ಕರಾವಳಿ ಟಾಪ್ ನ್ಯೂಸ್
* ಮಂಗಳೂರು: ನಕಲಿ ಸಿಗರೇಟ್ ಮಾರಾಟ!
* ಬೈಂದೂರು: ರೈಲು ಡಿಕ್ಕಿ; ವ್ಯಕ್ತಿ ಸಾವು
* ಕುಂದಾಪುರ: ವ್ಯಕ್ತಿಗೆ ಕೊಲೆ ಬೆದರಿಕೆ
* ಕಡಬ: ಅಂಗನವಾಡಿ ಕೇಂದ್ರದಲ್ಲಿ ಕಳುವು
* ಪುತ್ತೂರು: ರಸ್ತೆ ಅಪಘಾತದಲ್ಲಿ ಮಹಿಳೆ ಸಾವು
* ಬೆಳ್ತಂಗಡಿ: ಚಿನ್ನಾಭರಣ ಕಳುವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕರಾವಳಿ
ಮಂಗಳೂರು: ನಗರದ ಲಾಲ್ ಬಾಗ್ ಬಳಿ ಇರುವ ಕಾಂಪ್ಲೆಕ್ಸ್ ಮಳಿಗೆಯ ಅಂಗಡಿಯೊಂದರಲ್ಲಿ, ಪರವಾನಿಗೆ ರಹಿತ ಸ್ವದೇಶಿ ಮತ್ತು ವಿದೇಶಿ ಸಿಗರೇಟ್ ಗಳು ಹಾಗೂ ಹುಕ್ಕಾ ಸೇವನೆಗೆ ಬಳಸುವ ಪರಿಕರಗಳನ್ನು ಸಾರ್ವಜನಿಕರಿಗೆ ಮತ್ತು ಮುಖ್ಯವಾಗಿ ಯುವಕ ಯುವತಿಯರಿಗೆ ಮಾರಾಟ ಮಾಡುತ್ತಿದ್ದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮೋಹನ್ ಕೊಟ್ಟಾರಿ ಅವರು ತಮ್ಮ ಪಿಎಸ್ಐ ಮತ್ತು ಸಿಬ್ಬಂದಿಗಳನ್ನು ಸೇರಿಕೊಂಡು ದಾಳಿ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಸಂದರ್ಭದಲ್ಲಿ ಆರೋಪಿಗಳ ಬಳಿಯಿದ್ದ 4,43, 125 ರೂಪಾಯಿ ಮೌಲ್ಯದ, ವಿವಿಧ ಕಂಪನಿಗಳ ಇ- ಸಿಗರೇಟ್, 5,9,120 ರೂಪಾಯಿ ಮೌಲ್ಯದ ಪ್ಯಾಕ್ ಸಿಗರೇಟ್ ಗಳನ್ನು, 20,500 ರೂಪಾಯಿ ಮೌಲ್ಯದ ಹುಕ್ಕಾ ಸೇವನೆ ಮಾಡಲು ಬಳಸುವ ಪರಿಕರಗಳನ್ನು ವಶಪಡಿಸಿಕೊಳ್ಳಲಾಯಿತು. ಒಟ್ಟು 9,72,745 ರೂಪಾಯಿಯಷ್ಟು ಸ್ವತ್ತುಗಳು ಬೆಲೆಬಾಳುತ್ತವೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಾಲೀಕ ಶಿವು ದೇಶಕೋಡಿ, ಕುದ್ರೋಳಿ ನಿವಾಸಿ ಇಬ್ರಾಹಿಂ ಇರ್ಷಾದ್, ಬಂಟ್ವಾಳ ನಿವಾಸಿ ಸಂತೋಷ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬೈಂದೂರು: ರೈಲು ಢಿಕ್ಕಿ; ವ್ಯಕ್ತಿ ಸಾವು
ಬೈಂದೂರು: ಹೇರೂರು ನಿವಾಸಿಯಾದ ದಿವಾಕರ್ ಆಚಾರ್ಯ ಎನ್ನುವ ವ್ಯಕ್ತಿಯು ಮರದ ಕೆಲಸ ಮಾಡಿಕೊಂಡಿದ್ದು, ಕಳೆದೆರಡು ದಿನಗಳ ಹಿಂದೆ ರೈಲು ಢಿಕ್ಕಿ ಹೊಡೆದು, ಮೃತಪಟ್ಟ ಘಟನೆ ನಾಗೂರು ರೈಲ್ವೆ ಬ್ರಿಡ್ಜ್ ಕ್ರಾಸ್ ಬಳಿ ನಡೆದಿದೆ. ರೈಲ್ವೆ ಮೇಲ್ಸೇತುವೆಯನ್ನು ದಾಟುತ್ತಿರುವ ಸಮಯದಲ್ಲಿ, ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ರೈಲೊಂದು ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕುಂದಾಪುರ: ವ್ಯಕ್ತಿಗೆ ಕೊಲೆ ಬೆದರಿಕೆ
