ಕರಾವಳಿ ಟಾಪ್ ನ್ಯೂಸ್
- ಮನೆಯಲ್ಲೇ ಯುವ ಪ್ರೇಮಿಗಳ ಆತ್ಮಹತ್ಯೆ!
- ಮಂಗಳೂರು: ಅಕ್ರಮ ಕೆಂಪು ಕಲ್ಲು ಸಾಗಾಟ; ಪೊಲೀಸರ ವಶ
- ಸುಳ್ಯ: ಗರ್ಭಿಣಿಯಾದ ಬಾಲಕಿ; ಯುವಕನ ಬಂಧನ
- ಬ್ರಹ್ಮಾವರ: ಕಬ್ಬಿಣದ ಕಾಂಕ್ರೀಟ್ ಶೀಟ್ ಮಾಯ
- ಭಟ್ಕಳ: ಲಾರಿ ಸ್ಕೂಟರ್ ಅಪಘಾತ; ವಿದ್ಯಾರ್ಥಿ ಸಾವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ವಲಸೆ ಬಂದ ಎರಡು ಕಾರ್ಮಿಕ ಕುಟುಂಬಗಳಲ್ಲಿನ ಯುವಕ ಮತ್ತು ಯುವತಿಯ ನಡುವೆ ಪ್ರೇಮ ಉಂಟಾಗಿ, ಇದೀಗ ಅವರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ, ಅಂಬಲಪಾಡಿಯ ಕಾರ್ಮಿಕರ ಕಾಲೋನಿಯಲ್ಲಿ ನಡೆದಿದೆ. ವಿದ್ಯಾರ್ಥಿನಿಯಾಗಿದ್ದ ಪವಿತ್ರ ಮತ್ತು ಕೂಲಿ ಕಾರ್ಮಿಕನಾಗಿದ್ದ ಮಲ್ಲೇಶ್ ಇಬ್ಬರೂ ಬಾಡಿಗೆ ಗುಡಿಸಲಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದು, ಯಾರೂ ಇಲ್ಲದ ಸಮಯದಲ್ಲಿ ಇಬ್ಬರೂ ಒಂದೇ ಗುಡಿಸಲಲ್ಲಿ ಚೂಡಿದಾರದ ವೇಲನ್ನು ಬಳಸಿಕೊಂಡು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರ ಶವಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ, ಪರಿಶೀಲನೆ ನಡೆಸಿದರು. ಈ ನಿರ್ಧಾರಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ. ತನಿಖೆಯ ಮೂಲಕ ಇನ್ನಷ್ಟೇ ಮಾಹಿತಿ ಲಭಿಸಬೇಕಿದೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಮಂಗಳೂರು: ಅಕ್ರಮ ಕೆಂಪುಕಲ್ಲು ಸಾಗಾಟ; ಪೊಲೀಸರ ವಶ
ಮಂಗಳೂರು: ಅಕ್ರಮವಾಗಿ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ನಿಲ್ಲಿಸಿ, ಚಾಲಕ ಪರಾರಿಯಾದ ಘಟನೆ ಪಡೀಲ್ ಬಳಿ ನಡೆದಿದೆ. ಎಎಸ್ಐ ಆನಂದ್ ಮತ್ತು ಪಿಎಸ್ಐ ಹರಿಶ್ಚಂದ್ರ ಅವರು ಗಸ್ತು ಕರ್ತವ್ಯದಲ್ಲಿದ್ದ ಸಮಯದಲ್ಲಿ, ಪಡೀಲ್ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಪ್ ವೆಲ್ ಕಡೆಯಿಂದ ಲಾರಿಯೊಂದು ಬಂದಿದ್ದು, ಅನುಮಾನಗೊಂಡ ಪೊಲೀಸರು ಲಾರಿಯನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಸ್ವಲ್ಪ ದೂರ ಹೋಗಿ ಲಾರಿಯನ್ನು ನಿಲ್ಲಿಸಿದ ಚಾಲಕ, ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾನೆ. ಲಾರಿಯನ್ನು ಪರಿಶೀಲಿಸಿದಾಗ ಸುಮಾರು ಆರು ಲಕ್ಷದಷ್ಟು ಬೆಲೆಬಾಳುವ ಕೆಂಪುಕಲ್ಲನ್ನು ಪರವಾನಿಗೆ ರಹಿತವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಅಕ್ರಮ ಚಟುವಟಿಕೆಗೆ ಸಂಬಂಧಿಸಿದಂತೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಸುಳ್ಯ: ಗರ್ಭಿಣಿಯಾದ ಬಾಲಕಿ; ಯುವಕನ ಬಂಧನ
