಿದ್ದು, ದಾಖಲೆಗಳ ಆಧಾರದ ಮೇಲೆ ಕುಂದಾಪುರ ನ್ಯಾಯಾಲಯದ ಆದೇಶದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
* ಬೆಳ್ತಂಗಡಿ: ಅಕ್ರಮ ಗೋಮಾಂಸ ಅಡ್ಡೆ ಮೇಲೆ ದಾಳಿ
ಬೆಳ್ತಂಗಡಿ: ಖಾಸಗಿ ರಬ್ಬರ್ ತೋಟದ ಶೆಡ್ ವೊಂದರಲ್ಲಿ ಅಕ್ರಮವಾಗಿ ಗೋಮಾಂಸ ಮಾಡುತ್ತಿದ್ದ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಇನ್ಸ್ಪೆಕ್ಟರ್ ಸುಬ್ಬಪುರ್ ಮಠ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಪಿಎಸ್ಐ ಆಗಿರುವ ಆನಂದ್ ಮತ್ತು ವೇಣೂರಿನ ಪಿಎಸ್ಐ ಆಗಿರುವ ಓಮನ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿದ ಘಟನೆ, ಇಂದ್ರಬೆಟ್ಟು ಗ್ರಾಮದ ಬೆದ್ರಬೆಟ್ಟುವಿನಲ್ಲಿ ನಡೆದಿದೆ. ಆರೋಪಿಗಳನ್ನು ಬೆದ್ರಬೆಟ್ಟು ನಿವಾಸಿ ಅಬ್ದುಲ್ ನಝೀರ್ ಮತ್ತು ಮಿತ್ತಬಾಗಿಲು ಗ್ರಾಮದ ನಿವಾಸಿ ಝಕಾರಿಯಾ ಎಂದು ಗುರುತಿಸಲಾಗಿದೆ. ಆರೋಪಿಗಳು ದನಗಳನ್ನು ಕಳುವು ಮಾಡಿ ತಂದು, ಮಾಂಸ ತಯಾರಿಸಿ ಮಾರಾಟ ಮಾಡಲು ಸಿದ್ಧತೆಯಲ್ಲಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಆರೋಪಿಗಳನ್ನು ಬಂಧಿಸಿದ ಸಂದರ್ಭದಲ್ಲಿ , 91 ಕೆಜಿ ದನದ ಮಾಂಸ, ಕತ್ತಿ ಸಹಿತ ಇತರ ವಸ್ತುಗಳನ್ನು ವಶಪಡಿಸಿಕೊಂಡರು ಆರೋಪಿಗಳ ವಿರುದ್ಧ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ 2020 ರ ಅನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕಾರವಾರ: ಒಂದು ಕೋಟಿ ರೂಪಾಯಿ ಸಾಗಾಟ; ವಶಪಡಿಸಿಕೊಂಡ ಪೊಲೀಸರು
ಕಾರವಾರ: ಖಾಸಗಿ ಬಸ್ ವೊಂದರಲ್ಲಿ ಕೋಟ್ಯಂತರ ರೂಪಾಯಿ ಹಣ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿ, ಪೊಲೀಸರು ವಶಪಡಿಸಿಕೊಂಡ ಘಟನೆ, ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ತಡರಾತ್ರಿಯಲ್ಲಿ ನಡೆದಿದೆ. ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರು, ಬಸ್ ನಲ್ಲಿದ್ದ ಪ್ರಯಾಣಿಕರ ಬ್ಯಾಗ್ ಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ, ರಾಜಸ್ಥಾನ ಮೂಲದ ಕಲ್ಲೇಶ್ ಕುಮಾರ್ ಎನ್ನುವ ವ್ಯಕ್ತಿಯ ಬ್ಯಾಗಿನಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಪತ್ತೆಯಾಗಿದೆ. ಇದನ್ನು ಗೋವಾದಿಂದ ಬೆಂಗಳೂರಿನ ಹೊಸೂರಿಗೆ ಸಾಗಿಸಲಾಗುತ್ತಿತ್ತು ಎನ್ನುವ ಸಂಗತಿ ತಿಳಿದುಬಂದಿದೆ. ಕಲ್ಲೇಶ್ ಕುಮಾರ್ ಮತ್ತು ಆತನ ಜೊತೆಗಿದ್ದ ಭಮ್ರು ಕುಮಾರ್ ಎನ್ನುವ ವ್ಯಕ್ತಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಂದು ಕೋಟಿ ರೂಪಾಯಿಯಷ್ಟು ಹಣವು ಅಕ್ರಮ ವ್ಯವಹಾರ ಅಥವಾ ರಾಜಕೀಯ ನಂಟಿಗೆ ಸಂಬಂಧಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಣ ಯಾರಿಗೆ ಸೇರಿದ್ದು? ಯಾವ ಉದ್ದೇಶಕ್ಕಾಗಿ ಅಲ್ಲಿಗೆ ಸಾಗಿಸಲಾಗುತ್ತಿತ್ತು ಎನ್ನುವ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.