ಕುಂದಾಪುರ: ಮಂಜುನಾಥ ಮೊಗವೀರ ಎನ್ನುವ ವ್ಯಕ್ತಿಯು, ಕೋಟೇಶ್ವರ ಸಮೀಪದ ಕುಂಬ್ರಿ ಎಂಬಲ್ಲಿಂದ ಆಟೋದಲ್ಲಿ ಹಿಂಬಾಲಿಸಿಕೊಂಡು ಬಂದು, ಸಂದೀಪ್ ಮೊಗವೀರ ಎನ್ನುವವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಷ್ಟೇ ಅಲ್ಲದೆ, ಕೊಲೆ ಬೆದರಿಕೆ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಮಂಜುನಾಥ ಮೊಗವೀರ ಅವರೊಂದಿಗೆ ಆಟೋದಲ್ಲಿ ಮತ್ತೆ ನಾಲ್ವರು ವ್ಯಕ್ತಿಗಳಿದ್ದು, ಕತ್ತಿ ತಲವಾರುಗಳನ್ನು ಹಿಡಿದುಕೊಂಡಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂದೀಪ್ ಮೊಗವೀರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
* ಕಡಬ: ಅಂಗನವಾಡಿ ಕೇಂದ್ರದಲ್ಲಿ ಕಳುವು
ಕಡಬ: ಸವಿತಾ ಎನ್ನುವ ಶಿಕ್ಷಕಿ ಮತ್ತು ಸಹಾಯಕಿ ಚಂದ್ರಿಕಾ ಎನ್ನುವವರು ಕಳೆದ ಐದು ವರ್ಷಗಳಿಂದ ಆಲಂಕಾರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೋಮವಾರದಂದು ಸಂಜೆ ಅಂಗನವಾಡಿಯ ಬಾಗಿಲು ಹಾಕಿಕೊಂಡು, ಮನೆಗೆ ತೆರಳಿದ್ದಾರೆ. ಮಾರನೇ ದಿನ ಬೆಳಿಗ್ಗೆ 9:30ಕ್ಕೆ ಅಂಗನವಾಡಿ ಕೇಂದ್ರದ ಬಾಗಿಲನ್ನು ತೆರೆದು ನೋಡಿದಾಗ ಕಳ್ಳತನ ನಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಕಳ್ಳರು ಅಂಗನವಾಡಿಯ ಹಿಂಬದಿಯ ಬಾಗಿಲನ್ನು ಒಡೆದು, ಅಲ್ಲಿ ಇರಿಸಲಾಗಿದ್ದ 108 ಸೆಂಟಿಮೀಟರ್ ಉದ್ದವಿರುವ ಸ್ಯಾಮ್ ಸಂಗ್ ಅಲ್ಟ್ರಾ ಎಚ್ ಡಿ/4k ಟಿವಿ,ಅದರ ರಿಮೋಟ್ ಮತ್ತು ಸ್ಟೆಬ್ಲೈಸರ್ ಅನ್ನು ಕದ್ದುಕೊಂಡು ಹೋಗಿರುವುದು ಕಂಡುಬಂದಿದೆ. ಸುಮಾರು 47,000 ರೂಪಾಯಿಯಷ್ಟು ಬೆಲೆಬಾಳುವ ಸ್ವತ್ತುಗಳನ್ನು ಕದ್ದುಕೊಂಡು ಹೋಗಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಶಿಕ್ಷಕಿಯಾದ ಸವಿತಾ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದು, ಕಡಬ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಾದ ಅಭಿನಂದನ್, ಪೊಲೀಸ್ ಸಿಬ್ಬಂದಿಗಳು ಮತ್ತು ಮಂಗಳೂರಿನ ಬೆರಳಚ್ಚು ತಜ್ಞರು, ಶ್ವಾನದಳದವರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸಿದರು.