ಸುಳ್ಯ: ಮಂಡೆಕೋಲು ಗ್ರಾಮದ ಚೇರದಮೂಲೆ ನಿವಾಸಿಯಾದ ದಿವಾಕರ್ ಎನ್ನುವ ವ್ಯಕ್ತಿಯು, ಹದಿನಾಲ್ಕು ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಸಲುಗೆ ತೋರಿಸಿ, ಕೆಲವು ತಿಂಗಳುಗಳ ಹಿಂದೆ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಕಳೆದ ವಾರ ಬಾಲಕಿಗೆ ಹೊಟ್ಟೆ ನೋವೆಂದು, ಆಕೆಯ ಪೋಷಕರು ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆಗೆ ಒಳಪಡಿಸಿದಾಗ, ಬಾಲಕಿಯು ಐದು ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸಿದಾಗ, ದಿವಾಕರ್ ಕುರಿತು ಮಾಹಿತಿ ಲಭಿಸಿ, ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು, ಬಂಧನಕ್ಕೆ ಒಳಪಡಿಸಿದ್ದಾರೆ.
* ಬ್ರಹ್ಮಾವರ: ಧರ್ಮಾವರಂ ಬಳಿ ಮನೆಯನ್ನು ಕಟ್ಟಲು ಇರಿಸಲಾಗಿದ್ದ, 250 ಕಬ್ಬಿಣದ ಕಾಂಕ್ರೀಟ್ ಶೀಟ್ ಗಳಲ್ಲಿ 180 ಕಾಂಕ್ರೀಟ್ ಶೀಟ್ ಗಳು ಕಳುವಾದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಮಹೇಂದ್ರ ಆಚಾರ್ಯ ಅವರು ಪೊಲೀಸರಿಗೆ ದೂರು ನೀಡಿದ್ದು, ಸುಮಾರು ಎರಡು ಲಕ್ಷ ರೂಪಾಯಿಯಷ್ಟು ಬೆಲೆಬಾಳುವ ಶೀಟ್ ಗಳು ಕಳುವಾಗಿವೆ ಎನ್ನುವ ಮಾಹಿತಿ ಲಭಿಸಿದೆ. ದೂರಿನ ಆಧಾರದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
* ಭಟ್ಕಳ: ಲಾರಿ ಸ್ಕೂಟರ್ ನಡುವೆ ಭೀಕರ ಅಪಘಾತ; ವಿದ್ಯಾರ್ಥಿ ಸಾವು
ಭಟ್ಕಳ: ಕುಂದಾಪುರ ಕಡೆಯಿಂದ ಹೊನ್ನಾವರದ ಕಡೆಗೆ ಅತಿಯಾದ ವೇಗದಿಂದ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದ ಕೇರಳ ಮೂಲದ ಲಾರಿಯೊಂದು, ತೆಂಗಿನಗುಂಡಿ ತಿರುವಿನ ಬಳಿ ಸಾಗುತ್ತಿದ್ದ ಸ್ಕೂಟರ್ ಗೆ ಬಲವಾಗಿ ಢಿಕ್ಕಿ ಹೊಡೆದ ಘಟನೆ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಪರಿಣಾಮವಾಗಿ ಸ್ಕೂಟರ್ ಚಲಾಯಿಸುತ್ತಿದ್ದ, ಪಿಯುಸಿ ವಿದ್ಯಾರ್ಥಿಯಾದ ಮೊಹಮ್ಮದ್ ರಸ್ತೆಯ ಬದಿಗೆ ಬಿದ್ದಿದ್ದು, ಅದೇ ಸಮಯದಲ್ಲಿ ಲಾರಿಯ ಹಿಂಬದಿಯ ಚಕ್ರ ಆತನ ತಲೆಯ ಮೇಲೆ ಹರಿದು, ಮೊಹಮ್ಮದ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ ಅಭಿಲಾಶ್ ಕುಮಾರ್ ವಿರುದ್ಧ ಮೊಹಮ್ಮದ್ ನ ಸಂಬಂಧಿಯಾದ ನವೀದ್ ಅವರು ಅಹಮದ್ ನಗರದ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ.