* ಪುತ್ತೂರು: ರಸ್ತೆ ಅಪಘಾತದಲ್ಲಿ ಮಹಿಳೆ ಸಾವು
ಪುತ್ತೂರು: ಕಳೆದ ಕೆಲವು ತಿಂಗಳ ಹಿಂದೆ ನಡೆದ ಸರಣಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಮಹಿಳೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರದಂದು ಮೃತಪಟ್ಟಿದ್ದಾರೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ, ಮುರ ಎನ್ನುವ ಪ್ರದೇಶದ ಸಮೀಪದಲ್ಲಿ ಖಾಸಗಿ ಬಸ್ ಮತ್ತು ಕಾರ್ ನ ನಡುವೆ ಅಪಘಾತ ಸಂಭವಿಸಿತ್ತು. ಖಾಸಗಿ ಬಸ್ ಕಾರಿಗೆ ಢಿಕ್ಕಿ ಹೊಡೆದ ರಭಸಕ್ಕೆ, ಅಪೂರ್ವ ಮತ್ತು ಅವರ ತಂದೆ ಈಶ್ವರ ಭಟ್ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ತಂದೆ ಈಶ್ವರ ಭಟ್ ಮತ್ತು ಅಪೂರ್ವ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅಪೂರ್ವ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎನ್ನುವುದು ತಿಳಿದುಬಂದಿದೆ.
* ಬೆಳ್ತಂಗಡಿ: ಚಿನ್ನಾಭರಣ ಕಳುವು
ಬೆಳ್ತಂಗಡಿ: ಅವಿನಾಶ್ ಎನ್ನುವವರ ಮನೆಯಲ್ಲಿ, ಯಾರು ಇಲ್ಲದ ಸಮಯ ನೋಡಿಕೊಂಡು, ಕಳ್ಳರು ನುಗ್ಗಿ ಸುಮಾರು 9.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳುವು ಮಾಡಿದ ಘಟನೆ ಕುತ್ಲೂರು ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮನೆಯ ಬಾಗಿಲಿನ ಚಿಲಕದ ಕೊಂಡಿಯನ್ನು ಮುರಿದು, ಕೋಣೆಯೊಂದರ ಬಾಗಿಲನ್ನು ಮುರಿದು, ಒಳ ನುಗ್ಗಿ, ಅಲ್ಲಿ ಇರಿಸಿದ್ದ ವ್ಯಾನಿಟಿ ಬ್ಯಾಗ್ ನಲ್ಲಿನ ಡಬ್ಬಿಯೊಂದರಲ್ಲಿ ಇಟ್ಟಿದ್ದ ಒಂದು ಎರಡೆಳೆಯ ಕರಿಮಣಿ ಸರ, ಒಂದು ಲಕ್ಷ್ಮೀ ಪೆಂಡೆಂಟ್ ಹೊಂದಿರುವ ಎರಡೆಳೆಯ ಮುತ್ತಿನ ಸರ, ಒಂದು ಚಿನ್ನದ ಬ್ರಾಸ್ಲೈಟ್, ಎರಡು ಮಕ್ಕಳ ಚಿನ್ನದ ಸರ, ಒಂದು ಬೆಂಡೋಲೆ, ಐದು ಜೊತೆ ಚಿಕ್ಕ ಓಲೆ ಮತ್ತು ನಾಲ್ಕು ಚಿನ್ನದ ಉಂಗುರಗಳನ್ನು ಅಪಹರಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಕಳುವುಗೊಂಡಿರುವ ಚಿನ್ನದ ಒಟ್ಟು ತೂಕ 149 ಗ್ರಾಂ ಆಗಿದ್ದು, 9,50,000 ರೂಪಾಯಿಯಷ್ಟು ಬೆಲೆಬಾಳುತ್ತದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







